ಕನ್ನಡ ಕಲಿಯಿರಿ. ನಿಮ್ಮ ಅನಿಸಿಕೆಯನ್ನು ಕನ್ನಡದಲ್ಲಿ ನೀಡಿರಿ.


Type in English. Press Space to get it in ಕನ್ನಡ ಲಿಪಿ Press Ctrl+g to toggle between English and Kannada

ಶುಕ್ರವಾರ, ಸೆಪ್ಟೆಂಬರ್ 30, 2011

ಕಾತರ..

ಸಂಜೆ ಜಾರಿದೆ,ಸಂತೆ ಕರಗಿದೆ 
ರವಿಯ ನೇಸರ ಕಳೆಗುಂದಿದೆ ,
ಹಕ್ಕಿ ಗೂಡೆಡೆ ಗುರಿಯ ತಿರುಗಿರೆ,
ಬೆಕ್ಕು ಒಲೆಯನು ಗುಡಿಸಿ ಕೂತಿರೆ
ಬರುವ ದಾರಿಗೆ, ತರುವ ನಗುವಿಗೆ
ಬಾಗಿಲ ಬುಡದಲಿ ಬಿಡದೆ ಕಾದಿಹೆ,
ಎಂದು ಬರುವೆಯೋ ಎನ್ನ ಇನಿಯನೆ
ಅಪ್ಪಿ ತೋಳಲಿ ಬಿಡಿಸು ವೇದನೆ.

ಮಕ್ಕಳಾಡುವ ಪರಿಯ ನೋಡಿರಿ ,
ಅಪ್ಪಿ ಅವರನು ಎತ್ತಿ  ಆಡಿರಿ.
ಮತ್ತೆ ಅತ್ತರೆ ಬೆನ್ನ ಮೇಲೇರಿಸಿ
ಆನೆ-ಅಂಬಾರಿ ಮಾಡಿರಿ.
ಕಾಯುತಿರುವೆವು ನಿಮ್ಮ ದಾರಿಗೆ,
ಎಂದು ಬರುವೆಯೋ ಎನ್ನ ಇನಿಯನೆ
ಅಪ್ಪಿ ತೋಳಲಿ ಬಿಡಿಸು ವೇದನೆ.

ಕೊರಗೊ ಮನಸಿಗೆ, ಸೊರಗೊ ಕನಸಿಗೆ
ಪ್ರೀತಿ ಓಕುಳಿಯ ಹೊತ್ತು ತಾ..
ಮತ್ತೆ ಹೋಗದೆ, ಒಂಟಿ ಮಾಡದೆ
ಇದ್ದು ಬಿಡು ಮನೆ-ಮನ ಮಂದಿರದಲಿ. 
ನಿನ್ನ ನೋಡದೆ ತಿಂಗಳಾಗಿದೆ,
ತಿನ್ನೋ ಅನ್ನವೂ ತಂಗಳಾಗಿದೆ.
ಬಾಗಿಲ ಬುಡದಲಿ ಬಿಡದೆ ಕಾದಿಹೆ
ಎಂದು ಬರುವೆಯೋ ಎನ್ನ ಇನಿಯನೆ
ಅಪ್ಪಿ ತೋಳಲಿ ಬಿಡಿಸು ವೇದನೆ.

-ದಿಲೀಪ್ ಶೆಟ್ಟಿ.

(ಚಿತ್ರ ಕೃಪೆ: ಅಂತರ್ಜಾಲ)

ಬುಧವಾರ, ಸೆಪ್ಟೆಂಬರ್ 28, 2011

ನಲ್ಲೇ...

ಎತ್ತ ಸಾಗಿದೆ ಸುತ್ತ ಮುತ್ತಲ ಲೋಕ 
ನಿನ್ನ ನೋಡುತ ನಿಂತಿರೆ ,
ನಿನ್ನ ದನಿಯೊಳು ಮುಳುಗಿರೆ
ದುಂಡು ಭೂಮಿಯು ನಿಂತು ನಿನ್ನನೇ
ನೋಡುವಂತಿದೆ.


ನಬದ ನಯನ
ನಗುವ ನಯನೆಯ ನೋಡಿ
ಕತ್ತಲಿಗೆ ಕೆನ್ನೆ ಕೊಟ್ಟು
ಮೋಡದಡಿಯಲಿ ನಾಚಿ 
ನೀರಾಗಿ ಮಳೆಯ ಸುರಿಸುತಿರೆ
ನನ್ನೊಡತಿಯ ಮೇಲೆ 
ಮುತ್ತ ಮೆತ್ತಂತಿದೆ.

ಗುಳಿ ಬಿದ್ದ ಕೆನ್ನೆಯ ನೋಡಿ
ಗಿಳಿವಿಂಡು ಗಳಿಗೆಗೆ ಗುಡುಗಿ 
ಕಾಲವನು ಕೋಲಿಂದ ದೂಡಿರೆ
ಗಡಿಯಾರದ ಗಂಟೆ ಕತ್ತಲೆಡೆ
ಓಡಿದಂತಿದೆ.

ಚೆಲುವು ನಿನ್ನದು ಹೆಣ್ಣೇ,
ಹಾಳು ಮಾಡಿದೆ ನನ್ನೇ.
ನಗುವ ನಿನ್ನೊಲವಿ೦ಗೆ  
ಕರಗಿ ಹೋಗಲೇ ಹಾಗೆ..
ಬೊಗಸೆಯಲಿ ಬಂದಿಸಿ ನನ್ನ
ಮೊಗೆದು ಬಿಡು ಹಾಗೆ...

-ದಿಲೀಪ್ ಶೆಟ್ಟಿ.

ಶುಕ್ರವಾರ, ಸೆಪ್ಟೆಂಬರ್ 23, 2011

ಸಾಮಾನ್ಯ..


ಸಂತೆ ಕಂತೆಯ ಚಿಂತೆ 
ಸಾಮಾನ್ಯನಿಗೆಕೆ?
ರೊಟ್ಟಿ ರೊಕ್ಕದ ರಗಳೆ
ಸಾಹುಕಾರನ ಬೊಗಳೆ
ಇಷ್ಟು ಬಿಟ್ಟರೆ ಕಂಕುಳಡಿಯ
ತಿಗಣೆ ಕಡಿತಕ್ಕೆ, ಕೆರೆಯುವ ಬವಣೆ. 

ಮೊನ್ನೆ ರಾಜ್ಯೋತ್ಸವ 
ಎಣ್ಣೆ,  ಪಾಯಸ 
ನಿನ್ನೆ ನವಮಿ,
ಪಾನಕ , ಪಂಚಾಮೃತ
ಮದುವೆ, ಮುಂಜಿ, ಸಮಾರಾಧನೆಯೆಂದರೋ
ಗಟ್ಟಿ ತೇಗಿನ ಮೃಷ್ಟಾನ್ನ ಬೋಜನ.
ಇಂದದೇ  ತಂಗಳನ್ನ 
ತಿಂಗಳ ಕೊನೆಗೆ 
ನೀರೆ-ಅನ್ನ.

ಸಂಸಾರದ ಹಾದಿ ಹೆದ್ದಾರಿ,
ಸಂಪಾದನೆಯೋ ಕಾಲು ದಾರಿ.
ಸಂಗ ಸಂಸಾರಿ, ಅಂಗಾಂಗ ಸಂಹಾರಿ.
ಬೇಳೆ ಕಾಳಿಗೆ,  ನಾಳೆ ಹಾಲಿಗೆ 
ಮತ್ತೆ ಸ್ಕೂಲಿಗೆ , ಕೊಡದ ಬಾಡಿಗೆ
ಬಿಡದೆ ಓಡುವ ಬೆಲೆಯ ಬೇನೆಗೆ 
ಕೊಟ್ಟರುಳಿವುದು ಬೆವರಿದ ನಾಲಿಗೆ.
ಕುರುಡು ಕಾಂಚಣ ಕೇಳಿರೋ ಅಣ್ಣ
ಬಡತನಕ್ಕೆ ಬಳಲಿ ಮಾಗಿದೆ ಬಣ್ಣ.
              
               -ದಿಲೀಪ್ ಶೆಟ್ಟಿ.

ಮಂಗಳವಾರ, ಸೆಪ್ಟೆಂಬರ್ 20, 2011

ಗುರಿ


ಒಂದು ಮುಂಜಾವಲ್ಲಿ ನಿದ್ದೆ ಮಂಪರಿನಲ್ಲಿ 
ಸದ್ದು ಮಾಡುತ  ಮಗುವು ಕೇಳಿತಮ್ಮನ ಕರೆದು,
ಅಮ್ಮ.. ಅಮ್ಮ.. ಗುರಿ ಎಂದರೇನು?

ಮಗು.., ಗರಿಬಿಚ್ಚಿ ಹಾರುವ ಗುಬ್ಬಚ್ಚಿಗೆ 
ಮರಿ ಹಕ್ಕಿ ರೆಕ್ಕೆಯ ಹರಿಬಿಟ್ಟು 
ಹಾರಿಸುವ ಗುರಿ.
ಕೆರೆ, ತೊರೆಯಲೀಜುವ ನೀರಿಂಗೆ
ಸಾಗರವ ಸಂದಿಸುವ ಗುರಿ
ಮಳೆ ಹನಿಯ ಇನಿಯಂಗೆ
ಕಳೆ ತೆಗೆದು ಇಳೆಗೆ 
ಹಸಿರನುಡಿಸುವ ಗುರಿ.
ಮಗು ನಿನ್ನ ನಗುವನು 
ಮೊಗೆ ಮೊಗೆದು ಹೃದಯದಲಿ
ಮುಡಿ ಕಟ್ಟಿ ಇಡುವ ಗುರಿ.
ಹೇಳು ನಿನ್ನಯ ಗುರಿ
ಹೇಳುವೆನಾವುದು ಸರಿ.

ಹಾಸಿಗೆಯಲಿ ಮಲಗಿಸಲು
ಬಿಡದೆ ಹಟವನು ಮಾಡಿ
ನಿನ್ನ ಮಡಿಲೊಡಲೊಳು  ಬೆಚ್ಚಗೆ 
ಮಲಗುವ ಗುರಿ.
ಮೀಯುವ ವೇಳೆ ಕಣ್ಣಿಗೆ 
ನೊರೆಯ ಬೀಳಿಸಿ ಅಳುವ ನಾಟಕವ ಮಾಡಿ
ನಿನ್ನ ಕರೆದು ನೆನೆದು ನಲಿಸುವ ಗುರಿ.

ಎದೆಗಪ್ಪಿದ ಹೆತ್ತಾಕೆ ಕಣ್ಣಿರ ಕೊಳದೊಳಗೆ 
ಸಂತಸಾನಂದದಿ ತೇಲಿ,
ಮಿಡುಕೊ ಮಗುವಿನ ಗಲ್ಲಕಪ್ಪುಗೆಯ ನಿಟ್ಟು 
ಗುರಿ ಗೆದ್ದ ಗಿಳಿಹಂಗೆ ಹಿರಿಹಿಗ್ಗಿ ಹರುಷದಿ 
ಮತ್ತೆ ಮುತ್ತ ಗೊಂಚಲ ಬೀಳಿಸಿದಳು. 

ಎಲ್ಲರಟ್ಟಿಸುವರು ಗುರಿಯ,
ಮರೆತು ಪ್ರೀತಿಯ , ನಗುವ ಭಾಷೆಯ.
ಗುರಿ ಮುಟ್ಟಿ ತಿರುಗಿದರೆ  
ಕಡೆಗೊಮ್ಮೆ ಕಾಂಬುವುದು 
???????????
ಶೂನ್ಯ  ಸಂಪಾದನೆ.

-ದಿಲೀಪ್ ಶೆಟ್ಟಿ.

ಗುರುವಾರ, ಸೆಪ್ಟೆಂಬರ್ 15, 2011

ಹೆಣ್ಣು..



ಕಣ್ಣ ಮಿಟುಕಿಸಿ ಕೆನ್ನೆ ಏರಿಸಿ
ಸಣ್ಣ ಸಣ್ಣಗೆ ಸನ್ನೆ ಮಾಡುತ
ನನ್ನೇ ನೋಡುವ ನಿನ್ನ ನೋಟಕೆ
ನನ್ನೆ ಮರೆತೆನು. ಕರಗಿ ಕೂತೆನು.
ನಿನ್ನ ಸಂಗದಿ ನನ್ನ ನಗುವಿದೆ
ನಿನ್ನ ಸಂಗದಿ ನನ್ನ ಬದುಕಿದೆ
ನಿನ್ನ ಸಂದಿಸಿ ಬದುಕು ಗೆದ್ದಿದೆ.

ಚುಕ್ಕಿ ತಾರೆಯ ನೀಲಿ ಬಾನಲಿ,
ಮಿಂಚಿ ಹೊಳೆಯುವ ಪೂರ್ಣ ಚಂದ್ರನು 
ಕೊಂಚ ಶಪಿಸಿದ, ನಿನ್ನೆ ನೋಡಿದ
ಮೋಡದಡಿಯಲಿ  ಮತ್ತೆ ಮುಳುಗಿದ.
ಹಚ್ಚ ಹಸುರಿನ ಬಸುರಿ  ಇಳೆಯದು 
ಮತ್ತೆ ಮಳೆಯೊಳು ಮಿಂದು, ಮುಳುಗಿ 
ಅಂದ ಚೆಂದವ ಮಾಡಿ ,
ನಿಂಗೆ ಪಂಥವ ನೀಡಿ
ಸೋತು ನಾಚುತಲಿರಲು 
ಗಳಿಗೆ ಗಂಡಾಂತರಕ್ಕೆ ಸಿಲುಕಿ
ಹಗಲನು ಹೆಗಲಿಗೆ ಹೊದಿಸಿ 
ಗುಮ್ಮಗೆ ಕೂತು ನಿನ್ನನೆ ನೋಡಿದೆ.

ನಿನ್ನ ಬಣ್ಣಿಸದ ನಾಲಿಗೆ 
ನಗೆಯ ನಿಲ್ಲಿಸಲಿ,
ನಿನ್ನ ನೋಡದ ಕಣ್ಣು
ಇಂಗಿ ಹೋಗಲಿ.
ಹೆಣ್ಣೇ..., ನೀ ಹೊನ್ನ ಖಜಾನೆ
ಜಡಿದ ಬೀಗವ ತೆಗೆದು
ಬಡಿಸು ಬಾ... 

- ದಿಲೀಪ್ ಶೆಟ್ಟಿ.

ಗುರುವಾರ, ಸೆಪ್ಟೆಂಬರ್ 8, 2011

ಜಗದ ಜೋಳಿಗೆಯಲಿ


ಜಗದ ಜೋಳಿಗೆಯಲಿ 
ನಾ ಗುಲಾಮ.
ನನ್ನೋಡನಿರುವರು 
ನನ್ನೆದೆ ಬಡಿವರು
ನಿನ್ನೆಯ ಕನವರಿಕೆಯಲಿ
ನಾಳೆಯ ಮಂಪರಿನಲಿ 
ಇಂದಿದೆ ಎನ್ನುವುದ ಮರೆತರು
ಮನುಜರು.

ಪೂಜೆಯ ಕೊಟ್ಟರು ಹರಕೆಯ ಹೊತ್ತರು
ಬಾಯಿಯ ಬಿಲದೊಳು ಬಜನೆಯ ಬಿಗಿದರು
ಮೊನ್ನೆಯ ಪಾಪಕೆ ಇಂದಿದೆ ಸದ್ಗತಿ
ಎನ್ನುತ ಪಾಪವ ಮಾಡುತಲಿರುವರು 
ನಾನೇನ ಮಾಡಲಯ್ಯ?? 
ಜಗದ ಜೋಳಿಗೆಯಲಿ 
ನಾ ಗುಲಾಮ.

ಇದು ನೀ ಕಟ್ಟಿ ಕೊಟ್ಟ ಬುತ್ತಿ
ಹೊಟ್ಟೆ ತುಂಬಲು ಕೊರತೆ ಕಾಂಬುದು
ಕೊಟ್ಟು ತಿನ್ನಲು ಕಡಿಮೆಯಾಗುವುದು.
ಕಿತ್ತು ತಿನ್ನುವ ಜನರೇ ಎಲ್ಲರು
ಬೇಡಿ ಕೊಂಡರೆ ಬೆಲ್ಲ ಸಿಗುವುದೇ
ಕಾಯಕದಿ ಎಲ್ಲ ಇರುವುದು
ನೀನಾಡೊ  ಆಟ , ಎಲ್ಲರ ಪರದಾಟ 
ಜಗದ ಜೋಳಿಗೆಯಲಿ 
ನಾ ಗುಲಾಮ

-ದಿಲೀಪ್ ಶೆಟ್ಟಿ 

ಬುಧವಾರ, ಸೆಪ್ಟೆಂಬರ್ 7, 2011

ಕನಸ ಕನವರಿಕೆ


ಕನಸ ಕನವರಿಕೆ..

ನಿದ್ದೆಯೊಳ್ ಅದ್ದಿ ಕಣ್ಣ,
ಕನಸ ಕಾಡ ಹೊರಟೆ,
ಹಕ್ಕಿ ಪಕ್ಕಿ ಗಿರಿ ಬಾನು,
ಅಕ್ಕ ಪಕ್ಕ ಧಾರಿ ಜೇನು,
ಹೆಜ್ಜೆ ಗೆಜ್ಜೆ ಗುಡಿ ಗಂಟೆ
ಮದ್ಯೆ ಮೌನದ ಸುಳಿ ಸಂತೆ.

ಕಟ್ಟಿ ಕೊಟ್ಟಿತು ಗಿಳಿ
ಸ್ವಚ್ಚಂದದಿ ಹಾರುವ ಪರಿ.
ಮತ್ತೆ ಸಾಗರದ ತುದಿ 
ನೆನಪಿಸಿತು ಕೊನೆ ಮುಟ್ಟದ ಗುರಿ.
ತುಳಿದ ಕಿರು ದಾರಿ ಮತ್ತೆ ತೋರಿಸಿತು
ತಿರುಗಿ ತೊರೆದ ತಿರುವನು.

ಗೆಜ್ಜೆ ದನಿಯದು ನಿನ್ನ ನೆನಪಿತು 
ಮತ್ತೆ ಸೋಜಿಗ ಪ್ರೀತಿ ಅಂದಿತು.
ಹುಚ್ಚು ಬಾಳಿದು ಬಳಲಿ ಬೆಂದಿದೆ
ಹೆಚ್ಚು ಯೋಚಿಸೆ ಲೀನವಾಗಿಸು 
ಸ್ವೇಚ್ಛೆ ಇದೆ ಬಾಳ ತಳದಲಿ 
ಎಂದು ಕಂಪಿತು ಗುಡಿ ಗಂಟೆಯ ಎದೆ.

ಕಣ್ಣ ಮಿಂಚದು ನನ್ನೇ ನೋಡಿತು 
ಕನಸ ಕೆನ್ನೆಗೆ ಮತ್ತೆ ಬೀಸಿತು 
ಬಾಳ ಅಂಕುಶ ಸಡಿಲ ಮಾಡಿ
ನಿನ್ನ ಕನಸನು ಬೆಳೆಸಿ ತೋರಿಸು.
ಮತ್ತೆ ಕನಸಿಗೆ ಕನಸ ಕಾಣಿಸಿ
ನಿನ್ನ ಕನಸನು ನನಸು ಮಾಡಿಸು.

-ದಿಲೀಪ್ ಶೆಟ್ಟಿ.