ಕನ್ನಡ ಕಲಿಯಿರಿ. ನಿಮ್ಮ ಅನಿಸಿಕೆಯನ್ನು ಕನ್ನಡದಲ್ಲಿ ನೀಡಿರಿ.


Type in English. Press Space to get it in ಕನ್ನಡ ಲಿಪಿ Press Ctrl+g to toggle between English and Kannada

ಭಾನುವಾರ, ಆಗಸ್ಟ್ 30, 2015

ಕಾತರವೇ ನಿನಗೂ ಆತುರವೇ..?

ಹನಿ ಮಳೆ ನೆಲವ ಚೆಲ್ಲಿ, ಬರುವ ನೆಲದ ಮಡಿಲ ವಾಸನೆ ನಾಸಿಕಕ್ಕಪ್ಪುವಾಗೆಲ್ಲ ಕಣ್ಣು ನಿನ್ನ ಬಿಂಕಕ್ಕೆ ಕಾಯುವಂತಿದೆ. ಪ್ರತಿ ಹನಿಯ ಹೆಗಲಲ್ಲಿ ನಿನ್ನ ನಗುವ ನೆನಪು. ಇಂದು, ನಾಳೆ, ವಾರ, ತಿಂಗಳು, ಕಾಯುವ ಪ್ರತಿ ಗಳಿಗೆ ಹೊಸ ಇರುಳು, ಕೌತುಕದ ನೆರಳು. ಮೊನ್ನೆ ನೋಡಿದ ನೀನು, ಇಂದು ನೀನಾಗಿಲ್ಲ. ಅಥವಾ ಮೊನ್ನೆ ನೋಡಿದ ನಾನು, ಇಂದು ನಾನಾಗಿಲ್ಲ. ನನ್ನೀ ಬದುಕ ಬಂಡಿಯ ವ್ಯಾಜ್ಯ-ತ್ಯಾಜ್ಯಗಳ ವಿಲೆವಾರಿಯ ಹೊಣೆ ನಿನಗೊಪ್ಪಿಸಿ, ಕಣ್ಣಿಗಡರುವ ಕೂದಲೆಳೆಯ ಜೊತೆ ಬಾಲಂಗೋಚಿಯಾಗುವ ಆಸೆ. ಮಾಸಿದ ಮಾರ್ದನಿಯ ಎದೆ ಬಡಿತ, ನಿನ್ನ ನಗುವ ಲಯದೊಳಗೆ ಮೇಳೈಸುವಾಸೆ. ಪುಷ್ಪಗುಚ್ಛದಲಿ ಉದ್ಬವಿಸುವ ಪ್ರತಿ ಹೂವ ಪಕಳೆಗಳೂ ನಿನ್ನೆ ಕೇಳುತಿವೆ. ಎಂದು ಬರುವೆ ನೀನು? ಮಳೆಯ ಪಸೆ ತಣಿದು ತಿಳಿಯಾಯ್ತು. ಮುಗಿಲು ನಿನ್ನ ನೆನಪಿನಲಿ ಮುದ್ದೆಯಾಯ್ತು. ಮನದ ಹೊಲದಲ್ಲಿನ್ನೂ ನೀ ಬರದೇ ಸಂಕ್ರಾಂತಿ ಎಲ್ಲಿ?

ಅಂದೇ ಹೇಳಿಬಿಡಬೇಕಿತ್ತು. ಇಂದು ಬೇಡ ಅಂದುಕೊಂಡಿದ್ದೆ ತಪ್ಪಾಯ್ತು. ಅಂದು-ಇಂದಿಗೆ ನಡುವೆ ಅದೆಷ್ಟು ಹನಿ ಮಳೆ ಬಂದಿದೆ. ಕೆರೆ-ಕಟ್ಟೆಗಳ ಸಂದಿದೆ. ಸಂದಿಸುವಾಗೆಲ್ಲ ನಿನ್ನ ನೆನಪಿನೊಕುಳಿಯಲಿ ಮಿಂದಿದೆ. ಮಿಡಿದಿದೆ. ಅಂದಿನ ದಿನವೇ ಬೇರೆ, ಬುವಿಗೆ ಬೀಳುವ ಹನಿ, ನಬ ಹೀರಿದ ಹಾಗೆ. ಅಗಲಿಕೆಯ ಕೆನ್ನಾಲಿಗೆಯ ಝಳ ಮುತ್ತಿಕ್ಕಿ ನಿನ್ನ ಸೆಳೆಯುವಾಗ, ಏಕಾಂತನಾಗಿದ್ದೆ. ಎದೆ ಬಡಿತದ ಸದ್ದು ನಿಂತಿತ್ತು ಅರೆ ಕ್ಷಣ ಮೌನವಾಗಿ, ಮೌನಿಯಾಗಿ. ಮತ್ತೆ ನಿನ್ನ ಕಣ್ಣ ರೆಪ್ಪೆಗಳಿಗಂಟಿದ ತೇವ, ತೇಲಿಸಿತು-ತೆವಳಿಸಿತು ಎದೆಯ. “ಮತ್ತೆ ಬರುವೆ, ಕಾಯುವೆಯಾ..” ಎಂದಿತು. ಈಗ ನಾನು ಒಬ್ಬಂಟಿಯಲ್ಲ, ಜಂಟಿ ನೆನಪುಗಳಿವೆ, ಕೋಟಿ ಕನಸುಗಳಿವೆ. ಅವಳ ಚಿತ್ತಾರವೆ ನನ್ನ ಚಿತ್ತದ ತುಂಬಾ ಚಿಟ್ಟೆಯಾಗಿ ಚಿಗುರಿವೆ. ಅವಳ ನೆನಪುಗಳ ಗ್ರಂಥಿಕೆ, ಗಳಿಗೆ-ಗಳಿಗೆಗೂ ಬಿಕರಿ ಯಾಗುತ್ತಿದೆ. ಕಾತುರದ ಆತುರ, ಯಾಕಿರಬಹುದು ಈ-ತರ?

ಕಾಯಬಲ್ಲೆ ಅವಳಿಗೆ ಇಂದಲ್ಲ, ಎಂದೆಂದೂ.. ಆದರೇ ಬರುವಳೇನು?. ಅವಳ ಕಣ್ಣ ಕೆಳಗೆ ಕಮರಿದ ಹನಿ, ನಾನೇ ಆದರೆ?. ಅವಳ ನೆನಪಿನ ಪಡಸಾಲೆಯಲ್ಲಿ ನನ್ನ ನೆನಪೇ ಇಲ್ಲದಿದ್ದರೆ? ಅವಳೆದೆಯ ಮಾರ್ದನಿಯ ಸಂಗೀತದ ಲಯ ನಾನಲ್ಲದಿದ್ದರೆ?. ಕಾಯುವ ಯುಗವೂ ನೋವ ಕೊಡದು. ಮ್ಲಾನ ಮೌನದಲೊಮ್ಮೆ ತೊಟ್ಟಿಕ್ಕುವ ಕಹಿ ನೆನಪುಗಳೆ ಘಾಸಿ ಗೊಳಿಸುತ್ತಿವೆ. ಬರುವೆಯಾದರೆ ಬಂದು ಬಿಡು. ಬರದೇ ಹೋದರೂ ಹೇಳಿಬಿಡು. ಕಾತುರಕೂ ಅತೂರವೇ? ಕಾತುರಕೂ ಇದು ತರವೇ?. ನಿನ್ನ ನೆನಪು ನೋವಾಗದು ಗೆಳತಿ, ಒಮ್ಮೆ ಮೊಗ ಕೊಟ್ಟು ನಗು ಹರಿಸು. ಅಗಲುವ ಪ್ರೀತಿಗಿಂತ, ನೆನಪಿನೊಳಗಿನ ಭೀತಿಯೇ ಕಂಟಕ. ಕಾಯುತ್ತಲಿರುವೆ ಹನಿ ಮಳೆ ಹೊಳೆಯಾಗುವ ವರೆಗೆ, ನೀ ಬರುವ ದಾರಿಯ ತಂಪಿಸುವ ವರೆಗೆ....


 -ದಿಲೀಪ್ ಶೆಟ್ಟಿ.      

ಚಿತ್ರ ಕೃಪೆ ಅಂತರ್ಜಾಲ

ಭಾನುವಾರ, ಮೇ 10, 2015

ಇಂದೆಕೊ....

ಇಂದೆಕೊ....
ತುಂಬಿದೊಲವು ತೂಕಡಿಸಿದೆ,
ಮನಸ ವಾಂಛೆಯಲಿ ಹೂತು.
ತಬ್ಬಲಿ ಇರುವೆಯಂತೆ,
ತಹ-ತಹಿಸಿದೆ ಎದೆ.


ಇಂದೆಕೊ...
ನಿನ್ನ ನೋಡಿದೊಡೆ ಅರಳುವ,
ಎದೆಯ ರೆಪ್ಪೆಗಳೆ ಹೊರಳಿವೆ.
ಆಲೋಚನೆಯ ದಿಕ್ಸೂಚಿ ದಿಗಂತಕ್ಕೊರಗಿದೆ
ದಿಗಂಬರವಾಗಿ, ದಿಕ್ಕಾಪಾಲಾಗಿ.

ಇಂದೆಕೊ....
ಕನಸೊಳಗೆ ಬರುವ ಭ್ರಮರಗಳೂ
ಭ್ರಮೆಯ ಬಾಗಿಲಿಗೆ ಅಂಟಿದೆ.
ಮೊಗವರಳಿಸೋ ನಿನ್ನ ನೆನಪು, ನಶೆ
ಕಮರಿಹೋಗುತಲಿದೆ, ಕಣ್ಮರೆಯಾಗಿದೆ.

ಹದ ಮೀರಿತೆ ಹೃದಯ?
ಸರಿ-ತಪ್ಪಿನ ಸಮ ತೂಕದಲಿ
ತುಂಬಿದೊಲವು ತೂಕಡಿಸಿದೆ.


-ದಿಲೀಪ್ ಶೆಟ್ಟಿ

ಮಂಗಳವಾರ, ಮಾರ್ಚ್ 17, 2015

ಅವಳೆದೆಯ ಗಡಿಯಾರ

ಅವಳೆದೆಯ ಗಡಿಯಾರ ನನ್ನ ನೊಡುವ ಹೊತ್ತು,
ಗಂಟೆ ಗಂಟೆಯೂ ನಿಮಿಷ.
ಮುಳ್ಳು ಮುಳ್ಳನು ಚುಂಬಿಸುತಿರೆ
ನಿಂತೇ ಬಿಡಬಾರದಿತ್ತೆ ವರುಷ.

ಮೊನ್ನೆ ಮಧ್ಯಾಹ್ನ, ನಿನ್ನೆ ನಡುಗುವ ಚಳಿ,
ಮುಂಜಾವಿನ ಮಂಪರು, ಸಂಧ್ಯಾಕಾಲದ ನೆಳಲು,
ನಿನ್ನ ನೆನಪು ಮಾಡದ ಗಳಿಗೆ, ನೆನೆದು ಹೋದ ದೀವಿಗೆ.
ನೀ ಇರದಿರೆ ಮನದೊಳಗೆ, ಮುರಿದ ಹಾಗಿದೆ ಮನದ ಮಳಿಗೆ.

ಇಂದೆಕೊ ಕೆಟ್ಟಿರಬೇಕು ಗಡಿಯಾರ, ಡವ-ಡವದ ಸದ್ದಿಲ್ಲ.
ಮುಳ್ಳು ಮಿಟುಕುತಲೂ ಇಲ್ಲ.
ಪ್ರತಿ ಕ್ಷಣವೂ ಯುಗದಂತೆ, ಹೊಸ ಪರ್ವ ಪುಟಿದಂತೆ.
ಕಾಲನ ಕಾಲ್ಕೆಳಗೆ ಗಿರಕಿ ಹೊಡೆದಂತಿತ್ತು.

ಏನು ಹೇಳದೆ, ಕಣ್ಣು ಮಿಟುಕಿಸದೆ, ಸದ್ದೆ ಮಾಡದೆ
ಗುಳಿ ಕೆನ್ನೆಗೊಂದಿಷ್ಟು ಮುತ್ತನುದುರಿಸಿ ನೀ ಓಡಲು
ನನ್ನೆದೆಯ ಗಡಿಯಾರ ನಿನ್ನ ಬಡಿತವ ಅನುಕರಿಸಿ,
ಒಂದೇ ದಾಟಿಯಲಿ ಮತ್ತೆ ಡವ-ಡವಿಸುತಲಿತ್ತು.

ದಿಲೀಪ್ ಶೆಟ್ಟಿ.
(ಚಿತ್ರ ಕೃಪೆ: ಅಂತರ್ಜಾಲ)

ಭಾನುವಾರ, ಫೆಬ್ರವರಿ 8, 2015

ಹೌದು... ನನ್ನದೇ ತಪ್ಪು

ಅಂದು, ಕಣ್ಣು ಮುಚ್ಚಿ ಕೂರಬಹುದಿತ್ತು,
ಹೌದು. ನನ್ನದೇ ತಪ್ಪು.

ಕಪ್ಪು ಕನ್ನಡಕವಾದರೂ ಹಾಕಬೇಕಿತ್ತು
ಹೌದು. ನನ್ನದೇ ತಪ್ಪು.
ಅತ್ತ ಕಡೆ ನೋಡಿಯೂ, ನೋಡಬಾರದಿತ್ತು,
ಹೌದು. ನನ್ನದೇ ತಪ್ಪು.
ನೀಳ ಕೇಶ ಎದೆಯ ಸವರುವಾಗ ಹೇಳಬೇಕಿತ್ತು,
ಹೌದು. ನನ್ನದೇ ತಪ್ಪು.

ನನ್ನ ನೋಡಿ ಮುಗುಳ್ನಕ್ಕಾಗ , ನಗಬಾರದಿತ್ತು.
ಹೌದು. ನನ್ನದೇ ತಪ್ಪು.
ಮನ ಪತಂಗವಾದಾಗ , ಕಟ್ಟಿ ಹಾಕಬೇಕಿತ್ತು
ಹೌದು. ನನ್ನದೇ ತಪ್ಪು.
ಹೃದಯದಬ್ಬರ ಏರುವಾಗ, ಬುದ್ದಿ ಹೇಳಬೇಕಿತ್ತು.
ಹೌದು. ನನ್ನದೇ ತಪ್ಪು.
ಚುಂಬಕವನಿತ್ತು ಎದೆಯ ಕಸಿಯುವಾಗ, ಸುಮ್ಮನಿರಬಾರದಿತ್ತು.
ಹೌದು. ನನ್ನದೇ ತಪ್ಪು.
ಎದೆಗೆ-ಎದೆಯ ಅಂಟಿಸಿ, ಮೈ-ಮನವೆರಡು ಸಂದಿಸಿ-ಸ್ಪಂದಿಸುವಾಗ
ಸರಿದುಬಿಡಬೇಕಿತ್ತು.
ಹೌದು. ನನ್ನದೇ ತಪ್ಪು.

ದಿಗಂತದೊಳು ಮುಂಜಾನೆ, ಕೆಂಡ-ಮಂಡಲವಾದಗ ಮೌನಿಯಾಗಿರಬೇಕಿತ್ತು.
ಹೌದು. ನನ್ನದೇ ತಪ್ಪು.
ಎದೆಯ ಜೋಳಿಗೆಯಲಿ ಸಂದೇಹದ ಸರ್ಪ ಮೊಟ್ಟೆಯೊಡೆವಾಗ
ಕಾವು ಕೊಡಬಾರದಿತ್ತು.
ಹೌದು. ನನ್ನದೇ ತಪ್ಪು.
ಕಣ್ಣೀರಲದ್ದಿದ ಒದ್ದೆ ಕಣ್ಣದು ಅಳುವಾಗ, ಕಣ್ಣೀರನೊರೆಸಬೇಕಿತ್ತು.
ಹೌದು. ನನ್ನದೇ ತಪ್ಪು.
ಪ್ರೀತಿ ಬೀಳನು, ಬೀಳಿಸಿ ನಡೆವಾಗ, ಬೀಳ್ಕೊಡಬಾರದಿತ್ತು.
ಹೌದು. ನನ್ನದೇ ತಪ್ಪು.
ಇಂದು, ನೇಗಿಲಿಗೆ ಸಿಕ್ಕ ಕಸ ನನ್ನೆದೆ, ಚಿಂದಿಯಾಗಿದೆ. 
ಆದರೂ ಅಳಬಾರದಿತ್ತು
ಹೌದು. ನನ್ನದೇ ತಪ್ಪು.

-ದಿಲೀಪ್ ಶೆಟ್ಟಿ

(ಚಿತ್ರ ಕೃಪೆ: ಅಂತರ್ಜಾಲ)