---೧---
ಹತ್ತಿ ಮಾಮರವೊಂದು ಕೊಯ್ದ ಕಾಯ್ಗಳ
ಮೂಟೆ ಕಟ್ಟಿ, ಮಾಡಿದ ಕಾಯಕಕ್ಕೆ
ಕೊಟ್ಟರೊಂದು ಗಾಂಧೀ ನೋಟು.
ನಗು ಮೊಗದ ಗಾಂಧೀಜಿ ಮಾಡಿದರು ಸನ್ನೆ
ಒಂದರ ಪಕ್ಕಕ್ಕೆ ಎರಡೆರಡು ಸೊನ್ನೆ.
ನಿನ್ನೊಡೆಯ ನಾನು, ಕಾಲಿ ಕಾಗದ ನೀನು
ಗರ್ವದಲಿ ಗದರಿಸಿದೆ, ಬಂದಿಸಿ ಹೆದರಿಸಿದೆ
ಗಾಳಿಯಾಡಲು ಬಿಡದೆ, ಕಿಸೆಯ ಸಂದಿಯಲಿ.
---೨----
ಹೊಟ್ಟೆಯ ತಾಳಕೆ, ಶೆಟ್ಟಿ ಅಂಗಡಿ ಕಂಡು,
ಹಿಟ್ಟು ತಿನ್ನುವ ಹೊತ್ತಿಗೆ ,ಗಲ್ಲ ಪೆಟ್ಟಿಗೆಯಲಿ
ನಲ್ಲೆಯರೊಡಗೂಡಿ ನಲಿಯುತ್ತಲಿತ್ತು
ಗಾಂಧಿ ನೋಟು, ಪಲ್ಲಂಗದಲಿ ಕೂತು.
ಮತ್ತೆ ಪೌರುಷದಿ ತಲೆಯೆತ್ತಿ, ನನ್ನೆಡೆ ಕುಹಕಿಸಿ,
ಸೀಟಿ ಹೊಡೆದು, ಗಲ್ಲ ಮುರಿದು, ಕಣ್ಣು ಮಿಟುಕಿಸಿ,
ನನ್ನೊಡೆಯ ನಾನೇ ಎಂದಿತು ಗರ್ವದಲಿ.
---೩----
ಚೌತಿ ಕಾಲದ ಹೊತ್ತು, ವಂತಿಗೆಯ ಬಿಸಿ ತುತ್ತು.
ಸರಸದಲಿ ಬೆರೆತಿದ್ದ ನೋಟಿನಂಗಿಯ ಎಳೆದು,
ಶೆಟ್ಟಿ ಕೊಟ್ಟನು ದೇಣಿಗೆಯ, ಗಾಂಧಿ ನೋಟಿನ ಕಾಣಿಕೆಯ,
ಹುಡುಗರ ಪಂಕ್ತಿಗೆ, ಚೌತಿಯ ವಂತಿಗೆ.
ಮತ್ತೆ ಪಲಾಯನ, ಮತ್ತೆ ಪ್ರಯಾಣ
ಹೊಸ ಮುಖದ ಕನ್ನಿಕೆಯರೊಡಗುಡಿ
ಗಾಂಧಿ ನೋಟು. ಪಲ್ಲಂಗದಲಿ ಕೂತು.
---೪---
ಸಿರಿವಂತನಿಗೆ ಅದು ಸಾಮಾನ್ಯ ನೊಟು.
ಬಡತನಕ್ಕದು ದಾರಿದ್ರ್ಯ ದ್ವಂಸಿಸಿದ ಭಗವಂತನ ಓಟು.
ಆಳುವ-ನಗುವ ಜನರೊಡೆ ಬೆರೆತು
ಕಣ್ಣೀರು ಹಾಕಿದೆ, ಕನ್ನಡಕ ಒಡೆದಿದೆ.
ಬದುಕ ಬವಣೆಗೆ ಕೊಂಚ ಬಣ್ಣವು ಮಾಸಿದೆ.
ಆದರೇಂದಿಗೂ ಇಳಿದಿಲ್ಲ ಗಾಂಧಿ ನೋಟಿನ ಬೆಲೆ.
ಬದಲಾಗು ಬದಲಾವಣೆಗೆ, ಕಳೆದು ಕೊಳ್ಳದೆ
ನಿನ್ನ ಬೆಲೆ, ಕೊಳೆತು ಕೊಲ್ಲದಿರು ನನ್ನ ಬೆಲೆ.
ಎನ್ನುತಲಿತ್ತು ಗಾಂಧಿ ನೋಟು. ಪಲ್ಲಂಗದಲಿ ಕೂತು.
-ದಿಲೀಪ ಕುಮಾರ ಶೆಟ್ಟಿ.
ನೋಟಿನ ಚಲಾವಣಾ ಪಯಣ ಸಾದೃಶ್ಯವಾಯಿತು.
ಪ್ರತ್ಯುತ್ತರಅಳಿಸಿದುಡ್ಡಿನ ದೊಡ್ಡತನದ ಮುಂಡಿ ಮಾಡಿ, ಮೈಲಿಗೆ, ಹೊಸದು ಬೇಕೆನ್ನುವ ಆಸೆ ಶೂನ್ಯ:
"ಬದುಕ ಬವಣೆಗೆ ಕೊಂಚ ಬಣ್ಣವು ಮಾಸಿದೆ.
ಆದರೇಂದಿಗೂ ಇಳಿದಿಲ್ಲ ಗಾಂಧಿ ನೋಟಿನ ಬೆಲೆ." ಅಲ್ಲವೇ ಮತ್ತೆ!
http://www.badari-poems.blogspot.in/