ಸುಂಕವಿಲ್ಲದೆ ಸುಮ್ಮನಾದರು
ಎತ್ತಿ ಅವರನು, ಸುತ್ತಿ ಊರನು 
ಕಳುಹಿ ಕೊಳ್ಳಲು, 
ಮೆಟ್ಟಿ ನಿಂತರು, ಹಳ್ಳ ಕೊರೆದರು, 
ಮತ್ತೆ ಶಬ್ದಕೆ ನಡುಗಿಸಿಟ್ಟರು.
ಒಳ್ಳೆ ಮನಸದು ವಲ್ಲೆ ಎನ್ನದೆ
ಕಣ್ಣ ನೀರಲಿ ಕೆನ್ನೆ ಕೆಸರನು
ಒರೆಸಿ ಅತ್ತಿತು.
ಮತ್ತೆ ಓಲಗ, ಸುತ್ತಲಾ ಜಗ 
ನಗುವ ಮೊಗದಲಿ ಮೆಟ್ಟಿ ಮೆರೆದರು.
ದೈತ್ಯ ವಾಹನ ಧೂಮ  ಕಕ್ಕಲು 
ದಮ್ಮು ಕೆಮ್ಮಿತು, ಬಟ್ಟೆ ಹರಿಯಿತು .
ಮತ್ತೆ ವೃಷ್ಟಿಯ ಹುಚ್ಚು ಕೋಡಿ
ತೋಯ್ದು ತೆಗೆಯಿತು,ಎದೆಯ ಬಗೆಯಿತು
ಬೆತ್ತಲಾದರೂ ಬತ್ತದಾ ಛಲ
ಮಂದಹಾಸದಿ ನಡೆಸಿ ಕಾಯಕ.
ಬೆನ್ನಿಗಂಟಿ ಅಟ್ಟುವವರ ಕೆಡೆದು ಬೀಳಿಸಿ
ಪ್ರೀತಿ ಗೆಲ್ಲಿಸೋ ನಿಷ್ಠೆಯಾ ಪರಿ 
ನಾ ನಡೆದ ದಾರಿ ,
ಮುಂಜಾವಿನ ದಾರಿ, ಮತ್ತೆ ಸಂಜೆಗಾದಾರಿ 
ನಮ್ಮವರ ದಾರಿ,ನಮ್ಮೂರ ಹೆದ್ದಾರಿ ...
-ದಿಲೀಪ್ ಶೆಟ್ಟಿ 
ಚಿತ್ರ ಕೃಪೆ: ಅಂತರ್ಜಾಲ 
 
