ಕನ್ನಡ ಕಲಿಯಿರಿ. ನಿಮ್ಮ ಅನಿಸಿಕೆಯನ್ನು ಕನ್ನಡದಲ್ಲಿ ನೀಡಿರಿ.


Type in English. Press Space to get it in ಕನ್ನಡ ಲಿಪಿ Press Ctrl+g to toggle between English and Kannada

ಗುರುವಾರ, ಡಿಸೆಂಬರ್ 1, 2011

ಹನಿಗವನ...


lo(i)ve marriage

ಓಡಿಹೋಗಿ ಮದುವೆ ಆದರೆ
ಲವ್ ಮ್ಯಾರೇಜು 
ಮನೆಯವರೋಪ್ಪಿ ಮಾಡಿದರೆ
ಲೈವ್ ಮ್ಯಾರೇಜು .

ಲೇಖನಿ 

ಲೇಖನಿ ಖಡ್ಗದಷ್ಟೇ ಹರಿತವಾದುದು.
ಅದಕ್ಕೆ ಇರಬೇಕು, ಲೇಖಕರ 
ಮನೆಯ ಕಸದ ಬುಟ್ಟಿ
ಆಗಿದೆ ಹರಿದ ಕಾಗದಗಳ 
ತೊಟ್ಟಿ.

ಸ(o)ಭಳ

ಸಾದಿಸಿದರೆ ಸಭಳ ನುಂಗಬಹುದು 
ಎನ್ನುತ್ತಿದ್ದವಳು 
ಮದುವೆಯಾದ ಮೇಲೆ ಹೇಳುತ್ತಿದ್ದಾಳೆ 
ಸಾದಿಸಿದರೆ ಗಂಡನ
ಸಂಬಳ ನುಂಗಬಹುದು.

ದಮ್ಮು 

ದಮ್ಮಿದ್ದರೆ ಒದೆ ನೋಡುವ 
ಎಂದಾಗ ಮುಚ್ಚಿಕೊಂಡು ಬಂದ.
ಕೇಳಿದರೆ,
ದಮ್ಮಿಲ್ಲ ನನಗೆ , ಕೆಮ್ಮು ಮಾತ್ರ ಅಂದ.

ರುಪಾಯಿ 

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ 
ನನಗದೆ ಕೋಟಿ ರುಪಾಯಿ,
ಹೆಂಡತಿ ತವರಿಗೆ ಹೊರಟಳು ಎಂದರೆ
ಪಕ್ಕದ ಮನೆ ಸುಬ್ಬಿಗೆ ಹಾಯಿ..

(ನೀ)ನಲ್ಲ 

ಈ ಹುಡುಗಿಯರೇ ಇಷ್ಟು ,
ನಿನ್ನೆಯವರೆ
ನೀ ನನ್ನವನು ನಲ್ಲಾ, ಎನ್ನುತ್ತಿದ್ದವಳು 
ಪಕ್ಕದ ಮನೆಯ ಹೊಸ ಹುಡುಗನನ್ನ 
ನೋಡಿ ಹೇಳುತ್ತಿದ್ದಾಳೆ 
ನೀ ನನ್ನವನ್ ಅಲ್ಲಾ.

ನೆಂಟು 

ಮೊನ್ನೆ ಮೊನ್ನೆಯಷ್ಟೇ ಬೆಳೆಯಿತು
ನನ್ನ ಅವಳ ನೆಂಟು.
ಈಗ ಕೇಳಿದರೆ ಆಗಿದ್ದಾಳೆ
ನನ್ನವಳು ಪ್ರೆಗ್ನೆಂಟು.

ಒಡವೆ
ವಡತಿ ತಾ ಎಂದಳು ಒಡವೆ 
ಉಹೂ!! ಒಲ್ಲೆ ಎಂದೇನು ಒಡನೆ.
ಕನಸು ಹಾರಿ, ಮನಸು ಮಾರಿ 
ಸಂಜೆಯಿದ್ದಳು ಪಕ್ಕದಮನೆಯವ-
ನೊಡನೆ.

ಅಂದು-ಇಂದು 

ಕಣ್ಣಲ್ಲಿ ಕಣ್ಣನಿಟ್ಟು ನಿನ್ನೆ 
ನೋಡಿದೆ ಅಂದು.
ಅದೇ ತಪ್ಪಾಗಿಹೋಯಿತು
ಕಳೆಯಬೇಕಿದೆ ನಿನ್ನೆ
ನಾಡಿದ್ದು ಇಂದು.

-ದಿಲೀಪ್ ಶೆಟ್ಟಿ.
(ಚಿತ್ರ ಕೃಪೆ: ಅಂತರ್ಜಾಲ)

ಸೋಮವಾರ, ನವೆಂಬರ್ 28, 2011

ದೊಡ್ಡವರಾಗ್ಬಿಟ್ವಲ್ರೊ.....??????


       ನನಗಿನ್ನು  ನೆನಪಿದೆ, ಪದೆ ಪದೆ ಕೆಸರು ಗದ್ದೆಯಲ್ಲಿ ಬಿದ್ದು ಹೊರಳಾಡಿ ಮನೆಗೆ ಬಂದು ಅಪ್ಪನ ಚಡಿಯೇಟು ತಿಂದು, ಬಿಸಿನೀರ ಬಿಸಿಯಲ್ಲಿ ಅಮ್ಮನ ಜೊತೆ ಆಟವಾಡಿದ ಆ ದಿನ. ತಿನ್ನುತ್ತಿದ್ದ ತಿಂಡಿಯನ್ನು ನಾಯಿ ಕಚ್ಚಿಕೊಂಡು ಹೋದಾಗ ಅದನ್ನಟ್ಟಿಸಿ ಹೋಗಿ ಅದರ ಬಾಯಿಂದ ಕಸಿದು ತಿಂದ ಆ ದಿನ. ದೊಡ್ದವರಾಡುವಾಗ ನನ್ನ ಸೇರಿಸಿಕೊಳ್ಳದೆ ನಿರ್ಲಕ್ಷಿಸಿದಾಗ ಬೌಂಡರಿಗೆ ಹೋದ ಚೆಂಡನ್ನು ಯಾರು ಕಾಣದಂತೆ ಬಾವಿಗೆ ಹಾಕಿದ ಆ ದಿನ. ಪಕ್ಕದ ಮನೆಯ ಅಜ್ಜಿ ಹಪ್ಪಳವ ಬಿಸಿಲಿಗೆ ಒಣಗಲು ಇಟ್ಟಾಗ ಕದಿಯಲು ಹೋಗಿ, ಸಿಕ್ಕಿ ಬಿದ್ದು, ಅಜ್ಜಿ ಕಿವಿ ಹಿಂಡಲು ಬಂದಾಗ ಅತ್ತಂತೆ ಮಾಡಿ ಅಜ್ಜಿಯ ಕೈಯಿಂದಲೆ ಹಪ್ಪಳ ಗಿಟ್ಟಿಸಿಕೊಂಡ ಆ ದಿನ. ಸೈಕಲ್ ಟಯರನ್ನ ಜೋರಾಗಿ ಓಡಿಸಿಕೊಂಡು ಬರುವಾಗ ಪಕ್ಕದ ಬೀದಿಯ ಸತೀಶ ಸೈಕಲ್ ಓಡಿಸಿಕೊಂಡು ಬಂದು "ಏನೊ ಕುಳ್ಳ.. ನಿಂಗೆ ಇದೆ ಸರಿ.." ಎನ್ನುತ್ತಾ ತಲೆ ಮೇಲೆ ಹೊಡೆದು ಹೋದಾಗ "ನಾನು ದೊಡ್ಡವನಾದ ಮೇಲೆ ದೊಡ್ಡ ಸೈಕಲ್ ತಗೊಂಡು ಇವನ ತಲೆ ಮೇಲೆ ಹೊಡಿತೀನಿ.." ಎಂದು ಮನಸ್ಸಲ್ಲೆ ಅಂದುಕೊಂಡ ಆ ದಿನ. ದೊಡ್ಡವರೆಲ್ಲ ಕಿಸೆಯಿಂದ ದುಡ್ಡು ತೆಗೆದು ಐಸ್ ಕ್ರೀಂ ತಿನ್ನುವಾಗ ನಾಲಿಗೆ ಚಪ್ಪರಿಸುತ್ತ ಅವರನ್ನೆ ನೋಡುತ್ತಾ, ಕಿಸೆ ಇಲ್ಲದ, ಕುಂಡಿ ತೋರುವ ಚಡ್ಡಿ ಎಳೆದು ಕೊಳ್ಳುತ್ತಾ ಯಾರಾದರು ನನಗೂ ಕೊಡಿಸಬಹುದು ಎಂಬ ಆಸೆಯಿಂದ ಐಸ್ ಕ್ರೀಂ  ಡಬ್ಬಿಯ ಬಳಿಯೆ ನಿಂತು, ಯಾರು ಕೊಡಿಸದಿದ್ದಾಗ ಮನೆಗೆ ಓಡಿ ಹೋಗಿ ಅಪ್ಪನ ಕಿಸೆಯಿಂದ ಒಂದು ರುಪಾಯಿ ಕದ್ದು ತಂದು ರಾಜ ರೋಷವಾಗಿ ತಿಂದ ಆ ದಿನ. ಪಕ್ಕದ ಮನೆಯಲ್ಲಿ ಮದುವೆಗೆ ಹೊಸ ಬಟ್ಟೆ ಹಾಕಿಕೊಂಡು ಹೋಗುವಾಗ ಅಮ್ಮನ ಹರಿದ ಸೀರೆ ನೋಡಿ "ನಾನು ದೊಡ್ಡವನಾದ ಮೇಲೆ ಅದಕ್ಕಿಂತ ಚೆಂದದ ಸೀರೆ ಕೊಡಿಸುತ್ತೇನೆ.." ಅಂದ ಆ ದಿನ. ಶಾಲೆಯಲ್ಲಿ ಮೇಷ್ಟ್ರು ಹೊಡೆದಾಗ ಅವರ ಸೈಕಲ್ ಪಂಚರ್ ಮಾಡಿ, ಮತ್ತೆ ಸಿಕ್ಕಿ ಬಿದ್ದು ಹುಣಸೆ ಮರದ ಉದ್ದನೆಯ ದಂಟಿನಿಂದ ಹೊಡೆಸಿಕೊಳ್ಳುವಾಗ "ನಾನು ದೊಡ್ಡವನಾದ ಮೇಲೆ ಹೀಗೆ ನಿಮಗೂ ಹೊಡಿತೀನಿ.." ಅಂದು ಕೊಂಡ ಆ ದಿನ. 


       ಬಾಲ್ಯದ ವಯಸ್ಸು ಎಷ್ಟೆ ಇರಲಿ, ಪ್ರೌಢರಾಗುವ ವರೆಗೂ ಕಾಡುವ ಒಂದೇ ಪ್ರಶ್ನೆ "ನಾನು ದೊಡ್ದವನಾಗೊದು ಯಾವಾಗ..?". ನಾನು ಸಂಪಾದಿಸಿ ನನ್ನ ದುಡ್ಡಲ್ಲಿ ಬೇರೆಯವರು ಹೊಟ್ಟೆಯುರಿ ಪಡುವ ಹಾಗೆ ಬದುಕಿ, ಚಿಕ್ಕವನಿದ್ದಾಗ ಹೀಯಾಳಿಸಿದ, ಗೇಲಿ ಮಾಡಿದ ಎಲ್ಲರಿಗು ಬುದ್ದಿ ಕಲಿಸಬೇಕು ಅಂದು ಕೊಳ್ಳುವಾಗೆಲ್ಲ ಗಡಿಯಾರದ ಮುಳ್ಳು ಹೆಬ್ಬಂಡೆ ಹೊತ್ತು ಚಲಿಸುವಂತೆ ಕಾಣುತ್ತಿತ್ತು. ದೊಡ್ಡವರಿಗೆ ಎಲ್ಲ ಸುಖ, ನಮಗೆ ಬರಿ ಪರೀಕ್ಷೆ ಎಂಬ ಸಜೆ. ತಿಂಗಳಿಗೆ ಒಂದೊಂದು ಸಾಲದೆನ್ನುವಂತೆ ಮದ್ಯ ವಾರ್ಷಿಕ , ಮತ್ತೆ ಕೊನೆಗೆ ವಾರ್ಷಿಕ, ಬೆಂದ ಅನ್ನಕ್ಕೆ ವಗ್ಗರಣೆ ಕೊಟ್ಟ ಹಾಗೆ. ಅಯ್ಯೊ ಯಾಕಪ್ಪ ಈ ಪರೀಕ್ಷೆ ಬರುತ್ತೆ???, ಯಾಕಾದ್ರೂ ನಾನು ದೊಡ್ಡವನಾಗಿ ಹುಟ್ಟಲಿಲ್ಲ ಅಂದುಕೊಳ್ಳುವ ಬೇಸತ್ತ ಮನಸ್ಸು.  ಬದುಕಿನ ಪುಟ ತಿರುವಿದಾಗೆಲ್ಲ ಇಂತಹ ಸಣ್ಣ ಸಣ್ಣ ಸಿಹಿ ನಿರಾಶೆಗಳೇ ಹೆಚ್ಚು. ಎಲ್ಲಕ್ಕೂ ಉತ್ತರ  ದೊಡ್ದವನಾಗೋ ಕಾತರ, ಆತುರ. ಪ್ರತಿ ನೆನಪಿನಲಿ ಆತುರವಿದೆ, ಆಡಂಬರ ಇಲ್ಲ. ಪ್ರತಿ ಕನಸಿನಲಿ ಮುನಿಸಿದೆ, ಮತ್ಸರ ಇಲ್ಲ. ಪ್ರತಿ ನಿನ್ನೆಯಲಿ ನಾನಿದ್ದೆ, ನಾಳೆಯ ಗುರಿ ಇತ್ತು, ಆದರೆ ಇಂದು ಏನಿದೆ? ನೆನಪ ಮೂಟೆಯ ಬಿಟ್ಟರೆ ನಗುವ ಕಾರಣ ಹುಡುಕುತ್ತ, ಜವಾಬ್ದಾರಿಯ ನೊಗ ಹೊರಲಾರದೆ, ಹೆಣಗಾಡುವ ಪ್ರಬುದ್ದರು. ಬುದ್ದಿ ಬೆಳೆ ಬೆಳೆಯುತ್ತಿದ್ದಂತೆ  ಮನುಷ್ಯತ್ವದ ಬೆಲೆ ಬದಲಾಗಿ ಯಾಂತ್ರಿಕ ಬದುಕಿನಲ್ಲಿ  ಸ್ವಂತಿಕೆ ಮಾಯವಾಗಿ ಮಾಂತ್ರಿಕನ ಕೈವಶಕ್ಕಾಡುವ ಗೊಂಬೆಗಳಾತ್ತೇವೆ. ತಿನ್ನೋ ಅನ್ನದಿಂದ ಹಿಡಿದು ಮುಖಕ್ಕಂಟಿದ ನಗುವೂ ಕಲುಷಿತ. ಪ್ರೀತಿ, ವ್ಯಾಪಾರದ ವಸ್ತು. ಭಾವನೆ, ಬಣ್ಣ ತೆಗೆದ ತಿಳಿ ನೀಲಿ ನಭ. ಸಂಬಂಧ, ದಿನ ಉದಯಿಸುವ ದಿನಕರನ ಚಾಳಿ. ನೆರೆಮನೆಯವನ ನೆರಳು ಕರಿ ಮೋಡ, ಅಂತರ್ಜಾಲದ ಗೆಳೆಯ ದೇವದೂತ. ವಯಸ್ಸಿಗಂಟಿಕೊಂಡ ಜಾಡ್ಯ, ದೊಡ್ಡವರ ವರ್ತಮಾನದ ವರ್ತನೆ.            ಆಸೆಯ ಆಮಂತ್ರಣಕ್ಕೆ ಕಟ್ಟಿಬಿದ್ದು ನಿರಾಶೆಯ ಮಳೆಯಲ್ಲಿ ತೊಯ್ದ ಹತಾಶ ಭಾವ. ಪ್ಯಾಂಟಿನ ಜೇಬಿನೊಳಗೆ ಕೈಬಿಟ್ಟಾಗೆಲ್ಲ ಸಿಗುವ ಗರಿ ಗರಿ ನೋಟುಗಳು ಗೆಳೆತನ ಪ್ರೀತಿ ವಾತ್ಸಲ್ಯಕ್ಕೆ ಕಟ್ಟಿದ ಬೆಲೆ ಎಂಬಂತೆ ಲೇವಡಿ ಮಾಡಿ ಆಡಿಕೊಳ್ಳುತ್ತವೆ, ಹಾಡಿ ಕೊಲ್ಲುತ್ತವೆ. ಬೀದಿ ಬದಿ, ಜಗತ್ತಿನ ಹಂಗಿಲ್ಲದೆ ಮಕ್ಕಳಾಡುವಾಗ ಮತ್ತೆ ಬಾಲ್ಯಕ್ಕಿಳಿದರೆ ಮನಸ್ಸಿನ ತುಮುಲ ವರ್ಣನಾತೀತ. ನಿನ್ನೆಯ ಗುಂಗಿಲ್ಲ, ನಾಳೆಯ ಹಂಗಿಲ್ಲ, ಬೇದ ಭಾವವ ನುಂಗಿಲ್ಲ. ಮನಸ್ಸು ಹೇಳಿದ ಕಡೆಗೆ ಮುಗಿಲು ಮುಟ್ಟುವ ವರೆಗೆ ಚಳಿ,ಮಳೆ ,ಗಾಳಿಯನ್ನು ಲೆಕ್ಕಿಸದೆ ಮುನ್ನುಗ್ಗುವ ಆತ್ಮಸ್ತೈರ್ಯಕ್ಕೆನು ಹೇಳಲಿ?.  ದೊಡ್ದವರಾಗುತ್ತಿದ್ದಂತೆ  ಕಲ್ಮಶವಿಲ್ಲದ ಮನಸ್ಸಿನ ತುಂಬಾ ತುಂಬುವ ಸ್ವಾರ್ಥದ ಪಾಯಿಖಾನೆಯ ನೀರು ಶುದ್ದವಾಗದೆ, ಇಡಿ ಶರೀರವನ್ನೇ ಜರ್ಜರಿತ ಗೊಳಿಸಿ ಅಹಂ ಭಾವವ ಬೆಳೆಸಿ ಕೊನೆಗುಳಿಸುವುದಾದರು ಏನು?? ದಿನಕ್ಕೆ ನಾಲ್ಕು ಬಿ. ಪಿ. ಮಾತ್ರೆ, ಸಕ್ಕರೆ ಕಾಣದ ಕಾಫಿ, ಮಾಡಲೇ ಬೇಕಾದ ವ್ಯಾಯಾಮ ಬಿಟ್ಟರೆ ಕಾಡುವ ಅಪರಾದಿ ಮನೋಭಾವ . ಕಣ್ಣ ಮುಚ್ಚಿ ರೆಪ್ಪೆ ತೆಗೆಯುವುದರೊಳಗೆ ಬಾಲ್ಯ ಬಾಲ ಮುದುರಿಕೊಂಡು  ಬಾಳಲು ಕಲಿತಿರುತ್ತದೆ. ಆಗೆಲ್ಲ ಮನಸ್ಸಿನ್ನ ಪಟಲದಲ್ಲನಿಸುವುದು "ಅಯ್ಯೋ ದೊಡ್ಡವರಾಗ್ಬಿಟ್ವಲ್ರೊ.............????????????????"

-ದಿಲೀಪ್ ಶೆಟ್ಟಿ 
( ಚಿತ್ರ ಕೃಪೆ : ಅಂತರ್ಜಾಲ )

ಗುರುವಾರ, ನವೆಂಬರ್ 10, 2011

ಗಗನ ಕುಸುಮ


ಕಾಡ ಬೇಡ  ಮತ್ತೆ ಮತ್ತೆ
ಕಟ್ಟ ಹೊರಟಿಹೆ ಹೊಸ ಕನಸ ಕೋಟೆಯ.
ನಿನ್ನ ನೆನಪಿನ ಮುಳ್ಳ ತೆಗೆದು,
ಪ್ರೀತಿ ಬಿಗಿದು, ಕಟ್ಟಿ ಕಣ್ಣಿರ ಕಟ್ಟೆಯ.

ಹಾತೊರೆದ ಜೀವವ ನೀ ತೊರೆದು 
ಬಿಟ್ಟರೆ,
ಮಾತಿರದೆ ಮೌನವು ಕಾತುರದಿ 
ಕಾದಿರಲು,
ಹಂಬಲಿಸಿ ಹಲುಬುವ ಹುಂಬ ಹಸುಳೆಯ 
ಹಿಂಡಿ  ಹೋದೆಯಾ.

ಎಣ್ಣೆ ಬಾಣಲೆಗೆ ಬಿದ್ದ ಮಿಂಚು ಹುಳು 
ನಾನು.
ಹೆಣ್ಣೇ, ಬಾಳಲು ಬಿಡದೆ ಹಾಳು ಮಾಡಿದೆ 
ನೀನು.
ನನ್ನ ತನು ನಿನ್ನೋಡವೆ, ನಿನ್ನ ತನ ನನ್ನೊಡಲು
ಎನ್ನುತಲಿ ಬಂದಡಗಿ ಚಿತ್ತ ಸ್ವಾಸ್ತ್ಯವ ಕದ್ದು,
ಗಗನಕುಸುಮವಾದೆಯಾ??

ತಿರುಗೊ ಆಗಸದಾಚೆ
ಒರಗೊ ಹಾಸಿಗೆ ಹಾಸಿ
ಮರುಗೊ ನನ್ನನು ಬಿಟ್ಟು
ಕರಗಿ ಹೋದರೆ ಇನ್ನು
ಕೊರಗೊ ಮನಸದು ಎಂದೂ 
ಮಸಣದ ಮಣ್ಣು.

-ದಿಲೀಪ್ ಶೆಟ್ಟಿ.
(ಚಿತ್ರ ಕೃಪೆ : ಅಂತರ್ಜಾಲ )

ಶುಕ್ರವಾರ, ನವೆಂಬರ್ 4, 2011

ಸೋಂಬೇರಿ-ಸಾಂಬಾರು

ಸೋಂಬೇರಿ ಮನಸಿಗೆ 
ಸಾಂಬಾರು ಮಾಡುವ ಕನಸು.
ಸಾಮಾನು ತರಬೇಕು 
ಎಂಬುದೊಂದೇ  ಮುನಿಸು . 

ಹುಳಿ, ಉಪ್ಪು ಹಿಡಿ ಬೆಲ್ಲ
ಕರಿಬೇವು, ಕೊತ್ತಂಬರಿಯೂ ಇಲ್ಲ.
ಈರುಳ್ಳಿ ಬೆಳ್ಳುಳ್ಳಿ ಬೇಕೆಂದೆ ಇಲ್ಲ,
ಗ್ಯಾಸ್ ಅಂಗಡಿ ಫೋನ್ ನಂಬರ್
ಸೇವ್ ಮಾಡ್ಕೊಂಡೆ ಇಲ್ಲ. 

ಇರುವುದಿಷ್ಟೇ ನೋಡಿ.
ಒಂದು ತಾಟು, ಅರ್ದ ಟೊಮೇಟೊ
ನಾಲ್ಕು ಮೆಣಸಿನ ಕಾಯಿ,ಬೊಗಸೆ ಎಣ್ಣೆ
ಸ್ಟೌವ್ ತಳದಲ್ಲೊಂಚುರು ಸೀಮೆ ಎಣ್ಣೆ.
ಹುಡುಕಿದರೆ ಸಿಗ ಬಹುದು ಶುಂಟಿ.
ತಂದಿದ್ದು ನೆನಪಿದೆ ಮೊನ್ನೆ.

ಮನಸಿನ ಮಹರಾಜ,
ರಜೆ ಮಾಡು ಅಂತಾನೆ
ಸಾಂಬಾರು ಮಾಡೋರು 
ಹೆಣ್ಣ್ ಮಕ್ಳು ಅಂತಾನೆ 
ಹೊಸದೊಂದು ಹೋಟೆಲ್ಲು 
ರೆಡಿ ಆಯಿತು ನೋಡು
ಚೈನೀಸ್ಸು , ಕೋಳಿ ಪೀಸು 
ಹೊಗ್ ತಿನ್ನು ಅಂತಾನೆ.

ಮೂಡೊಂದು ಮೂಡಿತ್ತು ಹಾಳಾಗಿ ಹೋಗ್ಬಿಡ್ತು.
ಒಳ್ಳೆ ಟೈಮಲ್ಲಿ ಮತ್ತೆ ಕೈ ಕೊಟ್ಬಿಡ್ತು.
ಆದ್ರೂ..,ಸೋಂಬೇರಿ ಮನಸಿಗೆ 
ಸಾಂಬಾರು ಮಾಡುವ ಕನಸು.

ದಿಲೀಪ್ ಶೆಟ್ಟಿ.

(ಚಿತ್ರ ಕೃಪೆ : ಅಂತರ್ಜಾಲ)

ಮಂಗಳವಾರ, ನವೆಂಬರ್ 1, 2011

ನೀವು ನವೆಂಬೆರ್ ಕನ್ನಡಿಗರೇ???


        ಮತ್ತೆ ಬಂದಿತು ನವೆಂಬೆರ್ ೧. ಕರುನಾಡ ಬೀದಿ ಬೀದಿಗಳು ಮತ್ತೆ ಅರಶಿನ ಕುಂಕುಮ ತೊಟ್ಟು  ನೀಲ ನಭಕ್ಕೆ ಚಾಚಿ ವಿಜ್ರಂಬಿಸುತ್ತಿವೆ. ಎಲ್ಲೆಡೆ ಕನ್ನಡಮ್ಮನ ಭಾವ ಬಕುತಿಯ ಹೊಗಳಿ ಕನ್ನಡದ ಕಂಪನು ದೇಶದಾದ್ಯಂತ ಪಸರಿಸುತ್ತಿದ್ದಾರೆ. ಕನ್ನಡ ಕವಿಗಳ ಕವನದ ಕೋಮಲತೆ ಮತ್ತೆ ಕಣ್ಣಾಲಿಗೆಯಲಿ ಜಿನುಗುತಿದೆ. ಎಲ್ಲ ವಾಹನವು ಹಸಿರುಡುಗೆ ತೊಟ್ಟು ಹಳದಿ ಕೆಂಪಿನ ಬಾವುಟ ದರಿಸಿ ರಾರಾಜಿಸುತ್ತಿವೆ. ಎಲ್ಲರೊಂದುಗೂಡಿ ಕನ್ನಡದ ಸುನಾದವ ಕನ್ನಡೇತರರಿಗೆ ಉಣಬಡಿಸಲು ಯೋಧರಂತೆ ಸನ್ನದ್ದರಾಗಿದ್ದಾರೆ. ಕನ್ನಡ ನಾಡಿನಲ್ಲಿ ಜನಿಸಿದ್ದಕ್ಕೆ ಕನ್ನಡಕ್ಕೆ ಇಷ್ಟು ಮಾಡಿದರೆ ಸಾಕು ಬಿಡಿ. ಮತ್ತೆ ಮುಂದಿನ ವರ್ಷ ನೋಡಿದರಾಯಿತು. ಇಷ್ಟೇ ಅಲ್ಲವೇ ನಮ್ಮ ಕನ್ನಡಾಭಿಮಾನ? ನಾವೇಕೆ ನವೆಂಬೆರ್ ಕನ್ನಡಿಗರಾಗಿದ್ದೇವೆ? ನವೆಂಬೆರ್ ತಿಂಗಳಲ್ಲಿ ಪರ ಭಾಷ ಚಿತ್ರದ ಬಿತ್ತಿಚಿತ್ರವನ್ನು ನೋಡಲಾಗದೆ ಹರಿದು ಹಾಕುವ ಭಾಷಾಭಿಮಾನಿಗಳಿಗೆ ಕನ್ನಡ ಚಿತ್ರವೇಕೆ ಹಿಡಿಸುವುದಿಲ್ಲ? ನಭಕಪ್ಪುವ ಕನ್ನಡ ಧ್ವಜ ಧರಿಸಿ ಓಡಾಡೋ ರಿಕ್ಷಾಗಳು, ಪ್ರಯಾಣಿಕರು ಕುಂತೊಡನೆ "ಕಿದರ್ ಜಾನಾ ಹೈ??" ಅನ್ನುವುದೇಕೆ?. ರಾಜ್ಯೋತ್ಸವ ಬಂದೊಡನೆ ನೆನಪಾಗೋ ಕವಿ ಪುಂಗವರು ತದ ನಂತರ ಹೇಳ ಹೆಸರಿಲ್ಲವಾಗುವುದೇಕೆ? ರಾಜ್ಯೋತ್ಸವ ಆಚರಿಸುವ ಪ್ರತಿಯೊಬ್ಬ ಕನ್ನಡಿಗ ಎಷ್ಟು ಕನ್ನಡ ಪುಸ್ತಕ ಕೊಂಡು ಓದಿದ್ದಾನೆ? ಕನ್ನಡಕ್ಕಾಗಿ ಬಾಳು ಸವೆಸಿದವರ ಬಗ್ಗೆ ಎಷ್ಟು ತಿಳಿದಿದ್ದಾನೆ?  ಆಂಗ್ಲ ಭಾಷಾ ಫಲಕವನ್ನು ಕಿತ್ತು ಹಾಕೋ ಕನ್ನಡಬಿಮಾನಿ ಎಷ್ಟರ ಮಟ್ಟಿಗೆ ಕನ್ನಡ ತಿಳಿದಿದ್ದಾನೆ?? ರಾಜ್ಯೋತ್ಸವ ಪ್ರಶಸ್ತಿ ನೀಡುವ ಸಾಹಿತಿಗಳ ಎಷ್ಟು ಕಥೆ-ಕವಿತೆ ಓದಿದ್ದಿರಿ?? ನೀವು, ನಿಮ್ಮೊಡಲ ಒಮ್ಮೆ ಕೇಳಿ ನೋಡಿ. ಆಡಂಬರದ, ತೋರಿಕೆಯ ಭಾಷಾಭಿಮಾನ ಬೇಕೆ? ಕನ್ನಡಮ್ಮನ, ಕರುನಾಡ ಏಳ್ಗೆ ಇದರಿಂದ ಎಷ್ಟಾದೀತು? ಕನ್ನಡಿಗರಿಗೆ ನವೆಂಬೆರ್ ನಲ್ಲಿ ಮಾತ್ರ ಯಾಕೆ ಭಾಷಾಭಿಮಾನ ಹೊರ ಹೊಮ್ಮುವುದು?? ಬರಿ ಪ್ರಶ್ನೆಗಳು, ಉತ್ತರಿಸಲಾಗದ, ಉತ್ತರ ಸಿಗದ, ಉತ್ತರ ಇಲ್ಲದ ಅನಂತಾನಂತ ಪ್ರಶ್ನೆಗಳು. ಓ ನಲ್ಮೆಯ ಕನ್ನಡಿಗರೇ ಯಾಕೆ ಹೀಗೆ? ನೀವೂ ಕೂಡ ನವೆಂಬರ್ ಕನ್ನಡಿಗರೇ??


        
            ಬೆಳೆಯುವ ಜಗತ್ತಿನ ಬೆಳವಣಿಗೆಗೆ ಅನುಗುಣವಾಗಿ ಕರುನಾಡು ಬೆಳೆಯಬೇಕು, ಬೆಳಗಬೇಕು.  ಬಳಸುವ ವಸ್ತು, ಭಾಷೆ, ಆಚರಣೆಗಳು ಬದಲಾಗುವುದು ಅನಿವಾರ್ಯ. ಅನಿವಾರ್ಯಕ್ಕೆ ವಗ್ಗಿ ಅನುಸರಿಸುವುದು ಅಷ್ಟೇ ಅನಿವಾರ್ಯ. ಅನಿವಾರ್ಯದ ಜೊತೆ ತನ್ನ ತನವನ್ನು, ತನ್ನ  ಭಾಷೆ, ಸಂಸ್ಕೃತಿಯನ್ನು ಬಳಸುವುದು, ಬೆಳೆಸುವುದು ಕೂಡ ಅಷ್ಟೇ ಅನಿವಾರ್ಯ ಹಾಗು ಕರ್ತವ್ಯ. ಇವುಗಳನ್ನು ಬದಿಗೊತ್ತಿ ನವೆಂಬೆರ್ ತಿಂಗಳಲ್ಲಿ ಕನ್ನಡ ನೆನಪು ಮಾಡಿಕೊಂಡು, ನಾನು ಕನ್ನಡಿಗ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂದು ಹೇಳಿದರೆ ಸಾಕೆ?. ಕನ್ನಡದ ಐತಿಹಾಸಿಕ ಪರಂಪರೆ ಉಳಿಸಿ ಬೆಳೆಸಬೇಕಾದರೆ ಕನ್ನಡ ಉಸಿರಾಗಬೇಕು. ಕನ್ನಡ ದಿನ ಬಳಕೆಯಾಗಬೇಕು. ಎಲ್ಲಿ ಅತ್ಯಗತ್ಯವಿದೆಯೋ ಅಲ್ಲಿ ಕನ್ನಡೇತರ ಭಾಷೆ ಉಪಯೋಗಿಸಬೇಕು. ಕನ್ನಡ ಸಾಹಿತಿಗಳ ಪುಸ್ತಕ ಕೊಂಡೊದಿ ಅವರನ್ನು ಪ್ರೋತ್ಸಾಹಿಸಿ ಕನ್ನಡದ ಗಂಧವ ಎಲ್ಲೆಡೆ ಪಸರಿಸಬೇಕು. ಕನ್ನಡ, ಸುಂದರವೆಂದರೆ ಸಾಲದು, ಸುಲಲಿತವಾಗಬೇಕು. ಎಳೆಯ ತಲೆಮಾರಿಗರಿಗೆ ಕರುನಾಡ ನಡೆ-ನುಡಿಯ ಬಗ್ಗೆ, ಅವುಗಳನ್ನು ರಕ್ಷಿಸಿ ಉತ್ತುಂಗಕ್ಕೆರಿಸುವ ಬಗ್ಗೆ ತಿಳಿ ಹೇಳಬೇಕು, ಮಾರ್ಗದರ್ಶನ ನೀಡಬೇಕು. ರಾಜ್ಯೋತ್ಸವವನ್ನು ಲೆಕ್ಕ ಇಟ್ಟು ಕೊಂಡರೆ ಸಾಲದು, ನಾವೇನು ಮಾಡಿದ್ದೇವೆ ಎಂಬುದನ್ನು ಲೆಕ್ಕ ಇಟ್ಟು ಕೊಳ್ಳಿ. ರಾಜ್ಯೋತ್ಸವ ಎಂದರೆ  ಕನ್ನಡ ಮಾತನಾಡುವ ದಿನ ಆಗಬಾರದು. ಕನ್ನಡ ತಿಳಿಯದವರಿಗೆ ಕಲಿಸುವ ದಿನವಾಗಬೇಕು. ಕನ್ನಡಕ್ಕಾಗಿ ಹೋರಾಡಲು ಕಂಕಣ ತೊಡುವ ದಿನವಾಗಬೇಕು. ಕನ್ನಡ ಡಿಂಡಿಮವ ಬಾರಿಸುವ ದಿನವಾಗಬೇಕು. ಕರ್ನಾಟಕ ವೈವಿದ್ಯಮಯ ರಾಜ್ಯ. ಎಲ್ಲ ಭಾಷೆಯ, ಸಂಸ್ಕೃತಿಯ ಜನರನ್ನು ನಮ್ಮವರು ಎಂದೆಣಿಸುವ ವಿಶಾಲ ಮನೋಹೃದಯದ ಜನರಿರುವ ನಾಡು. ಅದಕ್ಕಾಗಿಯೇ ಇರಬೇಕು ಕನ್ನಡ ಕಲಿಸುವ ಬದಲು ಪರಭಾಷೆಯನ್ನು ನಾವು ಕಲಿಯುತ್ತಿದ್ದೇವೆ. ಎಲ್ಲ ಭಾಷೆಯನ್ನು ಗೌರವಿಸಿ, ಕನ್ನಡವನ್ನು ಪ್ರೀತಿಸಿ.ಒಬ್ಬ ಕನ್ನಡಿಗನಾಗಿ ಕರುನಾಡಿಗೆ ಮಾಡಬೇಕಾದದ್ದು ಇಷ್ಟೇ  ಕನ್ನಡವನ್ನು ದಿನ ಬಳಸಿ, ಬೆಳೆಸಿ, ಉಳಿಸಿ. ಕನ್ನಡ ರಾಜ್ಯೋತ್ಸವವನ್ನು ನಿತ್ಯೋತ್ಸವವಾಗಿಸಿ.ಕುವೆಂಪು ರವರ "ಭಾರಿಸು ಕನ್ನಡ ಡಿಂಡಿಮ.." ನಿಮ್ಮ ಗುರಿಯಾಗಿಸಿ.ಕನ್ನಡ ಉಳಿಸಿ ಬೆಳೆಸುವ ಮೊದಲು ಬಳಸಿ.

ಸಿರಿಗನ್ನಡಂ ಗೆಲ್ಗೆ , ಸಿರಿಗನ್ನಡಂ ಬಾಳ್ಗೆ.

-ದಿಲೀಪ್ ಶೆಟ್ಟಿ.

ಸೋಮವಾರ, ಅಕ್ಟೋಬರ್ 24, 2011

ದೀಪಾವಳಿ


ಹಗಲಲಿ ರವಿ ತಾನು,
ಕತ್ತಲೊಳು ಚುಕ್ಕಿ ಚಂದ್ರಮರು,
ನಿತ್ಯ ನೀಡುವರು 
ದಿವ್ಯ ದೀಪದ ಆವಳಿ.
ಇಷ್ಟು ಸಾಲದೆ, ಸಾಲು ಸಾಲಲಿ
ಚಿಮ್ಮಿ ಬಿಡುವರು ಗುಡು ಗುಡುಗು ಪಟಾಕಿಯ,
ಮತ್ತೆ ಮಿಂಚದು ಹೊಳೆದು ಹೋಗಲು 
ಕತ್ತಲಾ.. ನಭ, ಬೆಳಗುವುದು.

ಮತ್ತೆ ಏತಕೆ ಹೊಲಸು ಮಾಡಿರಿ,
ಸುತ್ತ ಮುತ್ತಲ ಪರಿಸರ.
ಬೆಂಕಿ ಕೊಟ್ಟರೆ ಪಟಾಕಿಗದು
ಸುಟ್ಟು ಬಿಡುವುದು ಸರ ಸರ.
ಏನ ಉಳಿವುದು ನಿಮ್ಮ ನಾಳೆಗೆ,
ಸತ್ತು ನಾರದೆ ಪರಿಸರ ??

ಸುಜ್ಞಾನದ ದೀಪ ಹಚ್ಚಲು,
ಪ್ರಕೃತಿ ಮಾತೆಯು ಬೆಳಗಲಿ.
ಹಂಚಿ ಹರಡುವ ಸ್ನೇಹ, ಬಾಂದವ್ಯವ
ಗಿಡ, ಮರ ನಾಡಿಗೆ.
ದೀಪಾವಳಿ ದಾರಿ ತೋರಲಿ
ನಾಳೆ ಎಂಬೋ ನಾಳೆಗೆ.

-ದಿಲೀಪ್ ಶೆಟ್ಟಿ.

ಶನಿವಾರ, ಅಕ್ಟೋಬರ್ 22, 2011

ನೀ ಹಾಡ ಬಾರದಿತ್ತೆ....


ಅಂದು ಕಾರ್ಮೋಡ ಕಂಬನಿ ಇಟ್ಟು
ನಮ್ಮೆದುರು ಕೆಮ್ಮುತಿರೆ,
ತಂಗಾಳಿಯ ಬೆನ್ನಟ್ಟಿ
ತೆಂಗು ಬಾಳೆ ಬಾಗುತಿರೆ,
ಅಂಬರವು ಅಂಬಿಗಗೆ
ಅಬ್ಬರದಿ ಬೊಬ್ಬಿಡುತಿರೆ,
ವಾರಧಿಗೆ ಮತ್ತು ಹೆಚ್ಚಿ 
ವಾಲಾಡುತಿರೆ,
ವದ್ದೆ ವ್ರಕ್ಷಕೆ ಒರಗಿ
ಸಿಡಿಲ ಸದ್ದಿಗೆ ಹೆದರಿ ಒದ್ದಾಡುವಾಗ, 
ನನ್ನೆದೆಗಪ್ಪಿ, ಏದುಸಿರು ಬಿಟ್ಟು 
ಎದೆಯ ಭಾವ ಲಹರಿಯ ಜೊತೆ ಸೇರಿ,
ನೀ ಹಾಡ ಬಾರದಿತ್ತೆ ನನ್ನುಸಿರಿನ ಕವಿತೆ. 

-ದಿಲೀಪ್ ಶೆಟ್ಟಿ.

 (ಚಿತ್ರ ಕೃಪೆ: ಅಂತರ್ಜಾಲ )

ಶುಕ್ರವಾರ, ಅಕ್ಟೋಬರ್ 21, 2011

ನಿನಗೇನೆನ್ನಲೆ..?


ಹಲವು ಸಲ ಬಯಸಿದ್ದು
ಹೊಲದ ಕಳೆಗೂ ಕೀಳಾಗಿ,
ಹೊಳೆವ ನಿನ್ನದೇ ಬಿಂಬ
ಚಿತ್ತ ಪರದೆಯ ತುಂಬ
ಬಿತ್ತರಿಸಿದ ಭಾವ, ಬಂಗಿಯ
ನಡುವೆ ಬೆಂದ, ಭಾವನೆಗಳ
ಕಾರ್ಮುಗಿಲ ಕೆಸರಿನ ಹೋಳಿ
ಎರಚಿ,ನಗ್ನ ನರ್ತನವಾಡಿ  
ಗಬ್ಬೆದ್ದ ಗುಂಡಿಗೆಯನು 
ನಗುವ ಗುಂಡಿಗೆ ನೂಕಿ 
ಹರಿದ ಹೃದಯಕೆ ಮತ್ತೆ 
ಪತ್ತೆ ಪಟ್ಟಿಯ ಕಟ್ಟಿ
ಕೋಲ್ಮಿಂಚ ರಬಸದಿ ಕಣ್ಮರೆಯಾಗೊ
ನಿನಗೇನೆನ್ನಲೆ ಮೋಹಿನಿ??
    -ದಿಲೀಪ್ ಶೆಟ್ಟಿ
 (ಚಿತ್ರ ಕೃಪೆ: ಅಂತರ್ಜಾಲ )

ಸೋಮವಾರ, ಅಕ್ಟೋಬರ್ 10, 2011

ಕ್ವಟ್ಟಿ ಸರಾಯಿ, ಮಟ್ಟಿ ಕೋಳಿ ( ಕುಂದಾಪ್ರ ಕನ್ನಡ)


ಈ ಕಥೆಯಲ್ಲಿ ಬಂದಿರುವ ಎಲ್ಲ ಪಾತ್ರಗಳು ಕೇವಲ ಕಾಲ್ಪನಿಕ. ಮೃತ ಅಥವಾ ಜೀವಂತ ವ್ಯಕ್ತಿ, ಸಂಸ್ಥೆ ಯೊಂದಿಗೆ ಸಂಬಂಧ ಕಂಡುಬಂದಲ್ಲಿ ಅದು ಕಾಕತಾಳೀಯವಷ್ಟೇ. ಹಾಗೇನಾದರು ಸಂಬಂಧ ಇದ್ದೇ ಇದ್ದಲ್ಲಿ ಅದು ಈ ಸಮಾಜದ ದುರದೃಷ್ಟಕರ ಬೆಳವಣಿಗೆ ಮಾತ್ರ. 


     ನಿಮ್ಗ್ ನೆನಪ್ ಇತ್ತೋ ಇಲ್ಯೋ?? ಆವತ್ತ್ ಬಯಪತ್ತಿಗ್ ನೀವ್ ಹಾಡಿ ಬದೆಗ್ ಕೂಕಂಡಿಪ್ಪತಿಗ್ ಯಾರೋ ಕಲ್ಲ್ ಬಿಸಾಕಿಕೆ ಓಡಿಹ್ವಾರ್ ಅಂದೆಳಿ ಹೆದ್ರ್ಕಂಡ್  ಅರ್ದಕ್ಕೆ ಎದ್ಕಂಡ್  "ಬೂತ ಬೂತ" ಅಂದೆಳಿ ಓಡ್ವತಿಗ್ ನಾನ್ ಅಲ್ಲೇ ಓಣೆಗ್ ಗ್ವಾಯಿ ಬೀಜ ಹೆಕ್ತಿದಿದಿ. ಆವತ್ತ್ ಕಲ್ಲ್ ಕುಟ್ಟದ್ದ್ ಬೂತ ಅಲ್ಲ, ನಮ್ ಕೇಶವ ಮರ್ರೆ, ಎಂತಕೆ ಅಂತ್ರ್ಯಾ ನಿಮ್ಗ್ ಮೂಕಕ್ಕನ್ ಕೋಳಿ ಸುದ್ದಿ ಗುತಿತಲ್ದಾ? (ಗುತ್ತಿಲ್ದಿರ್ ಈ link ಒಂದ್ ಸಲ ಓದಿ ಕಡಿಕ್ ಇದನ್ನ ಓದಿ  http://dileepshetty.blogspot.com/2011/07/blog-post_20.html ) ಆ ಕೋಳಿ ಹಾಯಿಸರ್ ಹಾವಿಗ್ ಹೆದ್ರಕಂಡ್ ಸ್ವಾಮಿ ಮನಿ ಹಾಡಿ ಒಳಗ್ ಹೋಯಿ ಹೊಕ್ಕoಡದ್ದ್ ಕನ್ಡ್, ನಮ್ ಇದೇ ಕೇಶವ, ಕೋಳಿನ್ ಕೆಳ್ಗ್ ಇಳ್ಸುಕ್ ಕಲ್ಲ್ ಕುಟ್ಟದ್ದೆ. ಈಗ ನಿಮ್ ಮoಡೆಗ್ ಗುಡ್ಡಿಹೆಗ್ಗುಳ ಹರಿತಿಪ್ಪುಕು ಸಾಕ್. ಆಗಳಿಕ್ ರಘುವಣ್ಣ ಅಲ್ದಾ ಆ fighter ಕೋಳಿನ್  ತಕ ಹೊಯಿ ಕೊಟ್ಟದ್ದ್ ? ಕಡಿಕ್ ಬಾಬಣ್ಣ ಸಮಾಧಾನ ಮಾಡಿ ಮೂಕಕ್ಕನಿಗೂ ರಘುವಣ್ಣoಗೂ ರಾಜಿ ಮಾಡದ್ದ್ ಅಲ್ದಾ? ಆ ಇಡೀ ಮೂಕಕ್ಕನ ರಾಮಾಯಣದೆಗೆ ಕೇಶವನ್ ಉಸ್ರೆ ಇರ್ಲಾ, ಈಗ ಇವ ಎಲ್ಲಿಂದ ಪ್ರತ್ಯಕ್ಷ ಅದಾ? ಎಂತ ಕ್ವಟ್ಟಿ ಹೈಕಂಡ್ ಬರಿತಿದ್ಯನಾ, ಅಂದೆಳಿ ನೀವ್ ನಂಗ್ ಮಧು ಹೈಕಂಡ ಉಗುಕ್ ready ಆಯಿಪ್ಪೂಕು ಸಾಕ್. ಸ್ವಲ್ಪ ತಡ್ಕಣಿ. ನಮ್  ಸದ್ಯಕ್ಕನ್ ಮನಿ ದರೆಗ್ ಹಾವಿನ್ ಹುತ್ತದ್ ಹತ್ರ ಕೋಳಿ ಚಿಪ್ಡ್ ಕನ್ಡ್ಕಣ್ಡ್ ಹಿಲೀಗ್ ಇಟ್ಟದ್ ಕೋಳಿನ ಹಾವ್ ತಿಂದಿತ್ ಅಂದೆಳಿ ಎಲ್ಲರೂ ಎಣ್ಸ್ಕoಡ್ರ್  ಅಲ್ದಾ? ಅಲ್ಲೇ ಕಾಣಿ ಎಡವಟ್ಟ್ ಆದ್ದ್. ಕೋಳಿ ಕಾಲೀಗ್ ಹಾವ್ ಬಾಯಿ ಹಾಕುಕು, ಮುಕಕ್ಕನ್ ಹಾಂಗೆ ಇದ್ದದ್ದ್  ವಯಿಟ್ ಕೋಳಿ, ಜೀವ್ ಇದ್ರ್ ಬೆಲ್ಲ ಬೇಡ್ಕಂಡ್ ಬದಕ್ಲಕ್ ಅಂಬ್ರ್ ಹಾಂಗೆ ಜೀವ್ ಇದ್ರ್ ಮಟ್ಟಿ ಮಾರಿಯಾದ್ರೂ ಬದಕ್ಲಕ್ ಅಂಬಗ್ ಆಯಿ ಮಟ್ಟಿ ಕೋಳಿ ತಪ್ಪಸ್ಕನ್ಡ್ ಗುಡ್ಡಿ ಬದಿಗ್ ಓಡು ಸುರು ಮಾಡ್ತ್. ಈ ಮಟ್ಟಿ ಕೊಳಿಗ್ ವಿಲನ್ನೆ ನಮ್ಮ ಕ್ವಟ್ಟಿ ಕೇಶವ.

    
        ಇವ್ನಿಗ್ ಒಂದ್ ಚಟ, ಎಲ್ಲ್ ಮಟ್ಟಿ ಕೋಳಿ ತೋರತ್ತೋ, ಹಿಡ್ಕಂಡ್ ಬಪ್ಪುದೆ, ಯಾರಾರು ಕೊಳಿಗ್ ಹೆಳ್ವರ್-ಕೆಂಬರ್ ಇದ್ರೆ ದುಡ್ಡ್ ಕೊಟ್ಟ್ ತಕಬತ್ತ, ಇಲ್ಲ ದುಡ್ಡ್ ಕೊಟ್ರೂ ಕೊಡುದಿಲ್ಲ ಅಂದ್ರೆ, ರಾತ್ರೀಗ್ ಕಳುದಾರು ಸೈ. ಹೀಂಗ್ ಇಪ್ಪತಿಗ್ ಹಾಡೆಗ್ ಗನ ಕೋಳಿ ಕಂಡ್ರ್ ಬಿಡ್ತ್ನಾ?? ಬಿಡ್ವಾ, ಬಿಡ್ವ..  ಈ ಚಟ ಎಲ್ಲ ಟೈಮೆಗ್ ಇರುದಿಲ್ಲ. ಹೊನ್ನಾರಿಗ್ ಹೊಯಿ ನಾಕ್ ಕ್ವಟ್ಟಿ ಏರ್ಸ್ರ್ ಮಾತ್ರ. ಕ್ವಟ್ಟಿ ಕುಡದ್ ರಾತ್ರಿ, ಮನೆಗ್ ಮಟ್ಟಿ ಕೋಳಿ ಪಲ್ಲಿ ಇಲ್ಲ ಅಂದ್ರೆ ಆ ದಿನ ಶಿoಗೇರಿ ಅಳ್ಳಿಕಣ್ಣ ಹೊಡಿ ಐತಂದೆಳಿ. ಹೀಂಗೀಪ್ಪತಿಗೆ ಅದು ರಾತ್ರಿಕಟ್ಟ್ ಮರದ್ ಮೇಲ್ ಕೋಳಿ ಕಂಡು ಸುಮ್ನೇ ಅಯಿಕಂಡ್ರೆ ಕುಡದ್ದ್  ಕ್ವಟ್ಟಿ ಮರ್ಯಾದಿ ತೆಗ್ದಂಗಲ್ದಾ?? ಅವ ಆ ಕೋಳಿ ಪುಕ್ಳಿ ಕಂಡ್ಕಂಡೇ, ಇದ್ ಮಟ್ಟಿ ಕೋಳಿ ಅಂದೆಳಿ ತಿಳ್ಕನ್ಡ್ ಬಿಟ್ಟ. ಅದ್ ಹ್ಯಾಂಗ್ ಗುತಯ್ತ್ ಅಂದೆಳಿ ಕೆಣ್ಬೇಡಿ ನಂಗೂ ಗುತ್ತಿಲ್ಲ. ಆದ್ರೂ ನಮ್ ಕೇಶವ ದೊಡ್ಡ ಕುಡ್ಕ ಅಂದೆಳಿ ನೀವ್ ಎಣಸ್ ಕಂಡ್ರೆ , ಕಂಡಿತಾ ಅಲ್ಲ. ಅವ್ನಾಯಿ ಯಾವತ್ತೂ ಕುಡುಕ್ ಹ್ವಾತಿಲ್ಲ, ಯಾರಾರು ಕೊಡ್ಸ್ತಿ ಅಂದ್ರೆ ಮಾತ್ರ ಬ್ಯಾಡಾ ಅಂತಿಲ್ಲ. ಆವತ್ ಆದದ್ದು ಅದೇ.  ಮುಲ್ಲಿಮನಿ ಮಹೇಶನ್ ಮದಿಗ್ ಬೆಂಗಳೂರಿಂದ ಹಿನ್ಡ್ ಕಟ್ಕ  ಮಕ್ಕಳ್ ಇಳ್ದಿದೊ. ಪ್ರತಿ ಸಲ ಬಂದಲ್ಲೂ ಕಿನಾರದೆಗ್ (kinara restaurent) tent ಹಾಕ್ವರ್ ಈ ಸಲ ಜೊರ್ ಮಳಿಗ್ ಹೆದರ್ಕಂಡ್ ಗುಡ್ಡಿ ಹೋಟ್ಲ್ ಹತ್ರ ಎಲ್ಲ ಒಟ್ಟಾದ್ರ್. "ಅಲ್ಲೀವರೀಗ್ ಯಾರ್ ಹ್ವಾತ್ರ್ ಮರೆ..., ಮಳೆಗ್ ನೆನ್ಕನ್ಡ್ ಹೊಯಿ ಕುಡ್ಕಂಡ್ ವಾಪಸ್ ಬಪ್ರೊಳ್ಗೆ  ಕುಡದ್ದೆಲ್ಲ ಇಳಿತ್ತ್ ಮರೆ, ಯಾರತ್ರಾರು ತರ್ಸಿನಿ" ಅಂದ ಉಮೇಶ. ಇಲ್ ಒಂಚೂರ್ ನಮ್ ಉಮೇಶನ್ ಬಗ್ಗೆ ಹೇಳ್ವ ಆಗ್ದಾ? ಈ ಕುಳ್ಳುಪ್ಪು ಅವರ "ಮೂರು ಮುತ್ತು" ನಾಟಕದೆಗ್ ಕುಯಿಡ ಇದ್ದ ಕಾಣಿ, ತೆಟ್ ಹಾಂಗೆ ಇದ್ದ. ಇನ್ನೂ ಒಂದ್ ಇಂಚ್ ಕುಳ್ಳ್ ಅಂಬಗೆ. ಆದ್ರೆ ಕಾಮಿಡಿ, ಮಿಮಿಕ್ರೀ ಮಾಡುದ್ರೆಗ್ ಮಾತ್ರ ಎತ್ತಿದ್ ಕೈ. ಇನ್ನ್ ಪರಮಾತ್ಮ ಒಳಗ್ ಹ್ವದಾಗಳಿಕ್ ಅವನ್ನ ಕುರ್ಸ್ಕ ಯಕ್ಷಗಾನದ ಪದ ಹಾಡುಕ್ ಹೆಳಿ, ದಾರೇಶ್ವರ್ರ್ ಹಾಂಗೆ ಅವ್ನ್ ಬಾಯೇಗ್ ನುಲಿತ್ರ್. ಅದ್ ನೈoಟಿ ಕರಾಮತ್ತೊ, ಇಲ್ಲ ಒಳಗಿದ್ದ್ ಪರಮಾತ್ಮಂಗ್ ಜಕ್ಣಿ ಬಪ್ಪುದೊ ಗೊತ್ತಿಲ್ಲ. (ಇವ್ನಿಗ್ ಮದಿ ಮಾಡ್ಸುಕ್ ಹಮ್ಸ್ಕನ್ಡಿರ್, ಹೆಣ್ಣ್ ಇದ್ರ್ ಹೇಳಿ ಮರ್ರೆ. ಗಟ್ಟದ್ ಬದಿದ್ ಆರ್ ರಗ್ಳಿ ಇಲ್ಲ) ಇವ ಹೀಂಗ್ ಅಂದ್ ಕೂಡ್ಲೇ "ಹೌದ್ ಮರೆ, ಮೊದ್ಲೆ ಮಳಿ, ಅಲ್ಲಿವರಿಗ್ ಯಾವನ್ ಸಾಯ್ತಾ, ಅಮೃತಕ್ಕ್(amrutha bar) ಹ್ವಾಪ, ಬಸ್ವನ್ ರೀಕ್ಷಕ್  ಫೋನ್ ಮಾಡ್ ಮರೆ ರಾಘುವಾ.." ಅಂದ ಉಮೇಶನ್ ಅಣ್ಣ ಗಣೇಶ. ಇವ್ನ ಬಗ್ಗೆ ಇನ್ನೊಂದ್ ಸಲ ಪುರ್ಸೊತ್ ಮಾಡ್ಕಂಡ್ ಸಿಕ್ಕಿನಿ, ಹೆಳ್ತಿ. ಹಾನ್ಗಲ ಏರ್ಡ್ ವಾಕ್ಯಾದೆಗ್ ಉತ್ತರ್ಸುಕ್  1 ಮಾರ್ಕಿನ್ ವಿಜ್ಞಾನ question ಪೇಪರೀಗ್ ಕೆಟ್ಟ್ ಹ್ವಾನ ಆವ?. "ಹೆಲೋ.. ಎಲ್ಲಿದ್ದೆ ಮರೆ, ವಂಚೂರ್ ಕ್ವಾಟಕ್ ಹೊಯಿಕ್ ಬತ್ಯ...??" ಅಂದೆಳಿ ಕೆಂಡ ಬಸ್ವಂಗೆ ಫೋನೆಗೆ ರಾಘು. "ಬಂದಿ, ಬಂದಿ.., ಇಲ್ಲೇ  ಗುಡ್ನಾರಿ ಕಲ್ಲೆಗ್ ಇದ್ದಿ , ಇನ್  5 ನಿಮಶ್ದೆಗ್ ಅಲ್ಲ್ ಇರ್ತಿ" ಅಂದ ಬಸ್ವ. ಬಸ್ವ ಹೇಳದ್ ಹೌದ್ ಅಂದೆಳಿ ನೀವ್ ಏಣಸ್ಕoಡ್ರೆ ನಿಮ್ಮಂಥ  ಮುಟ್ಟಾಳ ಬೇರೆ  ಸಿಕ್ಕುದಿಲ್ಲ. ಅವ ಐನ್ ಹಡ್ಬಿ, ಹಶಿ ಕಳ್ಳ, ನೀವ್ ಎಲ್ಲೋ ಬಸರಿ ಹೆಂಡ್ತಿಗೆ ಹ್ವಟ್ಟಿ ನೋವ್ ಜೋರ್ ಅಯಿತ್ ಅಂದೆಳಿ ಇವ್ನಿಗ್ ಫೋನ್ ಮಾಡ್ರೆ, ಅವಳ್ ಡೆಲಿವರಿ ಆಯಿ ಮಗಿನ್ ನಾಮ್ಕರಣ ಆಪತಿಗ್ ಬತ್ತ. ಇವ್ನತ್ರ ಹೋಯಿ ಬೇಗ್ ಬಪ್ಪುಕ್ ಹೇಳ್ರೆ ಅವ ಮನೆಗ್ ಹೆಂಡ್ತಿ ಒಟ್ಟಿಗ್ ಕಣ್ಣ  ಮುಚ್ಚೆ ... ಕುಟೊಟ್  ಆಡ್ತಿದ್ದ. ಇವ್ರೂ 5 ನಿಮಿಷ  ಕಾದ್ರ್.. 10 ನಿಮಷ ಆಯಿತ್ . "ಇನ್ನೊಂದ್ ಸಲ ಫೋನ್ ಮಾಡ್ ಮರೆ.. ಎಲ್ಲ ಸತ್ತಿದ ಕಾಣ್..." ಅಂದ ಉಮೇಶ ಸಿಟ್ಟೆಗೆ. ರಾಘ ಮತ್ತೊಂದ್ ಸಲ ಫೋನ್ ಮಾಡ್ದ, ಈ ಸಲ ರಿಂಗ್ ಅತ್ತ್ ಬಿಟ್ರೆ ಎತ್ತುವರ್ ಯಾರು ಇಲ್ಲ. "ಫೋನ್ ಎತ್ತುದಿಲ್ಲ ಅಲ್ದಾ.. ನಂಗ್ ಗುತಿತ,  ಲಾಸ್ಟ್ ಟೈಮ್  ಬೆಂಗಳೂರಿಗ್ ಹ್ವಪತಿಗ್ 9:30 ಕ್ಕೆ ಬಸ್ ಮಾರಾಯ, 9:15 ಕ್ಕೆಲ್ಲ ಬಾ ಅಂದ್ರೆ ಬಡ್ಡಿಮಗ ಸುದ್ದಿಯೇ ಇಲ್ಲ .. ಫೋನ್ ಮಾಡ್ರೆ  ಎತ್ತುದು ಇಲ್ಲ, ಕಡಿಕ್  ಆ ದಿಲ್ಲನ(ದಿಲೀಪ ಅಂದ್ರೆ ನಾನು) ಗಂಡ್ ಬೆಂಗಳೂರಿಗ್ ಹ್ವಾತಿದಿತ್ , ಅವನ್ ರಿಕ್ಷದೆಗ್ ಹ್ವಾದಿ, ಬಸ್ವನ್ನ ನಂಬ್ ಕಂಡ್ರೆ  ಸುಕ ಇಲ್ಲ, ಯಾರಾರು ಪ್ಯಾಟಿಗ್ ಹ್ವಪರ್ ಇದ್ರೆ ಹಾಂಗೆ ತಕ ಬಪ್ಕ್ ಹೇಳ್ ಮರೆ " ಅಂದ ಗಣೇಶ. "ಕುಡುಕ್ ಒಂದ್ ಕೊಡಪಾನ ಕುಡಿತ್ರಿ ಮರೆ, ಎಷ್ಟ್ ಅಂದೆಳಿ ತರ್ಸುದ್?? , ಕಾಂಬ ಯಾರಾರು ಹೋತ್ರ" ಅಂದೆಳಿ ರಾಘ ರೋಡ್ ಬದಿಗ್ ಕಣ್ಣ ಹಾಕ್ದ. "ಹ್ವಾ, ಶೀನ ಬತ್ತಿದ್ದ, ಅವನತ್ರ ತರ್ಸುವ.." ಕೆಂಡ ರಾಘು . "ನಿಂಗ್ ಮಂಡಿ ಹಾಳಯ್ತನಾ? ಅವ ಕುಡದ್ರೆ ಬಾಯಿಗ್ ಬಂದಂಗ್  ಮಾತಾಡು ಸುರು ಮಾಡ್ತಾ ಮರೆ. ಮನ್ನೆ ಗುಂಡಣ್ಣ ಹೊಯಿಲಿ ಅಂದೆಳಿ sixty  ಕೊಟ್ರೆ , ಅವ್ರಿಗೆ ಇನ್ನೊಂಚುರ್ ಹಾಕ ಬೋಳಿಮಗನೆ... ಅಂದಿದ " ನಿಂಗ್ ಕೋಲ್ ಕೊಟ್ಟ ಬಡಗಿ ತಿಂಬು ಯಾಪಾರ ಯಂತಕ್ ಮರೆ, ಅಲ್ಕಾಣ್ ಕೇಶವ ಬತ್ತಿದ್ದ ಅವನತ್ರ ಹೇಳುವ ಮರೆ.. ಆ ಶೀನ ಮಾತ್ರ ಬ್ಯಾಡ" ಅಂದೆಳಿ ಕೇಶವನ ಕರ್ದ. 

        "ಹ್ವಾತ್ಯ ಇಲ್ಯಾ.. ರಂಡಿ ನಾಯಿದೆಲೋ..  ಈ ಪಾಟಿ ಮಳೆಗ್ ಎಲ್ಲಿಗ್ ಸಾಯ್ತೆ? ಮನಿಗ್ ಹೋಗ.. ಕನ್ನಿ ತಿಂಗ್ಳಿಗ್ ಹುಟ್ಟದ್ದೆ.." ಅಂತ ನಾಯಿಗ್ ಕಲ್ ಕುಟ್ಟತ ಅದೇ ಬದಿಗ್ ಬತ್ತಿದ್ದ ನಮ್ಮ್ ಕೇಶವ. ನಮ್ಮ ಉಮೇಶ ಸುರು ಮಾಡ್ದ "ಹ್ವಾಯಿ, ಕೇಶವಣ್ಣ.. ಇಲ್ ಬಪ್ಪಿಲ್ರಿ ಮರ್ರೆ.. ಯಂತ ಮಳಿ ಮರ್ರೆ.. ". " ಒಹ್.. ಚಂಡ ಮುಂಡರ್ರ್  ಎಲ್ಲ ಒಟ್ಟೆ ಸೇರಿರಿ..  ಹೌದು ಮಾರಾಯ.. ಈ ಮಳಿ ಮನಿ-ಮಾರ್  ಎಂತ ಬೆಚ್ಚುದಿಲ್ಲ ಮರೆ, ಕೆಳ್ತಾರ್ ಯಲ್ಲ ಕೊಳ್ತ್ ಹೋಯಿತ್. ಹೀಂಗೆ ಮಳಿ ಬಂದ್ರೆ  ಮಕ್ಕಿ ವರಿಗೂ ನೆರಿ ಬದತ್ತ್..  ಕೊಯಿಲ್  ಮಾಡು ರಗ್ಳಿ ಇಲ್ಲ ಬಿಡ್, ಯಂತರು ಉಳದ್ರೆ ಬೆಳಚ್ಕ ಬಂದ್ರ ಸೈ. ಅದ್ ಹೊಯಿಲಿ, ನೀವ್ ಎಲ್ಲೋ ಹೊಯಿಟನ್ಗಿತ್ತಲ??". "ಈ ಮಳೆಗ್ ಎಲ್ಲಿಗ್ ಹ್ವಾಪುದೆ? ವನ್ಚುರ್ ಪುಡಿ ಕೊಡಿನಿ, ಇಲ್ಲಂತೂ ಕಾವ್ ಇಲ್ಲ.. ವಳಗ್ ಆರು ಬಿಸಿ ಮಾಡ್ಕಂಬ.." ಅಂತ ಪುಡಿನ್ ಮೂಗಿಗ್ ತುಮ್ಬ್ಕಂಡ್  " ಯಂತ ಪ್ಯಾಟಿಗ್ ಹೊರಟ್ರ್ಯ..? ಚೀಲು ಹಿಡ್ಕಂದಿರಿ...". "ಹೌದ ಮರೆ.. ದನಿಗ್ ಸಲ್ಪ ಹಿಂಡಿ ತಕಬಪ್ಪ ಅಂದೆಳಿ.. ಈ ಹಾಳ್ ಡೈರೇಗ್ ಓಕಿ ತಕಂಡ್ ಹ್ವಾರ್ ನಮ್ ದನ ಮುಟ್ಟುದೆ ಇಲ್ಲ ಅಂತತ್ತ್ " ಅಂದ ಕೇಶವ. "ಹಾಂಗಾರೆ, ಹಾಂಗೆ wine ಶೋಪಿಗ್ ಹೋಯಿ ಬತ್ರ್ಯೇ .. ಈ ಮಳೆಗ್ ಅಲ್ಲಿ ವರಿಗ್ ಹೋಯಿ ಬಪ್ಪುರೊಳ್ಗೆ ಕುಡದ್ದೆಲ್ಲ ಇಳಿತ್ತ್ ಮರ್ರೆ.." ಹಗೂರಕ್ಕ್ ಅಂದ ಉಮೇಶ. "ಎಣಸ್ಕಂಡಿ, ನೀವ್ ಕರ್ದ್ ಕೂಡ್ಲೇ ಎಣಸ್ಕಂಡಿ. ನಮ್ ದೇವ್ರ್ ಗುಟ್ಟ , ನಂಗ್ ಗುತ್ತಿಲ್ಯನ.. ನೀವ್ ಇನ್ನು ಇಲ್ಲೇ ಇದ್ರಿ ಅಂದ್ರೆ, ಯಾವನೋ ಬೇವರ್ಸಿ ಪ್ಯಾಟಿಗ್ ಹ್ವಾಪುದನ್ನೇ ಕಾಯ್ತಿದ್ರಿ ಅಂದೆಳಿ, ಹೊಯಿಲಿ ದುಡ್ಡ್ ಕೊಡಿ, ಹಾಂಗೆ ಯಂತಲ ಬೇಕ್ ಅಂದೆಳಿ ಬರ್ದ್ ಕೊಡಿ.. ನಂಗ್ ಟೈಮ್ ಆಯ್ತ್.. ಕಡಿಕ್ ಸ್ವಮಜ್ರ್ ಅಂಗಡಿ ಬಾಗಲ್ ಹಾಕ್ತ್ರ್.."  ಇಷ್ಟ ಹೇಳದ್ದೆ ತಡ ಸ್ವಾಮಿ ಮನಿ ಚಪ್ಪಿ ದ್ವಾಸಿ ತರ ಇದ್ದ  ಗಣೇಶ ಕುಮ್ಟ್ ಹಾರ್ಕಂತ ಕಿಶಿಯಿಂದ  1000 ರುಪ್ಪಾಯಿ  ಕೊಟ್ಟ್, "ಹಾಂಗೆ ನೀವ್ ಯಂತಾರು ಕುಡ್ಕಂಡ್ ಬನಿಯೇ.. ಆ ಅಮೃತ ವೈನ್ ಚಂದ್ರನ್ನಂಗೆ ಫೋನ್ ಮಾಡಿ ಹೇಳ್ತಿ, ಅದನ್ನ ತಕ ಬನಿ " ಅಂದ ಕುಶೆಗೆ.ದುಡ್ಡ್ ತಕನ್ಡ್  ಚಡ್ಡಿ ಕಿಶಿ ಒಳ್ಗೆ ಜರಿ ಕ್ವಟ್ಟೆಗ್ ಸುತ್ತಿ ಬೆಚ್ಚ್ಕನ್ಡ್  "ಹಾಂಗಾರೆ ನಾ ಬತ್ತಿ, ಒಂದ್ ಆರ್ದ ಗಂಟಿ ಆರ್ ಮೇಲೆ ಫೋನ್ ಮಾಡಿ ಅವಂಗೆ, ನಾ ಅಲ್ಲೀಗ್ ಹ್ವಾತಿ. ನೀವ್ ಇಲ್ಲೇ ಇರ್ತ್ರಿ ಅಲ್ದಾ?" ಅಂದ ಕೇಶವ "ಹೌದ್ ಹೌದ್.. ಇಲ್ಲೇ ಇರತ್ತ್ ಚೂರ್ ಬೆಗ್ ಬನಿ ಮರ್ರೆ, ಬಪ್ಪತಿಗ್ ಆಟೋ ಮಾಡ್ಕಂಡ್ ಬನಿ ಅಡ್ಡಿಲ" ಅಂದ ರಾಘು ಕಣ್ಣೆಗ್, ಬಾಯೇಗ್ ನೀರ್ ಬಿಡ್ತ.  

  ಇಷ್ಟಾರ್ ಮೇಲ್ ಕೇಶವ ಅಲ್ಲಿಂದ ಕಾಲ್ ಕಿತ್ತ.  ಮಳಿ ಮತ್ತು ಜಾಸ್ತಿ ಆಪು ಸುರು ಆಯಿತ್. ಇವರೆಲ್ಲ ಕೂಕಂಡ್ ಇಸ್ಪಿಟ್ ಆಡುದ್ ಅಂದೆಳಿ ಪರ್ಸನ ಗಂಡಿಗ್ ಫೋನ್ ಮಾಡರ್ . ಅವನ್ ಮನೆಗ್ ಹೊಸ ಇಸ್ಪಿಟ್ ಪಿಡಿ ಇತ್ತ್ ಅಂದೆಳಿ ವಿವೇಕ ಹೇಳಿನಂಬ್ರ್ ಉಮೇಶಂಗೆ. ಅದಕ್ಕೆ ಉಮೇಶ ಒಂದ್ ಫೋನ್ ಮಾಡಿಯೇ ಬಿಟ್ಟ "ಹ್ವಾ , ಎಲ್ಲಿದ್ಯ? ಇಸ್ಪಿಟಿನ್ ಪಿಡಿ ತಕಂಡ್ ಬಾ ಮರೆ, ಆಡ್ವ.." ಅಂದ. ಒಳ್ಳೆ ಗಟ್ಟಿ ನಿದ್ರಿ ಮಾಡ್ತಿದ್ದ ಪರ್ಸ ನಿದ್ರಿ ಕಣ್ಣೆಗೆ "ಯಂತ ಮರೆ.. ನಿದ್ರಿ ಮಾಡುಕು ಬಿಡುದಿಲ್ಲ, ನಾನ್ ಕಡಿಕ್ ಬತ್ತಿ, ನೀವ್ ಆಡಿನಿ" ಅಂದ. ಇವ ಎಲ್ಲಿ ಹಜಾಮ ಮರೆ ಅಂತ "ಹ್ವಾ, ಆಡುಕ್ ಇಸ್ಪಿಟ್ ಎಲಿ ಇಲ್ಲ ಮರೆ.. ಅದಕ್ಕೆ ಬಪ್ಪುಕ್ ಹೇಳದ್ದ್, ಪಿಡಿ ತಂದ್ ಕೊಟ್ಟ ಹೋಯಿ ಮತ್ತ್ ತೆವುಡ್ಸ್ಕೋ.." ಅಂದ ಉಮೇಶ. "ಅಣ್ಣ ಮತ್ತೆ ವಿವೇಕ ಕುಂದಪುರಕ್ಕ್ ಹೊಯಿರ್, ನಾನ್ ಮನೆಗ್ ಇದ್ದಿ.." ನಿದ್ರಿ ಕಣ್ಣೆಗೆ ಎಂತಲ ಹೇಳು ಸುರುಮಡ್ದ. ಇವ್ನ ಹತ್ರ ಮಾತಾಡ್ರೆ ಸುಖ ಇಲ್ಲ. ಇವ ಮನಿಕಂಡ್ ಸಾಯಲಿ ಅಂತ ಫೋನ್ ಕಟ್ಟ್ ಮಾಡಿ ಅಲ್ಲೇ ಇದ್ದ ಬಗ್ಗಿ ನಾಯಿಗ್ ಕಲ್ಲ್ ಕುಟ್ಟುಕ್ ಸುರು ಮಾಡದ ಉಮೇಶ. "ನೀ ಕ್ಯಪ್ಪಿ ಕೂದಿಗ್ ಮುಳ್ಳ್  ಸುರಿತೆ ಅಯಿಕಂತ್ಯ ಇಲ್ಲ ವಿವೆಕಂಗ್ ಫೋನ್ ಮಾಡಿ ಇಸ್ಪಿಟ್ ಎಲಿ ತಪ್ಪುಕ್ ಹೇಳ್ತ್ಯ ?" ಅಂದ ರಾಘು. "ನನ್ನ್ ಫೋನೆಗ್ currency ಇಲ್ಲ ಮರೆ. ನೀನೆ ಮಾಡ್, ನಾನ್ ಮಾತಾಡ್ತಿ .." "currency ಇಲ್ದಿರ್ ಮೇಲ್ ಮೊಬೈಲ್ ಒಲಿಗ್ ಹಾಕ್, ನಿಮ್ಗ್ ನನ್ನ್ ಮೊಬೈಲ್ ಬೆಕ್, ಫೋನ್ ಮಾಡ್ಕ ಸಾಯಿನಿ " ಅಂದೆಳಿ ಗಣೇಶ, ಉಮೆಶನ್ ಕೈಯೇಗ್ ಮೊಬೈಲ್ ಕೊಟ್ಟ್ ,"ನಾ ಜಯರಾಮಣ್ಣನ ಅಂಗಡಿಗೆ ಹೋಯಿ ಪಪ್ಸ್ ತಿನ್ಕಂಡ್ ಬತ್ತಿ, ಬೇಗ್ ಫೋನ್ ಮಾಡಿ ಇಸ್ಪಿಟ್ ಎಲಿ ತಪ್ಪುಕ್ ಹೇಳ್, ಹಾಂಗೆ  ಅಮೃತ ವೈನ್ ಚಂದ್ರನ್ನಂಗೆ ಫೋನ್ ಮಾಡಿ ಎಂತಲ ಬೆಕ್ ಅಂದೆಳಿ ಹೇಳ್, ನಿನ್ನೆ ರಾತ್ರಿ ಕಂಡೆಗ್ ವಾಂತಿ ಬಪ್ಪಲೋರಿಗ್ ಕುಡುವಶ್ಟ್ ಆರ್ಡರ್ ಮಾಡಬೇಡಿ. ಹಾಂಗೆ ನಾಲ್ಕ್ ಆಮ್ಲೆಟ್ ಜಾಸ್ತಿ ಹೇಳಿ ಮರೆ, ಆ ಮಟ್ಟಿ ಪುಟ್ಟ ಬಂದ್ರೆ ನಮ್ಗ್ ಯಂತ ಇಡುದಿಲ್ಲ ಕಡಿಕ್ " ಅಂದೆಳಿ ಹ್ವಾದ. 

     "ಹ್ವಾ, ವಿವೇಕ ಎಲ್ಲ್ ಸತ್ತಿದೆ ಮರೆ, ಈ ಮಳಿಯಂಗು ಎಲ್ಲ್ ಮೂಸುಕ್ ಹೊಯಿರಿ ನೀವ್ ಇಬ್ರು?" ಅಂದೆಳಿ ಮಾತ್ ಸುರು ಮಾಡ್ದ ಉಮೇಶ, ವಿವೆಕಂಗೆ ಫೋನ್ ಮಾಡ್ಕಂಡ್ . "ಇಲ್ಲೇ ಕುಂದಪುರಕ್ಕ್ ಬಂದಿದ್ ಮರೆ, ಎಂತ ಹೇಳ್.." ಅಂದ ವಿವೇಕ. "ಬರಿ ಬೋರ್ ಆತಿತ್ತ್ ಮರೆ, ಬಪ್ಪತಿಗ್ ಇಸ್ಪಿಟ್ ಪಿಡಿ ಹಿಡ್ಕಂಡ್ ಬನಿ ಮರೆ, ಆಡ್ವ","ಹ್ವಾ ಯಂತ ಮರೆ ಕಿನಾರಕ್ಕ್ ಹ್ವಾತಿಲ್ಯನ??" ಅಂದ ವಿವೇಕ ಆಶ್ಚರ್ಯದೆಗ್. "ಇಲ್ಲ ಮರೆ, ಈ ಮಳೆಗ ಅಲ್ಲಿ ವರಿಗ್ ಯಾರ್ ಹ್ವಾತ್ರ್, ಅದಕ್ಕೆ ಕೇಶವನ ಹತ್ರ ತಪ್ಪುಕ್ ಹೇಳಿತ್ ಮರೆ" ಅಂದ ಉಮೇಶ. "ನಿಂಗ್ ಯಂತ ಮಂಡಿ ಪೆಟ್ಟನ, ಹೋಯಿ ಹೋಯಿ ಅವನತ್ರ ದುಡ್ಡ್  ಕೊಟ್ಟಿರ್ಯಲ ಮರೆ, ನಿಂಗ್ ಗುತ್ತಿಲ್ಯನ ಅವ ಕುಡದ್ರೆ ಮರ್ಲ್ ಕನ್ಡೆಗ್ ಆಡ್ತ ಅಂದೆಳಿ. ಇವತ್ತ್ ಅವ  ಬತ್ತಿಲ್ಲ , ನಿಮ್ಗ್ ಎಣ್ಣಿಯು ಇಲ್ಲ" ಅಂದ ವಿವೇಕ. ಇದನ್ನ ಕೆಂಡ್ ಕೂಡ್ಲೆ , ಎದಿ, ಬಾಯೇಗ್ ಉಸ್ರ್ ಬಿಡ್ತ ಕೂಡ್ಲೇ ಅಮೃತ ಬಾರ್ ಚಂದ್ರ ಅಣ್ಣನಿಗೆ ಫೋನ್ ಮಡ್ದ "ಹ್ವಾಯೀ ಚಂದ್ರನ್ನ, ಗುಳ್ಳಾಡಿ ಕೇಶವ ಬಂದಿನಾ ಮರ್ರೆ, ಅವ್ನ್ ಹತ್ರ item ತಪ್ಪುಕ್ ಹೇಳಿದಿ" ಅಂದ ಉಮೇಶ. "ಇಲ್ಲ ಮರಾಯ, ಯಾರು ಬರ್ಲ, ನೀವ್ ಅವ್ನತ್ರ ಯಂತಕ್ ದುಡ್ಡ್ ಕೊಡುಕ್ ಹ್ವಾರಿ ಮರೆ, ಅವ್ನಿಗ್ ಇತ್ಲೆಯ್ ಮರ್ಲ್ ಜಾಸ್ತಿ ಆಯಿತ್ ಅಂಬ್ರ್. ನಾನ್ ಎಲ್ಲರೂ ಬಂದ್ರೆ ನಿಂಗ್ ಫೋನ್ ಮಾಡ್ತಿ ಮರೆ, ಗಿರಾಕಿ ಇತ್ತ್ ಮರಾಯ ಬೆಚ್ಚುದಾ.." ಅಂತ ಇಟ್ಟೆ ಬಿಟ್ರ್ ಚಂದ್ರನ್ನ. "ಕೇಶವ ಹೋಯಿ ಸುಮಾರ್ ಹೊತ್ತ್ ಆಯಿತ್ ಮರೆ, ಇನ್ನೂ ಬಾರೀಗ್ ಹೊಯಿಲ ಅಂಬ್ರ್, ಇವ ಎಲ್ಲೀಗ್ ಹಾಳಾಯ್ ಹ್ವಾದ ಮರೆ, ಇವತ್ತ್ ಕುಡಿಕರ್ ಇಲ್ಯ ಕಾಂತ್, ಅವ್ನಿಗ್ ಕುಡದ್ರೆ ಮರ್ಲ್ ಸುರು ಆತ್ತ್ ಅಂಬ್ರ್ , ಈ ಗಣೇಶ ಅದ್ರೆಗು ನೀವ್ ಯಂತಾ ಬೇಕೋ ಕುಡಿನಿ ಅಂದಿದ, ಇದ್ ರಗ್ಳಿ ಆಯಿತ್ ಮರೆ..." ಅಂದೆಳಿ ರಾಘು ಸೊಡ್ಡನ್ನೆ ಕಾಂತ ನಿಂತ ನಮ್ ಉಮೇಶ.

    ದುಡ್ಡ್ ತಕನ್ಡ್, ಕೊಡಿ ಹಿಡ್ಕನ್ಡ್ ಕೇಶವ ಹಾಂಗೆ ನೆಡ್ಕನ್ತ ಕ್ವಾಟ ಪ್ಯಾಟಿ ಸೇರ್‌ಕಂಡ. ಮಳಿ ಇನ್ನೂ ಜೊರ್ ಬಂತ್. ಅಂಗಿ, ಲುಂಗಿ ಎಲ್ಲ ಚಂಡಿ ಆಪು ಸುರು ಆಯಿತ್. ಈ ಮಳೆಗ್ ನೆನ್ಕನ್ಡ್ ಹ್ವಪೂಕ್ ಆಪೂದ್ ಅಲ್ಲ ಅಂದೆಳಿ ಅಲ್ಲೇ ಹೋರಿ ಪೈರ್ ಹತ್ರ ಮೊನಣ್ಣನ್ ಗೂಡ್ ಅನ್ಗಡೆಗ್ ಸ್ವಲ್ಪ ಹೊತ್ತ್ ನಿಲ್ಲುವ ಅಂದೆಳಿ ಹ್ವಾದ. "ಯಂತಾ ಮಳಿ ಮೊನಣ್ಣ, ಹೀಂಗೆ ಬಂದ್ರೆ ನಿಮ್ ಗೂಡಂಗ್ಡಿ ಬಳ್ಕ ಹ್ವಾತ್ತಲ ಮರ್ರೆ, ಒಂದ್ ಆಮ್ಲೆಟ್ ಹಾಕಿನಿ" ಅಂದ ಕೇಶವ. "ನಿಂಗ್ ಈ ಮಳೆಗ್ ಪ್ಯಾಟಿಗ್ ಬಪ್ಪುಕ್ ತಕ ಹ್ವತ್ತನ, ಮನೆಗ್ ಮುಚ್ಚಾಯಿಕನ್ಡ ಮನಿಕಂಬುಕ್ ಆತಿಲ್ಯನ, ಆಮ್ಲೆಟ್ ಯಂತಾ half ಬಾಯಿಲ್ಡಾ?" ಕೆಂಡರ್ ಮೊನಣ್ಣ. "ಪೂರಾ ಬೇಸಿನಿ ಮರ್ರೆ, ಆ half ಬಾಯಿಲ್ಡ್ ಹೇಲ್ ತಿಂದಂಗ್ ಇರತ್ತ್, ಅದ್ ಬ್ಯಾಡಾ ಮರ್ರೆ.." ಅಂದೆಳಿ ಅಲ್ಲೇ ಕಲ್ಲಿನ್ ಬೆಂಚಿನ್ ಮೇಲೆ ಕೂಕಂಡ ಕೇಶವ. " ಗೂಡಂಗಡಿ ಸುತ್ತ ನೀರ್ ಹಾರ್ದಿದ್ದಂಗೆ ಚಪ್ಪರ ಹಾಕಿದಿರ್, ಚಪ್ಪರದ ಇನ್ನೊಂದ್ ಬದೆಗ್ ತೆಕ್ಕಟ್ಟಿ ಶೀನಣ್ಣ ಕೂಕಂಡ್ ಮೊನಣ್ಣನ ಗಂಡೀನ್ ಹತ್ರ "ಗಡ ಸಾರಾಯಿ ಆಂಗ್ಡಿಗ್ ಹೋಯಿ ನಾಕ್ ಕ್ವಟ್ಟಿ ತಕನ್ಡ್ ಬಾ.." ಹಾಂಗೆ ಕೇಶವನ್ನ ಕನ್ಡ್, "ಹ್ವಾ, ಕೇಶವ ಅಲ್ದನಾ?" ಕನ್ನಡಕ ಸರಿ ಮಾಡ್ಕಂಡ್, "ಯಂತಾ ಮರೆ, ಕಣ್ಣೆಗ್ ಕಾಂಬ ಅಂದ್ರೂ ಸಿಕ್ಕುದಿಲ್ಲ ಅಲ ಮರೆ, ಹ್ವಾದ್ ತಿನ್ಗ್ಳ್ ಕೊಳಿಪಡೆಗ್, ಗರ್ಗರ್ ಮಂಡಲದೆಗ್ 100 ರೂಪಾಯಿ ತಕನ್ಡ್ರ್ ಮೇಲ್ ನಿನ್ ಅಡ್ರೆಸ್ಸೆ ಇಲ್ಲ ಅಲ ಮರೆ, ಯಂತಕ, ನಿನ್ ಹತ್ರ ದುಡ್ಡ್ ಕೊಡ್ ಅಂದೆಳಿ ನಾನ್ ಕೆಂಡಿನನ? ನೀ ಆಚಿ ಬದಿಗ್ ಬರ್ಲೆ ಇಲ್ಲ ಅಲ ಮರೆ. ನೀನ್ ದುಡ್ಡ್ ಕೊಡುದ್ ಬ್ಯಾಡಾ, ಬಾ ಇಲ್ಲ್, ಮಾತಾಡುವ.." ಅಂತ ಕೇಶವನ್ನ ಕರ್ದ್ ,"ಗಡ, ನಾಕ್ ಅಲ್ಲ ಆರ್ ಕ್ವಟ್ಟಿ ತಕನ್ಡ್ ಬಾ, ಬೇಗ್ ಬಾ ಹೋಗ್, ಹ್ವಾ ಮೋನ, ಆ ಗನ್ಡಿನ್ ಕಳ್ಸಿ ಕೊಡ್ ಮರೆ.." ಅಂತ ಮತ್ತೆ ಕೇಶವನ್ ಹತ್ರ ಮಾತಾಡುಕ್ ಸುರು ಮಾಡ್ದ. "ಇಲ್ಲ, ಶೀನಣ್ಣ, ಅವತ್ತ್ ಗರ್ಗರ್ ಮಂಡಲದೆಗ್ ಗೆದ್ದಿಗ್ ಯೂರಿಯ ತಪ್ಪುಕ್ ಕೊಟ್ಟದ್ದ್ ದುಡ್ಡು ಹೊಯಿತ್, ಮನೆಗ್ ಶೀಂಗೇರಿ ಮುಕದ್ದ್ ತುಂಬಾ ಉಗ್ದಳ್, ಅದಕ್ಕೆ ಬೇಜಾರ್ ಆಯಿ ಆ ಬದಿಗ್ ಬರ್ಲ, ನಿಮ್ ದುಡ್ಡ್ ಇನ್ನ್ 2 ದಿವಸ್ದೇಗ್ ಕೊಡ್ತಿ ಮರ್ರೆ, ತಪ್ಪ್ ತಿಳ್ಕನ್ಬೆಡಿ.." ಅಂದ ಕೇಶವ. "ಇಲ್ಲ ಮರಾಯ, 100 ರೂಪಾಯಿಗ್ ಯಂತ ಬೇಜಾರ್ ಮರೆ, ಅದ್ ಸಾಯಿಲಿ ಅದೆಂತದೋ ಔಷಿದಿ ತಕಣ್ತಿದ್ಯಮ್ರಲ ಯಂತಕೆ" ಕೇoಡ್ರ್ ಶೀನಣ್ಣ. "ಹೌದ್, ಮರ್ರೆ ನಂಗ್ ಕೆಲವ್ ಸಲ ಯೆಣ್ಣಿ ಕುಡದ್ರೆ ಮನ್ಡೆಗ್ ಸ್ಕ್ರೂ ಲೂಸ್ ಆಪೂದ್ ಮರ್ರೆ, ಅದಕ್ಕೆ ಸಲ್ಪ ಕುಡುದ್ ಬಿಟ್ಟಿದಿ, ಅದೂ ಅಲ್ದೇ ಒಳ್ಳೇ ಊರ್ ಕೊಳಿನ್ ತಿನ್ಕ್ ಅಂಬಗ್ ಆಪೂದ್ ಮರ್ರೆ, ಆದ್ಯಂತ ಕಾಯಿಲಿಯೊ ಗೊತ್ತಿಲ್ಲ.." ಅಂದ ಕೇಶವ. ಅಶ್ಟೊತ್ತಿಗೆ ಮೊನಣ್ಣನ್ ಗಂಡ್ ಕ್ವಟ್ಟಿ ಸಾರಾಯಿ ಹಿಡ್ಕಂಡ್ ಬಂತ್. "ಅದೆಲ್ಲ ನೀನ್ ಯೆಣ್ಸ್ಕಮ್ಬುದ, ಕುಡಿದೆ ಸುಮಾರ್ ದಿನ ಆಯಿತ್ ಅಲ್ದನ ಅದಕ್ಕೆ ಹಾಂಗ್ ಆತ್ತ್. ಇವತ್ತ್ ಕುಡಿ ಕಾಂಬ, ಎಂತ ಆತಿಲ್ಯ, ಅಂದೆಳಿ ಕ್ವಟ್ಟಿ ವಡದ್ ಕೊಟ್ರ್ ಶೀನಣ್ಣ


      ಒಂದ್ ಕ್ವಟ್ಟಿ ಒಳಗ್ ಹೋಯಿತ್, "ಯಂತರು ಆತಿತ್ತನ, ತಲಿ ತಿರ್ಗ್ತಿತ್ತನ..?, ನಾನ್ ಹೆಳ್ಯ ಯಂತ ಆತಿಲ್ಲ ಅಂದೆಳಿ, ಇನ್ನೊಂದ್ ಕುಡಿಯ..." ಅಂದೆಳಿ ಶೀನಣ್ಣ ಇನ್ನೊಂದ್ ಕ್ವಟ್ಟಿ ವಡದ್ ಕೊಟ್ರ್. ಅದನ್ನ ಕುಡ್ಕನ್ಡ್ ಎರಡ್ ನಿಮಿಷ ಬಿಟ್ಟ್ ಕೇಶವ ಹೇಳ್ದ "ನೀವ್ ಹೆಳದ್ ಹೌದ್ ಶೀನಣ್ಣ,  ನಂಗ್ ಯಂತದು ಆಯಿಲ್ಲ. ಕಂಡ್ರ್ಯ, ಎ ಬೊಳಿಮಗ್ನೆ, ಅಮ್ಲೆಟ್ ಹೇಳಿ ಎಷ್ಟ್ ಹೊತ್ತ್ ಆಯಿತ್. ಯಂತಾ ಕೋಳಿ ಮಟ್ಟಿ ಹೆಕ್ಕುಕ್ ಕಾಯ್ತಿದ್ಯಾ? ಬೆಗ್ ಕೊಡುಕ್ ರೋಗ್ವಾ ನಿಂಗೆ..? ಸೋಂಬೇರಿಗಳ್,..". ಅವ ಹೀಂಗ್ ಹೆಳುಕು ಶೀನಣ್ಣನ್ಗೆ confirm ಆಯಿತ್. ಇದ್ ಕ್ವಟ್ಟಿ ಮಹಿಮೆ ಅಂದೆಳಿ. "ಯಂತಾ ಮರೆ, ಈ ಮಳೆಗ್ ಕುಡುಕ್ ಜಾಗ ಕೊಟ್ಟಿದ, ಅವ್ನಿಗೆ ನೀನ್ ಹೀಂಗ್ ಹೇಳುದ ಮರೆ. ಕುಡದ್ ಕೂಡ್ಲೆ ನೀಯತ್ತ್ ಮರುಕ್ ಆಗ ಕೇಶವ.." ಬುದ್ದಿ ಹೇಳುಕ್ ಹ್ವಾರ್ ಶೀನಣ್ಣ. "ತ್ಯವ್ಡ್ಸಾ, ನೀ ಯಾವನ್ ನಂಗ್ ಹೇಳುಕ್, ಕೆನ್ನಿ ಚಪ್ಪ್ ಮುರ್ದ್ ಕೊಡ್ತಿ, ಮಗ್ನೆ, ನಂಗ್ 2 ಕ್ವಟ್ಟಿ ಕೊಟ್ಟ್, ನೀನ್ 4 ಕುಡಿಕ್ ಅಂದೆಳಿ ಮಾಡಿದ್ಯ. ಕೊಡ್ ಇಲ್ಲ್,.. " ಶೀನಣ್ಣನ್ ಕ್ವಟ್ಟಿ ಕಸ್ಕನ್ಡ್ ಅದನ್ನು ಕುಡ್ದ್ ಮುಗಸ್ದ ಕೇಶವ. "ಎಲಾ ಬೆವರ್ಸಿ ನನ್ ಮಗ್ನೆ, ಸಾಲ ಕೊಡುಕಿದ್ರು, ಏನೋ ಸಾಯಿಲಿ ಅಂದೆಳಿ ಕೂರ್‌ಸ್ಕ ಕುಡುಕ್ ಕೊಟ್ರೆ, ಎದಿ ಮೇಲೆ ಕಾಲ್ ಇಡುಕ್ ಬತ್ಯ, ಮೊದ್ಲ್ ನಂಗ್ ಕೊಡುಕ್ ಇದ್ದದ್ ದುಡ್ಡ್ ಕೊಟ್ಟ್ ಮಾತಾಡ. ಬಡ್ಡಿಮಗ್ನಿಗ್ 4 ಕ್ವಟ್ಟಿ ಹ್ವಟ್ಟಿಗ್ ಹ್ವಾರ್ ಕುಡ್ಲೆ ಹಿರಿಯರ್, ಕಿರಿಯರ್ ಯಾರ್ ಅಂದೆಳಿ ಗುತಾತಿಲ್ಲ ಅಲ್ದ, ನಾಯಿನ್ ಸಿಂಹಾಸನದ್ ಮೇಲ್ ಕುರ್ಸ್ರೆ ಕಾಲ್ ಎತ್ತಿ ಉಚ್ಚಿ ಹೊಯ್ಯುದ್ ಬಿಡತ್ತ, ನಿಂದು ಅದೇ ಕತಿ, ನಾಯಿಗಿಂತ ಕಡಿ ಆಯಿ ಬಿಟ್ಟೆ. ನೆವೊಳ್ಸ್ ಇಲ್ಲಿಂದ ,ಇಲ್ದಿರ್ ಹೇರ್ಗ್ ದೂಡ್ತಿ ಈಗ, 100 ರೂಪಾಯಿ ಕೊಡುಕ್ ಯೋಗ್ಯತಿ ಇಲ್ದಿರು ಮಾತಿಗೇನ್ ಕಮ್ಮಿ ಇಲ್ಲ, ನಾಚಿಕಿ ಬಿಟ್ಟದ್ದೆಲೊ... ಹೊಗತೆ.." ಅಂದೆಳಿ ಸಿಟ್ಟೆಗ್ ಸರಿ ಬೈದ್ರ್ ಶೀನಣ್ಣ. "ಬೋಳಿಮಗನೆ, ನಿನ್ ಕೆಮಿ ಗೆನ್ಡೆಗ್ ಹುಟ್ಟಿನ ನಾನ್ , ಏನ್ ಆ ಪಾಟಿ ಬೈತೆ, 100 ರುಪಾಯಿ ಕೊಟ್ಟ, ಈ ಪಾಟಿ ಬೈತ್ಯ, ತಕ್ವ ನಿನ್ ದುಡ್ಡ್ , ಉಳದ್ದ್ ನೀನೆ ಇಟ್ಕೋ ಮಜಾ ಮಾಡ್  "ಅಂದೆಳಿ ಇಡಿ 1000 ರುಪಾಯಿ ನೊಟನ್ನ ಶೀನ ಅಣ್ಣನ ಮುಕಕ್ಕೆ ಬಿಸಾಕ್ದ. "ಏನ ಕಾಂತೆ, ಒಂದ್ ಆಮ್ಲೆಟ್ ಹಾಕುಕ್ ಒಂದ್ ಗಂಟಿ ಬೇಕನ ನಿಂಗೆ, ಮ್ಯಾಳಿ ಮೆಟ್ಟತಿ ಮಗನೆ, ನಿಮ್ಗ್ ಯಾಪಾರ ಮಾಡುಕ್ ನಾವ್ ಬಂದ್ರೆ ನಮಗೆ ಗಾಂಚಲಿ ತೋರಸ್ತ್ರ್ಯನ. ತಾಲೂಕ ಪಂಚಾಯತಿ ಅಧ್ಯಕ್ಷರಿಗೆ ಹೇಳಿ licence cancel ಮಾಡಸ್ತಿ ಮಗನೆ. ಮನ್ನೆ ಮೀನ್ ಮಾರು ನಿಂಗಿ ಹತ್ರ ಕುಚು ಕುಚು ಮಾಡತ್ತ್ ನಾನ್ ಕಾಂಡ್ಲ ಅಂದೆಳಿ ಮಾಡಿದ್ಯ ? ಊರೆಗ್ ನಿನ್ನ ಕಡಿದ್ ಹೆಂಗ್ಸ್ರ್ ಮೀನ ತಪ್ಪುಕ್ ಹೆದ್ರಕಂತ್ರ್ , ಈ  ಜಾಗ ಈಗ ನೀನ್  ಕಾಲಿ ಮಾಡದೇ ಇದ್ರೆ ಪೋಲಿಸ್ರನ್ನ ಕರ್ಸಿ ಬೂಟ್ ಕಾಲೆಗ್ ಹೊಡ್ಸ್ತಿ,  ಹುಷಾರ್. ನನ್ನ capacity  ಗೊತ್ತಿಲ್ಲ ನಿಂಗೆ..." ಇಷ್ಟ ಹೇಳುವತಿಗೆ ಮೊನಣ್ಣ೦ಗೆ ಪಿತ್ತ ನೆತ್ತಿಗ್ ಏರಿ ಹೋಯಿತ್. ಇನ್ನ್ ಸುಮ್ನೆ ಅಯಿಕನ್ಡ್ರೆ ಇವ ನನ್ನ ಮರ್ಯಾದಿ ಮೂರ್ ಕಾಸಿಗ್ ಹರಾಜ್ ಹಾಕ್ತ ಅಂದೆಳಿ ಅವನ್ನ ಹಾಂಗೆ ಎತ್ತಿ ಹೊರಗೆ ಬಿಸಾಕ್ರ್. "ಇನ್ನ್ ಈ ಬದಿಗ್ ಬಂದ್ರೆ ಜಾಗ್ರತೆ ಕಂಡಕೋ, ಮಳೆಗ್ ನೆನದ್ ಸಾಯಿ ಮಗನೆ, ನಾನು, ನಿಂಗಿ ಏನ್ ಬೇಕಾರ್ ಮಾಡ್ಕಾಂತ್, ಅದನ್ನ ಕೆಂಬುಕ್ ನೀನ್ ಯಾರ್? ನೀನೇನ್ ಅವ್ಳನ್ನ್ ಬೆಚ್ಕಂಡಿದ್ಯ, ಇಲ್ಲ ನಾನೇನ್ ನಿನ್ನ್ ಹೆಂಡ್ತಿಗ್ ಏನಾರು ಮಾಡಿನ, ಮಾತಾಡ್ತಾ.. ಕೆಂಬರ್ ಇದ್ರೆ ಏನ್ ಬೇಕಾರು ಹೇಳ್ತಾ, ಇನ್ನ್ ಕೋಟ ಪ್ಯಾಟಿ ಬದಿಗ್ ಬಾ ಕಾಣ್, ಬೇರ್ಸ್ಕಂಡ್ ಬಂದ್ ಮೆಟ್ಟೆಗ್ ಹೊಡಿತಿ.." ಬಾಯಿ ತುಂಬಾ , ದೆಗಿ ಬಪ್ಪುವಷ್ಟ್  ಉಗ್ದ್ ಶೀನನ್ಣನ್ ಬದಿಗ್ ಕಂಡ್ಕಂಡ್  ಮೊನಣ್ಣ, "ಅಲ್ಲ ಶೀನಣ್ಣ ಇಂತ ಬೇವರ್ಸಿ, ಹೆಕ್ಕಂಡ್ ತಿಮ್ಬವ್ಕ್ ಎಂತಕ್ ಕುಡಸ್ತ್ರಿ ಮರ್ರೆ, ಕಾಣಿ ನಿಮ್ಮ ಮರ್ಯಾದಿ ಜೊತಿಗ್ ನನ್ನ ಮರ್ಯಾದಿನು ಹರಾಜ್ ಹಾಕ್ತ, ಬೇಕಾ ನಿಮ್ಗ್, ಹೇಲ್ ಮೇಲ್ ಕಲ್ಲ್ ಹಾಕು ಕೆಲ್ಸ..."  "ನಿಮ್ ವಾಲೀ ಕಳಿತ್ತ್, ನಿಮ್ ಇಬ್ರ ವಿಷ್ಯ ನಂಗ್ ಗುತ್ತಿಲ್ಯನ, ಊರಿಗ್ ಬುದ್ದಿ ಹೇಳಿ ಒಲಿಗ್ ಉಚ್ಚಿ ಹೊಯ್ಯು ಜಾತಿ ನಿಮ್ದ್. ನನ್ನನ್ನೇ, ಈ Mister ಕೇಶವನ್ನೇ  ಹೆರ್ಗ್ ದುಡ್ತ್ರ್ಯನಾ, ನಿಮ್ಗ್ ನಾ ಯಾರ್ ಅಂದೆಳಿ ತೋರ್ಸ್ದಿರೆ ನಾನ್ ನನ್ನ ಅಪ್ಪಯ್ಯಂಗ್ ಹುಟ್ಟದ್ದೆ ಸುಳ್ಳ್" ಇಷ್ಟ ಹೇಳ್ತಾ, ವಾಲಾಡ್ತ, ತೆಲಾಡ್ತ, ಅಲ್ಲೇ ನೀರ್ ತುಂಬದ್ ಹೊಂಡಕ್ಕೆ ತೆವಡ್ಸ್ಕ ಬಿದ್ದ.

   ಎರಡ್ ನಿಮಷ ಆಯಿತ್ ಅವನ ಸುದ್ದಿ ಇಲ್ಲ, ಮೂರ್ ನಿಮಷ ಆಯಿತ್, "ಯಂತಾ ಮರೆ, ಹ್ವಗಿ ಹಾಯಿಕಂಡ್‌ನ ಯಂತಾ.." ಹಗುರ ಕೇoಡ್ರ್ ಶೀನಣ್ಣ. "ಹ್ವಾರ್ ಹ್ವಾತ.. ಒಂದ್ ರಗ್ಳಿ ತಪ್ಪತ್ತ್, ಅನ್ನಯ್ ಮಾಡ್ರ್ ದೆವ್ರ್ ಸುಮ್ನಾಯಿಕಂತ್ನಾ?.. "ಅಂದ ಸಿಟ್ಟೆಗ್ ಮೊನಣ್ಣ. "ಅವ ನಿನ್ ಅಂಗಡಿ ಹತ್ರ ಸತ್ರೆ ನಿಂಗೆ ರಗ್ಳಿ ಮರಾಯ. ಬಾ ಮೇಲ್ ಎತ್ವ.. " ಅಂದೆಳಿ ಶೀನಣ್ಣ, ಮೊನಣ್ಣ ಪ್ಲಾಸ್ಟಿಕ್ ಜರಿ ಮಂಡಿಮೆಲ್ ಹಾಯಿಕಂಡ್ ಕೇಶವನ್ನ್ ಎತ್ತುಕ್ ಹ್ವಾರ್. "ಯಾವನಾ ನನ್ನ ದುಡದ್ದ್.. ಬೊಳಿಮಕ್ಕಳೆ  ತಾಕತ್ ಇದ್ರೆ ಎದರೀಗ್ ಬನ್ಯ, ಒಬ್ಬೊಬ್ರ್ ಸ್ವಂಟ ಮುರ್ದ್ ಕೊಡ್ತಿ. ಬಿಡ, ಬಿಡ ನನ್ನ, ನಿಂಗೆ ನನ್ನ್ ಹೆಂಡ್ತೀನ್ ಮುಟ್ಕ್ ಅಂಬಗ್ ಇತ್ತ ಹೆಕ್ಕತಿಂಬ್, ಸು** ಮಗ್ನೆ, ಕರ್ಕಂಡ್ ಬತ್ತಿ ನಾ, ಮುಟ್ಟ್ ಅವ್ಳನ್ನ, ಕಡಿಕ್ ಕಾಣ್ ನಿನ್ ಕೈ ಇರತ್ತಾ, ಇಲ್ಯ ಅಂದೆಳಿ, *******.. ****** " ಕೇಶವನ್ನ ಎತ್ತಿ ಹಿಡ್ಕಂಡ್ ಮೊನಣ್ಣನ್ಗೆ ಎತ್ತ್ ಉಚ್ಚಿ ಹೊಯ್ಯು ಹಾಂಗೆ ಬಯ್ಯುಕ್ ಸುರು ಮಾಡ್ದ ಕೇಶವ.. ಇದನ್ನ ಕೆಂಡ್ ಮೊನಣ್ಣ ಅವನ್ನ ಅಲ್ಲೇ ಬಿಟ್ಟಿಕೆ ಸಿಟ್ಟೇಗ್ ಗೂಡ್ ಅಂಗಡಿಗ್ ಹ್ವಾದ. ಇನ್ನೊಂದ್ ಕೈ ಹಿಡ್ಕಂಡ್ ಇದ್ದ  ಶೀನಣ್ಣನ ಮೇಲೆ ಬಿದ್ದ ಕೇಶವ. "ಬೊಳಿಮಗೆನ್ ಮತ್ತ್ ನನ್ನ ಕೆಡಿತ್ಯ, ನಿಂಗ್ ಕಾಡ್ ಬಾ ಅನ್ತತ್ತ್, ಊರ್ ಹೋಗ್ ಅನ್ತತ್ತ್ ಆದ್ರೂ ಕೆನ್ನಿ ತುಂಬಾ ಮಾತಾಡ್ತ್ಯ , ಆ ಕ್ವಟ್ಟಿ ಇಲ್ಲ್ ಕೊಡ.."ಅಂತ ಶಿನಣ್ಣನ್ ಕಿಶೆಗ್ ಇದ್ದ್ ಕ್ವಟ್ಟಿ ತಕನ್ಡ್ ಅವ್ರನ್ನ್ ಅಲ್ಲೇ ದೂಡಿ ಮಳೆಗ್ ನೆನ್ಕನ್ಡ್ "ಬೋಳಿಮಗನೆ attack.. ಸು****ಮಗನೆ attack.." ಅಂತ ತೆಲಾಡ್ತ N.H.17 ಮದ್ಯ ರೊಡೆಗ್ ಹ್ವಾಪು ಸುರು ಮಾಡ್ದ. "ನಿನ್ನ್ ಕಣ್ಣಿಗ್ ಕುಷ್ಟ್ ರೋಗ ಬಂದಿತ, ರೋಡೆಗ್ ಗಾಡಿ ವೊಡಸ್ಕರ್ ನನ್ ಮೇಲ್ ವೊಡಸ್ತ್ಯ, ನಿನ್ ಹೆಂಡ್ತಿ 25 ಹೆಣ್ಣ್ ಹೇರುಕೇ, ನಿನ್ ಗಾಡಿಮೆಲ್ ತೆಂಗಿನ್ ಮರ ಬೀಳುಕೆ,********,************,...................." ಯಬ್ಬಿಯಾ, ದೇವ್ರೆ, ಕೇಶವಂಗೆ ಈ ಪಾಟಿ ಮರ್ಲ್ ಹಿಡಿತ್ತ್ ಅಂದೆಳಿ  ನಂಗ್ ಗುತ್ತಿರ್ಲಾ ಮರ್ರೆ. ಇವತ್ತ್ ಇವ ಮ್ಯಾಂಗಾನಿಸ್ ಲ್ವಾರಿ ಆಡಿ ಆಯಿ ಸಾಯುದ್ ಗ್ಯಾರಂಟಿ ಅಂಬಂಗ್ ಇತ್ತ್. ಅಲ್ಲಾ, ಹ್ವಾಯಿ, ಮರ್ಲ್ ಹಿಡುದ್ ಅಂದ್ರೆ ಇದೇನಾ?? ಅಲ್ಲ ಕ್ವಟ್ಟಿ power ಅಷ್ಟಪ ಇರತ್ತೆ??, ಆ ಮಳೆಗ್ ಅಶ್ಟ್ ನೆನದ್ರು ವಂಚೂರು ಕುಡದ್ದ್ ಇಳುಕ್ ಇಲ್ಯ, ಇವ್ನತ್ರ ಹೋಯಿ ಹೋಯಿ ದುಡ್ಡ್ ಕೊಟ್ಟ್ ಕುಡುಕ್ ತಕನ್ಡ್ ಬಪ್ಪುಕ್ ಹೇಳಿನಲ ಉಮೇಶ ಅವಂಗೆ ಮರ್ಲ್ ಅಲ್ದ??.
    

     ಹೀಂಗಲ್ಲ ಆಪತಿಗೆ ನಮ್ ವಿವೇಕ ಮತ್ತೆ ಪಮ್ಮ ಕುಂದಾಪುರದಿಂದ ಕೋಟಕ್ಕ್ ಬಂದ್ ಆಟೋ ಮಾಡ್ಕಂಡ್ ಮನಿಗ್ ಹ್ವಾತಿದ್ರ್,  ಈ ಕೇಶವ ಅವ್ರ್ ಆಟೊಕ್ಕ್ ಹೋಯಿ ಗುದ್ದದ. "ಇವ ಯಾವನ್ ಮರೆ, ನನ್ನ್ ಆಟೋನೇ ಬೇಕಾಯ್ತಾ ಸಾವುಕೇ... ಇವ್ ವಾಲಿಕಳುಕ್, ಕುಡ್ಕನ್ಡ್ ನಮ್ಗ್ ಉಪದ್ರ ಕೊಡ್ತೊ ಮರ್ರೆ.. ಹ್ವಾಯಿ ಅವಂಗೆ ಯಂತ ಐತ ಕಾಂತಿ" ಅಂದೆಳಿ ಆಟೋನ ಬದಿಗ್ ಹಾಕಿ ಆಟೋ ಡ್ರೈವರ್ ರೋಡ್ ಮೇಲ್ ಅಂಗಾತ ಬಿದ್ಕನ್ಡ್ ಇದ್ದ್ ಕೇಶವನ ಹತ್ರ ಬಂದ. ಇಷ್ಟೊತ್ತಿಗ್ ಮಳಿಯು ಕಮ್ಮಿ ಆಪು ಸುರು ಆಯಿತ್. "ಹ್ವಾಯಿ, ಇದ್ ನಿಮ್ಮ್ ಬದಿ ಕೇಶವಣ್ಣ ಅಲ್ದೇ?, ವಂಚೂರ್ ಬನಿ ಮರ್ರೆ, ಬದಿಗ್ ಹಾಕ್ವ" ಅಂದ ಡ್ರೈವರ್. "ಪಮ್ಮ ಮತ್ತೆ ವಿವೇಕ ಓಡ್ ಬಂದ್ ಕಾಂತ್ರ್, ರೋಡ್ ಮದ್ಯ tight ಆಯಿ ಮನಿಕಂಡದ್ದ್ ಮತ್ತ್ ಯಾರು ಅಲ್ಲ ವಿವೇಕ ಲೈನ್ ಹೊಡಿತಿದ್ದ್  ಹೆಣ್ಣಿನ ಕಾಸ ಅಪ್ಪಯ್ಯ ಕೇಶವ. ಮೂರು ಜನ ಕೇ"ಶವ"ನ್ನ ಹಿಡ್ಕನ್ಡ್ ರಸ್ತಿ ಬದಿಗ್ ತಂದರು. "ಹ್ವಾ, ಬಾ ಮರೆ ನಾವ್ ಹ್ವಾಪ, ಇವ್ನ್ ಸುದ್ದಿ ನಮಗ್ ಯಾಕೆ " ಅಂದ ಪಮ್ಮ. ಆದ್ರೆ ವಿವೇಕಂಗೆ ಕೇಶವನ್ನ ಬಿಟ್ಟಿಕಿ ಹ್ವಾಪುಕ್ ಮನ್ಸಿಲ್ಲ. ಈಗಷ್ಟೇ ಅವ್ರ್ ಮಗ್ಳಿಗ್  ಕೈ ವರ್ಸಿಕಿ, ice cream ತಿನ್ಸಿಕಿ ಬಂದಿದ. "ಯಂತ ಮರೆ, ಊರ್ ಮನಿಯರ್ ಐಕನ್ಡ್ ಬಿಟ್ಟಿಕೆ ಹ್ವಾಪೂದ್ ಸಮ್ವನ, ಅವನ್ನ ಅಲ್ಲ್ ಶಾಲಿ ಹತ್ರ ಬಿಡ್ವ ಮರೆ.. ಇಲ್ದಿರ್ ಬಸ್ ಅಡಿ ಆಯಿ ಸಾಯ್ತಾ ಅಷ್ಟೆ." ಅಂದ ವಿವೇಕ ಪಮ್ಮಂಗೆ. "ನಿಂಗ್ ಮಗ್ಳ್ ಚಾಕ್ರಿ ಮಾಡದ್ದ್ ಸಾಕಯ್ಲ ಅಂದೆಳಿ ಅಪ್ಪಯ್ಯಂದು ಮಾಡ್ಕ, ನಿನ್ನೊಟ್ಟಿಗ್ ಬಂದ್ರ್ ಇದೆ ರಗ್ಳಿ.."ಅಂತ ಬಾಯೊಳ್ಗೆ ಬೈತಾ ಕೇಶವನ್ನ ಆಟೋದೊಳಗೆ ತುಂಬಸ್ಕಾಂಡ್ರ್. "ಏ ಬಿಡ್ಯ ನನ್ನ, ಅವನ್ ಒಂದ್ ಕೈ ಯಂತ ಅಂದೆಳಿ ಕಾಂತಿ, ಬಿಡ್ಯ, ಬಿಡ್ಯ..." ಅಂತ ಬಾಯೊಳ್ಗೆ ಮಾತಾಡು ಸುರು ಮಾಡ್ದ ಕೇಶವ. ಸ್ವಲ್ಪ ಹೊತ್ತ್ ಆಯಿತ್, "ಓ, ವಿವೇಕ  ಅಲ್ದಾ??" ಅಂದ ಕೇಶವ. "ಹೌದೇ, ನಾನೇ.. ನಿಮ್ಮನ್ನ್ ಮನಿವರಿಗೂ ಬಿಡ್ತಿ. ಮಳೆಗ್ ಇಶ್ಟಪ ಕುಡ್ಕನ್ಡ್ ಸಾಯ್ಕ್ ಅಂದೆಳಿ ಮಾಡಿರ್ಯಾ ಕೇಶವಣ್ಣ, ಹೆಂಡ್ತಿ ಮಕ್ಕಳಿಗ್ ಗುತಾರ್ ಎಷ್ಟ್ ಬೇಜಾರ್ ಆತಿಲ್ಲ ಮರ್ರೆ.."ಸ್ವಲ್ಪ ಬುದ್ದಿ ಹೆಳು ಸುರು ಮಾಡ್ದ ವಿವೇಕ. "ಇನ್ನೂ ಪ್ಯಾಂಟೀನ್ ಲಾಡಿ ಸರಿ ಮಾಡಿ ಕಟ್ಟ್ಕಂಬುಕ್ ಬತ್ತಿಲ್ಲ ನೀನ್ ನಂಗ್ ಬುದ್ದಿ ಹೆಳ್ತ್ಯನ. ನನ್ನ್ ಮಗ್ಳ್ ಹಿಂದೆ ತಿರ್ಗತ್ತ್ ಕಾಂಡ್ಲ ಅಂದೆಳಿ ಮಾಡಿದ್ಯ. ನಿಮಗ್ ನಿಗ್ರು ಸುರು ಆಯ್ಕರಿಲ್ಲ, love ಅಲ್ದನಾ?? ಇನ್ನೊಂದ್ ಸಲ ಅವ್ಳೊಟ್ಟಿಗ್ ನಿನ್ ಕಂಡ್ರೆ ಮ್ಯಾಳಿ ಒತ್ತಿ ಕೊಲ್ತಿ "ಅಂದೆಳಿ ಕೈಯನ್ನ ಕುತ್ತುಗಿ ಹತ್ರ ತಕನ್ಡ್ ಬಂದ ಕೇಶವ. ಅಷ್ಟೊತ್ತಿಗೆ ನಂ ಪಮ್ಮ ಆಟೋ ನಿಲ್ಸುಕ್ ಹೇಳಿ ಅಲ್ಲೇ ರೊಡ್ ಬದೆಗ್ ಇದ್ದ್ ಮರದ ಹತ್ರ ಕೇಶವನ್ನ ಬಿಟ್ಟ್ , ಆಟೋ ಹತ್ಕಂಡ್ ಪುರ್ರ್ರ್ರ್ರ್... ಅಂತ ಓಡಿ ಹ್ವಾರ್. "ನಾ ಬಡ್ಕನ್ಡಿ ನಿಂಗೆ, ಅವ್ನ್ ಮಗ್ಳಿಗ್ ಬಾಳ್ ಕೊಟ್ರ್ ಸಾಕ್, ಅವ್ನಿಗೂ ಕೊಡುದ್ ಬ್ಯಾಡಾ ಅಂದೆಳಿ, ಆಯಿಕ್ ನಿಂಗೆ...."ಮತ್ತ್ ಉಗುಕ್ ಸುರು ಮಾಡ್ದ ಪಮ್ಮ ವಿವೇಕಂಗೆ.

  ಇಷ್ಟೊತ್ತಿಗ್ ಮಳಿ ಪೂರಾ ಬಿಡ್ತ್. ಗಂಟಿ ಸುಮಾರ್ 7 ಅಕ್ಕ್. ಮಳೆಗ್ ನೆನ್ದ್, ಮಂಡಿ ಇನ್ನೂ ಬಾದಿ ಆಯಿ ಮರ್ಲ್ ಸ್ವಲ್ಪ ಜಾಸ್ತಿ ಆದನ್ಗಿತ್ತ್ ನಮ್ಮ ಕೇಶವಂಗೆ. ಅವನ್ನ ಕುರ್ಸದ್ ಮರದ್ ಹತ್ರವೇ ನಮ್ಮ fernandis chicken centre ಇತ್ತ್ತ್ ಅಲ್ಲಿಂದ್ ಕೋಳಿ ಹೇಲ್ ಪರಿಮಳ ಬಹುಶ ಅವನ ಮೂಗಿಗೆ ಗಮ್‍ ಅಂದೆಳಿ ಹೊಡಿತ್ ಇರ್ಕ್. ತೆಲಾಡ್ಕನ್ತ ಹ್ವಾದ. ಆಚಿ ಈಚಿ ಕಂಡ, ಯಾರು ಹೊರಗಡೆ ಇರ್ಲಾ. ಕೋಳಿ ಇದ್ದದ್ ರೂಮೀಗ್ ಹೋಯಿ ಗನ ಕೊಳಿಗ್ ಕೈ ಹಾಕಿ ತಕನ್ಡ್ ಹೊರಗ್ ಬಂದ. ಇವ ಕೋಳಿ ಹಿಡುಕ್ ಹ್ವಾಪುಕು ಕೋಳಿ ಕೂಗುಕ್ ಸುರು ಆಯಿತ್. ಇದನ್ನ ಕೆಂಡ್ ಫರ್ನಾಂಡಿಸ್ ಸಾಹೇಬ್ರ್ ಹೋರ್ಗ್ ಓಡ್ ಬಂದ್ ಕೇಶವ ಕೋಳಿ ಹಿಡ್ಕಂಡ್ ವಾಲಡತ್ತ್ ಕನ್ಡ್ "hey tony come fast, ನಮ್ಮ ಕೋಳಿ ತೆಗೆದುಕೊಂಡು ಹೋಗುತ್ತಿದ್ದಾನೆ, ಹಿಡಿ ಅವನನ್ನು.." ಅಂದೆಳಿ ಟೋನಿನ ಕರ್ದ. ಟೋನಿ ಹೋಯಿ ಕೋಳಿ ಕಸ್ಕನ್ಡ್ ಕೇಶವನ್ನ ಹೋರ್ಗ್ ದೂಡಿ gate ಹಾಕ್ದ. "ಹ್ವಾ, ನಿನ್ ಸ್ವಂಟ ಮುರಿತಿ, ನಿನ್ ಕರ್ನಾಟಿಕಿ ಎಲ್ಲ ನಿನ್ ಹತ್ರಾನೇ ಬೆಚ್ಕೋ, ಎನ್ ಒಂದ್ ಕೋಳಿ ತಕನ್ಡ್ ಹ್ವಾರ್ ನಿನ್ ಗೆಂಟ್ ಕರ್ಗಿ ಹ್ವಾತ್ತ??, ನಾಳಿಗ್ ಬಂದ್ ಎಲ್ಲ ಕೋಳಿ ಮುಕ್ಳಿನ್ ಹೊಲಿತಿ ಕಾಣ್, ಯಾವ್ದೂ ಮೊಟ್ಟಿ ಹೆಕ್ಕುಕೆ ಆಗ, ಹಾಂಗ್ ಮಾಡ್ತಿ..."ಅಂದೆಳಿ ನಾಲ್ಕ್ ಕಲ್ಲ್ ಕುಟ್ಟಿಕೆ ಮತ್ತೆ ತೆಲಾಡ್ತ ಹೊರ್ಟ. ಅವ್ನಿಗ್ ಇನ್ನೂ ಕುಡದ್ದ್ ಇಳಿಲ. ಜೈ ಕ್ವಟ್ಟಿ ಸಾರಾಯಿ. ಹಾಂಗು ಹೀಂಗು ತೆಲಾಡ್ಕನ್ಡ್, ಅವ್ರ್-ಇವರಿಗ್ ಬೈಕನ್ಡ್, ಕೋಳಿಗುಡ್ ಕನ್ಡ್ಕೂಡ್ಲೆ ಕೈ ಹಾಕಿ, ಬಡ್ಗಿ ತಿಂದ್ ಗುಳ್ಳಾಡಿ ಗುಡ್ಡಿ ಸೇರ್ಕ೦ಡ ಕೇಶವ. ಹಾಂಗೆ ನೆಡ್ಕಂಡ್ ಹೋಯಿ ಹಾಡಿಗ್ ಹೊಗ್ದ. ಹಾಡೆಗ್ ಮರದ್ ಮೇಲ್ ಕೋಳಿ ಇತ್ತ್ ಅಂದೆಳಿ ಮಾತ್ರ ಯಾವನೂ ಅವ್ನಿಗ್ ಹೆಳ್ಲ, ಆದ್ರೂ ಕೋಳಿ ಇದ್ದಲ್ಲಿಗೆ ಹೋಯಿ ಕೊಳಿಗ್ ಕಲ್ಲ್ ಕುಟ್ಟುಕ್ ಸುರು ಮಾಡ್ದ. 

   ಆ ಕೋಳಿ ಹಾವಿನ್  ಬಾಯಿಂದ ತಪ್ಪಸ್ಕನ್ಡ್ ಬಪ್ಪುರೊಳಗೆ ಕಾಲೀಗ್ ವಂಚೂರ್ ಪೆಟ್ಟ್ ಆಯಿದಿತ್. ಇವ ಕಲ್ಲ್ ಕುಟ್ಟಿ, ಮರ ಅಲ್ಲಾಡ್ಸಿ ಅದನ್ನ ಹಿಡ್ದೆ ಬಿಟ್ಟ. ಪಾಪ ಅದ್ ಹಾವಿನ್ ಬಾಯಿಂದ ತಪ್ಪಸ್ಕನ್ಡ್ ಇವನ್ ಬಾಯಿಗ್ ಬೀಳುಹಾಂಗ್  ಆಯಿತ್. ಆ ಕೊಳಿನ ಮ್ಯಾಳಿ ಅಲ್ಲೆ ತಿಪ್ಪಿ ಮೊದ್ಲೆ ಅರ್ದ ಜೀವ್ ಹ್ವಾದ್ದ್ ಕೊಳಿಗೆ ಮುಕ್ತಿ ಕೊಟ್ಟ, ಆರ್ತಾತ್ ಕೊಂದ್ ಹಾಕ್ದ.ಅದ್ರ್ ಪಕ್ಕುನ್ ಚಿಪ್ಪಡ್ಸ್ತ ಮನಿ ಬದಿಗ್ ಪಾದ ಬೆಳ್ಸ್ದ. ಅಶ್ಟರೊಳ್ಗೆ ಸುದ್ದಿ ಶೀಂಗೇರೀಗ್ ಗುತ್ತಾಯ್ತ್. ಹ್ಯಾಂಗ್ ಅಂತ್ರಿಯಾ ನಮ್ಮ ವಿವೆಕಣ್ಣಾ ಬಂದ್ ಎಲ್ಲ ಕೇಶವನ್ ಹೆಣ್ಣಿಗ್ ಹೇಳಿದ. ಶೀಂಗೇರಿಯೂ ಇವ ಬಪ್ಪುದೆ ಕಾಯ್ತಾ ನಿಂತಿದಳ್. "ಅಮ್ಮ, ಅಮ್ಮ, ಅಪ್ಪಯ್ಯ ಯಾವ್ದೋ ಕೋಳಿ ಚಿಪ್ಪಡ್ಸ್ತ ಬತ್ತಿದ್ರ್ ಕಾಣ್.." ಅನ್ದಳ್ ಶೀಂಗೇರಿ ಮಗ್ಳ್. ಅಲ್ಲೇ ಬದೆಗ್ ಇದ್ದ್ ಹಿಡಿಸುಡಿ ತಕನ್ಡ್ ಓಡ್ದಳ್  ಶಿನ್ಗೆರಿ ಕೇಶವ್ನಿಗ್ ಹ್ವಡುಕ್ . "ರಂಡಿ ಗಂಡಸೆ, ನಿನ್ ಬಜ್ಜುವ ಇದ್, ದನಿಗ್ ಹಿಂಡಿ ತಕನ್ಡ್ ಬನಿ ಅಂದ್ರೆ ಕೊಡಪನ ಗಟ್ಲಿ ಕುಡ್ಕನ್ಡ್ ಬಂದಿರ್ಯಲ, ಮನ್ನೆ ತಕ ಬಂದ್ ಮೆಟ್ಟನ್ನು ಎಲ್ಲೋ ಬಿಸಾಕಿ ಬಂದಿದ್ಯಲ ಗಂಡ್ಸೆ, ನೀ ಸಾವುಕಾಗ್ದ, ಯಂತಕ್ ನಂಗ್ ಹೀಂಗ್ ಕಾಟ ಕೊಡ್ತೆ, ವಂಚೂರ್ ಹೆಗ್ಗುಳದ್ ಔಷಿದಿ ಕೊಡ್ ಕುಡದ್ ಸಾಯ್ತಿ.... ಇದ್ ಯಾರ್ ಮನಿ ಕೋಳಿ ಕದ್ಕನ್ಡ್ ಬಂದದ್ದ್ ಹೇಳ್, ಅಯ್ಯೋ ದೇವ್ರೆ ಇದ್ದದ್ದ್ ಒಂಚೂರ್ ಮರ್ಯಾದಿನು  ಮೂರ್ ಪಾಲ್ ಮಾಡ್ದ್ಯಲ, ಯಾವ್ ಬೊಳಿಮಗ ನಿಂಗ್ ಕುಡ್ಸದ್ದ್ ಹೆಳ್, ಅವ್ನಿಗ್ ಕರಿ ನಾಗ್ರಾವ್ ಕಚ್ಚುಕೆ, ನನ್ನ್ ಮನಿ ಹಾಳ್ ಮಾಡ್ಕ್ ಅಂದೆಳಿ ಮಾಡಿನ ಅವ.. ಆ ಕೋಳಿನ್ ಎಲ್ಲಿಂದ ತಂದೆ ಹೇಳ್ ಮೊದ್ಲ್, ನಿಂಗ್ ಯಂತಾಕ್ ಹಾಳಾಯಿ ಹ್ವಾಪು ಬುದ್ದಿ ಬಂದದ್ದ್, ಕಾಳಾವರ ಶ್ರುಶ್ಟಿಗ್ ಹರ್ಕಿ ಹೇಳ್ಕಂಡ್ರ್ ಮೇಲೂ ಯಂತಕ್ ಹೀಂಗ್ ದೇವ್ರೆ, ಬೊಳಿಮಗನೆ ಕೋಳಿನ್ ಬಿಸಾಕ್ ಅಲ್ಲ್..." ಅಂದೆಳಿ ಕೋಳಿ ಕಸ್ಕಂಬುಕ್ ಬಂದಳ್. ಅಶ್ಟೊತ್ತಿಗ್ ಮರ್ಲ್ ಇನ್ನೂ ಹೆಚ್ಚಾಯಿ ಕೋಳಿನ ಒಂದ್ ಕೈಯೆಗ್ ಹಿಡ್ಕನ್ಡ್ ಇನ್ನೊಂದ್ ಕೈಯೆಗ್ ಶೀಂಗೇರಿ ಜುಟ್ಟ್ ಹಿಡ್ಕಂಡ್ "ಯಂತಾ, ಗಂಡನ್‌ಗೇ ಹ್ವಡುಕ್ ಬತ್ಯ, ರಂಡೇ, ನಿಂಗ್ ತಿಂದ್ ಮದು ಬಂದದ್ದಾಲ್ದ, ನಾನ್ ಗಂಡಸ್ ಎನ್ ಬೇಕಾರು ಮಾಡ್ತೀ, ಅದನ್ನೆಲ್ಲಾ ಕೆಂಬುಕ್ ನಿಂಗ್ ಯಾರ್ ಅದಿಕಾರ ಕೊಟ್ಟದ್ದ್, ಒಳ್ಗ್ ಹೋಯಿ ಕೊಳಿಗ್ ಕಾರ ಕಡಿ, ನೀನ್ ಬಿಲಾಸ್ ಬಿಟ್ಟದ್ದ್ ಅಲ್ದಿರೆ ನನ್ ಮೇಲ್ ಕೈ ಮಾಡುಕ್ ಎಷ್ಟ್ ದೈರ್ಯ ನಿಂಗೆ, ಹೋಗ್, ಹೋಯಿ ಕೆಲ್ಸಾ ಕಾಣ್.."ಅಂದೆಳಿ ಹಿಡ್ಕನ್ಡ್ ಜುಟ್ಟನ್ನ ಮತ್ತೆ ಯೆಳ್ದ್ ಬಿಟ್ಟ. ಅಶ್ಟ್ ಹೊತ್ತಿಗ್ ಆಗ್ಲೆ ಮೂಕಕ್ಕನ ಮನೆಗ್ ಎಲ್ಲರೂ ಸೇರಿ ಮೂಕಕ್ಕನ ಕೋಳಿ ವಿಚಾರದ ಬಗ್ಗೆ ಮಾತಾಡ್ತಿದಿರ್. ಅಷ್ಟೊತ್ತಿಗೆ ಈ ಗಲಾಟಿ ಕೆಂಡ್ ಎಲ್ಲ ಶೀಂಗೇರಿ ಮನಿಗ್ ಓಡ್ ಬಂದ್ರ್. ಮತ್ತೆ ನಮ್ಮ ಬಾಬಣ್ಣ ಮದ್ಯಸ್ತಿಕೆ ವೈಸ್ಕನ್ಡ್ "ಶೀಂಗೇರಿಯ ನೀನ್ ಒಳ್ಗ್ ಹೋಗ್, ಇವನ್ನ ಇವತ್ತ್ ಯಾರು ಮಾತಡ್ಸುಕ್ ಆತಿಲ್ಲ, ಅವ ಕೋಳಿ ತಂದಿನಲ್ದಾ, ಅದನ್ನ ಮಾಡಿ ಹಾಕ್ ನಾಳಿಗ್ ಕೂಕಂಡ್ ಮಾತಾಡ್ವ... ಈಗ ನೀ ಹೋಗ್, ಹ್ವಾ ಕೇಶವ ಆ ಕೋಳಿನ ಹೆಣ್ಣಿನ್ ಹತ್ರ ಕೊಡ್ ಮರೆ, ನೀ ಹೋಯಿ ಮಿಂದ್ಕ ಬಾ.. ಗಬ್ಬ್ ನಾತ ಹೊಡಿತಿದ್ದೆ. ಹೆಣಾ, ಆ ಕೊಳಿನ್ ತಕನ್ಡ್ ಹೋಗ್" ಅಂದೆಳಿ ಕೇಶವನ ಮಗ್ಳತ್ರ ಹೆಳ್ದ ಬಾಬಣ್ಣ. ಆ ಹೆಣ್ಣ್ ಹಗುರಕ್ಕ್ ಬಂದ್ ಕೊಳಿನ ಕೇಶವನ್ ಕೈಯಿಂದ ಕಸ್ಕನ್ಡಳ್. ಕೋಳಿ ಬಾಯೇಗ್ ನೊರಿ, ನೊರಿ ನೋಳಿ ಇದ್ದದ್ದ್ ಕಂಡು ನಮ್ ಮೂಕಕ್ಕ ಅಂದ್ರ್ "ಹೆಣಾ, ಇಲ್ಲ್ ಬಾ, ಇದಕ್ಕ್ ಹಾವ್ ಕಚ್ಚದಂಗೆ ಇತ್ತಲ, ಇಲ್ಲ್ ತಕನ್ಡ್ ಬಾ ಕಾಂಬು.." ಹೆಣ್ಣ್ ಆ ಕೊಳಿನ ಮೂಕಕ್ಕನ್ ಕೈಯೆಗ್ ಕೊಟ್ಟಳ್. "ಅದನ್ನ್ ಕಂಡು ಮೂಕಕ್ಕಂಗೆ ಸಿಡ್ಲ್ ಬಡ್ದನ್ಗ್ ಆಯಿತ್. ಆ ಕೋಳಿ ಅವ್ಳದ್ದೆ. ಚಿಪ್ಡ್ ತೆಗ್ದ್ ಮೇಲೂ ಹ್ಯಾಂಗ್ ಗುತಾಯ್ತ್ ಅಂತ್ರ್ಯಾ, last ಬಾನುವಾರ ನಮ್ ಕರಿಯ, ಕಾಕಿನ ಬೇರ್ಸುಕ್ ಕಲ್ಲ್ ಕುಟ್ಟದ್ದ್ ಸೀದಾ ಇದೆ ಕೊಳಿಗ್ ತಾಂಗಿ ಬೆನ್ನ್ ಮೇಲ್ ಗಾಯ ಆಯಿದಿತ್. ಅದನ್ನ ಕoಡ್ ನಮ್ಮ ಮೂಕಕ್ಕ "ಹ್ವಾ ಬಾಬಣ್ಣ, ಇದ್ ನಮ್ಮನಿ ಹಿಲಿ ಇಟ್ಟ್ ಕೋಳಿ ಮರಾಯ, ಹಾವ್ ಕಚ್ಚಿತ್ ಇದಕ್ಕೆ, ಇವ್ನಿಗ್ ಎಲ್ಲ್ ಸಿಕ್ತಂಬ್ರ್ ಕೆಣ್ ಮರೆ, ಹೆಣಾ ಇದನ್ನ ಪಲ್ಲಿ ಮಾಡುದ್ ಬ್ಯಾಡಾ, ಬೇಕಾರ್ ನಮ್ಮನೆಗ್ ಇನ್ನೊಂದ್ ಪಿಳ್ಳಿ ಇತ್ತ್ ಕೊಡ್ತಿ.." ಅಂದಳ್. ನಮ್ ಮೂಕಕ್ಕನೆ ಹಾಂಗೆ ಬಾಳ ಒಳ್ಳೇ ಹೆಂಗ್ಸ್. "ಹ್ವಾ, ಕೇಶವ ಈ ಕೋಳಿ ಎಲ್ಲಿಂದ್ ತಕನ್ಡ್ ಬಂದೆ ಮರಾಯ, ಇದಕ್ಕ್ ಹಾವ್ ಕಚ್ಚಿತ್ ಮರೆ,.. " ಅಂದ ಬಾಬಣ್ಣ ಅಲ್ಲೇ ಜಗ್ಲೆಗ್ ಕೂಕಂಡಿದ್ದ ಕೇಶವಂಗೆ. ಈಗ ಸ್ವಲ್ಪ ಇಳ್ದನ್ಗ್ ಕಾನ್ತತ್ತ್. ಮಾತಾಡುಕು ಕಷ್ಟ ಆತಿತ್ತ್. ಆದ್ರೂ ಹಗೂರಕ್ಕ್ ಅಂದ "ನಂದೇ ಅದ್, ಹಾವ್  ಕಚ್ಚಿತ ಮತ್ಯಂತ ಕಚ್ಚಿತ, ಸುಮ್ನೇ ಸುಳ್ಳ್ ಹೆಳಿ ನಿಮ್ಮನೆಗ್ ಪಲ್ಲಿ ಮಾಡ್ಕ್ ಅಂದೆಳಿ ಮಾಡಿರ್ಯಾ?? ಅದಕ್ಕ್ ಯಂತದು ಆಯಿಲ, ಹೋಗಾ ಹೋಗಾ.. ನಿನ್ನ ಯಾರ್ ಕರದ್ದ್, ಬಂದ ನ೦ದೆಲ್ಲಿಡ್ಲಿ ನಂದಗೊಪಾಲ ಅಂದೆಳಿ.."ಮತ್ತ್ ಬಾಯಿಗ್ ಬಂದದ್ದೆಲ್ಲ ಹೆಳುಕ್ ಸುರು ಮಾಡ್ದ. ಬಾಬಣ್ಣ ಸುಮ್ನೇ ಆಯಿಕನ್ಡ್ರ್. ಎಲ್ಲರಿಗೂ ಗುತಿತ್ ಅವ್ನಿಗ್ ಸಾರಾಯಿ ಕುಡದ್ರೆ ಚೂರ್ ಮರ್ಲ್ ಹಿಡಿತ್ತ್, ಇಲ್ದಿರೆ ಚಿನ್ನದ್ ಕಂಡೆಗ್ ಇಪ್ಪನ್ ಅಂದೆಳಿ. ಇಷ್ಟೆಲ್ಲಾ ಆಪತಿಗ್ ನಮ್ಮ್ ಗಣೇಶ,ಉಮೇಶ ಎಲ್ಲ ಬಂದ್ ಕಾಂತಿದಿರ್. ಆದ್ರೂ 1000 ರೂಪಾಯಿ ಕೊಟ್ಟದ್ದ್ ಮಾತ್ರ ಬಾಯೀ ಬಿಡ್ಲಾ, ಎಲ್ಲಾದ್ರೂ ಅದ್ರ್ ಸುದ್ದಿ ಮಾತಾಡ್ರೆ ಮಹಿಳಾ ಸಂಘದ ಎಲ್ಲರತ್ರನೂ ಚಪ್ಲಿ ಎಟ್ ತಿಂಬುದ್ ಗ್ಯಾರಂಟಿ. ಇನ್ನೂ ಗಣೇಶನಿಗೆ ನಾನ್ ಕೊಟ್ಟದ್ ದುಡ್ಡೆಗೆ ಅವ ಕುಡ್ಕಾಂಡ್ ಬಂದದ್ದ್ ಅಂದೆಳಿ ಎಣಸ್ಕoಡಿದ. ಇನ್ನ್ ಮೂಕಕ್ಕ ಒಂದ್ ಪಿಳ್ಳಿ ಕೊಟ್ರ್, ಶೀಂಗೇರಿ ಮರ್ಕತ ಪಲ್ಲಿ ಮಾಡೂಕ್ ಹ್ವಾದಳ್. ಅಶ್ಟೊತ್ತಿಗ್ "ಹ್ವಾಯಿ ಬಾಬಣಣ್ಣ ಈ ಕುಡ್ತ ಬಿಡ್ಸೂಕ್ ಉಡುಪಿಯಲ್ಲ್ ಔಷಿದಿ ಸಿಕ್ಕತ್ತ್, ನನ್ನ್ ಫ್ರೆಂಡ್ ಅಪ್ಪಯ್ಯ ಔಷಿದಿ ತಕನ್ಡ್ ಈಗ ಕುಡುದೆ ಬಿಟ್ಟಿರ್, ಅದನ್ನ ಯಂತಕೆ ನಮ್ಮ ಕೆಶವಣ್ಣನ್ಗೆ ಕೊಡುಕ್ ಆಗಾ? " ಅಂದ ನಮ್ಮ ವಿವೇಕ. ಹೌದೇ ಆವ್ನೇ, ಅದೇ ವಿವೇಕ. ಹ್ಯಾಂಗಾರು ಮಾವ ಅಪಾನ್ ಅಲ್ದಾ ಕೇಶವ. "ಹೌದಾ ಮರಾಯ, ಹಂಗಾರ್ ಅದ್ ಎಲ್ಲ್ ಸಿಕ್ಕತ್ ಕೆಣ್, ಹೋಯಿ ತಕನ್ಡ್ ಬಪ್ಪ ಮರಾಯ, ಒಂದ್ ಒಳ್ಳೇ ಸುದ್ದಿ ಹೇಳ್ದೆ" ಅಂದೆಳಿ ವಿವೇಕನ ಕೈಯೆಗ್ ಇದ್ದ್ watch ಕಂಡ್ಕಂಡ್ "ಅಯ್ಯೋ ಗಂಟಿ 9 ಆಯಿತ್ , ಹ್ವಾ ಪುಟ್ಟ, ವಾದ್ಯದರ್ ಬಂದಿರ ಕಾಣ್, ಹೈಗುಳಿ ಮನಿ ಪೂಜ ಇತ್ತ್, ಹಾಂಗೆ ಬಟ್ರಿಗ್ ಕೂಗ್ ಹಾಕಿಕೆ ಬಾ. ಹೊ, ಅಣ್ಣ ತಮ್ಮ ಮದಿಗ್ ಬಂದದ್ದನಾ? ಪೂಜಕ್ಕ್ ಬನಿ ಮರಾಯ, ರಾಘುವ ನೀನು ಬಾ ಮರೆ, ಆ ಪರ್ಸನ ಗನ್ಡಿನ್ ಹತ್ರ ಗರ್ನಲ್ ತಪ್ಪೂಕ್ ಹೆಳಿದಿ ತಕನ್ಡ್ ಬಂದಿನ ಕೆಣ್ ಮರೆ ಪಮ್ಮ, ರಘುವಣ್ಣ ಬನಿಯೆ ನಮ್ಮನೆಗ್ 2 ಆಳ್ ಇತ್ತ್, ಕಳ್ಸ್ತಿ ನಾಳಿಗ್..." ಅಂದೆಳಿ ಎಲ್ಲರನ್ನೂ ಪೂಜಕ್ಕೆ ಕರ್ದ್ ಮನಿಗ್ ಮೀವೂಕ್ ಹ್ವಾರ್ ಬಾಬಣ್ಣ. ಈಚಿ ಬದೆಗ್ ಕೇಶವನ್ ಮಗ್ಳಿನ್ದ ವಿವೇಕಂಗೆ message ಬಂತ್. "thanks jaanu.." ಅದನ್ನ ಕಂಡ್ಕಂಡ್ ಚಣ್ಣಕ್ ನೇಗಿ ಆಡ್ತ "anything for you darling..." ಅನ್ದೆಳಿ reply ಮಾಡ್ದ. ಗಣೇಶ and co. ಇನ್ನ್ ಬೇರೆಯವರ ಹತ್ರ ತಪ್ಪುಕ್ ಹೆಳ್ರ್ ಸುಖ ಇಲ್ಲ ಅಂದೆಳಿ ಮತ್ತೆ "ಕಿನಾರ"ಕ್ಕೆ ಹ್ವಾಪು plan ಮಾಡ್ರ್. ರಾಘು ಮತ್ತೆ ಬಸ್ವಂಗೆ ಫೋನ್ ಮಾಡ್ದ "ಹೆಲೋ, ಎಲ್ಲ್ ಸತ್ತಿದೆ ಮರೆ.. ಮಳಿ ಬಿಡ್ತಲ, ಇನ್ನೂ ಹೊಕ್ಕಾಂಬಾಟ ಮುಗಿಲ್ಯನಾ?? ಬೆಗ್ ಬಂದ್ ಸಾಯಿ ಮರೆ,.." 

  ಹ್ವಾಯಿ, ನೀವ್ ಯಂತಾರು ಹೇಳಿ, ಇಡೀ ಕ್ವಟ್ಟಿ ಸಾರಾಯಿ, ಮಟ್ಟಿ ಕೋಳಿ ಪ್ರಸಂಗದೆಗೆ loss ಆದ್ದ್ ನಮ್ಮ ಮೂಕಕ್ಕಂಗೆ, ಎಂತಕೆ ಕೆನ್ಡ್ರೆ, ಮೊದ್ಲೆ ಒಂದ್ ಕೋಳಿ ಸತ್ತ್ ಹೊಯಿತ್, ಅದ್ರೆಗೂ ಇನ್ನೊಂದ್ ಮಟ್ಟಿ ಕೊಳಿನ ಪದಾರ್ಥ ಮಾಡುಕ್ ಕೊಟ್ಟಿದಳ್. ಇನ್ನ್ ಗಣೇಶನ್ 1000 ರೂಪಾಯಿ, ಅದ್ ಬಿಡಿ ನಾಲ್ಕ್ ದಿನ ನಾಲ್ಕ್ quarter ಕಡ್ಮಿ ತಕನ್ಡ್ರ್ ಅಲ್ಲಿಂದ್ ಅಲ್ಲೀಗ್ ಆತ್ತ್. ಏನಂತ್ರಿ??.


ರಚನೆ ಮತ್ತು ಪರಿಕಲ್ಪನೆ
ದಿಲೀಪ್ ಶೆಟ್ಟಿ
ಗುಳ್ಳಾಡಿ.
9986843481


(ಚಿತ್ರ ಕೃಪೆ: ಅಂತರ್ಜಾಲ)

ಸೋಮವಾರ, ಅಕ್ಟೋಬರ್ 3, 2011

ಬಾಳಾಟ..


ಉದ್ದ ಗಾಳಕೆ ಹುಳವ ಸಿಕ್ಕಿಸಿ 
ಗದ್ದೆ ದಡದಲಿ ನಿಂತು,
ಕೆರೆಯಲೀಜುವ ಮೀನಾ ಹಿಡಿಯಲು
ಹೊಂಚು ಹಾಕುತ ಕುಳ್ಳಿರೆ
ಮರೆತೇ ಬಿಟ್ಟೆವು ಜೀವ ಅವುಗಳ
ಇಲ್ಲವೇ ಹಕ್ಕು ಬದುಕಲು??

ಮನೆಯ ಮುಂದಿಹ ಕೋಳಿ ಮರಿಗಳ
ಕೊಟ್ಟು ಅಕ್ಕಿಯ ಸಾಕಿದೆ.
ನೆಂಟರಿಷ್ಟರು ಬಂದು ಕೂಡಿರೆ
ಕೊಂದು ತಿಂದೆವು ಕೇಳದೆ.
ಮರೆತೇ ಬಿಟ್ಟೆವು ಜೀವ ಅವುಗಳ
ಇಲ್ಲವೇ ಹಕ್ಕು ಬದುಕಲು??

ಜಗದ ಜೀವವೇ ಅಷ್ಟೇ ಕಾಣಿರಿ.
ಹುಲಿಯು ಕೊಲ್ವದು ಜಿಂಕೆಯ 
ಇಲಿಯು ಸಾಯ್ವುದು ಬೆಕ್ಕಿಗೆ
ಮನುಜ ಸತ್ತವ ಆಹಾರವಾಗ್ವನು 
ಸೂಕ್ಷ್ಮ ಜೀವಿಯ ಬಾಯಿಗೆ
ಮತ್ತೆ ಮಣ್ಣಲಿ ಸೇರಿ ಕೊಡುವನು 
ಪೌಷ್ಟಿಕಾಮ್ಷತೆ ಗಿಡ ಮರ ಬೇರಿಗೆ.

ಜೀವ ಸರಪಣಿಯಲ್  ಅವನೇ ಬದುಕುವ
ಭಲಿಷ್ಟನೆನ್ನೋ ಪ್ರಾಣಿಯು.
ಇದು ದೇವನಾಟ, ಅಸ್ತಿತ್ವದಾಟ
ಜಗ ಜೀವದಾಟ, ಉಳಿವಿಗಾಗಿ ಹೋರಾಟ.

-ದಿಲೀಪ್ ಶೆಟ್ಟಿ.

(ಚಿತ್ರ ಕೃಪೆ: ಅಂತರ್ಜಾಲ)

ಶುಕ್ರವಾರ, ಸೆಪ್ಟೆಂಬರ್ 30, 2011

ಕಾತರ..

ಸಂಜೆ ಜಾರಿದೆ,ಸಂತೆ ಕರಗಿದೆ 
ರವಿಯ ನೇಸರ ಕಳೆಗುಂದಿದೆ ,
ಹಕ್ಕಿ ಗೂಡೆಡೆ ಗುರಿಯ ತಿರುಗಿರೆ,
ಬೆಕ್ಕು ಒಲೆಯನು ಗುಡಿಸಿ ಕೂತಿರೆ
ಬರುವ ದಾರಿಗೆ, ತರುವ ನಗುವಿಗೆ
ಬಾಗಿಲ ಬುಡದಲಿ ಬಿಡದೆ ಕಾದಿಹೆ,
ಎಂದು ಬರುವೆಯೋ ಎನ್ನ ಇನಿಯನೆ
ಅಪ್ಪಿ ತೋಳಲಿ ಬಿಡಿಸು ವೇದನೆ.

ಮಕ್ಕಳಾಡುವ ಪರಿಯ ನೋಡಿರಿ ,
ಅಪ್ಪಿ ಅವರನು ಎತ್ತಿ  ಆಡಿರಿ.
ಮತ್ತೆ ಅತ್ತರೆ ಬೆನ್ನ ಮೇಲೇರಿಸಿ
ಆನೆ-ಅಂಬಾರಿ ಮಾಡಿರಿ.
ಕಾಯುತಿರುವೆವು ನಿಮ್ಮ ದಾರಿಗೆ,
ಎಂದು ಬರುವೆಯೋ ಎನ್ನ ಇನಿಯನೆ
ಅಪ್ಪಿ ತೋಳಲಿ ಬಿಡಿಸು ವೇದನೆ.

ಕೊರಗೊ ಮನಸಿಗೆ, ಸೊರಗೊ ಕನಸಿಗೆ
ಪ್ರೀತಿ ಓಕುಳಿಯ ಹೊತ್ತು ತಾ..
ಮತ್ತೆ ಹೋಗದೆ, ಒಂಟಿ ಮಾಡದೆ
ಇದ್ದು ಬಿಡು ಮನೆ-ಮನ ಮಂದಿರದಲಿ. 
ನಿನ್ನ ನೋಡದೆ ತಿಂಗಳಾಗಿದೆ,
ತಿನ್ನೋ ಅನ್ನವೂ ತಂಗಳಾಗಿದೆ.
ಬಾಗಿಲ ಬುಡದಲಿ ಬಿಡದೆ ಕಾದಿಹೆ
ಎಂದು ಬರುವೆಯೋ ಎನ್ನ ಇನಿಯನೆ
ಅಪ್ಪಿ ತೋಳಲಿ ಬಿಡಿಸು ವೇದನೆ.

-ದಿಲೀಪ್ ಶೆಟ್ಟಿ.

(ಚಿತ್ರ ಕೃಪೆ: ಅಂತರ್ಜಾಲ)

ಬುಧವಾರ, ಸೆಪ್ಟೆಂಬರ್ 28, 2011

ನಲ್ಲೇ...

ಎತ್ತ ಸಾಗಿದೆ ಸುತ್ತ ಮುತ್ತಲ ಲೋಕ 
ನಿನ್ನ ನೋಡುತ ನಿಂತಿರೆ ,
ನಿನ್ನ ದನಿಯೊಳು ಮುಳುಗಿರೆ
ದುಂಡು ಭೂಮಿಯು ನಿಂತು ನಿನ್ನನೇ
ನೋಡುವಂತಿದೆ.


ನಬದ ನಯನ
ನಗುವ ನಯನೆಯ ನೋಡಿ
ಕತ್ತಲಿಗೆ ಕೆನ್ನೆ ಕೊಟ್ಟು
ಮೋಡದಡಿಯಲಿ ನಾಚಿ 
ನೀರಾಗಿ ಮಳೆಯ ಸುರಿಸುತಿರೆ
ನನ್ನೊಡತಿಯ ಮೇಲೆ 
ಮುತ್ತ ಮೆತ್ತಂತಿದೆ.

ಗುಳಿ ಬಿದ್ದ ಕೆನ್ನೆಯ ನೋಡಿ
ಗಿಳಿವಿಂಡು ಗಳಿಗೆಗೆ ಗುಡುಗಿ 
ಕಾಲವನು ಕೋಲಿಂದ ದೂಡಿರೆ
ಗಡಿಯಾರದ ಗಂಟೆ ಕತ್ತಲೆಡೆ
ಓಡಿದಂತಿದೆ.

ಚೆಲುವು ನಿನ್ನದು ಹೆಣ್ಣೇ,
ಹಾಳು ಮಾಡಿದೆ ನನ್ನೇ.
ನಗುವ ನಿನ್ನೊಲವಿ೦ಗೆ  
ಕರಗಿ ಹೋಗಲೇ ಹಾಗೆ..
ಬೊಗಸೆಯಲಿ ಬಂದಿಸಿ ನನ್ನ
ಮೊಗೆದು ಬಿಡು ಹಾಗೆ...

-ದಿಲೀಪ್ ಶೆಟ್ಟಿ.

ಶುಕ್ರವಾರ, ಸೆಪ್ಟೆಂಬರ್ 23, 2011

ಸಾಮಾನ್ಯ..


ಸಂತೆ ಕಂತೆಯ ಚಿಂತೆ 
ಸಾಮಾನ್ಯನಿಗೆಕೆ?
ರೊಟ್ಟಿ ರೊಕ್ಕದ ರಗಳೆ
ಸಾಹುಕಾರನ ಬೊಗಳೆ
ಇಷ್ಟು ಬಿಟ್ಟರೆ ಕಂಕುಳಡಿಯ
ತಿಗಣೆ ಕಡಿತಕ್ಕೆ, ಕೆರೆಯುವ ಬವಣೆ. 

ಮೊನ್ನೆ ರಾಜ್ಯೋತ್ಸವ 
ಎಣ್ಣೆ,  ಪಾಯಸ 
ನಿನ್ನೆ ನವಮಿ,
ಪಾನಕ , ಪಂಚಾಮೃತ
ಮದುವೆ, ಮುಂಜಿ, ಸಮಾರಾಧನೆಯೆಂದರೋ
ಗಟ್ಟಿ ತೇಗಿನ ಮೃಷ್ಟಾನ್ನ ಬೋಜನ.
ಇಂದದೇ  ತಂಗಳನ್ನ 
ತಿಂಗಳ ಕೊನೆಗೆ 
ನೀರೆ-ಅನ್ನ.

ಸಂಸಾರದ ಹಾದಿ ಹೆದ್ದಾರಿ,
ಸಂಪಾದನೆಯೋ ಕಾಲು ದಾರಿ.
ಸಂಗ ಸಂಸಾರಿ, ಅಂಗಾಂಗ ಸಂಹಾರಿ.
ಬೇಳೆ ಕಾಳಿಗೆ,  ನಾಳೆ ಹಾಲಿಗೆ 
ಮತ್ತೆ ಸ್ಕೂಲಿಗೆ , ಕೊಡದ ಬಾಡಿಗೆ
ಬಿಡದೆ ಓಡುವ ಬೆಲೆಯ ಬೇನೆಗೆ 
ಕೊಟ್ಟರುಳಿವುದು ಬೆವರಿದ ನಾಲಿಗೆ.
ಕುರುಡು ಕಾಂಚಣ ಕೇಳಿರೋ ಅಣ್ಣ
ಬಡತನಕ್ಕೆ ಬಳಲಿ ಮಾಗಿದೆ ಬಣ್ಣ.
              
               -ದಿಲೀಪ್ ಶೆಟ್ಟಿ.

ಮಂಗಳವಾರ, ಸೆಪ್ಟೆಂಬರ್ 20, 2011

ಗುರಿ


ಒಂದು ಮುಂಜಾವಲ್ಲಿ ನಿದ್ದೆ ಮಂಪರಿನಲ್ಲಿ 
ಸದ್ದು ಮಾಡುತ  ಮಗುವು ಕೇಳಿತಮ್ಮನ ಕರೆದು,
ಅಮ್ಮ.. ಅಮ್ಮ.. ಗುರಿ ಎಂದರೇನು?

ಮಗು.., ಗರಿಬಿಚ್ಚಿ ಹಾರುವ ಗುಬ್ಬಚ್ಚಿಗೆ 
ಮರಿ ಹಕ್ಕಿ ರೆಕ್ಕೆಯ ಹರಿಬಿಟ್ಟು 
ಹಾರಿಸುವ ಗುರಿ.
ಕೆರೆ, ತೊರೆಯಲೀಜುವ ನೀರಿಂಗೆ
ಸಾಗರವ ಸಂದಿಸುವ ಗುರಿ
ಮಳೆ ಹನಿಯ ಇನಿಯಂಗೆ
ಕಳೆ ತೆಗೆದು ಇಳೆಗೆ 
ಹಸಿರನುಡಿಸುವ ಗುರಿ.
ಮಗು ನಿನ್ನ ನಗುವನು 
ಮೊಗೆ ಮೊಗೆದು ಹೃದಯದಲಿ
ಮುಡಿ ಕಟ್ಟಿ ಇಡುವ ಗುರಿ.
ಹೇಳು ನಿನ್ನಯ ಗುರಿ
ಹೇಳುವೆನಾವುದು ಸರಿ.

ಹಾಸಿಗೆಯಲಿ ಮಲಗಿಸಲು
ಬಿಡದೆ ಹಟವನು ಮಾಡಿ
ನಿನ್ನ ಮಡಿಲೊಡಲೊಳು  ಬೆಚ್ಚಗೆ 
ಮಲಗುವ ಗುರಿ.
ಮೀಯುವ ವೇಳೆ ಕಣ್ಣಿಗೆ 
ನೊರೆಯ ಬೀಳಿಸಿ ಅಳುವ ನಾಟಕವ ಮಾಡಿ
ನಿನ್ನ ಕರೆದು ನೆನೆದು ನಲಿಸುವ ಗುರಿ.

ಎದೆಗಪ್ಪಿದ ಹೆತ್ತಾಕೆ ಕಣ್ಣಿರ ಕೊಳದೊಳಗೆ 
ಸಂತಸಾನಂದದಿ ತೇಲಿ,
ಮಿಡುಕೊ ಮಗುವಿನ ಗಲ್ಲಕಪ್ಪುಗೆಯ ನಿಟ್ಟು 
ಗುರಿ ಗೆದ್ದ ಗಿಳಿಹಂಗೆ ಹಿರಿಹಿಗ್ಗಿ ಹರುಷದಿ 
ಮತ್ತೆ ಮುತ್ತ ಗೊಂಚಲ ಬೀಳಿಸಿದಳು. 

ಎಲ್ಲರಟ್ಟಿಸುವರು ಗುರಿಯ,
ಮರೆತು ಪ್ರೀತಿಯ , ನಗುವ ಭಾಷೆಯ.
ಗುರಿ ಮುಟ್ಟಿ ತಿರುಗಿದರೆ  
ಕಡೆಗೊಮ್ಮೆ ಕಾಂಬುವುದು 
???????????
ಶೂನ್ಯ  ಸಂಪಾದನೆ.

-ದಿಲೀಪ್ ಶೆಟ್ಟಿ.