ಕನ್ನಡ ಕಲಿಯಿರಿ. ನಿಮ್ಮ ಅನಿಸಿಕೆಯನ್ನು ಕನ್ನಡದಲ್ಲಿ ನೀಡಿರಿ.


Type in English. Press Space to get it in ಕನ್ನಡ ಲಿಪಿ Press Ctrl+g to toggle between English and Kannada

ಶುಕ್ರವಾರ, ಸೆಪ್ಟೆಂಬರ್ 30, 2011

ಕಾತರ..

ಸಂಜೆ ಜಾರಿದೆ,ಸಂತೆ ಕರಗಿದೆ 
ರವಿಯ ನೇಸರ ಕಳೆಗುಂದಿದೆ ,
ಹಕ್ಕಿ ಗೂಡೆಡೆ ಗುರಿಯ ತಿರುಗಿರೆ,
ಬೆಕ್ಕು ಒಲೆಯನು ಗುಡಿಸಿ ಕೂತಿರೆ
ಬರುವ ದಾರಿಗೆ, ತರುವ ನಗುವಿಗೆ
ಬಾಗಿಲ ಬುಡದಲಿ ಬಿಡದೆ ಕಾದಿಹೆ,
ಎಂದು ಬರುವೆಯೋ ಎನ್ನ ಇನಿಯನೆ
ಅಪ್ಪಿ ತೋಳಲಿ ಬಿಡಿಸು ವೇದನೆ.

ಮಕ್ಕಳಾಡುವ ಪರಿಯ ನೋಡಿರಿ ,
ಅಪ್ಪಿ ಅವರನು ಎತ್ತಿ  ಆಡಿರಿ.
ಮತ್ತೆ ಅತ್ತರೆ ಬೆನ್ನ ಮೇಲೇರಿಸಿ
ಆನೆ-ಅಂಬಾರಿ ಮಾಡಿರಿ.
ಕಾಯುತಿರುವೆವು ನಿಮ್ಮ ದಾರಿಗೆ,
ಎಂದು ಬರುವೆಯೋ ಎನ್ನ ಇನಿಯನೆ
ಅಪ್ಪಿ ತೋಳಲಿ ಬಿಡಿಸು ವೇದನೆ.

ಕೊರಗೊ ಮನಸಿಗೆ, ಸೊರಗೊ ಕನಸಿಗೆ
ಪ್ರೀತಿ ಓಕುಳಿಯ ಹೊತ್ತು ತಾ..
ಮತ್ತೆ ಹೋಗದೆ, ಒಂಟಿ ಮಾಡದೆ
ಇದ್ದು ಬಿಡು ಮನೆ-ಮನ ಮಂದಿರದಲಿ. 
ನಿನ್ನ ನೋಡದೆ ತಿಂಗಳಾಗಿದೆ,
ತಿನ್ನೋ ಅನ್ನವೂ ತಂಗಳಾಗಿದೆ.
ಬಾಗಿಲ ಬುಡದಲಿ ಬಿಡದೆ ಕಾದಿಹೆ
ಎಂದು ಬರುವೆಯೋ ಎನ್ನ ಇನಿಯನೆ
ಅಪ್ಪಿ ತೋಳಲಿ ಬಿಡಿಸು ವೇದನೆ.

-ದಿಲೀಪ್ ಶೆಟ್ಟಿ.

(ಚಿತ್ರ ಕೃಪೆ: ಅಂತರ್ಜಾಲ)