ಕನ್ನಡ ಕಲಿಯಿರಿ. ನಿಮ್ಮ ಅನಿಸಿಕೆಯನ್ನು ಕನ್ನಡದಲ್ಲಿ ನೀಡಿರಿ.


Type in English. Press Space to get it in ಕನ್ನಡ ಲಿಪಿ Press Ctrl+g to toggle between English and Kannada

ಶುಕ್ರವಾರ, ಫೆಬ್ರವರಿ 24, 2012

ಮಸಣದ ಹೂವು??


ಲಜ್ಜೆ ಜಾರಿದ ಮನ,ರಾತ್ರಿ ಜಾತ್ರೆಗೆ ಮಾನ,
ನಿತ್ಯ ಜಾಗರಣೆಯ ಕಾನನ,
ರಾತ್ರಿ ರಂಗಿನಲಿ ಕಾಮ ಕದನ,
ಜೀರುಂಡೆಗಳ ಜೇಂಕಾರಕ್ಕೆ ಸತ್ತ ವದನ.
ಮೂಸಿ ಎಸೆದ, ತುಸು ಮಾಸಿದ  ಹೆಣ್ಣು
ಮಸಣದ ಹೂವು??

ಮ್ಲಾನ ಮೌನದ ಒಡವೆ,
ಹಂಚಿ ಹರಿಯುವ ಹಿರಿಮೆ .
ಹರೆಯ ಹರಿದಿದೆ, ಹದವ ಅರಿತಿದೆ.
ದಾರಿಹೋಕರ ದಾಸೋಹಕ್ಕೆ,
ದಾಹ ತೀರದ ದಾರಿದ್ರ್ಯಕ್ಕೆ ,
ಬುಡ ಸತ್ತ, ಬಾಡಿದ ಹೆಣ್ಣು
ಮಸಣದ ಹೂವು??

ಮುಂಜಾವಿನಲಿ ಅಸ್ಪ್ರಷ್ಯೇ,
ಬೈಗುಳದ ಬಿಸಿ ತುಪ್ಪ.
ಸಂಜೆಯಾದರೆ ಅವಳೇ ನಿತ್ಯ ಶೀಲೆ,
ಹೊಗಳಿಕೆಯ ಬಿಗಿ ಕಪ್ಪ.
ಮಡಿವಂತಿಕೆಯ ಮುರುಕು ಮನಸಿಗರ
ನಂಬಿಕೆಯ ನಾಟಕದೊಕುಳಿಯಲಿ
ಜಾರಿದ ಸೆರಗು, ಸೋರುವ ಸೊಬಗು.
ರಸ ಹೀರಿ, ರಾಡಿ ಮಾಡಿ ಕಿತ್ತೋಗೆದ ಹೆಣ್ಣು 
ಮಸಣದ ಹೂವು??

-ದಿಲೀಪ್ ಶೆಟ್ಟಿ

ಚಿತ್ರ ಕೃಪೆ : ಅಂತರ್ಜಾಲ  

ಶುಕ್ರವಾರ, ಫೆಬ್ರವರಿ 17, 2012

ಬಿದಿರು ಮಂಟಪ

ಇತ್ತಂತೆ ಅವಳಿಗೂ ಆಸೆ. ಪ್ರತಿಯೋಬ್ಬರಂತೆ
ಆಗಿ ಮದುವೆಯ ಒಲವ ಜೊತೆ,
ಕೂಡಿ ಬಾಳುವ ,ಹಾಡಿ ನಲಿಯುವ ಕಥೆ,
ಪ್ರಣಯದೌತಣದಿ ನಿತ್ಯ ರಸವ ಹೀರುವ ತೃಷೆ.
ಹೆತ್ತು ಮಕ್ಕಳ , ಮದುವೆ ಮಾಡುವ ವ್ಯಥೆ.

ಬಿಂಕ ಮೈ ತುಂಬಾ, ಕಾಲ್ಗೆಜ್ಜೆಗೆ ಕುಣಿಯುವ ನಿತಂಬ.
ನಾಚಿಕೆಯಲಿ ರೆಪ್ಪೆ  ಮುತ್ತಿಕ್ಕಿ, ಜಗವ ಮರೆಸಲು,
ನಯನ ನೆನೆಯಿತು ನಲ್ಲನ ಅರಸಿ.
ಅಧರದ ಅಂಚು ಗಲ್ಲಕೆ ಗುದ್ದಿ,  
ಗುಳಿ ಕೆನ್ನೆ ನಗುವ ಹಂಚಿತು,  ಕೊಂಚ ಮಿಂಚಿತು.

ಶ್ವೇತ ಕನ್ಯೆಗೆ ರೇಷ್ಮೆ ತೊಗಲುಡಿಸಿ,
ರಾಶಿ ಚಿನ್ನದಿ ಕಂಠ ಕೆತ್ತಿಸಿ,
ನಾಸಿಕಕ್ಕಿಟ್ಟರು ಹರಳಿನ ಬೊಟ್ಟು.
ಹಸ್ತ ತುಂಬಿತು ರಂಗೋಲಿ ರಂಗಲಿ
ಸೊಂಟ ಮಾಡಿತು ನಗ್ನ ನರ್ತನ.
ಮದುವಣಗಿತ್ತಿಯ ಮೆರವಣಿಗೆ 
ಸಾಗಿತು ಹತ್ತಿ ಮೆರೆಯಲು ಅಟ್ಟಣಿಗೆ

ಸಿಂಹ ರಾಶಿಯ ಗಂಡು,
ಮೀನಾ ರಾಶಿಯ ಮೇನಕೆಗೆ ಒಲಿದಿರಲು, 
ಒಡ್ಡೋಲಗದಿ ನೆರೆದರು ಬಂಧು ಬಾಂದವರು.
ಬಾಂಧವ್ಯದ ಬಂಧದಲಿ ಬಂಧನದ ಬಿಗುಮಾನ.
ಮಂತ್ರಾಕ್ಷತೆಯ ಮಂಪರಲಿ 
ಮಂಟಪವೂ ಸುಮುಹೂರ್ತಕೆ ಕಾದಿತು.
ಕುತ್ತಿಗೆಯು ಬಾಗಿತು ಹಾರದೇರಿಕೆಯಲಿ.

ದನುರ್ ಲಗ್ನದಲಿ ಕಂಕಣವು ಕೂಡಿತು.
ಸುಮಂಗಲಿಯಾದಳು ಕನ್ಯೆ, 
ಮುಗಿದಿರಲಿಲ್ಲ ಇನ್ನೂ ಸಪ್ತಪದಿ.. 
ಹೃದಯಾಗಾತಕ್ಕೆ ಸತ್ತ ಪತಿ. 
ಕೆನ್ನೆಯಾಗುಳಿ ಇನ್ನೂ ನಾಚುತಿರೆ
ವೈಭವದ ಮದುವೆಯಲಿ 
ವೈಧವ್ಯದ ಬಳುವಳಿ.

ಅಗ್ನಿ ಕುಂಡದ ಕಾವು ಹತ್ತಿ ಉರಿಯುತಲಿತ್ತು 
ಲಗ್ನದ ಲಾಸ್ಯವ ಭಗ್ನ ಬೂದಿಯ ಮಾಡಿ.
ಅರಸಿನ ಕುಂಕುಮ ಕರಿಮಣಿಯ ಬಾಲೆ,
ವಿಧಿ ತಂದ ವೈಧವ್ಯ ನಿನ್ನ ಕೊರಳ ಮಾಲೆ.

-ದಿಲೀಪ್ ಶೆಟ್ಟಿ.
ಚಿತ್ರ ಕೃಪೆ :ಅಂತರ್ಜಾಲ 

ಶುಕ್ರವಾರ, ಫೆಬ್ರವರಿ 10, 2012

ಪ್ರೀತಿ.. ಅನಂತ(ರ )..


ಗಳಿಗೆಗೊಂಬತ್ತು ಪದ,
ಮತ್ತೆ ನಗುವಿನ ಮೊಗ, 
ಅರೆ ಗಳಿಗೆ ಮೌನವ ಒಡ್ಡಿ 
ಕಣ್ಣ ಕೆಂಪಗೆ ಮಾಡಿ
ತಟ್ಟಿ ಆಡುವ ಸೊಗ.

ಬಟ್ಟ ಬಯಲಿನ ಸುತ್ತ 
ಅವಳ ನೆನಪಿನ ಚಿತ್ತ.
ಒಂಟಿ ನೆಪ, ಜಂಟಿಯಾಗುವ ಜಪ.

ಕುಣಿವ ನವಿಲು, ಕೂಗೊ ಕಾಗೆ
ಆಗೊಮ್ಮೆ ಈಗೊಮ್ಮೆ ಜ್ವಲಿಸೊ ರವಿ 
ಕಲ್ಬಂಡೆಯ ಮೇಲ್ ಕೆತ್ತಿದ ಪದ,
ನೆನಪಿನಂಬುದಿಯ ಕದಡುತಿದೆ.
ಕಣ್ಣ ಇಬ್ಬನಿಯು ಕರಗುತಿದೆ.

ಇಂದಿಗಿಪ್ಪತ್ತು ಮಾಸ
ಒಲವು ಸಮಾದಿಯ ವಾಸ.
ನಿನ್ನ ನೆನಪಿನ ಪಟ
ಸೂತ್ರ ಕಿತ್ತ ಗಾಳಿಪಟ.
ಭರವಸೆಯ ಬಿರುಗಾಳಿಗೆ 
ಮತ್ತೆ  ಧೂಳಿಪಟ.
ವರ್ತಮಾನದ ಪುಟದಿ 
ಮತ್ತೆ ನೋವಿನ ಪಾಠ.

-ದಿಲೀಪ್ ಶೆಟ್ಟಿ.

ಚಿತ್ರ ಕೃಪೆ: ಅಂತರ್ಜಾಲ 

ಬುಧವಾರ, ಫೆಬ್ರವರಿ 8, 2012

ಫಾರ್ ಸೇಲ್..


ಕೊಳ್ಳುವರಿದ್ದರೆ ಕೇಳಿರಿ,
ನನ್ನೆದೆ ಸೇಲಿಗಿದೆ..
ಒಳ್ಳೆಯ ರೇಟಿಗೆ, ಸುಳ್ಳು ತೀಟೆಗೆ 
ಮುರಿದ ಮನಸಿನ ದುಗುಡದೆಟಿಗೆ
ಭಗ್ನ ಪ್ರೀತಿಯ ಮರೆಯೋ ಮಾತಿಗೆ
ಮತ್ತೆ, ಕಲ್ಮಶ ಪ್ರೀತಿ ಭೇಟೆಗೆ..
ಕೊಳ್ಳುವರಿದ್ದರೆ ಕೇಳಿರಿ,
ನನ್ನೆದೆ ಸೇಲಿಗಿದೆ..

ಮುರಿದಿದೆ ಸ್ವಲ್ಪ , ಮರೆತಿದೆ ಅಲ್ಪ
ಸಿಗುವುದೆ ಜಗದಲಿ ಇಲ್ಲದೆ ಲೋಪ??
ಹಿಡಿ ಪ್ರೀತಿ, ಚಿಟಿಕೆ ಸಾಂತ್ವನ
ಎದೆಯ ಬಳ್ಳಿಗೆ ಅನುಕಂಪದ ಸಿಂಚನ,
ಇಷ್ಟೆ ಇದರ ನಿರ್ವಹಣಾ ದರ.
ಮೈಲಿಗೊಂದಿಷ್ಟು ಪ್ರೀತಿ
ಮೈಲೆಜಿಗಿಲ್ಲ ಪಚಿತಿ.

ಹತಾಶೆಯ ಕತ್ತಿಯಲಿ ಕೊಚ್ಚಿ,
ವೈಪಲ್ಯದ ಬಾಣಲೆಗೆ ನೂಕಿ,
ಬಲವಂತದ ಪ್ರೀತಿಯ ಮಳೆಯಲಿ ನೆನೆಸಿ 
ಸುಮ್ಮನಿದ್ದು ಬಿಡುವುದು.
ನೀವಾಡಿಸಿದಂತೆ ಆಡುವುದು.
ಒಳ್ಳೆಯ ರೇಟಿಗೆ, ಸುಳ್ಳು ತೀಟೆಗೆ 
ಕೊಳ್ಳುವರಿದ್ದರೆ ಕೇಳಿರಿ,
ನನ್ನೆದೆ ಸೇಲಿಗಿದೆ..
       -ದಿಲೀಪ್ ಶೆಟ್ಟಿ

ಚಿತ್ರ ಕೃಪೆ : ಅಂತರ್ಜಾಲ 

ಮಂಗಳವಾರ, ಫೆಬ್ರವರಿ 7, 2012

ಎಲ್ಲೆ ಮೀರಿ..


ಹೆಬ್ಬುಲಿಯ ಅಬ್ಬರದಿ 
ಹೆಬ್ಬಂಡೆಯ ಏರಿ,
ಹಬ್ಬಿದ ಅಹಂಕಾರದ ಅಹಂ 
ಕಳಚಿ ಹಾಕಿ,
ಬೆತ್ತಲೆಯ ಬಾನೊಳಗೆ 
ಬಚ್ಚಿಟ್ಟು,
ಚಿತ್ತ ಚಂಚಲೆಗೆ  ಕಸಿ ಕೊಟ್ಟು, 
ಅತಿಮಾನುಷದರ್ಶನದಿಂದೆದ್ದು 
ಸತ್ವ ಸೊರಗಿದ ಸೊಕ್ಕಿನ ಹಿರಿ ಕಿಂಡಿಗಳ 
ಪೊರೆ ಮುಚ್ಚಿ ,
ಮತ್ತೆ ಉಜ್ಜಿವಿಸಿ, ಉಜ್ವಲಿಸುವಾಸೆ.
ಅಭಿಭವದ ತೊಳಲಾಟಕ್ಕೆ 
ಭಕ್ತಿ ಭ್ರುಮರವ ಹುಡುಕಿ
ಸಂತೃಪ್ತಿಯ ಮಧು ಹೀರುವ ಆಸೆ.

         -ದಿಲೀಪ್ ಶೆಟ್ಟಿ

ಚಿತ್ರ ಕೃಪೆ: ಅಂತರ್ಜಾಲ