ಕನ್ನಡ ಕಲಿಯಿರಿ. ನಿಮ್ಮ ಅನಿಸಿಕೆಯನ್ನು ಕನ್ನಡದಲ್ಲಿ ನೀಡಿರಿ.


Type in English. Press Space to get it in ಕನ್ನಡ ಲಿಪಿ Press Ctrl+g to toggle between English and Kannada

ಸೋಮವಾರ, ಆಗಸ್ಟ್ 29, 2011

ಮತ್ತದೇ ಬೇಸರ...


     ಮತ್ತದೇ ಬೇಸರ....
      ನೆನಪಿನಂಬುದಿಯಲಿ ಎಷ್ಟೇ ಸಲ  ನೆನೆದೆದ್ದರು ಪ್ರತಿ ಭಾರಿಯೂ ನಿನ್ನದೇ ನೆನಪು, ನಿನ್ನದೇ ಒಲವು, ನಿನ್ನದೆನ್ನುವುದು ನನ್ನದೆನ್ನುವ ಖುಷಿ, ಹಿತ, ಸ್ತಿಮಿತ. ಮನಸ ಮಾನಸದೊಳಗೆ ಮಿಡುಕಿ ಮರೆಯಾಗೋ ನಿನ್ನ ಬಿಂಬವ ಹುಡುಕ ಹೊರಟಾಗಲೆಲ್ಲ ಮಿನುಗೋ ನಿನ್ನ ಕಣ್ಣ ಕೋಲ್ಮಿಂಚು ನನ್ನೆದೆಯ ಕದ ತೆಗೆದು ಕಥೆ ಕಟ್ಟಿ ಕೊನೆಗೊಮ್ಮೆ ಎದೆಯ ಮೆಟ್ಟಿ ಘಾಸಿ ಗೊಳಿಸಿ ಬಿಸಿ ನೀರ ಆವಿಯಂತೆ ಮಾಯಾವಾಗುವುದುಂಟು. ನಿನ್ನೊಡನಿದ್ದ ಪ್ರತಿ ಗಳಿಗೆ ಪಂಚಾಮೃತ. ನಿನ್ನ ದನಿ, ಮುಂಗೋಪ, ತುಂಟತನ, ಗುಳಿ ಬೀಳೊ ಗಲ್ಲ ವರ್ಣಿಸಲಸದವಳ. ಪ್ರತಿ ನೆನಪಿನ ಜೊತೆ ಬರುವ ನಿನ್ನ ಆ ನಗು ಮರುಭೂಮಿಯಲಿ ದುಮ್ಮಿಕ್ಕೋ ನೀರ ದಿಬ್ಬದಂತೆ ಮನ-ಮಾನಸಕ್ಕೆ  ಚೈತನ್ಯ ದೀವಿಗೆ.

      ಸಮುದ್ರದ ದಡದ ಗಾಳಿ ಗೋಪುರದಲಿ ಮರಿ ಬೆಕ್ಕಿಗಾಗಿ ಗೋಳಿಟ್ಟು ಅತ್ತಿದ್ದು  ಇನ್ನು ಹಾಗೆ ಅಕ್ಷಿಪಟಲದ ಮುಂದೆ ಅಚ್ಚಳಿಯದೆ ಕೂತಿದೆ. ಅಂದು ತರಕಾರಿ ಮಾರುವವಳ ಜೊತೆ ಒಂದು ರೂಪಾಯಿಗೆ ಅರ್ದ ಗಂಟೆ ಜಗಳವಾಡಿದ್ದನ್ನು ನೆನಪಿಸಿಕೊಂಡರೆ ಮುಗ್ದ ಮನಸಿನ ತುಂಟಿ ಇವಳೆಯ ಎನ್ನುವಷ್ಟು ಆಶ್ಚರ್ಯವಾಗುತ್ತದೆ. ಬಲ್ಲೆ ನಿನ್ನ  ಮನಸನ್ನ ಎಂದು ಬರಿದೆ ಜಂಬ ಕೊಚ್ಚುತ್ತಿದ್ದೆ. ಹೆಣ್ಣ ಮನಸದು ಸಮುದ್ರ,  ಒಮ್ಮೆ ಸುನಾಮಿ ಮತ್ತೆ ತಂಗಾಳಿ. ಏರಿಳಿತಗಳ ಲೆಕ್ಕ ಅವಳಿಗೂ ಸಿಗದು. ಮಕ್ಕಳೊಂದಿಗೆ ಮಗುವಾಗಿ, ಸಕ್ಕರೆಯ ಮಾತಾಡಿ ಎಲ್ಲರನು ತನ್ನೆಡೆಗೆಳೆವ ಅಯಸ್ಕಾಂತ ಅವಳು. ಅಂದು ಜಾತ್ರೆಯ ದಿನ ಜಗುಲಿಯ ಪಕ್ಕ ನನ್ನ ನೋಡಿ ನಗುವ ಚೆಲ್ಲಿ ಹೋಗದಿರೆ ಇಂದು ನನ್ನೆದೆಯ ತೇರಲಿ ನಿನ್ನ  ಕುಳ್ಳಿರಿಸಿ ನನ್ನ ನೋಡುವ ನಾನು ನಂದಿ ಹೋಗಿರುತ್ತಿದ್ದೇನೆನೋ. ನಿನ್ನ ಕಣ್ಣ ಭಾಷೆ ಸಣ್ಣದೊಂದು ಬರವಸೆಯ ಕೊಂಡಿ ಕೊಟ್ಟು ನೊಂದ ಜೀವದ ಜೊತೆ ಜಂಟಿಯಾಗುವ ಆಣೆ ಮಾಡಿತು.

      ಜಡಿ ಮಳೆಯಲಿ ಎದೆ ಕೊಡವಿ ಮರುಗುವ ವೇಳೆ ನೀನಲ್ಲದಿರೆ ಮಳೆ ನೀರಲೂ ಕಣ್ಣ ಹನಿಯನು, ವದ್ದೆ ಕೆನ್ನೆಯನು ವರೆಸಿ , ನೇವರಿಸಿ ಮುತ್ತ ಮಳೆಯ ಚೆಲ್ಲುವವರಾರು?. ನೀನಿಲ್ಲದಿರೆ  ಅರ್ಧ ರಾತ್ರಿಯಲಿ ನಿದ್ದೆ ಬಾಗಿಲಲಿ ಬಂದು ಗುದ್ದಿ ಜಗಳವ ಮಾಡುವವರಾರು? ನೀನಿಲ್ಲದಿರೆ  ಸಂಜೆ ಕರಗುವ ವೇಳೆ ಮೆತ್ತಗೆ ಮುತ್ತನು ಕೊಟ್ಟು 'ಛೀ ತುಂಟ' ಎನ್ನುತ ಅಡವಿಕೊಳ್ಳುವರಾರು? ನೀನಿಲ್ಲದಿರೆ ಕಷ್ಟದ ಬಿಸಿ ಬಾಣಲೆಯಲಿ ಬೆಂದು ಬಾಡುವಾಗ ಕೈಯ ನೀಡಿ ಮೇಲೆತ್ತುವವರರಾರು? ನನ್ನ ನಿನ್ನೆಯ ತುಂಬಾ ನಿನ್ನ ನಗುವಿನ ಬಿಂಬ. ನಿನಪಿನ ಹೊತ್ತಿಗೆಯ ತುಂಬಾ ಬಣ್ಣ ಬಣ್ಣದ ಕವನ-ಕದನ. ಮೊಗಕ್ಕೊಂದು ಮಂದಹಾಸ, ಕಣ್ಣಿಗೊಂದು ತಿಳಿ ತಂಪು. ನಿನ್ನೆಯ ಒಳಗೆ ಬೀಗ ಜಡಿದು ಕೀಲಿ ಕೈ ಮರೆತು ಇದ್ದು ಬಿಡುವ ಆಸೆ. ನನ್ನ ನಿನ್ನೆಯಲ್ಲಿ ನೆಮ್ಮದಿ ಇದೆ, ಕನಸಿದೆ, ಎಲ್ಲದಕ್ಕಿಂತ ಹೆಚ್ಚಾಗಿ ನೀನಿರುವೆ. ವಾಸ್ತವಕ್ಕೆ  ಇಳಿದಾಗ ಮತ್ತದೇ ಬೇಸರ, ಅದೆ ಸಂಜೆ, ಅದೆ ಏಕಾಂತ....


-ದಿಲೀಪ್ ಶೆಟ್ಟಿ 

ಗೆಳತಿ

ಮೆಲ್ಲುಸಿರು ನಿನ್ನುಸಿರಿಗೆ ತಾಕದಿರೆ,
ಚಂದ್ರ ನಕ್ಷತ್ರದ ಜೊತೆ ನೀ ನಿಲ್ಲದಿರೆ,
ದಣಿದ ಮನಸಿನ ದುಗುಡವ ನಿನ್ನೆಡೆ ಹೇಳದಿರೆ,
ಕೆನ್ನೆಗೆ ಮುತ್ತಿಕ್ಕುವ ಕೂದಲೆಳೆಯ ನೇವರಿಸದಿರೆ,
ಹಿಡಿ ನಗುವಿನೌತಣದಿ ತೃಷೆಯ ನೀಗಿಸದಿರೆ,
ತುಟಿಗೊಂದು, ಗಲ್ಲಕೊಂದು, ಹಣೆಗೊoದು ಮುತ್ತ ಪೋಣಿಸದಿರೆ,
ಗೆಳತಿ, ಸಂಜೆ ಕತ್ತಲಲಿ ಏಕಾಂಗಿ ನಾನು.

ಮನಸು ನನ್ನದು, ಮನವು ನಿನ್ನದು,
ಮದುರ ಭಾವನೆ ಬೆರೆತು ನಮ್ಮೊಳು
ಮರೆತು ಜಗವನು, ಮೆರೆವ ಮರೆಯೊಳು.
ಮರುಗುತಿಹೆನು ಮರೆಯಲಾರದೆ,
ಮರೆವ ಮಾತದು ಮರುಗಿ ಹೋಗಿದೆ.
ಮೂಳೆ ಮಾಂಸಕೆ ಮತ್ತೆ ಮತ್ತನು
ಮೆತ್ತಿ, ಮುತ್ತಿ, ದಿವ್ಯ ಶಕ್ತಿಯ ನೀಡು.
ಗೆಳತಿ, ಸಂಜೆ ಕತ್ತಲಲಿ ಏಕಾಂಗಿ ನಾನು.

ಮನ್ನಿಸಿಬಿಡು ಒಂದು ಸಲ, ಕೊನೆಯ ಸಲ,
ಕೆಟ್ಟ ಗಳಿಗೆ, ಕೆಟ್ಟು ಕೂತಿಹೆ,
ಬಿಟ್ಟು ಬಿಡು, ಬೆಟ್ಟು ಮಾಡಿ ತೋರಿಸಬೇಡ,
ತಪ್ಪು ನನ್ನದೇ, ತೆಪ್ಪಗಿರದೆ ತಪ್ಪಮಾಡಿದೆ.
ಒಪ್ಪಿಕೊಂಡರೂ, ಅಪ್ಪಬರದೇ,
ಕಾಡುತಿಹುದು ಒಂಟಿ ಬಾಳು,
ಗೆಳತಿ, ಸಂಜೆ ಕತ್ತಲಲಿ ಏಕಾಂಗಿ ನಾನು.

-ದಿಲೀಪ್ ಶೆಟ್ಟಿ.