ಕನ್ನಡ ಕಲಿಯಿರಿ. ನಿಮ್ಮ ಅನಿಸಿಕೆಯನ್ನು ಕನ್ನಡದಲ್ಲಿ ನೀಡಿರಿ.


Type in English. Press Space to get it in ಕನ್ನಡ ಲಿಪಿ Press Ctrl+g to toggle between English and Kannada

ಸೋಮವಾರ, ನವೆಂಬರ್ 28, 2011

ದೊಡ್ಡವರಾಗ್ಬಿಟ್ವಲ್ರೊ.....??????


       ನನಗಿನ್ನು  ನೆನಪಿದೆ, ಪದೆ ಪದೆ ಕೆಸರು ಗದ್ದೆಯಲ್ಲಿ ಬಿದ್ದು ಹೊರಳಾಡಿ ಮನೆಗೆ ಬಂದು ಅಪ್ಪನ ಚಡಿಯೇಟು ತಿಂದು, ಬಿಸಿನೀರ ಬಿಸಿಯಲ್ಲಿ ಅಮ್ಮನ ಜೊತೆ ಆಟವಾಡಿದ ಆ ದಿನ. ತಿನ್ನುತ್ತಿದ್ದ ತಿಂಡಿಯನ್ನು ನಾಯಿ ಕಚ್ಚಿಕೊಂಡು ಹೋದಾಗ ಅದನ್ನಟ್ಟಿಸಿ ಹೋಗಿ ಅದರ ಬಾಯಿಂದ ಕಸಿದು ತಿಂದ ಆ ದಿನ. ದೊಡ್ದವರಾಡುವಾಗ ನನ್ನ ಸೇರಿಸಿಕೊಳ್ಳದೆ ನಿರ್ಲಕ್ಷಿಸಿದಾಗ ಬೌಂಡರಿಗೆ ಹೋದ ಚೆಂಡನ್ನು ಯಾರು ಕಾಣದಂತೆ ಬಾವಿಗೆ ಹಾಕಿದ ಆ ದಿನ. ಪಕ್ಕದ ಮನೆಯ ಅಜ್ಜಿ ಹಪ್ಪಳವ ಬಿಸಿಲಿಗೆ ಒಣಗಲು ಇಟ್ಟಾಗ ಕದಿಯಲು ಹೋಗಿ, ಸಿಕ್ಕಿ ಬಿದ್ದು, ಅಜ್ಜಿ ಕಿವಿ ಹಿಂಡಲು ಬಂದಾಗ ಅತ್ತಂತೆ ಮಾಡಿ ಅಜ್ಜಿಯ ಕೈಯಿಂದಲೆ ಹಪ್ಪಳ ಗಿಟ್ಟಿಸಿಕೊಂಡ ಆ ದಿನ. ಸೈಕಲ್ ಟಯರನ್ನ ಜೋರಾಗಿ ಓಡಿಸಿಕೊಂಡು ಬರುವಾಗ ಪಕ್ಕದ ಬೀದಿಯ ಸತೀಶ ಸೈಕಲ್ ಓಡಿಸಿಕೊಂಡು ಬಂದು "ಏನೊ ಕುಳ್ಳ.. ನಿಂಗೆ ಇದೆ ಸರಿ.." ಎನ್ನುತ್ತಾ ತಲೆ ಮೇಲೆ ಹೊಡೆದು ಹೋದಾಗ "ನಾನು ದೊಡ್ಡವನಾದ ಮೇಲೆ ದೊಡ್ಡ ಸೈಕಲ್ ತಗೊಂಡು ಇವನ ತಲೆ ಮೇಲೆ ಹೊಡಿತೀನಿ.." ಎಂದು ಮನಸ್ಸಲ್ಲೆ ಅಂದುಕೊಂಡ ಆ ದಿನ. ದೊಡ್ಡವರೆಲ್ಲ ಕಿಸೆಯಿಂದ ದುಡ್ಡು ತೆಗೆದು ಐಸ್ ಕ್ರೀಂ ತಿನ್ನುವಾಗ ನಾಲಿಗೆ ಚಪ್ಪರಿಸುತ್ತ ಅವರನ್ನೆ ನೋಡುತ್ತಾ, ಕಿಸೆ ಇಲ್ಲದ, ಕುಂಡಿ ತೋರುವ ಚಡ್ಡಿ ಎಳೆದು ಕೊಳ್ಳುತ್ತಾ ಯಾರಾದರು ನನಗೂ ಕೊಡಿಸಬಹುದು ಎಂಬ ಆಸೆಯಿಂದ ಐಸ್ ಕ್ರೀಂ  ಡಬ್ಬಿಯ ಬಳಿಯೆ ನಿಂತು, ಯಾರು ಕೊಡಿಸದಿದ್ದಾಗ ಮನೆಗೆ ಓಡಿ ಹೋಗಿ ಅಪ್ಪನ ಕಿಸೆಯಿಂದ ಒಂದು ರುಪಾಯಿ ಕದ್ದು ತಂದು ರಾಜ ರೋಷವಾಗಿ ತಿಂದ ಆ ದಿನ. ಪಕ್ಕದ ಮನೆಯಲ್ಲಿ ಮದುವೆಗೆ ಹೊಸ ಬಟ್ಟೆ ಹಾಕಿಕೊಂಡು ಹೋಗುವಾಗ ಅಮ್ಮನ ಹರಿದ ಸೀರೆ ನೋಡಿ "ನಾನು ದೊಡ್ಡವನಾದ ಮೇಲೆ ಅದಕ್ಕಿಂತ ಚೆಂದದ ಸೀರೆ ಕೊಡಿಸುತ್ತೇನೆ.." ಅಂದ ಆ ದಿನ. ಶಾಲೆಯಲ್ಲಿ ಮೇಷ್ಟ್ರು ಹೊಡೆದಾಗ ಅವರ ಸೈಕಲ್ ಪಂಚರ್ ಮಾಡಿ, ಮತ್ತೆ ಸಿಕ್ಕಿ ಬಿದ್ದು ಹುಣಸೆ ಮರದ ಉದ್ದನೆಯ ದಂಟಿನಿಂದ ಹೊಡೆಸಿಕೊಳ್ಳುವಾಗ "ನಾನು ದೊಡ್ಡವನಾದ ಮೇಲೆ ಹೀಗೆ ನಿಮಗೂ ಹೊಡಿತೀನಿ.." ಅಂದು ಕೊಂಡ ಆ ದಿನ. 


       ಬಾಲ್ಯದ ವಯಸ್ಸು ಎಷ್ಟೆ ಇರಲಿ, ಪ್ರೌಢರಾಗುವ ವರೆಗೂ ಕಾಡುವ ಒಂದೇ ಪ್ರಶ್ನೆ "ನಾನು ದೊಡ್ದವನಾಗೊದು ಯಾವಾಗ..?". ನಾನು ಸಂಪಾದಿಸಿ ನನ್ನ ದುಡ್ಡಲ್ಲಿ ಬೇರೆಯವರು ಹೊಟ್ಟೆಯುರಿ ಪಡುವ ಹಾಗೆ ಬದುಕಿ, ಚಿಕ್ಕವನಿದ್ದಾಗ ಹೀಯಾಳಿಸಿದ, ಗೇಲಿ ಮಾಡಿದ ಎಲ್ಲರಿಗು ಬುದ್ದಿ ಕಲಿಸಬೇಕು ಅಂದು ಕೊಳ್ಳುವಾಗೆಲ್ಲ ಗಡಿಯಾರದ ಮುಳ್ಳು ಹೆಬ್ಬಂಡೆ ಹೊತ್ತು ಚಲಿಸುವಂತೆ ಕಾಣುತ್ತಿತ್ತು. ದೊಡ್ಡವರಿಗೆ ಎಲ್ಲ ಸುಖ, ನಮಗೆ ಬರಿ ಪರೀಕ್ಷೆ ಎಂಬ ಸಜೆ. ತಿಂಗಳಿಗೆ ಒಂದೊಂದು ಸಾಲದೆನ್ನುವಂತೆ ಮದ್ಯ ವಾರ್ಷಿಕ , ಮತ್ತೆ ಕೊನೆಗೆ ವಾರ್ಷಿಕ, ಬೆಂದ ಅನ್ನಕ್ಕೆ ವಗ್ಗರಣೆ ಕೊಟ್ಟ ಹಾಗೆ. ಅಯ್ಯೊ ಯಾಕಪ್ಪ ಈ ಪರೀಕ್ಷೆ ಬರುತ್ತೆ???, ಯಾಕಾದ್ರೂ ನಾನು ದೊಡ್ಡವನಾಗಿ ಹುಟ್ಟಲಿಲ್ಲ ಅಂದುಕೊಳ್ಳುವ ಬೇಸತ್ತ ಮನಸ್ಸು.  ಬದುಕಿನ ಪುಟ ತಿರುವಿದಾಗೆಲ್ಲ ಇಂತಹ ಸಣ್ಣ ಸಣ್ಣ ಸಿಹಿ ನಿರಾಶೆಗಳೇ ಹೆಚ್ಚು. ಎಲ್ಲಕ್ಕೂ ಉತ್ತರ  ದೊಡ್ದವನಾಗೋ ಕಾತರ, ಆತುರ. ಪ್ರತಿ ನೆನಪಿನಲಿ ಆತುರವಿದೆ, ಆಡಂಬರ ಇಲ್ಲ. ಪ್ರತಿ ಕನಸಿನಲಿ ಮುನಿಸಿದೆ, ಮತ್ಸರ ಇಲ್ಲ. ಪ್ರತಿ ನಿನ್ನೆಯಲಿ ನಾನಿದ್ದೆ, ನಾಳೆಯ ಗುರಿ ಇತ್ತು, ಆದರೆ ಇಂದು ಏನಿದೆ? ನೆನಪ ಮೂಟೆಯ ಬಿಟ್ಟರೆ ನಗುವ ಕಾರಣ ಹುಡುಕುತ್ತ, ಜವಾಬ್ದಾರಿಯ ನೊಗ ಹೊರಲಾರದೆ, ಹೆಣಗಾಡುವ ಪ್ರಬುದ್ದರು. ಬುದ್ದಿ ಬೆಳೆ ಬೆಳೆಯುತ್ತಿದ್ದಂತೆ  ಮನುಷ್ಯತ್ವದ ಬೆಲೆ ಬದಲಾಗಿ ಯಾಂತ್ರಿಕ ಬದುಕಿನಲ್ಲಿ  ಸ್ವಂತಿಕೆ ಮಾಯವಾಗಿ ಮಾಂತ್ರಿಕನ ಕೈವಶಕ್ಕಾಡುವ ಗೊಂಬೆಗಳಾತ್ತೇವೆ. ತಿನ್ನೋ ಅನ್ನದಿಂದ ಹಿಡಿದು ಮುಖಕ್ಕಂಟಿದ ನಗುವೂ ಕಲುಷಿತ. ಪ್ರೀತಿ, ವ್ಯಾಪಾರದ ವಸ್ತು. ಭಾವನೆ, ಬಣ್ಣ ತೆಗೆದ ತಿಳಿ ನೀಲಿ ನಭ. ಸಂಬಂಧ, ದಿನ ಉದಯಿಸುವ ದಿನಕರನ ಚಾಳಿ. ನೆರೆಮನೆಯವನ ನೆರಳು ಕರಿ ಮೋಡ, ಅಂತರ್ಜಾಲದ ಗೆಳೆಯ ದೇವದೂತ. ವಯಸ್ಸಿಗಂಟಿಕೊಂಡ ಜಾಡ್ಯ, ದೊಡ್ಡವರ ವರ್ತಮಾನದ ವರ್ತನೆ.            ಆಸೆಯ ಆಮಂತ್ರಣಕ್ಕೆ ಕಟ್ಟಿಬಿದ್ದು ನಿರಾಶೆಯ ಮಳೆಯಲ್ಲಿ ತೊಯ್ದ ಹತಾಶ ಭಾವ. ಪ್ಯಾಂಟಿನ ಜೇಬಿನೊಳಗೆ ಕೈಬಿಟ್ಟಾಗೆಲ್ಲ ಸಿಗುವ ಗರಿ ಗರಿ ನೋಟುಗಳು ಗೆಳೆತನ ಪ್ರೀತಿ ವಾತ್ಸಲ್ಯಕ್ಕೆ ಕಟ್ಟಿದ ಬೆಲೆ ಎಂಬಂತೆ ಲೇವಡಿ ಮಾಡಿ ಆಡಿಕೊಳ್ಳುತ್ತವೆ, ಹಾಡಿ ಕೊಲ್ಲುತ್ತವೆ. ಬೀದಿ ಬದಿ, ಜಗತ್ತಿನ ಹಂಗಿಲ್ಲದೆ ಮಕ್ಕಳಾಡುವಾಗ ಮತ್ತೆ ಬಾಲ್ಯಕ್ಕಿಳಿದರೆ ಮನಸ್ಸಿನ ತುಮುಲ ವರ್ಣನಾತೀತ. ನಿನ್ನೆಯ ಗುಂಗಿಲ್ಲ, ನಾಳೆಯ ಹಂಗಿಲ್ಲ, ಬೇದ ಭಾವವ ನುಂಗಿಲ್ಲ. ಮನಸ್ಸು ಹೇಳಿದ ಕಡೆಗೆ ಮುಗಿಲು ಮುಟ್ಟುವ ವರೆಗೆ ಚಳಿ,ಮಳೆ ,ಗಾಳಿಯನ್ನು ಲೆಕ್ಕಿಸದೆ ಮುನ್ನುಗ್ಗುವ ಆತ್ಮಸ್ತೈರ್ಯಕ್ಕೆನು ಹೇಳಲಿ?.  ದೊಡ್ದವರಾಗುತ್ತಿದ್ದಂತೆ  ಕಲ್ಮಶವಿಲ್ಲದ ಮನಸ್ಸಿನ ತುಂಬಾ ತುಂಬುವ ಸ್ವಾರ್ಥದ ಪಾಯಿಖಾನೆಯ ನೀರು ಶುದ್ದವಾಗದೆ, ಇಡಿ ಶರೀರವನ್ನೇ ಜರ್ಜರಿತ ಗೊಳಿಸಿ ಅಹಂ ಭಾವವ ಬೆಳೆಸಿ ಕೊನೆಗುಳಿಸುವುದಾದರು ಏನು?? ದಿನಕ್ಕೆ ನಾಲ್ಕು ಬಿ. ಪಿ. ಮಾತ್ರೆ, ಸಕ್ಕರೆ ಕಾಣದ ಕಾಫಿ, ಮಾಡಲೇ ಬೇಕಾದ ವ್ಯಾಯಾಮ ಬಿಟ್ಟರೆ ಕಾಡುವ ಅಪರಾದಿ ಮನೋಭಾವ . ಕಣ್ಣ ಮುಚ್ಚಿ ರೆಪ್ಪೆ ತೆಗೆಯುವುದರೊಳಗೆ ಬಾಲ್ಯ ಬಾಲ ಮುದುರಿಕೊಂಡು  ಬಾಳಲು ಕಲಿತಿರುತ್ತದೆ. ಆಗೆಲ್ಲ ಮನಸ್ಸಿನ್ನ ಪಟಲದಲ್ಲನಿಸುವುದು "ಅಯ್ಯೋ ದೊಡ್ಡವರಾಗ್ಬಿಟ್ವಲ್ರೊ.............????????????????"

-ದಿಲೀಪ್ ಶೆಟ್ಟಿ 
( ಚಿತ್ರ ಕೃಪೆ : ಅಂತರ್ಜಾಲ )

ಗುರುವಾರ, ನವೆಂಬರ್ 10, 2011

ಗಗನ ಕುಸುಮ


ಕಾಡ ಬೇಡ  ಮತ್ತೆ ಮತ್ತೆ
ಕಟ್ಟ ಹೊರಟಿಹೆ ಹೊಸ ಕನಸ ಕೋಟೆಯ.
ನಿನ್ನ ನೆನಪಿನ ಮುಳ್ಳ ತೆಗೆದು,
ಪ್ರೀತಿ ಬಿಗಿದು, ಕಟ್ಟಿ ಕಣ್ಣಿರ ಕಟ್ಟೆಯ.

ಹಾತೊರೆದ ಜೀವವ ನೀ ತೊರೆದು 
ಬಿಟ್ಟರೆ,
ಮಾತಿರದೆ ಮೌನವು ಕಾತುರದಿ 
ಕಾದಿರಲು,
ಹಂಬಲಿಸಿ ಹಲುಬುವ ಹುಂಬ ಹಸುಳೆಯ 
ಹಿಂಡಿ  ಹೋದೆಯಾ.

ಎಣ್ಣೆ ಬಾಣಲೆಗೆ ಬಿದ್ದ ಮಿಂಚು ಹುಳು 
ನಾನು.
ಹೆಣ್ಣೇ, ಬಾಳಲು ಬಿಡದೆ ಹಾಳು ಮಾಡಿದೆ 
ನೀನು.
ನನ್ನ ತನು ನಿನ್ನೋಡವೆ, ನಿನ್ನ ತನ ನನ್ನೊಡಲು
ಎನ್ನುತಲಿ ಬಂದಡಗಿ ಚಿತ್ತ ಸ್ವಾಸ್ತ್ಯವ ಕದ್ದು,
ಗಗನಕುಸುಮವಾದೆಯಾ??

ತಿರುಗೊ ಆಗಸದಾಚೆ
ಒರಗೊ ಹಾಸಿಗೆ ಹಾಸಿ
ಮರುಗೊ ನನ್ನನು ಬಿಟ್ಟು
ಕರಗಿ ಹೋದರೆ ಇನ್ನು
ಕೊರಗೊ ಮನಸದು ಎಂದೂ 
ಮಸಣದ ಮಣ್ಣು.

-ದಿಲೀಪ್ ಶೆಟ್ಟಿ.
(ಚಿತ್ರ ಕೃಪೆ : ಅಂತರ್ಜಾಲ )

ಶುಕ್ರವಾರ, ನವೆಂಬರ್ 4, 2011

ಸೋಂಬೇರಿ-ಸಾಂಬಾರು

ಸೋಂಬೇರಿ ಮನಸಿಗೆ 
ಸಾಂಬಾರು ಮಾಡುವ ಕನಸು.
ಸಾಮಾನು ತರಬೇಕು 
ಎಂಬುದೊಂದೇ  ಮುನಿಸು . 

ಹುಳಿ, ಉಪ್ಪು ಹಿಡಿ ಬೆಲ್ಲ
ಕರಿಬೇವು, ಕೊತ್ತಂಬರಿಯೂ ಇಲ್ಲ.
ಈರುಳ್ಳಿ ಬೆಳ್ಳುಳ್ಳಿ ಬೇಕೆಂದೆ ಇಲ್ಲ,
ಗ್ಯಾಸ್ ಅಂಗಡಿ ಫೋನ್ ನಂಬರ್
ಸೇವ್ ಮಾಡ್ಕೊಂಡೆ ಇಲ್ಲ. 

ಇರುವುದಿಷ್ಟೇ ನೋಡಿ.
ಒಂದು ತಾಟು, ಅರ್ದ ಟೊಮೇಟೊ
ನಾಲ್ಕು ಮೆಣಸಿನ ಕಾಯಿ,ಬೊಗಸೆ ಎಣ್ಣೆ
ಸ್ಟೌವ್ ತಳದಲ್ಲೊಂಚುರು ಸೀಮೆ ಎಣ್ಣೆ.
ಹುಡುಕಿದರೆ ಸಿಗ ಬಹುದು ಶುಂಟಿ.
ತಂದಿದ್ದು ನೆನಪಿದೆ ಮೊನ್ನೆ.

ಮನಸಿನ ಮಹರಾಜ,
ರಜೆ ಮಾಡು ಅಂತಾನೆ
ಸಾಂಬಾರು ಮಾಡೋರು 
ಹೆಣ್ಣ್ ಮಕ್ಳು ಅಂತಾನೆ 
ಹೊಸದೊಂದು ಹೋಟೆಲ್ಲು 
ರೆಡಿ ಆಯಿತು ನೋಡು
ಚೈನೀಸ್ಸು , ಕೋಳಿ ಪೀಸು 
ಹೊಗ್ ತಿನ್ನು ಅಂತಾನೆ.

ಮೂಡೊಂದು ಮೂಡಿತ್ತು ಹಾಳಾಗಿ ಹೋಗ್ಬಿಡ್ತು.
ಒಳ್ಳೆ ಟೈಮಲ್ಲಿ ಮತ್ತೆ ಕೈ ಕೊಟ್ಬಿಡ್ತು.
ಆದ್ರೂ..,ಸೋಂಬೇರಿ ಮನಸಿಗೆ 
ಸಾಂಬಾರು ಮಾಡುವ ಕನಸು.

ದಿಲೀಪ್ ಶೆಟ್ಟಿ.

(ಚಿತ್ರ ಕೃಪೆ : ಅಂತರ್ಜಾಲ)

ಮಂಗಳವಾರ, ನವೆಂಬರ್ 1, 2011

ನೀವು ನವೆಂಬೆರ್ ಕನ್ನಡಿಗರೇ???


        ಮತ್ತೆ ಬಂದಿತು ನವೆಂಬೆರ್ ೧. ಕರುನಾಡ ಬೀದಿ ಬೀದಿಗಳು ಮತ್ತೆ ಅರಶಿನ ಕುಂಕುಮ ತೊಟ್ಟು  ನೀಲ ನಭಕ್ಕೆ ಚಾಚಿ ವಿಜ್ರಂಬಿಸುತ್ತಿವೆ. ಎಲ್ಲೆಡೆ ಕನ್ನಡಮ್ಮನ ಭಾವ ಬಕುತಿಯ ಹೊಗಳಿ ಕನ್ನಡದ ಕಂಪನು ದೇಶದಾದ್ಯಂತ ಪಸರಿಸುತ್ತಿದ್ದಾರೆ. ಕನ್ನಡ ಕವಿಗಳ ಕವನದ ಕೋಮಲತೆ ಮತ್ತೆ ಕಣ್ಣಾಲಿಗೆಯಲಿ ಜಿನುಗುತಿದೆ. ಎಲ್ಲ ವಾಹನವು ಹಸಿರುಡುಗೆ ತೊಟ್ಟು ಹಳದಿ ಕೆಂಪಿನ ಬಾವುಟ ದರಿಸಿ ರಾರಾಜಿಸುತ್ತಿವೆ. ಎಲ್ಲರೊಂದುಗೂಡಿ ಕನ್ನಡದ ಸುನಾದವ ಕನ್ನಡೇತರರಿಗೆ ಉಣಬಡಿಸಲು ಯೋಧರಂತೆ ಸನ್ನದ್ದರಾಗಿದ್ದಾರೆ. ಕನ್ನಡ ನಾಡಿನಲ್ಲಿ ಜನಿಸಿದ್ದಕ್ಕೆ ಕನ್ನಡಕ್ಕೆ ಇಷ್ಟು ಮಾಡಿದರೆ ಸಾಕು ಬಿಡಿ. ಮತ್ತೆ ಮುಂದಿನ ವರ್ಷ ನೋಡಿದರಾಯಿತು. ಇಷ್ಟೇ ಅಲ್ಲವೇ ನಮ್ಮ ಕನ್ನಡಾಭಿಮಾನ? ನಾವೇಕೆ ನವೆಂಬೆರ್ ಕನ್ನಡಿಗರಾಗಿದ್ದೇವೆ? ನವೆಂಬೆರ್ ತಿಂಗಳಲ್ಲಿ ಪರ ಭಾಷ ಚಿತ್ರದ ಬಿತ್ತಿಚಿತ್ರವನ್ನು ನೋಡಲಾಗದೆ ಹರಿದು ಹಾಕುವ ಭಾಷಾಭಿಮಾನಿಗಳಿಗೆ ಕನ್ನಡ ಚಿತ್ರವೇಕೆ ಹಿಡಿಸುವುದಿಲ್ಲ? ನಭಕಪ್ಪುವ ಕನ್ನಡ ಧ್ವಜ ಧರಿಸಿ ಓಡಾಡೋ ರಿಕ್ಷಾಗಳು, ಪ್ರಯಾಣಿಕರು ಕುಂತೊಡನೆ "ಕಿದರ್ ಜಾನಾ ಹೈ??" ಅನ್ನುವುದೇಕೆ?. ರಾಜ್ಯೋತ್ಸವ ಬಂದೊಡನೆ ನೆನಪಾಗೋ ಕವಿ ಪುಂಗವರು ತದ ನಂತರ ಹೇಳ ಹೆಸರಿಲ್ಲವಾಗುವುದೇಕೆ? ರಾಜ್ಯೋತ್ಸವ ಆಚರಿಸುವ ಪ್ರತಿಯೊಬ್ಬ ಕನ್ನಡಿಗ ಎಷ್ಟು ಕನ್ನಡ ಪುಸ್ತಕ ಕೊಂಡು ಓದಿದ್ದಾನೆ? ಕನ್ನಡಕ್ಕಾಗಿ ಬಾಳು ಸವೆಸಿದವರ ಬಗ್ಗೆ ಎಷ್ಟು ತಿಳಿದಿದ್ದಾನೆ?  ಆಂಗ್ಲ ಭಾಷಾ ಫಲಕವನ್ನು ಕಿತ್ತು ಹಾಕೋ ಕನ್ನಡಬಿಮಾನಿ ಎಷ್ಟರ ಮಟ್ಟಿಗೆ ಕನ್ನಡ ತಿಳಿದಿದ್ದಾನೆ?? ರಾಜ್ಯೋತ್ಸವ ಪ್ರಶಸ್ತಿ ನೀಡುವ ಸಾಹಿತಿಗಳ ಎಷ್ಟು ಕಥೆ-ಕವಿತೆ ಓದಿದ್ದಿರಿ?? ನೀವು, ನಿಮ್ಮೊಡಲ ಒಮ್ಮೆ ಕೇಳಿ ನೋಡಿ. ಆಡಂಬರದ, ತೋರಿಕೆಯ ಭಾಷಾಭಿಮಾನ ಬೇಕೆ? ಕನ್ನಡಮ್ಮನ, ಕರುನಾಡ ಏಳ್ಗೆ ಇದರಿಂದ ಎಷ್ಟಾದೀತು? ಕನ್ನಡಿಗರಿಗೆ ನವೆಂಬೆರ್ ನಲ್ಲಿ ಮಾತ್ರ ಯಾಕೆ ಭಾಷಾಭಿಮಾನ ಹೊರ ಹೊಮ್ಮುವುದು?? ಬರಿ ಪ್ರಶ್ನೆಗಳು, ಉತ್ತರಿಸಲಾಗದ, ಉತ್ತರ ಸಿಗದ, ಉತ್ತರ ಇಲ್ಲದ ಅನಂತಾನಂತ ಪ್ರಶ್ನೆಗಳು. ಓ ನಲ್ಮೆಯ ಕನ್ನಡಿಗರೇ ಯಾಕೆ ಹೀಗೆ? ನೀವೂ ಕೂಡ ನವೆಂಬರ್ ಕನ್ನಡಿಗರೇ??


        
            ಬೆಳೆಯುವ ಜಗತ್ತಿನ ಬೆಳವಣಿಗೆಗೆ ಅನುಗುಣವಾಗಿ ಕರುನಾಡು ಬೆಳೆಯಬೇಕು, ಬೆಳಗಬೇಕು.  ಬಳಸುವ ವಸ್ತು, ಭಾಷೆ, ಆಚರಣೆಗಳು ಬದಲಾಗುವುದು ಅನಿವಾರ್ಯ. ಅನಿವಾರ್ಯಕ್ಕೆ ವಗ್ಗಿ ಅನುಸರಿಸುವುದು ಅಷ್ಟೇ ಅನಿವಾರ್ಯ. ಅನಿವಾರ್ಯದ ಜೊತೆ ತನ್ನ ತನವನ್ನು, ತನ್ನ  ಭಾಷೆ, ಸಂಸ್ಕೃತಿಯನ್ನು ಬಳಸುವುದು, ಬೆಳೆಸುವುದು ಕೂಡ ಅಷ್ಟೇ ಅನಿವಾರ್ಯ ಹಾಗು ಕರ್ತವ್ಯ. ಇವುಗಳನ್ನು ಬದಿಗೊತ್ತಿ ನವೆಂಬೆರ್ ತಿಂಗಳಲ್ಲಿ ಕನ್ನಡ ನೆನಪು ಮಾಡಿಕೊಂಡು, ನಾನು ಕನ್ನಡಿಗ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂದು ಹೇಳಿದರೆ ಸಾಕೆ?. ಕನ್ನಡದ ಐತಿಹಾಸಿಕ ಪರಂಪರೆ ಉಳಿಸಿ ಬೆಳೆಸಬೇಕಾದರೆ ಕನ್ನಡ ಉಸಿರಾಗಬೇಕು. ಕನ್ನಡ ದಿನ ಬಳಕೆಯಾಗಬೇಕು. ಎಲ್ಲಿ ಅತ್ಯಗತ್ಯವಿದೆಯೋ ಅಲ್ಲಿ ಕನ್ನಡೇತರ ಭಾಷೆ ಉಪಯೋಗಿಸಬೇಕು. ಕನ್ನಡ ಸಾಹಿತಿಗಳ ಪುಸ್ತಕ ಕೊಂಡೊದಿ ಅವರನ್ನು ಪ್ರೋತ್ಸಾಹಿಸಿ ಕನ್ನಡದ ಗಂಧವ ಎಲ್ಲೆಡೆ ಪಸರಿಸಬೇಕು. ಕನ್ನಡ, ಸುಂದರವೆಂದರೆ ಸಾಲದು, ಸುಲಲಿತವಾಗಬೇಕು. ಎಳೆಯ ತಲೆಮಾರಿಗರಿಗೆ ಕರುನಾಡ ನಡೆ-ನುಡಿಯ ಬಗ್ಗೆ, ಅವುಗಳನ್ನು ರಕ್ಷಿಸಿ ಉತ್ತುಂಗಕ್ಕೆರಿಸುವ ಬಗ್ಗೆ ತಿಳಿ ಹೇಳಬೇಕು, ಮಾರ್ಗದರ್ಶನ ನೀಡಬೇಕು. ರಾಜ್ಯೋತ್ಸವವನ್ನು ಲೆಕ್ಕ ಇಟ್ಟು ಕೊಂಡರೆ ಸಾಲದು, ನಾವೇನು ಮಾಡಿದ್ದೇವೆ ಎಂಬುದನ್ನು ಲೆಕ್ಕ ಇಟ್ಟು ಕೊಳ್ಳಿ. ರಾಜ್ಯೋತ್ಸವ ಎಂದರೆ  ಕನ್ನಡ ಮಾತನಾಡುವ ದಿನ ಆಗಬಾರದು. ಕನ್ನಡ ತಿಳಿಯದವರಿಗೆ ಕಲಿಸುವ ದಿನವಾಗಬೇಕು. ಕನ್ನಡಕ್ಕಾಗಿ ಹೋರಾಡಲು ಕಂಕಣ ತೊಡುವ ದಿನವಾಗಬೇಕು. ಕನ್ನಡ ಡಿಂಡಿಮವ ಬಾರಿಸುವ ದಿನವಾಗಬೇಕು. ಕರ್ನಾಟಕ ವೈವಿದ್ಯಮಯ ರಾಜ್ಯ. ಎಲ್ಲ ಭಾಷೆಯ, ಸಂಸ್ಕೃತಿಯ ಜನರನ್ನು ನಮ್ಮವರು ಎಂದೆಣಿಸುವ ವಿಶಾಲ ಮನೋಹೃದಯದ ಜನರಿರುವ ನಾಡು. ಅದಕ್ಕಾಗಿಯೇ ಇರಬೇಕು ಕನ್ನಡ ಕಲಿಸುವ ಬದಲು ಪರಭಾಷೆಯನ್ನು ನಾವು ಕಲಿಯುತ್ತಿದ್ದೇವೆ. ಎಲ್ಲ ಭಾಷೆಯನ್ನು ಗೌರವಿಸಿ, ಕನ್ನಡವನ್ನು ಪ್ರೀತಿಸಿ.ಒಬ್ಬ ಕನ್ನಡಿಗನಾಗಿ ಕರುನಾಡಿಗೆ ಮಾಡಬೇಕಾದದ್ದು ಇಷ್ಟೇ  ಕನ್ನಡವನ್ನು ದಿನ ಬಳಸಿ, ಬೆಳೆಸಿ, ಉಳಿಸಿ. ಕನ್ನಡ ರಾಜ್ಯೋತ್ಸವವನ್ನು ನಿತ್ಯೋತ್ಸವವಾಗಿಸಿ.ಕುವೆಂಪು ರವರ "ಭಾರಿಸು ಕನ್ನಡ ಡಿಂಡಿಮ.." ನಿಮ್ಮ ಗುರಿಯಾಗಿಸಿ.ಕನ್ನಡ ಉಳಿಸಿ ಬೆಳೆಸುವ ಮೊದಲು ಬಳಸಿ.

ಸಿರಿಗನ್ನಡಂ ಗೆಲ್ಗೆ , ಸಿರಿಗನ್ನಡಂ ಬಾಳ್ಗೆ.

-ದಿಲೀಪ್ ಶೆಟ್ಟಿ.