ಸಂತೆ ಕಂತೆಯ ಚಿಂತೆ
ಸಾಮಾನ್ಯನಿಗೆಕೆ?
ರೊಟ್ಟಿ ರೊಕ್ಕದ ರಗಳೆ
ಸಾಹುಕಾರನ ಬೊಗಳೆ
ಇಷ್ಟು ಬಿಟ್ಟರೆ ಕಂಕುಳಡಿಯ
ತಿಗಣೆ ಕಡಿತಕ್ಕೆ, ಕೆರೆಯುವ ಬವಣೆ.
ಮೊನ್ನೆ ರಾಜ್ಯೋತ್ಸವ
ಎಣ್ಣೆ, ಪಾಯಸ
ನಿನ್ನೆ ನವಮಿ,
ಪಾನಕ , ಪಂಚಾಮೃತ
ಮದುವೆ, ಮುಂಜಿ, ಸಮಾರಾಧನೆಯೆಂದರೋ
ಗಟ್ಟಿ ತೇಗಿನ ಮೃಷ್ಟಾನ್ನ ಬೋಜನ.
ಇಂದದೇ ತಂಗಳನ್ನ
ತಿಂಗಳ ಕೊನೆಗೆ
ನೀರೆ-ಅನ್ನ.
ಸಂಸಾರದ ಹಾದಿ ಹೆದ್ದಾರಿ,
ಸಂಪಾದನೆಯೋ ಕಾಲು ದಾರಿ.
ಸಂಗ ಸಂಸಾರಿ, ಅಂಗಾಂಗ ಸಂಹಾರಿ.
ಬೇಳೆ ಕಾಳಿಗೆ, ನಾಳೆ ಹಾಲಿಗೆ
ಮತ್ತೆ ಸ್ಕೂಲಿಗೆ , ಕೊಡದ ಬಾಡಿಗೆ
ಬಿಡದೆ ಓಡುವ ಬೆಲೆಯ ಬೇನೆಗೆ
ಕೊಟ್ಟರುಳಿವುದು ಬೆವರಿದ ನಾಲಿಗೆ.
ಕುರುಡು ಕಾಂಚಣ ಕೇಳಿರೋ ಅಣ್ಣ
ಬಡತನಕ್ಕೆ ಬಳಲಿ ಮಾಗಿದೆ ಬಣ್ಣ.
-ದಿಲೀಪ್ ಶೆಟ್ಟಿ.