ಅಂದು, ಕಣ್ಣು
ಮುಚ್ಚಿ ಕೂರಬಹುದಿತ್ತು,
ಹೌದು. ನನ್ನದೇ
ತಪ್ಪು.
ಕಪ್ಪು ಕನ್ನಡಕವಾದರೂ
ಹಾಕಬೇಕಿತ್ತು
ಹೌದು. ನನ್ನದೇ ತಪ್ಪು.
ಅತ್ತ ಕಡೆ ನೋಡಿಯೂ, ನೋಡಬಾರದಿತ್ತು,
ಹೌದು. ನನ್ನದೇ
ತಪ್ಪು.
ನೀಳ ಕೇಶ ಎದೆಯ ಸವರುವಾಗ ಹೇಳಬೇಕಿತ್ತು,
ಹೌದು. ನನ್ನದೇ
ತಪ್ಪು.
ನನ್ನ ನೋಡಿ
ಮುಗುಳ್ನಕ್ಕಾಗ , ನಗಬಾರದಿತ್ತು.
ಹೌದು. ನನ್ನದೇ
ತಪ್ಪು.
ಮನ ಪತಂಗವಾದಾಗ
, ಕಟ್ಟಿ ಹಾಕಬೇಕಿತ್ತು
ಹೌದು. ನನ್ನದೇ
ತಪ್ಪು.
ಹೃದಯದಬ್ಬರ
ಏರುವಾಗ, ಬುದ್ದಿ ಹೇಳಬೇಕಿತ್ತು.
ಹೌದು. ನನ್ನದೇ
ತಪ್ಪು.
ಚುಂಬಕವನಿತ್ತು
ಎದೆಯ ಕಸಿಯುವಾಗ, ಸುಮ್ಮನಿರಬಾರದಿತ್ತು.
ಹೌದು. ನನ್ನದೇ
ತಪ್ಪು.
ಎದೆಗೆ-ಎದೆಯ
ಅಂಟಿಸಿ, ಮೈ-ಮನವೆರಡು ಸಂದಿಸಿ-ಸ್ಪಂದಿಸುವಾಗ
ಸರಿದುಬಿಡಬೇಕಿತ್ತು.
ಹೌದು. ನನ್ನದೇ
ತಪ್ಪು.
ದಿಗಂತದೊಳು
ಮುಂಜಾನೆ, ಕೆಂಡ-ಮಂಡಲವಾದಗ ಮೌನಿಯಾಗಿರಬೇಕಿತ್ತು.
ಹೌದು. ನನ್ನದೇ
ತಪ್ಪು.
ಎದೆಯ ಜೋಳಿಗೆಯಲಿ
ಸಂದೇಹದ ಸರ್ಪ ಮೊಟ್ಟೆಯೊಡೆವಾಗ
ಕಾವು ಕೊಡಬಾರದಿತ್ತು.
ಹೌದು. ನನ್ನದೇ
ತಪ್ಪು.
ಕಣ್ಣೀರಲದ್ದಿದ
ಒದ್ದೆ ಕಣ್ಣದು ಅಳುವಾಗ, ಕಣ್ಣೀರನೊರೆಸಬೇಕಿತ್ತು.
ಹೌದು. ನನ್ನದೇ
ತಪ್ಪು.
ಪ್ರೀತಿ ಬೀಳನು, ಬೀಳಿಸಿ ನಡೆವಾಗ, ಬೀಳ್ಕೊಡಬಾರದಿತ್ತು.
ಹೌದು. ನನ್ನದೇ
ತಪ್ಪು.
ಇಂದು, ನೇಗಿಲಿಗೆ
ಸಿಕ್ಕ ಕಸ ನನ್ನೆದೆ, ಚಿಂದಿಯಾಗಿದೆ.
ಆದರೂ ಅಳಬಾರದಿತ್ತು
ಹೌದು. ನನ್ನದೇ
ತಪ್ಪು.
-ದಿಲೀಪ್ ಶೆಟ್ಟಿ
(ಚಿತ್ರ ಕೃಪೆ: ಅಂತರ್ಜಾಲ)