ಕನ್ನಡ ಕಲಿಯಿರಿ. ನಿಮ್ಮ ಅನಿಸಿಕೆಯನ್ನು ಕನ್ನಡದಲ್ಲಿ ನೀಡಿರಿ.


Type in English. Press Space to get it in ಕನ್ನಡ ಲಿಪಿ Press Ctrl+g to toggle between English and Kannada

ಬುಧವಾರ, ಜುಲೈ 24, 2019

ಕಾಗದ-ಪತ್ರ



ಪ್ರೀತಿಯ ಸುಬ್ರಾಯ,
ನಿನ್ನ ಅಮ್ಮ ಮಾಡುವ ಆಶೀರ್ವಾದಗಳು. ನಾನು ಕ್ಷೇಮ, ನೀನು ಕ್ಷೇಮ ಎಂದು ಬಾವಿಸುತ್ತೇನೆ. ನೀನು ಬೆಂಗಳೂರಿಗೆ ಹೋಗಿ ತಿಂಗಳಾದರೂ ಕಾಗದ ಹಾಕಲಿಲ್ಲ. ಅದಕ್ಕಾಗಿ ನಾನೇ ನಿನ್ನ ಯೋಗ ಕ್ಷೇಮ ವಿಚಾರಿಸಲು ಕಾಗದ ಹಾಕುತ್ತಿದ್ದೇನೆ. ಪತ್ರ ತಲುಪಿದ ಕೂಡಲೇ ಕಾಗದ ಬರೆ. ಹಾಗೆ ನಾಡಿದ್ದು ದೇವಸ್ಥಾನದ ಪೂಜೆ ಇದೆ. ಸ್ವಲ್ಪ ಹಣ ಕಳಿಸು.  ಮೊನ್ನೆ ಸಿಂಗಾರಿ ದನಕ್ಕೆ ಬಂಗಾರಿ ಕರು ಹುಟ್ಟಿದೆ. ಹಾಲು-ಡೈರಿಗೆ ದಿನ 2 ಲೀಟರ್ ಹಾಲು ಕೊಡುತ್ತಿದ್ದೇನೆ. ನಿನ್ನೆಯಿಂದ ಡಿಗ್ರಿ ಕಡಿಮೆ ಬಂದ ಕಾರಣ ಹಾಲು ಡೈರಿ ಬುಡ್ಡಿ ಹಾಲು ವಾಪಾಸು ಕಳ್ಸಿದ್ದಾಳೆ.

“ಅವ್ಳ್ ಹೊಂಡ ಕಡುಕೆ..” “ಎಲ್ಲ ಬರ್ದಿಯಾ ಗಡಾ..” ಅಂದಳು ಆಚಿಮನಿ ಅಬ್ಬಕ್ಕ.  “ಅವ್ಳ್ ಹೊಂಡ ಕಡುಕೆ.. ಅಂದೆಳಿ ಬರಿಲಿಲ್ಲ. ಅದನ್ನು ಬರಿಕಾ..?  ನೆಗಿಯಾಡ್ತಾ ಕೇಂಡೆ. “ಈ ಗಂಡಿದ್ ಒಂದ್ ಹರ್ಮಯ್ಕವೋ, ಆ ಪಾಟಿ ಹಾಲ್ ವಾಪಾಸ್ ಕಳ್ಸಿದಳಲ್ಲ ಅವಳು, ಅದನ್ನ ಎಂಥಾ ಮಾಡುದ್. ನಮ್ಮನೆಗೆ ಕುಡುಕ್ ಮಕ್ಕಳ್ ಇದ್ವಾ?. ಅಲ್ಲಾ ಗಡಾ.. ಆ ಓಣಿ ಮನಿ ಸರೋಜನ ಕಂಡೆಗೆ ಡಿಗ್ರಿ ಬರ್ಲಿ ಅಂದೆಳಿ ನಾನ್ ಸಕ್ಕರಿ ಹಾಕಿನನ, ಆ ರಂಡಿ, ಹಾಲು ಪೂರಾ ವಾಪಾಸ್ ಕಳಿಸ್ಲಕಾ?” ಮತ್ತದೇ ರೇಡಿಯೊ repeat telecast ಶುರು ಆಯಿತು. “ಅವ್ಳನ್ನ ಸುಡಿನಿ ಮರ್ರೆ, ಮತ್ತೆ ಎಂತ ಬರಿಕ್ ಅಂದೇಳಿ ಹೇಳಿ ವಿಷ್ಯ ಬಿಟ್ಟ್, ಬೇರೆ ಎಲ್ಲ ಹೇಳ್ತಿದ್ರ್ಯಲ, ನಂಗೆ ಓದ್ಕಂಬುಕ್ ಇತ್ತ್. ಅಂದೆಳಿ build up ಕೊಡುಕ್ ಶುರು ಮಾಡಿದೆ. “ಇನ್ನ್ ಎಂತ ಬರುದ್, ಎಂತದೋ ನೆಂಪ್ ಮಾಡ್ಕಂಡಿ ಕಾಣ್, ಹಾ... ಈ ಕಾಗದದೊಟ್ಟಿಗೆ ರಾವುತ್ರ ಉಬ್ತಿ ಕಳಿಸಿದಿ, ದಿನ ಮಿಂದುಕಂಡ್, ಹಚ್ಕೊ, ಅಂದೆಳಿ ಬರಿ. ಸಾಕ್. “ ಅಂದೆಳಿ ಸೀರೆ ಸೆರಗೆಗೆ ಕಟ್ಟಿ ಇಟ್ಕಂಡ್ ಉಬ್ತಿನ ತೆಗದು ಕೊಟ್ಟಳ್ ಅಬ್ಬಕ್ಕ. ಅಂತೂ ಹಾಂಗೂ, ಹೀಂಗೂ ಮಾಡಿ, ಆ ಪ್ರಸಾದನ ಕಾಗದ ಒಟ್ಟಿಗೆ ಹಾಕಿ, ಎರಡ್ ಅನ್ನದ ಅಗಳನ್ನ ತಂದು ಕಾಗದ ಅಂಟಿಸಿ, “ನಾಳೆ ಶಾಲಿಗೆ ಹ್ವಾಪತಿಗೆ, post ಡಬ್ಬಿಗೆ ಹಾಕ್ತೆ” ಅಂದೆ. “ಆ ಕಿಚ್ಚಿಡದ್ದ್ ಹಾಲನ್ನ ಬಿಸಿ ಮಾಡ್ತಿ, ಇಲ್ದಿರೆ ಅದೂ ಹಾಳಾತ್ತ್, ನಾ ಬತ್ತೆ.” ಅಂದೆಳಿ ಕಾಲುಕಿತ್ತರು.

ಬಹುಶ 80-90ನೇ ಇಸವಿಯಲ್ಲಿ ಶಾಲೀಗ್ ಹ್ವಾಪು ಮಕ್ಕಳಿಗೆ ಮಾತ್ರ ಈ ಕಾಗದ ಬರುವ ಭಾಗ್ಯ ಇದ್ದದ್ದ್. ಈಗಿನವರಿಗೆ ನಾನ್ ಎಂತ ಹೇಳ್ತಿದ್ದಿ ಅಂದೆಳಿ ಅರ್ಥ ಆಪುದ್ ಸ್ವಲ್ಪ ಕಷ್ಟುವೆ. ಈಗಿನ್ ಮಕ್ಕಳಿಗೆ ಮೊಬೈಲೆಗೆ ಪೂರಾ ಮೆಸೇಜ್ ಟೈಪ್ ಮಾಡುಕೆ ಬತ್ತಿಲ್ಲ, ಇನ್ನ ಕಾಗದ ಬರಿತ್ರಾ?. ಕಾಗದ ಬಿಡಿ, ಸರಿಯಾಯಿ exam ಬರುಕೆ ಪುರ್ಸೊತ್ತಿಲ್ಲ ಪಾಪ. ಅದೂ ಅಲ್ಲದೆ ಕಾಗದ ಬರಿಯುವುದು ಒಂದು ಕಲೆ. ಎಲ್ಲರಿಗೂ ಕಾಗದ ಬರುಕ್ ಆತಿಲ್ಲ. ಬೇರೆಯವರ feeling ಅರ್ಥ ಮಾಡ್ಕಂಡ್, ಅವರು ನೂರು ಶಬ್ದ ಹೆಳ್ರೆ, ಅದನ್ನ ಎಲ್ಲ ಕೆಂಡಕಂಡ್ ನಾಲ್ಕ್ ಶಬ್ದದಲ್ಲಿ ಅವರಿಗೆ ಅರ್ಥ ಆಪು ಹಾಗೆ ಬರುದಂದ್ರೆ ತಮಶಿ ಅಂದ್ಕಂಡಿರ್ಯಾ?. ಕೆಲವು ಸಲ ಅಂತೂ ಈ ಅಬ್ಬಕ್ಕನಂತವರು ಇಡೀ ಹರಿಕಥೆ ಹೇಳಿ, ಇದನ್ನ ಬರಿ ಮಗಾ.. ಅಂದಾಗ ಅವರಿಗೂ ಕುಶಿ ಆಪೂವಂಗೆ, ಕಾಗದ ಓದುವವರಿಗೂ ಹರಿಕಥೆ ತರ ಇರದೆ, ಬೇಕಾದಷ್ಟೆ ಬರುದು ಇತ್ತಲಾ, ಅದಕ್ಕೆ talent ಬೇಕು ಬಿಡಿ. ನಮಗೆ ಶಾಲೆಯಲ್ಲೂ ಪತ್ರ ಹೆಂಗೆ ಬರಿಕ್, ಯಾರಿಗೆ ಯಾವ ತರ ಕಾಗದ ಬರಿಕ್, ಯಾವ ರೀತಿ ಶುರು ಮಾಡ್ಕ್ ಅಂದೆಳಿ ಎಲ್ಲ ಹೆಳ್ತಿದ್ರ್. ಅಷ್ಟೇ ಅಲ್ಲ examಗೆ ದೂರದಲ್ಲಿರುವ ನಿಮ್ಮ ಗೆಳೆಯನಿಗೆ ಒಂದು ಪತ್ರ ಬರೆಯಿರಿ. ಅಂದೆಳಿಯೂ ಪ್ರಬಂದ ಬರುಕ್ ಹೇಳ್ತಿದಿರ್. ಆ ಕಾಗದ ಬರುದ್ರಲ್ಲಿ ಇಪ್ಪು ಮಜಾ, ಈ ಫೊನೆಗ್ ಸಿಕ್ಕುದಿಲ್ಲ ಬಿಡಿ, ಪೋಸ್ಟ್ ಮ್ಯಾನ್ ಮನಿಗೆ ಬಂದ ಅಂದ್ರೆ, ನಮ್ಮನಿ ಗಂಡ್ ದುಡ್ಡ್ ಕಳ್ಸಿ ಕೊಟ್ಟಿತೇನೊ, ನಮ್ಮನಿ ಹೆಣ್ಣ್, ಬೆಂಗಳೂರಿಗೆ ಹೊಯಿ ಮುಟ್ಟತ್ ಅಂಗರೆ” ಅಂದೆಳಿ ಕುಶಿ ಪಡ್ತಿದಿರ್. ಈಗಂತೂ ಪೋಸ್ಟ್ ಆಫೀಸರ್ in-land letter ಸವಲತ್ತನ್ನೇ ಕಿತ್ತ್ ಬಿಸಾಕಿರ್ ಅಂದೆಳಿ ಮಾಡುವ. ಬರಿ ಕಾಗದ ಬರುದ್ರಲ್ಲಿ ಮಾತ್ರ ಕುಶಿ ಅಲ್ಲ, ಓದುದ್ರಲ್ಲೂ. ಮನಸಿನ ಭಾವನೆ ಶಬ್ದದ ಜೊತಿಗೆ ಸೇರ್ಕಂಡ್ ಕೊಡು ಫೀಲಿಂಗ್ ಫೋನ್ ಅಲ್ಲಿ ಮಾತಾಡುದ್ರಲ್ಲಿ ಸಿಕ್ಕುದಿಲ್ಲ ಬಿಡಿ. ಎಲ್ಲರೂ ಬರೆದ ಪತ್ರನ ಜಾಗ್ರತಿಯಲ್ಲಿ ಇಟ್ಕಂಡ್, ಆಗಾಗ ಓದಿ ಕುಶಿ ಪಡ್ಲಕ್. ಈ ಫೋನ್ ಅಲ್ಲಿ ಇದೆಲ್ಲ ಅತ್ತಾ?.

 -ದಿಲೀಪ್ ಶೆಟ್ಟಿ. 

ಚಿತ್ರ ಕೃಪೆ: ಅಂತರ್ಜಾಲ