ವಿಸ್ತಾರವಾದ ಪ್ರಾಂಗಣದ ಮುಂದೆ ಕಾವಲಿಯಂತೆ ಕಾದು ನಿಂತಿರುವ ಹೆಂಚಿನ
ಮನೆ. ಮನೆಯ ಪಡಸಾಲೆಯ ಹೊಸ್ತಿಲಿಗಾನಿಕೊಂಡು ತನ್ನದೇ ಲೋಕದಲ್ಲಿ ಬಟ್ಟಲ ಮುಂದೆ, ಮನಃ ಬೆತ್ತಲಾಗಿ ಕಾದು
ಕುಳಿತಿದ್ದಾಳೆ. ಜಾತಕ ಪಕ್ಷಿಯಂತೆ ಕಾ.. ಕಾ.. ಎನ್ನುತ್ತಾ ಎಬ್ಬಿಸಿತು ಕಾಗೆ. ತುಂಗಾ...
ನೆನೆದಳು. ಕಣ್ಣ ಕಾನನದಿಂದ ಬಂದ, ಹನಿ-ಹನಿ ಹುಣ್ಣು, ತನ್ನದೇ ವೇಗದಲ್ಲಿ ಬಟ್ಟಲು ತುಂಬುತ್ತಿತ್ತು. ಬಟ್ಟಲ ತುತ್ತು, ತುಟಿಯ ಸೊಂಕದೇ, ಕಣ್ಣೀರಲ್ಲೇ ತೇವವಾಯಿತು. ತುಂಗೆ, ಗೋಡೆಗೆ ಆನಿಕೊಂಡು ಮೇಲೆದ್ದಳು. ಕರಿಯ
ಗೊಣಲ್ಲಾಡಿಸಿದ. ಮೆಟ್ಟಿಲ ಬಳಿಯೇ ತುತ್ತಿಗಾಗಿ ಕಾಯುತ್ತಿದ್ದ. ಕರಿಯನ ಜೊಲ್ಲಿಗೆ ಇರುವೆಯ
ಸಾಲುಗಳು ಚೆಲ್ಲಾಪಿಲ್ಲಿಯಾಗಿದ್ದವು. ತುಂಗೆ, ಬಟ್ಟಲ ಸರಕನ್ನು ನಾಯಿಯ
ತಟ್ಟೆಗೆ ವರ್ಗಾಯಿಸಿದಳು. ಕರಿಯ ಹಸಿದಿದ್ದ. ಮರುಮಾತನಾಡದೇ ಕೆಲಸಕ್ಕೆ ನಿಂತುಬಿಟ್ಟ. ತುಂಗೆಯ
ಆದ್ರ ಕರಿಯನನ್ನು ನೋಡಿ, ವಿರಾಮಕ್ಕೆ ಜಾರಿತ್ತು. ಈಗ, ಅವಳ ಬಟ್ಟಲಂತೆ, ಒಡಲು ಕೂಡ ಬತ್ತಿತ್ತು.
ತುಂಗೆ, ಚೊಚ್ಚಲ ಬಸುರಿ. ಚೊಚ್ಚಲೆಂದೇ ಹೇಳಬೇಕು. ಹಿಂದಿನದ್ದು, ಗಾಳಿ ಸೋಕುವ ಮುನ್ನವೇ ಕೊರಡಾಗಿತ್ತು. ಅದಕ್ಕೂ-ಇದಕ್ಕೂ ನಡುವೆ ಅಂತಹ
ಅಂತರವೇನಿರಲಿಲ್ಲ. ಗಂಡಸ್ತನದ ದಬ್ಬಾಳಿಕೆ ಕಾರ್ಯನಿರತವಾಗಿತ್ತು. ತಾಯಿ ತೀರಿಕೊಂಡ ಮೇಲೆ ಮನೆಯ
ಕೀಲಿಕೈ ಇವಳದ್ದೇ ಆಗಿತ್ತು. ತುಕ್ಕು ಹಿಡಿದಿದ್ದ ಕೀಲಿಕೈ. ಇವಳಂತೆ,
ಇವಳ ಕನಸುಗಳಂತೆ. ಗಂಡ ಎಂದೆನಿಸಿಕೊಂಡವನು ಕಾಮ ಹೀರಿ, ಹಾರಿ ಹೋಗಿದ್ದ.
ಅಡಿಗಡಿಗೆ ಗುದ್ದಿ, ಮಾಸದ ಗಾಯ ಮಾಡಿ ಹೋಗಿದ್ದ. ತುಂಗೆ, ಮತ್ತೆ ಪಡಸಾಲೆಯ ಹೊಸ್ತಿಲಿಗಾನಿಕೊಂಡು, ಕಂಬನಿ
ಪೋಣಿಸುತ್ತಿದ್ದಾಳೆ. ಅಳು, ಯಾವುದಕ್ಕೆ?. ಓಡಿ
ಹೋದ ಗಂಡನಿಗಾಗಿಯೋ, ಇಲ್ಲ ಒಡಲೊಳಗೆ ಚಿಗುರೊಡೆದ ಜೀವಕ್ಕಾಗಿಯೋ?.
ಹೆಣ್ಣಿಗೆ ಅಳುವುದಕ್ಕೆ ಕಾರಣ ಬೇಕೆ?. ಹಾಗೆ
ಎಲ್ಲದಕ್ಕೂ ಅಳುವವಳಲ್ಲ ಇವಳು. ಗಟ್ಟಿಗಿತ್ತಿ. ಈಕೆಯ ತಾಯಿ ಸತ್ತಾಗಲೂ,
ಕುಂದದೇ ಎಲ್ಲವನ್ನೂ ನಿಭಾಯಿಸಿದವಳು. ಗಂಡ ಪಾಪದವನು. ಅಮಲು ನೆತ್ತಿಗೆರಿದಾಗ ಮಾತ್ರ ಕ್ರೂರಿ. ಮನೆಯ
ನಾಲ್ಕು ಗೋಡೆಯಾಚೆ ಸಣ್ಣ ಶಬ್ದವೂ ಕಂಪಿಸದಂತೆ ಆಳುವನುಂಡು ಬದುಕುತ್ತಿದ್ದಳು. ಹೊಡೆತದ
ಗಾಯಗಳಷ್ಟೇ ಚೀರಾಡುತ್ತಿದ್ದವು.
ಮೊದಲ ಮಗು
ಹೊಟ್ಟೆಯಲಿದ್ದಾಗಲೇ, ಗಂಡನ ದರ್ಪಕ್ಕೆ ಹೆದರಿ, ಹೊರ ಪ್ರಪಂಚದ ವ್ಯಾಮೋಹ
ತ್ಯಜಿಸಿರಬೇಕು. ತುಂಗೆ ಸೊರಗಿದ್ದಾಳೆ ಎನ್ನುವುದನ್ನೂ ಲೆಕ್ಕಿಸದೇ ಸೆರಗ ಹಿಡಿದಿದ್ದ ಗಂಡ.
ಅವನಿಗಾಗಿ ಅಳುತ್ತಾಳೆಯೇ?. ಅಳಬೇಕೇ?. ಖೂನಿ
ಮಾಡದೇ ಇವಳನ್ನು ಉಳಿಸಿದ್ದಾನೆ ಅನ್ನುವುದೇ ಅಚ್ಚರಿ. ಅದೆನೋ, ಒಳ್ಳೆ
ಗಳಿಗೆಯಲ್ಲಿ ಇವಳನ್ನು ತ್ಯಜಿಸಿ, ದೂರದ ಊರಿಗೆ ಹೋಗಿದ್ದಾನೆ. ಹೋದವ
ಬಾರದಿದ್ದರೆ ಸಾಕು ಎಂದುಕೊಂಡದ್ದೂ ಇದೆ. ತುಂಗೆ, ಮತ್ತೆ
ತೇವಗೊಂಡಿದ್ದಾಳೆ. ಹೋದ ಗಂಡ, ಇಂದೇಕೋ ಪದೇ,
ಪದೇ ನೆನಪಾಗುತ್ತಿದ್ದಾನೆ. ನೆನಪೆಂದರೆ ನೆನಪಲ್ಲ, ಬರಿಯ ನೆಪ. ಅಸ್ಪಷ್ಟ
ಆಕಾರ. ನೆನಪಿಸುವ, ನೆನಪಾಗುವ ಕಾರಣಗಳೇ ಇವಳ ಬಳಿ ಇರಲಿಲ್ಲ. ಈಗ ಈ
ನೆನೆಪಿಗೆ ಕಾರಣ ಹೊಟ್ಟೆಯಲ್ಲಿರುವ ಕೂಸು. ಗಂಡನಲ್ಲದಿದ್ದರೂ, ತಂದೆಯಾಗಿರಬೇಕು
ಎಂಬ ಆಶೆ. ತಂದೆ ಇರದೇ ಬದುಕ ಕಟ್ಟಿ ಕೊಂಡ ನನ್ನ ಹಾಗೆ, ತನ್ನ ಮಗು
ಆಗಿಬಿಟ್ಟರೆ ಎನ್ನುವ ಭಯ. ಅದೆಷ್ಟೋ ಹೆಂಗರುಳ ಕೂಗು, ಹೀಗೇ
ಮಿಡಿಯುತ್ತದೆ, ತನಗಾಗಿಯಲ್ಲ, ತನ್ನವರಿಗಾಗಿ.
ತುಂಗೆ ಬತ್ತುವವಳಲ್ಲ. ಆದರೂ ಸೋರುತ್ತಿದ್ದಾಳೆ, ಪಸೆ ಹಿಡಿದ ಮರಳ ಹಾಗೆ, ಇಷ್ಟಿಷ್ಟೆ....
ಚಿತ್ರ ಕೃಪೆ: ಅಂತರ್ಜಾಲ.