ನಿತ್ಯ ಜಾಗರಣೆಯ ಕಾನನ,
ರಾತ್ರಿ ರಂಗಿನಲಿ ಕಾಮ ಕದನ,
ಜೀರುಂಡೆಗಳ ಜೇಂಕಾರಕ್ಕೆ ಸತ್ತ ವದನ.
ಮೂಸಿ ಎಸೆದ, ತುಸು ಮಾಸಿದ ಹೆಣ್ಣು
ಮಸಣದ ಹೂವು??
ಮ್ಲಾನ ಮೌನದ ಒಡವೆ,
ಹಂಚಿ ಹರಿಯುವ ಹಿರಿಮೆ .
ಹರೆಯ ಹರಿದಿದೆ, ಹದವ ಅರಿತಿದೆ.
ದಾರಿಹೋಕರ ದಾಸೋಹಕ್ಕೆ,
ದಾಹ ತೀರದ ದಾರಿದ್ರ್ಯಕ್ಕೆ ,
ಬುಡ ಸತ್ತ, ಬಾಡಿದ ಹೆಣ್ಣು
ಮಸಣದ ಹೂವು??
ಮುಂಜಾವಿನಲಿ ಅಸ್ಪ್ರಷ್ಯೇ,
ಬೈಗುಳದ ಬಿಸಿ ತುಪ್ಪ.
ಸಂಜೆಯಾದರೆ ಅವಳೇ ನಿತ್ಯ ಶೀಲೆ,
ಹೊಗಳಿಕೆಯ ಬಿಗಿ ಕಪ್ಪ.
ಮಡಿವಂತಿಕೆಯ ಮುರುಕು ಮನಸಿಗರ
ನಂಬಿಕೆಯ ನಾಟಕದೊಕುಳಿಯಲಿ
ಜಾರಿದ ಸೆರಗು, ಸೋರುವ ಸೊಬಗು.
ರಸ ಹೀರಿ, ರಾಡಿ ಮಾಡಿ ಕಿತ್ತೋಗೆದ ಹೆಣ್ಣು
ಮಸಣದ ಹೂವು??