ಕನ್ನಡ ಕಲಿಯಿರಿ. ನಿಮ್ಮ ಅನಿಸಿಕೆಯನ್ನು ಕನ್ನಡದಲ್ಲಿ ನೀಡಿರಿ.


Type in English. Press Space to get it in ಕನ್ನಡ ಲಿಪಿ Press Ctrl+g to toggle between English and Kannada

ಮಂಗಳವಾರ, ಜನವರಿ 24, 2012

ಹುಚ್ಚು ಕೋಡಿ ಮನಸು...


     ಮನಸ್ಸೊಂದು ಕಳ್ಳ ಸಂತೆ. ಎಲ್ಲಿಯೂ ಸಲ್ಲದ್ದು ಕೆಲವೊಮ್ಮೆ ಇಲ್ಲಿ ಸಲ್ಲುತ್ತದೆ. ಎಲ್ಲರಿಷ್ಟಪಡುವ, ಪ್ರೀತಿಸುವ ವಸ್ತುಗಳು ಹೇಳ ಹೆಸರಿಲ್ಲದೆ ಮೂಲೆ ಗುಂಪಾಗಿರುತ್ತದೆ. ಮತ್ತೆ  ತಿರುಗಿ ನೋಡುವುದರೊಳಗೆ ಎಲ್ಲಿಲ್ಲದ ಬೇಡಿಕೆ, ಕೈಗೆಟುಕದಷ್ಟು ದುಬಾರಿ. ಗಡಿಯಾರದ ಮುಳ್ಳನ್ನೊಮ್ಮೆ  ಹಾಗೆ ಎಳೆದು ಹಿಂದಕ್ಕೆ ತಿರುಗಿಸಿ ನೋಡಿದರೆ ಕಾಡುವ ನೆನಪುಗಳ ಆತ್ಮಗಳಿಗೆನು ಕಡಿಮೆ ಇಲ್ಲ. ಮನಸ್ಸೆಂಬೋ ಮನಸ್ಸು ಪ್ರೀತಿ ಮಾಡಲು ಮನಸ್ಸು ಮಾಡಿದ ಮನಸಿನ ಕತೆ, ವ್ಯಥೆ, ಸಾರ್ತಕತೆಯ ಅದ್ವಾನ, ಹುಂಬತನ,ಮೋಹ, ಪ್ರೀತಿಯಲ್ಲದ ಆಕರ್ಷಣೆಯ ಪರಿದಿ ಮೀರಿದ ವ್ಯಾಮೋಹದ ಹುಚ್ಚು ಮನಸ್ಸಿನ್ನ ಆಸೆಯ ಅನುಕಂಪದ ಆಮಿಷಕ್ಕೆ ಆಂಗ್ಲಭಾಷೆಯ ಒಂದು ಪದ infatuation. 

       ನಿಜ , ಕೆಲವು ಸಂಬಂದಗಳಿಗೆ ಹೀಗೆ ಸ್ಪಷ್ಟವಾಗಿ ನಾಮಕರಣ ಮಾಡಲು ಸಾಧ್ಯವಾಗುವುದಿಲ್ಲ. ಹೆಚ್ಚಿನ ಕಡೆ ಇವುಗಳು ಸಂಬಂದವಲ್ಲದ ಬಂಧಗಳು. ಆ ದಿನ ತರಗತಿಯಲ್ಲಿ ತಲೆ ಕೆಳಗೆ ಹಾಕಿಕೊಂಡು ನನ್ನ ಪಾಡಿಗೆ ಪುಸ್ತಕದ ಮೇಲೆ ಗಣಿತದ ರೇಖೆಯನ್ನ ಜೋಡಿಸುತ್ತಿದ್ದಾಗ ಎದುರಿಗೆ ಬಂದು ಕೈಯಲ್ಲಿ ೫೦ ಪೈಸೆಯ ಚಾಕಲೇಟನ್ನು ಹಿಡಿದು "ನನ್ನ ಹುಟ್ಟಿದ ಹಬ್ಬ.." ಎಂದು ಕೈಗೆ ಚಾಕಲೇಟ್ ಇತ್ತು ಹೋದಾಗ ಪುಸ್ತಕದ ರೇಖೆಯನ್ನ ಯಾರೋ ಕಿತ್ತು ನನ್ನ ಅವಳ ಎದೆಗೆ ಜೋಡಿಸಿಟ್ಟ ಹಾಗೆ ಅನಿಸಿದ್ದು ಮಾತ್ರ ಸುಳ್ಳಲ್ಲ. ಅದು ನನ್ನ ಮೊದಲ ಪ್ರೀತಿ. ಆಕೆಯ ಹೆಸರು ನನಗಿನ್ನೂ ನೆನಪಿದೆ. ಮರೆಯೋವಂತಹ ಸಂಬಂದವಲ್ಲ ನಮ್ಮದು. ನಾನಿನ್ನೂ ಐದನೇ ತರಗತಿಯಲ್ಲಿ ಓದುತ್ತಿದ್ದೆ. ಆಕೆ ಕ್ಲಾಸಿಗೆ ಫಸ್ಟ್ . ಹಾಗಂತ ನಾನೇನು ಕಡಿಮೆ ಇಲ್ಲ. ನನ್ನ ಪಾಡಿಗೆ ಆರಕ್ಕೇರದ ಮೂರಕ್ಕಿಳಿಯದ ಹುಡುಗ. ಆಗಷ್ಟೇ ಮಧ್ಯವಾರ್ಷಿಕ ಪರೀಕ್ಷೆ ಮುಗಿಸಿ, ಫಲಿತಾಂಶಕ್ಕಾಗಿ ಅಧ್ಯಾಪಕರಿಗಾಗಿ ಕಾಯುತ್ತಿದ್ದೆವು. ಅಧ್ಯಾಪಕ ಮಹಾಶಯ ಬಂದು ಮುಂದಿನ ಬೆಂಚಿನಲ್ಲಿ ಕುಳಿತ ನನ್ನ ಹುಡುಗಿಯನ್ನೊಮ್ಮೆ ನೋಡಿ, ಹತ್ತಿರಕ್ಕೆ ಕರೆದರು. "ಲೇ ನೋಡೋ ಮತ್ತೆ ಅವ್ಳೆ ಫಸ್ಟ್ ಬಂದಿರೋದು.." ಪಕ್ಕದಲ್ಲೇ ಕೂತ ಪ್ರವೀಣ ಗೆಲಿಮಾಡಿದ. ಮನಸ್ಸು ಮತ್ತೆ ಚಂಗನೆ ಚಿಮ್ಮಿ, ಓಡಿ ಹೋಗಿ ಅವಳಿಗೊಂದು ಮುತ್ತು ಕೊಟ್ಟು ಬಂದಿತು. ವಾಸ್ತವಕ್ಕೆ ಬಂದಾಗ ಅವಳ ಕಣ್ಣಲ್ಲಿ ನೀರು ಜಲಾಶಯದ ನೀರಿನ ಕಿಂಡಿ ತೆಗೆದಾಗ ದುಮ್ಮಿಕ್ಕುವ ರೀತಿ ಧಾರಾಕಾರವಾಗಿ ಸುರಿಯುತ್ತಿತ್ತು. "ಪ್ರವೀಣ , ಏನಾಯ್ತೋ, ಬಡ್ಡಿಮಗ ಟೀಚರ್ ಏನಾದ್ರು ಮಾಡಿದ್ನಾ??" ಅಂದೇ ಕೋಪದಿಂದ. "ಇಲ್ಲ ಲೇ, ಈ ಸಾರಿ ಫಸ್ಟ್ ರಾಂಕ್ ಅವ್ಳಿಗ್ ಸಿಗ್ಲಿಲ್ಲ..." ಇನ್ನು ಏನೇನೋ ಬಡಬಡಿಸುತ್ತಿದ್ದ. ಅಷ್ಟರಲ್ಲಿ ಮನಸ್ಸು ಮತ್ತೆ ಅವಳ ಕಡೆ ತಿರುಗಿ, ತಾನು ಮರುಗುತ್ತಿತ್ತು. ಒಮ್ಮೆಗೆ ನನ್ನವಳ ಸ್ಥಾನ ಕದ್ದವರನ್ನ ಜಾಡಿಸಿ ಒದೆಯುವಷ್ಟು ಕೋಪ ಬಂತು. "ದಿಲೀಪ್, ದಿಲೀಪ್ ..." ಯಾರೋ ಕರೆದ ಹಾಗಾಯ್ತು. ಮತ್ತೆ ವಾಸ್ತವಕ್ಕೆ ಸಪ್ಪೆ ಮೊರೆ ಹಾಕಿ ಬಂದೆ. "ಏನಪ್ಪಾ, ಎಲ್ಲಿಗ್ ಹೋಗಿದ್ದೆ.. " ನಗುತ್ತ ಕೇಳಿದರು ಮೇಷ್ಟು. ನಗಲಾರದ ಮುಖದಲ್ಲಿ ಕಷ್ಟಪಟ್ಟು ಒಂದು ನಗುವನ್ನಿತ್ತೆ. ಮತ್ತೆ ಮುಂದುವರಿಸಿದರು "ಈ ಸಾರಿ ಮೊದಲನೇ ಸ್ಥಾನ ನಿನಗೆ ಬಂದಿದೆ, ಮಾರ್ಕ್ಸ್ ಕಾರ್ಡ್ ತಗೊಂಡ್ ಹೋಗು..". ಒಮ್ಮೆಲೇ ಭೂಮಿ ಬಿರುಕು ಬಿಟ್ಟು ನನ್ನವಳನ್ನ ನನ್ನ ಕೈಯಾರೆ ತಳ್ಳಿದ ಅನುಭವ. ನನ್ನನ್ನೇ ಶಪಿಸುತ್ತ ಅಧ್ಯಾಪಕರ ಬಳಿ ಹೋಗಿ ಪ್ರಗತಿ ಪತ್ರ (Progress report) ಪಡೆದು ಮರಳುವಾಗ ಮತ್ತೆ ಅವಳನ್ನ ನೋಡಲಾಗದೆ ನೋಡಿದೆ. ಎರಡು ಕೈಗಳಿಂದ ಕಣ್ಣಿರನ್ನ ವರೆಸಿಕೊಳ್ಳುತ್ತ  ಹಾಗೆ ಸಣ್ಣ ನಗುವನ್ನ ನನ್ನೆಡೆ ಎಸೆದಳು. ಅಬ್ಬಾ... ಹೋದ ಜೀವ ಬಂದಂತಾಯಿತು. ಆ ವಯಸ್ಸಿಗಾಗಲೇ ಜೀವಕ್ಕೆ ಜೀವ ಕೊಡುವಷ್ಟು ಪ್ರೀತಿ ಬೆಳೆಸಿಕೊಂಡೆ. ಮುಂದೆ ಮದುವೆಯಾಗುವುದಿದ್ದರೆ ಇವಳನ್ನೇ ಅಂದುಕೊಂಡೆ. ಅದು ನನ್ನ ಚೊಚ್ಚಲ ಪ್ರೀತಿ, ನಮ್ಮ ಈ ಸಂಬಂದಕ್ಕೆ ನೀವೇನೆ ಹೆಸರಿಟ್ಟರು ನನ್ನ ಪಾಲಿಗದು ಪ್ರೀತಿಯಾಗೆ ಉಳಿದು ಬಿಟ್ಟಿತು. ಕಾಲೇಜು ಮೆಟ್ಟಿಲು ತುಳಿಯುವ ವರೆಗೂ ನನ್ನೆದೆಯ ಕದ ಬದ್ರವಾಗಿ ಅವಳಿಗಾಗಿಯೇ ಮುಚ್ಚಿ ಬಿಟ್ಟೆ. ಆಗ ಬಂದಳು ಅನು .

                 

          ಎಂಟನೆ ತರಗತಿ. ಹೈ ಸ್ಕೂಲಿಗೆ ಆಗಷ್ಟೇ ಸೇರ್ಪಡೆ ಆಗಿತ್ತು. ಎತ್ತರದ ಪ್ರಕಾರ ಆಗಷ್ಟೇ ಪಿ.ಟಿ. ಮಾಷ್ಟ್ರು ಕೂರಿಸಿ ಹೋಗಿದ್ರು. ಮೂಗಲ್ಲಿ ನಶ್ಯ ತೂರಿಸಿಕೊಂಡು ಸಮಾಜದ ಅದ್ಯಾಪಕರು ಕ್ಲಾಸ್ಸಿಗ್ ಅಪ್ಪಣೆ ಇಟ್ಟು ಒಬ್ಬೊಬ್ಬರ ಪರಿಚಯ ಮಾಡಿಕೊಳ್ಳುತ್ತಿದ್ದರು. "Excuse me. ಇದು ನನ್ನ period ಅಲ್ವಾ ??". ಬೋಳು ತಲೆಯ ಅದ್ಯಾಪಕರನ್ನೇ ದುರುಗುಟ್ಟಿ ನೋಡುತ್ತಿದ್ದ ಕಣ್ಣು ಗುಡ್ಡೆಗಳು ಒಮ್ಮೆಲೇ ಕೊಠಡಿಯ ಬಾಗಿಲಿನ ಕಡೆ ಸುಳಿಯಿತು. ಕಣ್ಣಿನಷ್ಟೇ ಅಗಲ ಬಾಯಿ ತೆರೆದು ಕೊಂಡಿತು. "ಹೋ , ಹೌದಾ.. ಗೊತ್ತಾಗ್ಲಿಲ್ಲ , ಬನ್ನಿ ಬನ್ನಿ.. " ಎನ್ನುತ್ತಾ ಹೊರಟು ಹೋದರು ಅದ್ಯಾಪಕರು. "ಒದ್ದೆ ಮುಡಿ, ಮಧ್ಯದಲ್ಲೊಂದು ಗುಲಾಬಿ ಹೂ, ಸೊಂಟಕ್ಕಪ್ಪುವ ಜಡೆ, ನಲಿದಾದೋ ನಡು, ಸೀರೆಗೆ ಮೆಚ್ಚುವಂತಹ ಬಳೆ. ಒಟ್ಟಿನಲ್ಲಿ ಬ್ರಹ್ಮ ತನ್ನೆಲ್ಲ ವೇಳೆ ಸವೆಸಿ ಮಾಡಿದ original ಪೀಸ್ ಅನ್ನೋ ಹಾಗೆ ಇದ್ದರು. "ಕೊಟ್ರೆ ಇವಳಿಗೆ ಬಾಳು ಕೊಡಬೇಕು. 5-6 ವರ್ಷ ವ್ಯತ್ಯಾಸ ತಾನೇ, ಆಮೇಲೆ ನೋಡ್ಕೊಂಡ್ರಾಯ್ತು...". ಮನಸ್ಸು ರಾಧೆಯ ಭಕ್ತನಾಯ್ತು. ಯಾಕೋ ಇದೇ ನನ್ನ ಮೊದಲ ನಿಜವಾದ ಪ್ರೀತಿ ಅನ್ನಿಸೋಕೆ ಶುರು ಆಯ್ತು.  "ಲೇ ಅವ್ರಿಗೆ ಮದ್ವೆ ಆಗಿದ್ಯೋ.. ಟೀಚರ್ರು ತಾಯಿ ಸಮಾನ ಕಣೋ..." ಅಂತ ಪದೆ ಪದೆ ಮೆದುಳು warn ಮಾಡ್ತಾ ಇತ್ತು ಆದ್ರೆ ಮನಸ್ಸಿಗೂ ಮೆದುಳಿಗೂ ಇರೋ ಕೊಂಡಿ ಕಿತ್ತೋಗಿತ್ತು. "ಮತ್ತೆ ಗಾಳಿಯಲ್ಲಿ ಹೋಗಿ ಮುತ್ತು ಕೊಟ್ಟು ಅವರನ್ನೇ ನೋಡ್ತಾ ಕುಂತೆ. ವಾರ ಆಯ್ತು, ಅವ್ರು ಏನ್ ಮಾಡಿದ್ರು ಅಂತಾನೆ ಗೊತ್ತಾಗ್ಲಿಲ್ಲ. ಅವತ್ತು ಹೊರಗಡೆ ಕ್ರಿಕೆಟ್ ಆಡ್ತಾ ಇರ್ಬೇಕಾದ್ರೆ "ಜ್ಯೋತಿ" ನ ನೋಡದೆ ಹೋಗಿದ್ದಿದ್ರೆ ಅನುಗೆ ಈಗಾಗ್ಲೆ ನನ್ನ ಪ್ರಣಯ ಸಲ್ಲಾಪ ಹೇಳಿ ಮುಗಿಸ್ಬಿಡ್ತಿದ್ನೇನೋ...?. ವರ್ಷಗಳು ಉರುಳುವುದರೊಳಗೆ ಹೀಗೆ ಅದೆಷ್ಟೋ ಮೊದಲನೇ ಪ್ರೀತಿ  ಅರಳಿ ಉರುಳಿ ಹೊರಳಾಡಿ  ಹೋಗಿದ್ದವು.  ಹುಚ್ಚು ಕೋಡಿ ಮನಸ್ಸು ಅದು ಹದಿನಾರರ ವಯಸು....

       ಮನಸ್ಸೊಂದು ಕಳ್ಳಸಂತೆ. ತಾಜಾ ತಾಜಾ ವಸ್ತುಗಳಿದ್ದರಷ್ಟೇ ಬೇಡಿಕೆ. ಪ್ರಬುದ್ದರಾಗದ ಮನಸಿನ ಮುಗ್ದ ಮುಖದ ಪ್ರತಿಫಲನ ನೆನಪಿಸಿಕೊಂಡಾಗೆಲ್ಲ ಪ್ರಜ್ವಲಿಸುವುದು. ನಿಮ್ಮ ನಲಿವಿನ ನವಿಲ ಮನಸ್ಸು ಎಷ್ಟು ಬಾರಿ ರೆಕ್ಕೆ ಬಿಚ್ಚಿ , ಹಾರಿ ಪ್ರೇಮ ಪಕ್ಷಿಯ ಕಡೆ ಶಿಳ್ಳೆ ಹಾಕಿ ತನ್ನೆಡೆ ಸೆಳೆಯಲು ಪ್ರಯತ್ನಿಸಿರಬಹುದು. ಪ್ರತಿ ಪ್ರಯತ್ನದ ಯತ್ನ ಬರಿ ಕನಸಿಗಾಸರೆ ಯಾಗುವುದೇ ಹೊರತು ವಾಸ್ತವಕ್ಕಲ್ಲ.  ಏನಂತಿರಾ???

ನಿಲ್ಲದ ಅಮಲಿದು, ನಲ್ಲೆಗೆ ನಲಿವುದು.
ಪ್ರೀತಿ ಪರದೆಯ  ರಂಗದು ಮಾಸಲು 
ಮತ್ತೆ ಕಾಯ್ವುದು,  ಬಣ್ಣದಿ ಮೀಯಲು.

-ದಿಲೀಪ್ ಶೆಟ್ಟಿ.
ಚಿತ್ರ ಕೃಪೆ: ಅಂತರ್ಜಾಲ.