ಮೆಲ್ಲುಸಿರು ನಿನ್ನುಸಿರಿಗೆ ತಾಕದಿರೆ,
ಚಂದ್ರ ನಕ್ಷತ್ರದ ಜೊತೆ ನೀ ನಿಲ್ಲದಿರೆ,
ದಣಿದ ಮನಸಿನ ದುಗುಡವ ನಿನ್ನೆಡೆ ಹೇಳದಿರೆ,
ಕೆನ್ನೆಗೆ ಮುತ್ತಿಕ್ಕುವ ಕೂದಲೆಳೆಯ ನೇವರಿಸದಿರೆ,
ಹಿಡಿ ನಗುವಿನೌತಣದಿ ತೃಷೆಯ ನೀಗಿಸದಿರೆ,
ತುಟಿಗೊಂದು, ಗಲ್ಲಕೊಂದು, ಹಣೆಗೊoದು ಮುತ್ತ ಪೋಣಿಸದಿರೆ,
ಗೆಳತಿ, ಸಂಜೆ ಕತ್ತಲಲಿ ಏಕಾಂಗಿ ನಾನು.
ಮನಸು ನನ್ನದು, ಮನವು ನಿನ್ನದು,
ಮರೆತು ಜಗವನು, ಮೆರೆವ ಮರೆಯೊಳು.
ಮರುಗುತಿಹೆನು ಮರೆಯಲಾರದೆ,
ಮರೆವ ಮಾತದು ಮರುಗಿ ಹೋಗಿದೆ.
ಮೂಳೆ ಮಾಂಸಕೆ ಮತ್ತೆ ಮತ್ತನು
ಮೆತ್ತಿ, ಮುತ್ತಿ, ದಿವ್ಯ ಶಕ್ತಿಯ ನೀಡು.
ಗೆಳತಿ, ಸಂಜೆ ಕತ್ತಲಲಿ ಏಕಾಂಗಿ ನಾನು.
ಮನ್ನಿಸಿಬಿಡು ಒಂದು ಸಲ, ಕೊನೆಯ ಸಲ,
ಕೆಟ್ಟ ಗಳಿಗೆ, ಕೆಟ್ಟು ಕೂತಿಹೆ,
ಬಿಟ್ಟು ಬಿಡು, ಬೆಟ್ಟು ಮಾಡಿ ತೋರಿಸಬೇಡ,
ತಪ್ಪು ನನ್ನದೇ, ತೆಪ್ಪಗಿರದೆ ತಪ್ಪಮಾಡಿದೆ.
ಒಪ್ಪಿಕೊಂಡರೂ, ಅಪ್ಪಬರದೇ,
ಕಾಡುತಿಹುದು ಒಂಟಿ ಬಾಳು,
ಗೆಳತಿ, ಸಂಜೆ ಕತ್ತಲಲಿ ಏಕಾಂಗಿ ನಾನು.
-ದಿಲೀಪ್ ಶೆಟ್ಟಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ