ಕನ್ನಡ ಕಲಿಯಿರಿ. ನಿಮ್ಮ ಅನಿಸಿಕೆಯನ್ನು ಕನ್ನಡದಲ್ಲಿ ನೀಡಿರಿ.


Type in English. Press Space to get it in ಕನ್ನಡ ಲಿಪಿ Press Ctrl+g to toggle between English and Kannada

ಸೋಮವಾರ, ಜನವರಿ 16, 2012

ಕೊಲೆ.. ಕೊಲೆ..


ನಿನ್ನದೀ ಕಥೆ, ನಿನ್ನೆಯಾ ಕಥೆ 
ಬದಲಾಗದು ಬೆಳೆದರೂ ನಾಗರಿಕತೆ.
ತುಂಬಿತೊಂಬತ್ತು, ಕನಸಿಗಿಳಿದಿದೆ ಹೊತ್ತು.
ಮನದ ಪಡಸಾಲೆಯಲಿ ಕನಸ
ಹುಡುಕುವ ವಯಸ್ಸು.

ಬೆಳ್ಳಿ, ಬಳುಕುವ ಹುಡುಗಿ,
ಕಪಟ ತಿಳಿಯದ ಬೆಡಗಿ
ಕೂಟದಾಟವ ಮುಗಿಸಿ 
ಗೂಡಿಗ್ ಅಡಿಯನು ಇಡಲು
ಕಾದಿತ್ತು  ಉರುಳು, ಕಾಡಿತ್ತು ನೆರಳು.
ಸಿಂಗರಿಸಿ ತಂದರು ಬಲಿಯ ಕುರಿಗೊಂದು ಉರುಳು.

ಒಡ್ಡೋಲಗದ ಮದ್ಯೆ ನಗುವಿನ ಓಕುಳಿ ಚೆಲ್ಲಿ
ಬೊಗಸೆ ಕಂಗಳ ತುಂಬಾ ಬೆಳಕಿನಂಗಳ ತುಂಬಿ 
ನಗುವ ಮಗುವಿಗೆ ಕಟ್ಟಿದರು ತಾಳಿ ಎಂಬೋ ಪಾಶ.
ಬದುಕ ಕಾಣದ, ಬದುಕಿ ನೋಡದ, ಬದುಕಿಗೊಂದು ಶಾಪ.
ನಡೆದಿತ್ತಲ್ಲೊಂದು ಕಗ್ಗೊಲೆ, ಸಾಕ್ಷಿಯಾದವು ತಾಳಿ, ಬಳೆ.

ಹೊತ್ತು, ಹೆತ್ತವರು ಹೊರೆಯ ಇಳಿಸಿದರು
ಹುಡುಗಾಟದ ಹುಡುಗಿ ಮಗುವ ಹೊತ್ತಿಹಳು.
ಹತ್ತು ತುಂಬುವ ವೇಳೆ ಹೆತ್ತರೆ ಅವಳು
ಹಸಿ ಮೈಯ ಹಸು ಗೂಸು ಬದುಕುವುದೇ ಇನ್ನು??

-ದಿಲೀಪ್ ಶೆಟ್ಟಿ. 

(ಚಿತ್ರ ಕೃಪೆ : ಅಂತರ್ಜಾಲ )

2 ಕಾಮೆಂಟ್‌ಗಳು: