ಕನ್ನಡ ಕಲಿಯಿರಿ. ನಿಮ್ಮ ಅನಿಸಿಕೆಯನ್ನು ಕನ್ನಡದಲ್ಲಿ ನೀಡಿರಿ.


Type in English. Press Space to get it in ಕನ್ನಡ ಲಿಪಿ Press Ctrl+g to toggle between English and Kannada

ಕನ್ನಡ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕನ್ನಡ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಡಿಸೆಂಬರ್ 16, 2018

ತುಂಗೆ...

       ವಿಸ್ತಾರವಾದ ಪ್ರಾಂಗಣದ ಮುಂದೆ ಕಾವಲಿಯಂತೆ ಕಾದು ನಿಂತಿರುವ ಹೆಂಚಿನ ಮನೆ. ಮನೆಯ ಪಡಸಾಲೆಯ ಹೊಸ್ತಿಲಿಗಾನಿಕೊಂಡು ತನ್ನದೇ ಲೋಕದಲ್ಲಿ ಬಟ್ಟಲ ಮುಂದೆ, ಮನಃ ಬೆತ್ತಲಾಗಿ ಕಾದು ಕುಳಿತಿದ್ದಾಳೆ. ಜಾತಕ ಪಕ್ಷಿಯಂತೆ ಕಾ.. ಕಾ.. ಎನ್ನುತ್ತಾ ಎಬ್ಬಿಸಿತು ಕಾಗೆ. ತುಂಗಾ... ನೆನೆದಳು. ಕಣ್ಣ ಕಾನನದಿಂದ ಬಂದ, ಹನಿ-ಹನಿ ಹುಣ್ಣು, ತನ್ನದೇ ವೇಗದಲ್ಲಿ ಬಟ್ಟಲು ತುಂಬುತ್ತಿತ್ತು. ಬಟ್ಟಲ ತುತ್ತು, ತುಟಿಯ ಸೊಂಕದೇ, ಕಣ್ಣೀರಲ್ಲೇ ತೇವವಾಯಿತು. ತುಂಗೆ, ಗೋಡೆಗೆ ಆನಿಕೊಂಡು ಮೇಲೆದ್ದಳು.  ಕರಿಯ ಗೊಣಲ್ಲಾಡಿಸಿದ. ಮೆಟ್ಟಿಲ ಬಳಿಯೇ ತುತ್ತಿಗಾಗಿ ಕಾಯುತ್ತಿದ್ದ. ಕರಿಯನ ಜೊಲ್ಲಿಗೆ ಇರುವೆಯ ಸಾಲುಗಳು ಚೆಲ್ಲಾಪಿಲ್ಲಿಯಾಗಿದ್ದವು. ತುಂಗೆ, ಬಟ್ಟಲ ಸರಕನ್ನು ನಾಯಿಯ ತಟ್ಟೆಗೆ ವರ್ಗಾಯಿಸಿದಳು. ಕರಿಯ ಹಸಿದಿದ್ದ. ಮರುಮಾತನಾಡದೇ ಕೆಲಸಕ್ಕೆ ನಿಂತುಬಿಟ್ಟ. ತುಂಗೆಯ ಆದ್ರ ಕರಿಯನನ್ನು ನೋಡಿ, ವಿರಾಮಕ್ಕೆ ಜಾರಿತ್ತು. ಈಗ, ಅವಳ ಬಟ್ಟಲಂತೆ, ಒಡಲು ಕೂಡ ಬತ್ತಿತ್ತು.

          ತುಂಗೆ, ಚೊಚ್ಚಲ ಬಸುರಿ. ಚೊಚ್ಚಲೆಂದೇ ಹೇಳಬೇಕು. ಹಿಂದಿನದ್ದು, ಗಾಳಿ ಸೋಕುವ ಮುನ್ನವೇ ಕೊರಡಾಗಿತ್ತು. ಅದಕ್ಕೂ-ಇದಕ್ಕೂ ನಡುವೆ ಅಂತಹ ಅಂತರವೇನಿರಲಿಲ್ಲ. ಗಂಡಸ್ತನದ ದಬ್ಬಾಳಿಕೆ ಕಾರ್ಯನಿರತವಾಗಿತ್ತು. ತಾಯಿ ತೀರಿಕೊಂಡ ಮೇಲೆ ಮನೆಯ ಕೀಲಿಕೈ ಇವಳದ್ದೇ ಆಗಿತ್ತು. ತುಕ್ಕು ಹಿಡಿದಿದ್ದ ಕೀಲಿಕೈ. ಇವಳಂತೆ, ಇವಳ ಕನಸುಗಳಂತೆ. ಗಂಡ ಎಂದೆನಿಸಿಕೊಂಡವನು ಕಾಮ ಹೀರಿ, ಹಾರಿ ಹೋಗಿದ್ದ. ಅಡಿಗಡಿಗೆ ಗುದ್ದಿ, ಮಾಸದ ಗಾಯ ಮಾಡಿ ಹೋಗಿದ್ದ. ತುಂಗೆ, ಮತ್ತೆ ಪಡಸಾಲೆಯ ಹೊಸ್ತಿಲಿಗಾನಿಕೊಂಡು, ಕಂಬನಿ ಪೋಣಿಸುತ್ತಿದ್ದಾಳೆ. ಅಳು, ಯಾವುದಕ್ಕೆ?. ಓಡಿ ಹೋದ ಗಂಡನಿಗಾಗಿಯೋ, ಇಲ್ಲ ಒಡಲೊಳಗೆ ಚಿಗುರೊಡೆದ ಜೀವಕ್ಕಾಗಿಯೋ?. ಹೆಣ್ಣಿಗೆ ಅಳುವುದಕ್ಕೆ ಕಾರಣ ಬೇಕೆ?. ಹಾಗೆ ಎಲ್ಲದಕ್ಕೂ ಅಳುವವಳಲ್ಲ ಇವಳು. ಗಟ್ಟಿಗಿತ್ತಿ. ಈಕೆಯ ತಾಯಿ ಸತ್ತಾಗಲೂ, ಕುಂದದೇ ಎಲ್ಲವನ್ನೂ ನಿಭಾಯಿಸಿದವಳು. ಗಂಡ ಪಾಪದವನು. ಅಮಲು ನೆತ್ತಿಗೆರಿದಾಗ ಮಾತ್ರ ಕ್ರೂರಿ. ಮನೆಯ ನಾಲ್ಕು ಗೋಡೆಯಾಚೆ ಸಣ್ಣ ಶಬ್ದವೂ ಕಂಪಿಸದಂತೆ ಆಳುವನುಂಡು ಬದುಕುತ್ತಿದ್ದಳು. ಹೊಡೆತದ ಗಾಯಗಳಷ್ಟೇ ಚೀರಾಡುತ್ತಿದ್ದವು.

          ಮೊದಲ ಮಗು ಹೊಟ್ಟೆಯಲಿದ್ದಾಗಲೇ, ಗಂಡನ ದರ್ಪಕ್ಕೆ ಹೆದರಿ, ಹೊರ ಪ್ರಪಂಚದ ವ್ಯಾಮೋಹ ತ್ಯಜಿಸಿರಬೇಕು. ತುಂಗೆ ಸೊರಗಿದ್ದಾಳೆ ಎನ್ನುವುದನ್ನೂ ಲೆಕ್ಕಿಸದೇ ಸೆರಗ ಹಿಡಿದಿದ್ದ ಗಂಡ. ಅವನಿಗಾಗಿ ಅಳುತ್ತಾಳೆಯೇ?. ಅಳಬೇಕೇ?. ಖೂನಿ ಮಾಡದೇ ಇವಳನ್ನು ಉಳಿಸಿದ್ದಾನೆ ಅನ್ನುವುದೇ ಅಚ್ಚರಿ. ಅದೆನೋ, ಒಳ್ಳೆ ಗಳಿಗೆಯಲ್ಲಿ ಇವಳನ್ನು ತ್ಯಜಿಸಿ, ದೂರದ ಊರಿಗೆ ಹೋಗಿದ್ದಾನೆ. ಹೋದವ ಬಾರದಿದ್ದರೆ ಸಾಕು ಎಂದುಕೊಂಡದ್ದೂ ಇದೆ. ತುಂಗೆ, ಮತ್ತೆ ತೇವಗೊಂಡಿದ್ದಾಳೆ. ಹೋದ ಗಂಡ, ಇಂದೇಕೋ ಪದೇ, ಪದೇ ನೆನಪಾಗುತ್ತಿದ್ದಾನೆ. ನೆನಪೆಂದರೆ ನೆನಪಲ್ಲ, ಬರಿಯ ನೆಪ. ಅಸ್ಪಷ್ಟ ಆಕಾರ. ನೆನಪಿಸುವ, ನೆನಪಾಗುವ ಕಾರಣಗಳೇ ಇವಳ ಬಳಿ ಇರಲಿಲ್ಲ. ಈಗ ಈ ನೆನೆಪಿಗೆ ಕಾರಣ ಹೊಟ್ಟೆಯಲ್ಲಿರುವ ಕೂಸು. ಗಂಡನಲ್ಲದಿದ್ದರೂ, ತಂದೆಯಾಗಿರಬೇಕು ಎಂಬ ಆಶೆ. ತಂದೆ ಇರದೇ ಬದುಕ ಕಟ್ಟಿ ಕೊಂಡ ನನ್ನ ಹಾಗೆ, ತನ್ನ ಮಗು ಆಗಿಬಿಟ್ಟರೆ ಎನ್ನುವ ಭಯ. ಅದೆಷ್ಟೋ ಹೆಂಗರುಳ ಕೂಗು, ಹೀಗೇ ಮಿಡಿಯುತ್ತದೆ, ತನಗಾಗಿಯಲ್ಲ, ತನ್ನವರಿಗಾಗಿ. ತುಂಗೆ ಬತ್ತುವವಳಲ್ಲ. ಆದರೂ ಸೋರುತ್ತಿದ್ದಾಳೆ, ಪಸೆ ಹಿಡಿದ ಮರಳ ಹಾಗೆ, ಇಷ್ಟಿಷ್ಟೆ....

  -ದಿಲೀಪ ಶೆಟ್ಟಿ.

ಚಿತ್ರ ಕೃಪೆ: ಅಂತರ್ಜಾಲ.

ಭಾನುವಾರ, ಸೆಪ್ಟೆಂಬರ್ 18, 2016

ತೋಚಿದ್ದು.. ಗೀಚಿದ್ದು.. -1

ಮನಸ್ಸು ಹೇಳಿದ್ದು, ಕನಸು ಕಂಡಿದ್ದು, ಅವಳಿಗೆ ಹೇಳಿದ್ದು, ಸುಮ್ಮನೆ ಗೀಚಿದ್ದು, whatsapp ಸ್ಟೇಟಸ್ ಆಗಿದ್ದು, ಎಲ್ಲವನ್ನೂ ಇಲ್ಲಿ ಗೀಚ್ಚಿದ್ದೇನೆ. ಇನ್ನೊಂದಿಷ್ಟಿದೆ, ಮತ್ತೆ ಇಲ್ಲೇ ಕಕ್ಕುತ್ತೇನೆ. ನಿಮ್ಮ ಅಭಿಪ್ರಾಯ ತಿಳಿಸಿ.

-1-
ಹೆಜ್ಜೆ ಹೆಜ್ಜೆಗೆ ಗೆಳತಿ
ಗೆಜ್ಜೆ ದನಿಯಾಗು.
ನನ್ನೊಲವ ನಲಿವಿನಲಿ
ಬಾ ಮಗುವಾಗು. 

-2-
ನಿನ್ನದರವೇ ಸಾಕು,
ಸುಲಿದ ಕಬ್ಬಿನ ರಸವೇಕೆ,
ಬೊಗಸೆಯಲಿ ಚುಂಬಿಸಿ ಕೊಡು,
ಮೊಗೆದು ಮುದ್ದಿಸುವೆ.

-3-
ನನ್ನೆದೆಯ ಬಿಳಿ ಹಾಳೆ
ನಿನ್ನ ನಗುವಿನ ಪದ ತುಂಬಿ
ಕಾದಂಬರಿಯಾಗಿದೆ.
ನಿಲ್ಲಿಸದಿರು ನಗು ಪುಂಜವ
ಬರೆಯುತ ಸಾಗುವ
ಹೊಸ-ಹೊಸ ಯಶೋಗಾಥೆಯ.

-4-
ಕಾಯುತ್ತಿರುವೆ ಅಂದುಕೊಂಡಿದ್ದೆ,
ಕಾಡುತ್ತಿರುವೆ ಅಂದೆಯಾ...?


-5-
ಎರವಲು ಕೊಡು
ಹಿಡಿ ಪ್ರೀತಿಯ,
ಕೊರಕಲು ಕಾಲುವೆ,
ನನ್ನೆದೆ.

-6-
ಮಾತು ಮಾತಿಗೆ ತಾಗಿ,
ಮೌನದಲಿ ಮುನಿಸೊಂದು
ಮರುಗುತಿದೆ.  
                     

-7-
ನಿನ್ನದರವು ಅದರುವ
ಗಳಿಗೆ.
ನಾಚಿ ನಗುತಿದೆ ಕೆನ್ನೆ-
ಗುಳಿಗೆ.


-8-
ಆಗ,
ಹೇಳದಿದ್ದರೂ ಅರ್ಥವಾಗುತ್ತಿತ್ತು.
ಕನಸಿನೋಲಗದೊಳೇ ಎಲ್ಲ.
ಈಗ,
ಹೇಳಿದರೂ ಭಾವ ಬಂದನವಿಲ್ಲ.
ಕನಸಿನ ಒರತೆಯಲೂ ಶುಷ್ಕವೆಲ್ಲ.


-9-
ಮೌನದಲೆನೋ ಮುದವಿದೆ.
ಮಾತಿನಲೆನೋ ಅಡಗಿದೆ.
ಮೌನ ಮಾತಾಗಿ, ಮಾತೇ ಮೌನವಾಗಿದೆ.
ಗೆಳತಿ,
ಬರೆ ಉಸಿರ ಸಪ್ಪಳ, ಬಿಗಿದಪ್ಪುಗೆ ಸಾಕು.
ನಿನ್ನೊಳು ನಾನಿಂದು, ಬಂದಿಯಾದರೆ ಸಾಕು.


-10-
 ಪ್ರೀತಿಯೊಳಗಿಳಿದ ಪ್ರೇಮಿ,
ಎಂದಿಗೂ ಕವಿ.
ಅರ್ಥವಾಗದೆ ಇದ್ದರೂ
ಅವನ ಕವಿತೆ,
ಇರಲಾರದು, ಪ್ರೀತಿಯಲ್ಲಿ
ಕೊರತೆ.


-11-
ಕೆಟ್ಟ ಹೃದಯಕ್ಕೊ,
ಕೊಟ್ಟ ಮನಸಿಗೋ, ಕಾಣೆ.
ಕಟ್ಟಿ ಹಿಡಿಯಲು ಹೋದೆ. ನನ್ನದೇ ತಪ್ಪು.
ಅವಳೊಂದು ಚಿಟ್ಟೆ.
ನನ್ನದೋ, ಕಾಲಿ ತಟ್ಟೆ.

-12-
ಗೆಳತಿ,
ನಿನ್ನ ಕನಸಿನ ಎಳೆಗಳಲ್ಲೆ,
ನನ್ನ ಬದುಕಿನ ಬಲೆ
ಹೆಣೆಯುವೆ.

-13-
ಮರೆವಿಗೂ ಮರೆತು ಹೋಗಿರಬೇಕು,
ಅವಳ ಮರೆಯುವುದು ಹೇಗೆಂದು.
ನೆನಪು ನೆಪವಾಗುತ್ತಿದೆ.
ಕಣ್ಣು ತೇವವಾಗಲಿ ಎಂದು.

-14-
ನನ್ನದಿರಬಹುದು ತಪ್ಪು,
ಸರಿ ಮಾಡಬಹುದಿತ್ತು.
ತಿದ್ದಿ.
ನಿನ್ನ ನಗುವಿನ ಔಷದವನದ್ದಿ.

-ದಿಲೀಪ ಶೆಟ್ಟಿ.

ಭಾನುವಾರ, ಆಗಸ್ಟ್ 30, 2015

ಕಾತರವೇ ನಿನಗೂ ಆತುರವೇ..?

ಹನಿ ಮಳೆ ನೆಲವ ಚೆಲ್ಲಿ, ಬರುವ ನೆಲದ ಮಡಿಲ ವಾಸನೆ ನಾಸಿಕಕ್ಕಪ್ಪುವಾಗೆಲ್ಲ ಕಣ್ಣು ನಿನ್ನ ಬಿಂಕಕ್ಕೆ ಕಾಯುವಂತಿದೆ. ಪ್ರತಿ ಹನಿಯ ಹೆಗಲಲ್ಲಿ ನಿನ್ನ ನಗುವ ನೆನಪು. ಇಂದು, ನಾಳೆ, ವಾರ, ತಿಂಗಳು, ಕಾಯುವ ಪ್ರತಿ ಗಳಿಗೆ ಹೊಸ ಇರುಳು, ಕೌತುಕದ ನೆರಳು. ಮೊನ್ನೆ ನೋಡಿದ ನೀನು, ಇಂದು ನೀನಾಗಿಲ್ಲ. ಅಥವಾ ಮೊನ್ನೆ ನೋಡಿದ ನಾನು, ಇಂದು ನಾನಾಗಿಲ್ಲ. ನನ್ನೀ ಬದುಕ ಬಂಡಿಯ ವ್ಯಾಜ್ಯ-ತ್ಯಾಜ್ಯಗಳ ವಿಲೆವಾರಿಯ ಹೊಣೆ ನಿನಗೊಪ್ಪಿಸಿ, ಕಣ್ಣಿಗಡರುವ ಕೂದಲೆಳೆಯ ಜೊತೆ ಬಾಲಂಗೋಚಿಯಾಗುವ ಆಸೆ. ಮಾಸಿದ ಮಾರ್ದನಿಯ ಎದೆ ಬಡಿತ, ನಿನ್ನ ನಗುವ ಲಯದೊಳಗೆ ಮೇಳೈಸುವಾಸೆ. ಪುಷ್ಪಗುಚ್ಛದಲಿ ಉದ್ಬವಿಸುವ ಪ್ರತಿ ಹೂವ ಪಕಳೆಗಳೂ ನಿನ್ನೆ ಕೇಳುತಿವೆ. ಎಂದು ಬರುವೆ ನೀನು? ಮಳೆಯ ಪಸೆ ತಣಿದು ತಿಳಿಯಾಯ್ತು. ಮುಗಿಲು ನಿನ್ನ ನೆನಪಿನಲಿ ಮುದ್ದೆಯಾಯ್ತು. ಮನದ ಹೊಲದಲ್ಲಿನ್ನೂ ನೀ ಬರದೇ ಸಂಕ್ರಾಂತಿ ಎಲ್ಲಿ?

ಅಂದೇ ಹೇಳಿಬಿಡಬೇಕಿತ್ತು. ಇಂದು ಬೇಡ ಅಂದುಕೊಂಡಿದ್ದೆ ತಪ್ಪಾಯ್ತು. ಅಂದು-ಇಂದಿಗೆ ನಡುವೆ ಅದೆಷ್ಟು ಹನಿ ಮಳೆ ಬಂದಿದೆ. ಕೆರೆ-ಕಟ್ಟೆಗಳ ಸಂದಿದೆ. ಸಂದಿಸುವಾಗೆಲ್ಲ ನಿನ್ನ ನೆನಪಿನೊಕುಳಿಯಲಿ ಮಿಂದಿದೆ. ಮಿಡಿದಿದೆ. ಅಂದಿನ ದಿನವೇ ಬೇರೆ, ಬುವಿಗೆ ಬೀಳುವ ಹನಿ, ನಬ ಹೀರಿದ ಹಾಗೆ. ಅಗಲಿಕೆಯ ಕೆನ್ನಾಲಿಗೆಯ ಝಳ ಮುತ್ತಿಕ್ಕಿ ನಿನ್ನ ಸೆಳೆಯುವಾಗ, ಏಕಾಂತನಾಗಿದ್ದೆ. ಎದೆ ಬಡಿತದ ಸದ್ದು ನಿಂತಿತ್ತು ಅರೆ ಕ್ಷಣ ಮೌನವಾಗಿ, ಮೌನಿಯಾಗಿ. ಮತ್ತೆ ನಿನ್ನ ಕಣ್ಣ ರೆಪ್ಪೆಗಳಿಗಂಟಿದ ತೇವ, ತೇಲಿಸಿತು-ತೆವಳಿಸಿತು ಎದೆಯ. “ಮತ್ತೆ ಬರುವೆ, ಕಾಯುವೆಯಾ..” ಎಂದಿತು. ಈಗ ನಾನು ಒಬ್ಬಂಟಿಯಲ್ಲ, ಜಂಟಿ ನೆನಪುಗಳಿವೆ, ಕೋಟಿ ಕನಸುಗಳಿವೆ. ಅವಳ ಚಿತ್ತಾರವೆ ನನ್ನ ಚಿತ್ತದ ತುಂಬಾ ಚಿಟ್ಟೆಯಾಗಿ ಚಿಗುರಿವೆ. ಅವಳ ನೆನಪುಗಳ ಗ್ರಂಥಿಕೆ, ಗಳಿಗೆ-ಗಳಿಗೆಗೂ ಬಿಕರಿ ಯಾಗುತ್ತಿದೆ. ಕಾತುರದ ಆತುರ, ಯಾಕಿರಬಹುದು ಈ-ತರ?

ಕಾಯಬಲ್ಲೆ ಅವಳಿಗೆ ಇಂದಲ್ಲ, ಎಂದೆಂದೂ.. ಆದರೇ ಬರುವಳೇನು?. ಅವಳ ಕಣ್ಣ ಕೆಳಗೆ ಕಮರಿದ ಹನಿ, ನಾನೇ ಆದರೆ?. ಅವಳ ನೆನಪಿನ ಪಡಸಾಲೆಯಲ್ಲಿ ನನ್ನ ನೆನಪೇ ಇಲ್ಲದಿದ್ದರೆ? ಅವಳೆದೆಯ ಮಾರ್ದನಿಯ ಸಂಗೀತದ ಲಯ ನಾನಲ್ಲದಿದ್ದರೆ?. ಕಾಯುವ ಯುಗವೂ ನೋವ ಕೊಡದು. ಮ್ಲಾನ ಮೌನದಲೊಮ್ಮೆ ತೊಟ್ಟಿಕ್ಕುವ ಕಹಿ ನೆನಪುಗಳೆ ಘಾಸಿ ಗೊಳಿಸುತ್ತಿವೆ. ಬರುವೆಯಾದರೆ ಬಂದು ಬಿಡು. ಬರದೇ ಹೋದರೂ ಹೇಳಿಬಿಡು. ಕಾತುರಕೂ ಅತೂರವೇ? ಕಾತುರಕೂ ಇದು ತರವೇ?. ನಿನ್ನ ನೆನಪು ನೋವಾಗದು ಗೆಳತಿ, ಒಮ್ಮೆ ಮೊಗ ಕೊಟ್ಟು ನಗು ಹರಿಸು. ಅಗಲುವ ಪ್ರೀತಿಗಿಂತ, ನೆನಪಿನೊಳಗಿನ ಭೀತಿಯೇ ಕಂಟಕ. ಕಾಯುತ್ತಲಿರುವೆ ಹನಿ ಮಳೆ ಹೊಳೆಯಾಗುವ ವರೆಗೆ, ನೀ ಬರುವ ದಾರಿಯ ತಂಪಿಸುವ ವರೆಗೆ....


 -ದಿಲೀಪ್ ಶೆಟ್ಟಿ.      

ಚಿತ್ರ ಕೃಪೆ ಅಂತರ್ಜಾಲ

ಮಂಗಳವಾರ, ಮಾರ್ಚ್ 17, 2015

ಅವಳೆದೆಯ ಗಡಿಯಾರ

ಅವಳೆದೆಯ ಗಡಿಯಾರ ನನ್ನ ನೊಡುವ ಹೊತ್ತು,
ಗಂಟೆ ಗಂಟೆಯೂ ನಿಮಿಷ.
ಮುಳ್ಳು ಮುಳ್ಳನು ಚುಂಬಿಸುತಿರೆ
ನಿಂತೇ ಬಿಡಬಾರದಿತ್ತೆ ವರುಷ.

ಮೊನ್ನೆ ಮಧ್ಯಾಹ್ನ, ನಿನ್ನೆ ನಡುಗುವ ಚಳಿ,
ಮುಂಜಾವಿನ ಮಂಪರು, ಸಂಧ್ಯಾಕಾಲದ ನೆಳಲು,
ನಿನ್ನ ನೆನಪು ಮಾಡದ ಗಳಿಗೆ, ನೆನೆದು ಹೋದ ದೀವಿಗೆ.
ನೀ ಇರದಿರೆ ಮನದೊಳಗೆ, ಮುರಿದ ಹಾಗಿದೆ ಮನದ ಮಳಿಗೆ.

ಇಂದೆಕೊ ಕೆಟ್ಟಿರಬೇಕು ಗಡಿಯಾರ, ಡವ-ಡವದ ಸದ್ದಿಲ್ಲ.
ಮುಳ್ಳು ಮಿಟುಕುತಲೂ ಇಲ್ಲ.
ಪ್ರತಿ ಕ್ಷಣವೂ ಯುಗದಂತೆ, ಹೊಸ ಪರ್ವ ಪುಟಿದಂತೆ.
ಕಾಲನ ಕಾಲ್ಕೆಳಗೆ ಗಿರಕಿ ಹೊಡೆದಂತಿತ್ತು.

ಏನು ಹೇಳದೆ, ಕಣ್ಣು ಮಿಟುಕಿಸದೆ, ಸದ್ದೆ ಮಾಡದೆ
ಗುಳಿ ಕೆನ್ನೆಗೊಂದಿಷ್ಟು ಮುತ್ತನುದುರಿಸಿ ನೀ ಓಡಲು
ನನ್ನೆದೆಯ ಗಡಿಯಾರ ನಿನ್ನ ಬಡಿತವ ಅನುಕರಿಸಿ,
ಒಂದೇ ದಾಟಿಯಲಿ ಮತ್ತೆ ಡವ-ಡವಿಸುತಲಿತ್ತು.

ದಿಲೀಪ್ ಶೆಟ್ಟಿ.
(ಚಿತ್ರ ಕೃಪೆ: ಅಂತರ್ಜಾಲ)

ಭಾನುವಾರ, ಫೆಬ್ರವರಿ 8, 2015

ಹೌದು... ನನ್ನದೇ ತಪ್ಪು

ಅಂದು, ಕಣ್ಣು ಮುಚ್ಚಿ ಕೂರಬಹುದಿತ್ತು,
ಹೌದು. ನನ್ನದೇ ತಪ್ಪು.

ಕಪ್ಪು ಕನ್ನಡಕವಾದರೂ ಹಾಕಬೇಕಿತ್ತು
ಹೌದು. ನನ್ನದೇ ತಪ್ಪು.
ಅತ್ತ ಕಡೆ ನೋಡಿಯೂ, ನೋಡಬಾರದಿತ್ತು,
ಹೌದು. ನನ್ನದೇ ತಪ್ಪು.
ನೀಳ ಕೇಶ ಎದೆಯ ಸವರುವಾಗ ಹೇಳಬೇಕಿತ್ತು,
ಹೌದು. ನನ್ನದೇ ತಪ್ಪು.

ನನ್ನ ನೋಡಿ ಮುಗುಳ್ನಕ್ಕಾಗ , ನಗಬಾರದಿತ್ತು.
ಹೌದು. ನನ್ನದೇ ತಪ್ಪು.
ಮನ ಪತಂಗವಾದಾಗ , ಕಟ್ಟಿ ಹಾಕಬೇಕಿತ್ತು
ಹೌದು. ನನ್ನದೇ ತಪ್ಪು.
ಹೃದಯದಬ್ಬರ ಏರುವಾಗ, ಬುದ್ದಿ ಹೇಳಬೇಕಿತ್ತು.
ಹೌದು. ನನ್ನದೇ ತಪ್ಪು.
ಚುಂಬಕವನಿತ್ತು ಎದೆಯ ಕಸಿಯುವಾಗ, ಸುಮ್ಮನಿರಬಾರದಿತ್ತು.
ಹೌದು. ನನ್ನದೇ ತಪ್ಪು.
ಎದೆಗೆ-ಎದೆಯ ಅಂಟಿಸಿ, ಮೈ-ಮನವೆರಡು ಸಂದಿಸಿ-ಸ್ಪಂದಿಸುವಾಗ
ಸರಿದುಬಿಡಬೇಕಿತ್ತು.
ಹೌದು. ನನ್ನದೇ ತಪ್ಪು.

ದಿಗಂತದೊಳು ಮುಂಜಾನೆ, ಕೆಂಡ-ಮಂಡಲವಾದಗ ಮೌನಿಯಾಗಿರಬೇಕಿತ್ತು.
ಹೌದು. ನನ್ನದೇ ತಪ್ಪು.
ಎದೆಯ ಜೋಳಿಗೆಯಲಿ ಸಂದೇಹದ ಸರ್ಪ ಮೊಟ್ಟೆಯೊಡೆವಾಗ
ಕಾವು ಕೊಡಬಾರದಿತ್ತು.
ಹೌದು. ನನ್ನದೇ ತಪ್ಪು.
ಕಣ್ಣೀರಲದ್ದಿದ ಒದ್ದೆ ಕಣ್ಣದು ಅಳುವಾಗ, ಕಣ್ಣೀರನೊರೆಸಬೇಕಿತ್ತು.
ಹೌದು. ನನ್ನದೇ ತಪ್ಪು.
ಪ್ರೀತಿ ಬೀಳನು, ಬೀಳಿಸಿ ನಡೆವಾಗ, ಬೀಳ್ಕೊಡಬಾರದಿತ್ತು.
ಹೌದು. ನನ್ನದೇ ತಪ್ಪು.
ಇಂದು, ನೇಗಿಲಿಗೆ ಸಿಕ್ಕ ಕಸ ನನ್ನೆದೆ, ಚಿಂದಿಯಾಗಿದೆ. 
ಆದರೂ ಅಳಬಾರದಿತ್ತು
ಹೌದು. ನನ್ನದೇ ತಪ್ಪು.

-ದಿಲೀಪ್ ಶೆಟ್ಟಿ

(ಚಿತ್ರ ಕೃಪೆ: ಅಂತರ್ಜಾಲ)

ಭಾನುವಾರ, ಸೆಪ್ಟೆಂಬರ್ 28, 2014

ಸ್ವಾಣಿ ಆರತಿ


         ಅದ್ ಸ್ವಾಣಿ ತಿಂಗಳ್ ಕಾಲ. ಕೆರೆ ತುಂಬಾ ನೀರ್ ತುಂಬ್ಕಂಡ್, ಗದ್ದೆ ಅಂಚಿನ ತುಂಬಾ ಲಾಯಿಕ್ ಹುಲ್ಲ್ ಬೆಳು ಕಾಲ. ಅಲ್ಲಲ್ಲ್ ಸ್ವಲ್ಪ ಸ್ವಲ್ಪ ಸ್ವಾಣಿ ಹೂಗ್ ಮಂಡಿ ಎತ್ತುಕ್ ಶುರು ಆಯಿತ್. ನಾವು ದಿನ ನಿತ್ಯದಂಗೆ ನಿತ್ಯಣ್ಣನ್ ಗೆದ್ದಿ ದಾಂಟ್ಕ೦ಡ್ ಸಾವಂತ್ರ್ ಮನಿ,ಕಟ್ಟಿತನ ಸುತ್ತ್ ಹಯ್ಕಂಡ್ ಹಾಂಗೂ- ಹೀಂಗೂ ಚಡ್ಡಿ ಗೋನ್ರ್ ಮಾಡ್ಕೊಳ್ಳದೆ ಶ್ರೀ ಮಹಾಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆಗೆ ಸಸೂತ್ರವಾಗಿ time ಸರಿಯಾಯಿ ಬಂದ್ ತಲುಪ್ತ್. ಪ್ರಾರ್ಥನೆ ಆದ್ಮೆಲೆ ಶ್ರೀಧರ್ ಮಾಷ್ಟ್ರ್ ಒಂದ್ ಗಂಡಿನ್ ಹತ್ರ ನೋಟಿಸ್ ಕಳ್ಸಿ ಕೊಟ್ರ್. ನಮ್ಮ್ class ಮಾಷ್ಟ್ರ್ ಅದನ್ನ ಓದಿ ಹೇಳುಕ್ ಶುರು ಮಾಡ್ರ್  “ ಇದೆ ಬರುವ ಶುಕ್ರವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೋಣೆ ಆರತಿಯನ್ನು ಹಮ್ಮಿ ಕೊಂಡಿದ್ದು ....” ಆಮೇಲೆ ಏನೋನೊ ಹೇಳ್ತಿದ್ರ್, ನನ್ ಕೆಮಿಗ್ ಅದ್ ಕೆಂತಿರ್ಲಿಲ್ಲ. ನನ್ನ್ ಮನಸ್ಸು ಬೇರೇನೆ ಹೇಳ್ತೀತ್ತ್. “ಇದೆ ಬರುವ ಶುಕ್ರವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೋಣೆ ಆರತಿಯನ್ನು ಹಮ್ಮಿ ಕೊಂಡಿದ್ದು, ಒಳ್ಳೆ ಗಟ್ಟಿ ಇರೊ ಜರಿ ಕೊಟ್ಟೆ ತಗೊಂಡು ಬರಬೇಕಾಗಿ ವಿನಂತಿ. ತಪ್ಪಿದಲ್ಲಿ ಹೊದಳ್ ಪಂಚಕಜ್ಜಾಯ ಕೊಡುವುದಿಲ್ಲ..” ಅಂತಿತ್ತ್ ನನ್ನ ಮನ್ಸ್.
 Inline image 3

        ಪ್ರತಿ ವರ್ಷ ಶಾಲಿ ಪರವಾಗಿ ಮಾಷ್ಟ್ರು, ಮಕ್ಕಳು ಎಲ್ಲ ದುಡ್ಡ್ ಒಟ್ಟಾಕಿ ಉಳ್ತೂರ್ ದೇವಸ್ಥಾನದಲ್ಲಿ ಒಂದ್ ಪೂಜಾ ಕೊಡುದ್ ವಾಡಿಕಿ. ಉಳ್ತೂರ್ ಮಕ್ಕಳಿಗೆ ಸೋಣೆ ಆರತಿ ಹೊಸದೆನಲ್ಲಾ. ಸ್ವಾಣಿ ತಿಂಗಳ್ ತುಂಬಾ ನಡೀತಾ ಇರತ್ತ್. ದಿನ ಹೊಯಿಲಕ್. ಆದ್ರೆ ನಮ್ಗೆ,ಗುಳ್ಳಾಡಿಯರಿಗೆ ಅದ್ ಒಂಥರಾ ಹಬ್ಬ ಇದ್ದಂಗೆ. (ಈಗೀಗ ನಮ್ಮೂರಲ್ಲೂ ಸ್ವಾಣಿ ಆರತಿ ಮಾಡ್ತ್ರ್ ಅಂದ್ ಮಾಡ್ವ). ಆ ಹೊದಳ್ tasteಎ ಬೇರೆ. “ಬೋದಳ ನೂ ಬಲ್ಲ ಹೊದಳ್ ಬೆಲ್ಲ” ಅಂದಂಗೆ. Next ದಿನ ಶಾಲೆಗ್ ದುಡ್ಡ್ ಒಟ್ಟ್ ಹಾಕುಕ್ ಶುರು ಮಾಡ್ರ್. ಎಲ್ಲರಿಗೂ 50 ಪೈಸೆಯೊ ಒಂದ್ ರೂಪಾಯಿನೊ ತಪ್ಪುಕ್ ಹೇಳಿರ್ (ಗನ ಜರಿಕೊಟ್ಟಿ ಜೊತೆಗೆ). ಶಾಲಿ ಹಣಕಾಸು ಮಂತ್ರಿ ಗಳು ಕಂಪಾಸ್ ಬಾಕ್ಸ್ ಹಿಡ್ಕೊಂಡು ಕ್ಲಾಸಿಂದ ಕ್ಲಾಸಿಗೆ ಅಲುಕ್ ಶುರು ಮಾಡ್ದ. ನಮಗ್ ಕುಷಿಯೊ ಕುಷಿ. ಶುಕ್ರವಾರ ಯಾರ್ ಯಾರ್ ಕ್ಲಾಸ್ ಇತ್ತ್ ಅಂದಳಿ ಒಂದ್ ಕಣ್ಣ್ ಹಾಕ್ತ್. ಒಹೋ.. ಎಲ್ಲರದ್ದು ಕ್ಲಾಸ್ ತಪ್ಪಿಹೋತ್ತ್. ಗುರುವಾರ ಸಾಯಂಕಾಲ home-work ಮಾಡ್ಕರಿಲ್ಲ. ಗುಡ್ಡೆಗ್ ಲಯಿಕ್ ಮಾಡಿ ಹೊಡ್ಕ್ಲಕ್. ಅಷ್ಟಲ್ಲದೆ ಹೂ ಕೊಯ್ಕಂಡ್ ಹ್ವಾಪುಕೆ, ಅದಕ್ಕೆ ಇದಕ್ಕೆ ಅಂದೆಳಿ class ಬಿಟ್ಟ್ ಊರ್ ತಿರ್ಗುಕ್ ಹೊಯಿಲಕ್. ಒಂದ್ ಸ್ವಾಣಿ ಆರತಿಯೆಗೆ ಎಷ್ಟೆಲ್ಲ ಉಪಯೋಗ ಇತ್ತ್ ಕಾಣಿ. ಯಾಕಾರು ದಿನಾ ಸ್ವಾಣಿ ಆರತಿ ಬತ್ತಿಲ್ಲ ಅಂದಳಿ ಬೆಡ್ಕಂಡದ್ದು ಇತ್ತ್.
 Inline image 4

   ಅಂತೂ ಇಂತು ಆ ಶುಕ್ರವಾರ ಬಂದೆ ಬಿಡ್ತ್. ನಾನ್ ಚಂದ್ರಣ್ಣನ್ ಅಂಗಡಿಗ್ ಹೊಯಿ ಒಂದ್ ಒಳ್ಳೆ ನಾಲ್ಕಾಣಿ ಜರಿ ಕ್ವಟ್ಟಿ ತಕನ್ದ್ ಬಂದಿದಿ. ಅದೂ ಕಮ್ಮಿ ಆದ್ರೆ ಒಂದ್ ಕಾಲಿ ಟಾಮ್ ಹಾಳಿನೂ ಮುದ್ದಿ ಮಾಡಿ ಕಿಶೆಗ್ ಇಟ್ಕಂಡಿದ್ದಿ. ಎಲ್ಲ ವಿಧ್ಯಾರ್ಥಿಗಳೂ ಸಾಲಾಗಿ ದೇವಸ್ಥಾನದ ಬದಿಗ್ ಹೊಯಿಟ್ರ್. ದೇವಸ್ಥಾನದ ಜಗಲಿ ತುಂಬಾ ಮಕ್ಕಳ್ ಕುಕಂಬುಕ್ ಶುರು ಮಾಡ್ರ್. ನಾನು, ಅಮಿತ, ಪ್ರವೀಣ,ಸುಶಾಂತ ಒಂದ್ ಬದಿ ಮೂಲಿ ಹಿಡ್ಕಂಡ್  ಕೂಕಂತ್. ಬಟ್ರ್ ಮಂತ್ರಕ್ಕಿಂತ ಮಕ್ಕಳ್ ಗೌಜೆ ಜಾಸ್ತಿ ಆಯ್ತ್. ಚಂದ್ರ್ ಮಾಷ್ಟ್ರ್ ಒಂದ್ look ಕೊಟ್ರ್ ಕಾಣಿ,“ಗಪ್ಪ್ ಚುಪ್ ಬಾಯಿ ಮುಚ್”. ಸುಶಾಂತ ಬಪ್ಪತಿಗೆ ನಾಲ್ಕಾಣಿ ರಸ್ಗುಲ್ಲ ಹಿಡ್ಕಂಡ್ ಬಂದಿದ್ದಎಲ್ಲರೂ ಒಂದ್ ಒಂದೇ ಯಾರಿಗೂ ಗೊತ್ತಯ್ದೆ ಇಪ್ಪುವಂಗೆ ಬಾಯಿಗ್ ಹಯ್ಕಂಬು ಶುರು ಮಾಡ್ತ್. ಪೂಜವೂ ಶುರು ಆಯ್ತ್. ಬಟ್ರ್ ದೊಡ್ಡ ದೊಡ್ಡ ಆರತಿ, ಕಾಲ್ದೀಪಕ್ಕೆ ಬತ್ತಿ ಹಾಕಿ readyಮಾಡುಕ್ ಶುರು ಮಾಡ್ರ್. ಎಲ್ಲ ಗಂಟಿ ಬಡುಕ್ ಶುರು ಮಾಡ್ರ್. ವಾಧ್ಯಗೋಷ, ಮಂತ್ರ, ಮಂಗಳಾರತಿಗಳು ಸೀದಾ ಕೈಲಾಸಕ್ಕೆ ಕೇಳುವಷ್ಟು ಜಾಸ್ತಿ ಆಯ್ತ್. ಮಹಾ ಮಂಗಳಾರತಿ, ನೈವೇದ್ಯ ಎಲ್ಲ ಮುಗೀತ್. ಎಲ್ಲರೂ ಅಲ್ಲೇ ಅಡ್ಡ್ ಬಿದ್ದ್ ದೇವ್ರಿಗೆ ಕೈ ಮುಗುಕ್ ಶುರು ಮಾಡ್ರ್. ನಾನು ಬಕ್ತಿಯಿಂದ ಅಲ್ಲೇ ಮಂಡಿ ಊರಿ ಬೆಡ್ಕಂಡಿ. ಮಂಡಿ ಮೇಲ್ ಎತ್ತುದ್ರೊಳ್ಗೆ ಆಚಿ-ಈಚಿ ಜಾಗ ಕಾಲಿ. ಎಲ್ಲ ಪಂಚಕಜ್ಜಾಯಿಗ್line ನಿಲ್ಲುಕ್ ಶುರು ಮಾಡಿರ್.
 Inline image 5

ನಾನ್, ನಾನೇ ಬುದ್ದಿವಂತ. ನಾಲ್ಕಾಣಿ ಕೊಟ್ಟ್ ಜರಿ ಕ್ವಟ್ಟಿ ತಂದಿದಿ ಅಂದಳಿ ಮಾಡದ್ದ್. ಈಗ ಕಂಡ್ರೆ ಒಬ್ಬೊಬ್ಬ್ರತ್ರ ಕೈ-ಚೀಲದ್ ಅಷ್ಟ್ ದೊಡ್ಡ್ ಜರಿ ಕ್ವಟ್ಟಿ ಇತ್ತ್. ಹಾಳಾಯ್ ಹೊಯಿಲಿ ಅಂದೆಳಿ ನಾನು ಲೈನಿಗ್ ನಿತ್ಕಂಡಿ. ಜಯಲಕ್ಷ್ಮಿ ಮೇಡಂ ಎರಡ್ ಲೈನ್ ಮಾಡುಕ್ ಹೆಳ್ರ್. ಈಗ decision time.  ಒಂದು ತಪ್ಪು ನಿರ್ದಾರ ನಮ್ಮ ಜರಿ ಕ್ವಟ್ಟಿಗೆ ಏನೂ ಸಿಗದೆ ಇರೊ ಹಾಗೆ ಮಾಡುತ್ತೆ. ಆದೇನಪ್ಪ ಅಂದ್ರೆ ಎರಡು lineನಲ್ಲಿ ಯಾವ line ನಲ್ಲಿ ನಿಲ್ಲುದ್ ? ಅಂದೆಳಿ. ಯಾಕೆ ಅಂದ್ರೆ ಒಂದ್ lineನಲ್ಲಿ ಹೊದಳ್ ಹಂಚ್ತಿದ್ದದ್ದ್   ಅನಂತ್ ಮಾಷ್ಟ್ರ್. ಇನ್ನೊಂದ್lineನಲ್ಲ್ ಜಗ್ನಾತ್ ಮಾಷ್ಟ್ರ್. ಅನಂತ್ ಮಾಷ್ಟ್ರ್ ಕೈ ಸಣ್ಣದ್, ಜಗ್ನಾತ್ ಮಾಷ್ಟ್ರ್ ಕೈ ದೊಡ್ಡದ್. (ಆವಾಗವಾಗ ಬಡ್ಗಿ ತಿಂದ್ರೆ ಇದೆಲ್ಲ ಗೊತ್ತಾತ್ತ್) ಹಾಂಗಾಯಿ ಅನಂತ್ ಮಾಷ್ಟ್ರ್ ಎಷ್ಟೇ ದೊಡ್ಡ ಮುಷ್ಟಿ ಕಟ್ರೂ ಜರಿ ಕ್ವಟ್ಟಿಗೆ ತುಂಬುವಷ್ಟ್ ಸಿಕ್ಕುದಿಲ್ಲ ಅಂದೆಳಿ line startingಅಲ್ಲ್ ಯಾರ್ ಇದ್ರ್ ಅಂದೆಳಿ ಕಾಂಬುಕ್ ಶುರು ಮಾಡ್ತ್. ಚಂದ್ರ್ ಮಾಷ್ಟ್ರ್ ಲೈನ್ ಬಿಟ್ಟ್ ಹ್ವಾರೆ ಹೊಡಿತ್ರ್, ಆದದ್ದ್ ಆಯಿಲಿ ಮಾಲಿಂಗೇಶ್ವರ ಇದ್ದ ಅಂದೇಳಿ ಎರಡನೇ ಲೈನೆಗ್ ನಿತ್ಕಂಡಿ. ಪ್ರವೀಣ ಅಮಿತ ಆಚಿ ಲೈನೆಗ್ ನಿತ್ಕಂಡ್ರ್. “ಪ್ರತಿ ವರ್ಷ ಜಗ್ನತ್ ಮಾಷ್ಟ್ರ್ ಈ ಲೈನೆಗೆ ಪಂಚಕಜ್ಜಾಯಿ ಕೊಡುದ್. ಈಚಿಗ್ ಬಾಪ್ಪುದಾರ್ ಬಾ..” ದೊಡ್ಡ್ ಸಂಬೋಯಿತನ ಕಂಡೆಗ್ ಹೆಳ್ದ ಪ್ರವೀಣ. ನಂಗೂ ಹೌದ್ ಅಂಬಗ್ ಆಯ್ತ್. “ಹ್ವಾ ಸುಶಾಂತ, ಆಚಿಗ್ ಹ್ವಾಪೂವನಾ ” ನಾಲ್ಗೆಗ್ ನೀರ್ ತುಂಬ್ಕಂಡ್ ಕೇಂಡಿ. “ಮಾಷ್ಟ್ರ್ ಇಲ್ಲೇ ಇದ್ರ್ ಮರೆ. ಸುಮ್ನಯ್ಕೊ”ಅಂದ. ಅಷ್ಟೊತ್ತಿಗಾಗ್ಲೆ ನಮ್ಮ ಹರ್ಷ ದೇವಸ್ಥಾನದ ಬಾಗ್ಲ್ ಹತ್ರ ಬಂದಿದ. ಅವ್ನಿಗ್ ಯಾರ್ ಯಾವ್ ಲೈನೆಗೆ ಹೊದಳ್ ಕೊಡ್ತ್ರ್ ಅಂದೇಳಿ ತೊರ್ತಿತ್ತ್. ಅವ ಪಟ್ಟ ಕಂಡ್ ಜಗ್ನಾತ್ ಮಾಷ್ಟ್ರ್ ಅಂದ. “ನಾವು ಕುಶಿಯಿಂದ ಅಲ್ಲೇ ಒಂದ್ round ಡಾನ್ಸ್ ಮಾಡ್ತ್”. ಅಂತೂ ಇಂತು ನಮ್ಮ ಸರದಿ ಬಂತು. ಅರ್ದ ಜರಿ ಕ್ವಟ್ಟಿ ತುಂಬಾ ಹೊದಳ್ ತುಂಬ್ಸ್ಕಂಡ್ ಮನಿ ಬದಿಗ್ ಹ್ವಾಪು ಶುರು ಮಾಡ್ತ್. ದಾರೆಗ್ ಯಾರಾದ್ರೂ ಪ್ರಸಾದ ಕೆಂತ್ರ್ ಅಂದೆಳಿ ಓಡುಕ್ ಶುರು ಮಾಡ್ದನ್ ಮನಿ ಕಣ್ಣದೆಗೆ ನಿಂತದ್ದ್.

ಅವತ್ತಿನ ಆ ದಿನಗಳನ್ನ ನೆನ್ಸ್ಕಂಡ್ರೆ ಇವತ್ತಿಗೂ ಮೈ ಜುಮ್ಮ್ ಅಂತತ್ತ್. ಮತ್ತೆ ಶಾಲಿ ಚೀಲ ಹೊಗ್ಲ್ ಹಯ್ಕಂಡ್ ಶಾಲೀಗ್ ಓಡುವ ಅನ್ಸುತ್ತ್. ಎನಂತ್ರಿ??

 (ಚಿತ್ರ ಕೃಪೆ: ಅಂತರ್ಜಾಲ, gulfkannadiga.com)

ಬುಧವಾರ, ಮೇ 1, 2013

ಗಾಂಧಿ ನೋಟು



               ---೧---
ಹತ್ತಿ ಮಾಮರವೊಂದು ಕೊಯ್ದ ಕಾಯ್ಗಳ
ಮೂಟೆ ಕಟ್ಟಿ, ಮಾಡಿದ ಕಾಯಕಕ್ಕೆ
ಕೊಟ್ಟರೊಂದು ಗಾಂಧೀ ನೋಟು.
ನಗು ಮೊಗದ ಗಾಂಧೀಜಿ ಮಾಡಿದರು ಸನ್ನೆ
ಒಂದರ ಪಕ್ಕಕ್ಕೆ ಎರಡೆರಡು ಸೊನ್ನೆ.

ನಿನ್ನೊಡೆಯ ನಾನು, ಕಾಲಿ ಕಾಗದ ನೀನು 
ಗರ್ವದಲಿ ಗದರಿಸಿದೆ, ಬಂದಿಸಿ ಹೆದರಿಸಿದೆ
ಗಾಳಿಯಾಡಲು ಬಿಡದೆ, ಕಿಸೆಯ ಸಂದಿಯಲಿ.

              ---೨----
ಹೊಟ್ಟೆಯ ತಾಳಕೆ, ಶೆಟ್ಟಿ ಅಂಗಡಿ ಕಂಡು,
ಹಿಟ್ಟು ತಿನ್ನುವ ಹೊತ್ತಿಗೆ ,ಗಲ್ಲ ಪೆಟ್ಟಿಗೆಯಲಿ 
ನಲ್ಲೆಯರೊಡಗೂಡಿ ನಲಿಯುತ್ತಲಿತ್ತು 
ಗಾಂಧಿ ನೋಟು, ಪಲ್ಲಂಗದಲಿ ಕೂತು.

ಮತ್ತೆ ಪೌರುಷದಿ ತಲೆಯೆತ್ತಿ, ನನ್ನೆಡೆ ಕುಹಕಿಸಿ, 
ಸೀಟಿ ಹೊಡೆದು, ಗಲ್ಲ ಮುರಿದು, ಕಣ್ಣು ಮಿಟುಕಿಸಿ,
ನನ್ನೊಡೆಯ ನಾನೇ ಎಂದಿತು ಗರ್ವದಲಿ.

              ---೩----
ಚೌತಿ ಕಾಲದ ಹೊತ್ತು, ವಂತಿಗೆಯ ಬಿಸಿ ತುತ್ತು.
ಸರಸದಲಿ ಬೆರೆತಿದ್ದ ನೋಟಿನಂಗಿಯ ಎಳೆದು,
ಶೆಟ್ಟಿ ಕೊಟ್ಟನು ದೇಣಿಗೆಯ, ಗಾಂಧಿ ನೋಟಿನ ಕಾಣಿಕೆಯ,
ಹುಡುಗರ ಪಂಕ್ತಿಗೆ, ಚೌತಿಯ ವಂತಿಗೆ.

ಮತ್ತೆ ಪಲಾಯನ, ಮತ್ತೆ ಪ್ರಯಾಣ
ಹೊಸ ಮುಖದ ಕನ್ನಿಕೆಯರೊಡಗುಡಿ 
ಗಾಂಧಿ  ನೋಟು. ಪಲ್ಲಂಗದಲಿ ಕೂತು.

             ---೪---
ಸಿರಿವಂತನಿಗೆ ಅದು ಸಾಮಾನ್ಯ ನೊಟು.
ಬಡತನಕ್ಕದು ದಾರಿದ್ರ್ಯ ದ್ವಂಸಿಸಿದ ಭಗವಂತನ ಓಟು.
ಆಳುವ-ನಗುವ ಜನರೊಡೆ ಬೆರೆತು
ಕಣ್ಣೀರು ಹಾಕಿದೆ, ಕನ್ನಡಕ ಒಡೆದಿದೆ.
ಬದುಕ ಬವಣೆಗೆ ಕೊಂಚ ಬಣ್ಣವು ಮಾಸಿದೆ.
ಆದರೇಂದಿಗೂ ಇಳಿದಿಲ್ಲ ಗಾಂಧಿ ನೋಟಿನ ಬೆಲೆ.

ಬದಲಾಗು ಬದಲಾವಣೆಗೆ, ಕಳೆದು ಕೊಳ್ಳದೆ 
ನಿನ್ನ ಬೆಲೆ, ಕೊಳೆತು ಕೊಲ್ಲದಿರು ನನ್ನ ಬೆಲೆ. 
ಎನ್ನುತಲಿತ್ತು ಗಾಂಧಿ  ನೋಟು. ಪಲ್ಲಂಗದಲಿ ಕೂತು.

-ದಿಲೀಪ ಕುಮಾರ ಶೆಟ್ಟಿ.