ಓ ದೇವ....
ಓ ದೇವ .....
ಮನ್ನಿಸು, ನನ್ನನೊಮ್ಮೆ ಮುದ್ದಿಸು.
ಹಿಂಜರಿಯ ಬೇಡ, ಹೀoಕರಿಸ ಬೇಡ.
ಎದೆಗೆ ಅಪ್ಪಿ, ಉದ್ದರಿಸು.
ಹದ ಮರೆತಿದ್ದೆ, ಮಿತಿ ಮೀರಿದ್ದೆ.
ಅದ ಮರೆತು, ಮತ್ತೆ ಮೆರೆಸು.
ಮನದ ಕೊಳೆಯ ಕಲೆಯು
ಕೊಳೆತು ಕಾರುತಲಿತ್ತು,.
ಕಾಮದ ಕಾಗೆಯ ಕೂಗಿನ ಕಂಪದು
ಕಂಪಿಸಿ ಕೆಮ್ಮುತಲಿತ್ತು.
ಜವ್ವನದ ಉನ್ಮಾದದ ಮದ
ಮಸಣದ ಹೂವಿಗೂ ಹಲುಬುತಲಿತ್ತು.
ಕಾಲ್ ತೊಡೆಗಳ ಬಲ
ಬಳುಕುವ ಸೊಂಟದ ಸದೆ ಹುಡುಕುತಲಿತ್ತು.
ಅಹಂಕಾರದ ಹದ ತಪ್ಪಿ, ಹೆದರಿಕೆಗೆ ಹೆದರಿಸಿ
ಕತ್ತ ಸಡಿಲಿಸಿದ ಕುನ್ನಿಯಂತೆ
ಕಿತ್ತು ತಿನ್ನಲು ಹವಣಿಸುತಲಿತ್ತು
ಕೆನ್ನೆಗುಳಿ ಮೇಲೆ ರೋಷಾದ್ವೇಷದ ಜ್ವಲೆ
ಜ್ವಾಲಾಮುಖಿಯನೇ ಜ್ವಲಿಸಿ ಪ್ರಜ್ವಲಿಸುವಂತಿತ್ತು..
ಅಬ್ಬರದ ಆರ್ಭಟವು ಸಮುದ್ರದಲೆಗಳನೂ
ನಿಬ್ಬೆರಗಿಸಿ ಬೊಬ್ಬೆ ಇಡಿಸುತಲಿತ್ತು.
ಲಜ್ಜೆಯ ಗೆಜ್ಜೆಯನು ಮಜ್ಜಿಗೆಯ ಮಾಡಿ
ಮುಜುಗರದ ಮಜವ ಮಿಡು-ಮಿಡುಕಿ ಮೊಗೆದು
ಭುವಿಯ ಬಸಿರ ಬಗೆವ ಬಗೆಯ ಬಗೆಗೆ
ಯೋಚಿಸುವ ಕುತಂತ್ರದ ಬಲೆ ಶಕುನಿಯನೂ
ಶಂಕಿಸುತಲಿತ್ತು.
ಬೆತ್ತಲ ಬಾಳದು ಬತ್ತದೆ ಇದ್ದಿತೆ?
ಸತ್ತರು ಹೋಗದು ಮೆತ್ತಿದ ಪಾಪ.
ಕತ್ತಲೆ ಕ್ರಮಿಸಿದೆ, ಕೊಬ್ಬನು ಇಳಿಸಿದೆ
ತಪ್ಪದು ಆಗಿದೆ. ತಿಪ್ಪೆಗೆ ಸೇರಿದೆ.
ಕ್ಷಮಿಸು ಮಹಾಶಯ, ನಿನ್ನೆಡೆ ಬರುತಿಹೆ
ಮೆಲ್ಲಗೆ ಮಲಗಿಸು, ಮನ್ನಿಸಿ ಮಣ್ಣಾಗಿಸು.
-ದಿಲೀಪ್ ಶೆಟ್ಟಿ.
ಎಲ್ಲಾ OK ... ಇಷ್ಟು ಬೇಗ ಮನ್ನಾಗುವಾಸೆ ಏಕೆ ???
ಪ್ರತ್ಯುತ್ತರಅಳಿಸಿ