ಒಂದು ಮುಂಜಾವಲ್ಲಿ ನಿದ್ದೆ ಮಂಪರಿನಲ್ಲಿ
ಸದ್ದು ಮಾಡುತ ಮಗುವು ಕೇಳಿತಮ್ಮನ ಕರೆದು,
ಅಮ್ಮ.. ಅಮ್ಮ.. ಗುರಿ ಎಂದರೇನು?
ಮಗು.., ಗರಿಬಿಚ್ಚಿ ಹಾರುವ ಗುಬ್ಬಚ್ಚಿಗೆ
ಮರಿ ಹಕ್ಕಿ ರೆಕ್ಕೆಯ ಹರಿಬಿಟ್ಟು
ಕೆರೆ, ತೊರೆಯಲೀಜುವ ನೀರಿಂಗೆ
ಸಾಗರವ ಸಂದಿಸುವ ಗುರಿ
ಮಳೆ ಹನಿಯ ಇನಿಯಂಗೆ
ಕಳೆ ತೆಗೆದು ಇಳೆಗೆ
ಹಸಿರನುಡಿಸುವ ಗುರಿ.
ಮಗು ನಿನ್ನ ನಗುವನು
ಮೊಗೆ ಮೊಗೆದು ಹೃದಯದಲಿ
ಮುಡಿ ಕಟ್ಟಿ ಇಡುವ ಗುರಿ.
ಹೇಳು ನಿನ್ನಯ ಗುರಿ
ಹೇಳುವೆನಾವುದು ಸರಿ.
ಹಾಸಿಗೆಯಲಿ ಮಲಗಿಸಲು
ಬಿಡದೆ ಹಟವನು ಮಾಡಿ
ನಿನ್ನ ಮಡಿಲೊಡಲೊಳು ಬೆಚ್ಚಗೆ
ಮಲಗುವ ಗುರಿ.
ಮೀಯುವ ವೇಳೆ ಕಣ್ಣಿಗೆ
ನೊರೆಯ ಬೀಳಿಸಿ ಅಳುವ ನಾಟಕವ ಮಾಡಿ
ನಿನ್ನ ಕರೆದು ನೆನೆದು ನಲಿಸುವ ಗುರಿ.
ಎದೆಗಪ್ಪಿದ ಹೆತ್ತಾಕೆ ಕಣ್ಣಿರ ಕೊಳದೊಳಗೆ
ಸಂತಸಾನಂದದಿ ತೇಲಿ,
ಮಿಡುಕೊ ಮಗುವಿನ ಗಲ್ಲಕಪ್ಪುಗೆಯ ನಿಟ್ಟು
ಗುರಿ ಗೆದ್ದ ಗಿಳಿಹಂಗೆ ಹಿರಿಹಿಗ್ಗಿ ಹರುಷದಿ
ಮತ್ತೆ ಮುತ್ತ ಗೊಂಚಲ ಬೀಳಿಸಿದಳು.
ಎಲ್ಲರಟ್ಟಿಸುವರು ಗುರಿಯ,
ಮರೆತು ಪ್ರೀತಿಯ , ನಗುವ ಭಾಷೆಯ.
ಗುರಿ ಮುಟ್ಟಿ ತಿರುಗಿದರೆ
ಕಡೆಗೊಮ್ಮೆ ಕಾಂಬುವುದು
???????????
ಶೂನ್ಯ ಸಂಪಾದನೆ.
-ದಿಲೀಪ್ ಶೆಟ್ಟಿ.
Excellent dude, keep writing
ಪ್ರತ್ಯುತ್ತರಅಳಿಸಿ