ಕನ್ನಡ ಕಲಿಯಿರಿ. ನಿಮ್ಮ ಅನಿಸಿಕೆಯನ್ನು ಕನ್ನಡದಲ್ಲಿ ನೀಡಿರಿ.


Type in English. Press Space to get it in ಕನ್ನಡ ಲಿಪಿ Press Ctrl+g to toggle between English and Kannada

ಭಾನುವಾರ, ಸೆಪ್ಟೆಂಬರ್ 18, 2016

ತೋಚಿದ್ದು.. ಗೀಚಿದ್ದು.. -1

ಮನಸ್ಸು ಹೇಳಿದ್ದು, ಕನಸು ಕಂಡಿದ್ದು, ಅವಳಿಗೆ ಹೇಳಿದ್ದು, ಸುಮ್ಮನೆ ಗೀಚಿದ್ದು, whatsapp ಸ್ಟೇಟಸ್ ಆಗಿದ್ದು, ಎಲ್ಲವನ್ನೂ ಇಲ್ಲಿ ಗೀಚ್ಚಿದ್ದೇನೆ. ಇನ್ನೊಂದಿಷ್ಟಿದೆ, ಮತ್ತೆ ಇಲ್ಲೇ ಕಕ್ಕುತ್ತೇನೆ. ನಿಮ್ಮ ಅಭಿಪ್ರಾಯ ತಿಳಿಸಿ.

-1-
ಹೆಜ್ಜೆ ಹೆಜ್ಜೆಗೆ ಗೆಳತಿ
ಗೆಜ್ಜೆ ದನಿಯಾಗು.
ನನ್ನೊಲವ ನಲಿವಿನಲಿ
ಬಾ ಮಗುವಾಗು. 

-2-
ನಿನ್ನದರವೇ ಸಾಕು,
ಸುಲಿದ ಕಬ್ಬಿನ ರಸವೇಕೆ,
ಬೊಗಸೆಯಲಿ ಚುಂಬಿಸಿ ಕೊಡು,
ಮೊಗೆದು ಮುದ್ದಿಸುವೆ.

-3-
ನನ್ನೆದೆಯ ಬಿಳಿ ಹಾಳೆ
ನಿನ್ನ ನಗುವಿನ ಪದ ತುಂಬಿ
ಕಾದಂಬರಿಯಾಗಿದೆ.
ನಿಲ್ಲಿಸದಿರು ನಗು ಪುಂಜವ
ಬರೆಯುತ ಸಾಗುವ
ಹೊಸ-ಹೊಸ ಯಶೋಗಾಥೆಯ.

-4-
ಕಾಯುತ್ತಿರುವೆ ಅಂದುಕೊಂಡಿದ್ದೆ,
ಕಾಡುತ್ತಿರುವೆ ಅಂದೆಯಾ...?


-5-
ಎರವಲು ಕೊಡು
ಹಿಡಿ ಪ್ರೀತಿಯ,
ಕೊರಕಲು ಕಾಲುವೆ,
ನನ್ನೆದೆ.

-6-
ಮಾತು ಮಾತಿಗೆ ತಾಗಿ,
ಮೌನದಲಿ ಮುನಿಸೊಂದು
ಮರುಗುತಿದೆ.  
                     

-7-
ನಿನ್ನದರವು ಅದರುವ
ಗಳಿಗೆ.
ನಾಚಿ ನಗುತಿದೆ ಕೆನ್ನೆ-
ಗುಳಿಗೆ.


-8-
ಆಗ,
ಹೇಳದಿದ್ದರೂ ಅರ್ಥವಾಗುತ್ತಿತ್ತು.
ಕನಸಿನೋಲಗದೊಳೇ ಎಲ್ಲ.
ಈಗ,
ಹೇಳಿದರೂ ಭಾವ ಬಂದನವಿಲ್ಲ.
ಕನಸಿನ ಒರತೆಯಲೂ ಶುಷ್ಕವೆಲ್ಲ.


-9-
ಮೌನದಲೆನೋ ಮುದವಿದೆ.
ಮಾತಿನಲೆನೋ ಅಡಗಿದೆ.
ಮೌನ ಮಾತಾಗಿ, ಮಾತೇ ಮೌನವಾಗಿದೆ.
ಗೆಳತಿ,
ಬರೆ ಉಸಿರ ಸಪ್ಪಳ, ಬಿಗಿದಪ್ಪುಗೆ ಸಾಕು.
ನಿನ್ನೊಳು ನಾನಿಂದು, ಬಂದಿಯಾದರೆ ಸಾಕು.


-10-
 ಪ್ರೀತಿಯೊಳಗಿಳಿದ ಪ್ರೇಮಿ,
ಎಂದಿಗೂ ಕವಿ.
ಅರ್ಥವಾಗದೆ ಇದ್ದರೂ
ಅವನ ಕವಿತೆ,
ಇರಲಾರದು, ಪ್ರೀತಿಯಲ್ಲಿ
ಕೊರತೆ.


-11-
ಕೆಟ್ಟ ಹೃದಯಕ್ಕೊ,
ಕೊಟ್ಟ ಮನಸಿಗೋ, ಕಾಣೆ.
ಕಟ್ಟಿ ಹಿಡಿಯಲು ಹೋದೆ. ನನ್ನದೇ ತಪ್ಪು.
ಅವಳೊಂದು ಚಿಟ್ಟೆ.
ನನ್ನದೋ, ಕಾಲಿ ತಟ್ಟೆ.

-12-
ಗೆಳತಿ,
ನಿನ್ನ ಕನಸಿನ ಎಳೆಗಳಲ್ಲೆ,
ನನ್ನ ಬದುಕಿನ ಬಲೆ
ಹೆಣೆಯುವೆ.

-13-
ಮರೆವಿಗೂ ಮರೆತು ಹೋಗಿರಬೇಕು,
ಅವಳ ಮರೆಯುವುದು ಹೇಗೆಂದು.
ನೆನಪು ನೆಪವಾಗುತ್ತಿದೆ.
ಕಣ್ಣು ತೇವವಾಗಲಿ ಎಂದು.

-14-
ನನ್ನದಿರಬಹುದು ತಪ್ಪು,
ಸರಿ ಮಾಡಬಹುದಿತ್ತು.
ತಿದ್ದಿ.
ನಿನ್ನ ನಗುವಿನ ಔಷದವನದ್ದಿ.

-ದಿಲೀಪ ಶೆಟ್ಟಿ.

2 ಕಾಮೆಂಟ್‌ಗಳು: