ಕನ್ನಡ ಕಲಿಯಿರಿ. ನಿಮ್ಮ ಅನಿಸಿಕೆಯನ್ನು ಕನ್ನಡದಲ್ಲಿ ನೀಡಿರಿ.


Type in English. Press Space to get it in ಕನ್ನಡ ಲಿಪಿ Press Ctrl+g to toggle between English and Kannada

ಸೋಮವಾರ, ನವೆಂಬರ್ 28, 2011

ದೊಡ್ಡವರಾಗ್ಬಿಟ್ವಲ್ರೊ.....??????


       ನನಗಿನ್ನು  ನೆನಪಿದೆ, ಪದೆ ಪದೆ ಕೆಸರು ಗದ್ದೆಯಲ್ಲಿ ಬಿದ್ದು ಹೊರಳಾಡಿ ಮನೆಗೆ ಬಂದು ಅಪ್ಪನ ಚಡಿಯೇಟು ತಿಂದು, ಬಿಸಿನೀರ ಬಿಸಿಯಲ್ಲಿ ಅಮ್ಮನ ಜೊತೆ ಆಟವಾಡಿದ ಆ ದಿನ. ತಿನ್ನುತ್ತಿದ್ದ ತಿಂಡಿಯನ್ನು ನಾಯಿ ಕಚ್ಚಿಕೊಂಡು ಹೋದಾಗ ಅದನ್ನಟ್ಟಿಸಿ ಹೋಗಿ ಅದರ ಬಾಯಿಂದ ಕಸಿದು ತಿಂದ ಆ ದಿನ. ದೊಡ್ದವರಾಡುವಾಗ ನನ್ನ ಸೇರಿಸಿಕೊಳ್ಳದೆ ನಿರ್ಲಕ್ಷಿಸಿದಾಗ ಬೌಂಡರಿಗೆ ಹೋದ ಚೆಂಡನ್ನು ಯಾರು ಕಾಣದಂತೆ ಬಾವಿಗೆ ಹಾಕಿದ ಆ ದಿನ. ಪಕ್ಕದ ಮನೆಯ ಅಜ್ಜಿ ಹಪ್ಪಳವ ಬಿಸಿಲಿಗೆ ಒಣಗಲು ಇಟ್ಟಾಗ ಕದಿಯಲು ಹೋಗಿ, ಸಿಕ್ಕಿ ಬಿದ್ದು, ಅಜ್ಜಿ ಕಿವಿ ಹಿಂಡಲು ಬಂದಾಗ ಅತ್ತಂತೆ ಮಾಡಿ ಅಜ್ಜಿಯ ಕೈಯಿಂದಲೆ ಹಪ್ಪಳ ಗಿಟ್ಟಿಸಿಕೊಂಡ ಆ ದಿನ. ಸೈಕಲ್ ಟಯರನ್ನ ಜೋರಾಗಿ ಓಡಿಸಿಕೊಂಡು ಬರುವಾಗ ಪಕ್ಕದ ಬೀದಿಯ ಸತೀಶ ಸೈಕಲ್ ಓಡಿಸಿಕೊಂಡು ಬಂದು "ಏನೊ ಕುಳ್ಳ.. ನಿಂಗೆ ಇದೆ ಸರಿ.." ಎನ್ನುತ್ತಾ ತಲೆ ಮೇಲೆ ಹೊಡೆದು ಹೋದಾಗ "ನಾನು ದೊಡ್ಡವನಾದ ಮೇಲೆ ದೊಡ್ಡ ಸೈಕಲ್ ತಗೊಂಡು ಇವನ ತಲೆ ಮೇಲೆ ಹೊಡಿತೀನಿ.." ಎಂದು ಮನಸ್ಸಲ್ಲೆ ಅಂದುಕೊಂಡ ಆ ದಿನ. ದೊಡ್ಡವರೆಲ್ಲ ಕಿಸೆಯಿಂದ ದುಡ್ಡು ತೆಗೆದು ಐಸ್ ಕ್ರೀಂ ತಿನ್ನುವಾಗ ನಾಲಿಗೆ ಚಪ್ಪರಿಸುತ್ತ ಅವರನ್ನೆ ನೋಡುತ್ತಾ, ಕಿಸೆ ಇಲ್ಲದ, ಕುಂಡಿ ತೋರುವ ಚಡ್ಡಿ ಎಳೆದು ಕೊಳ್ಳುತ್ತಾ ಯಾರಾದರು ನನಗೂ ಕೊಡಿಸಬಹುದು ಎಂಬ ಆಸೆಯಿಂದ ಐಸ್ ಕ್ರೀಂ  ಡಬ್ಬಿಯ ಬಳಿಯೆ ನಿಂತು, ಯಾರು ಕೊಡಿಸದಿದ್ದಾಗ ಮನೆಗೆ ಓಡಿ ಹೋಗಿ ಅಪ್ಪನ ಕಿಸೆಯಿಂದ ಒಂದು ರುಪಾಯಿ ಕದ್ದು ತಂದು ರಾಜ ರೋಷವಾಗಿ ತಿಂದ ಆ ದಿನ. ಪಕ್ಕದ ಮನೆಯಲ್ಲಿ ಮದುವೆಗೆ ಹೊಸ ಬಟ್ಟೆ ಹಾಕಿಕೊಂಡು ಹೋಗುವಾಗ ಅಮ್ಮನ ಹರಿದ ಸೀರೆ ನೋಡಿ "ನಾನು ದೊಡ್ಡವನಾದ ಮೇಲೆ ಅದಕ್ಕಿಂತ ಚೆಂದದ ಸೀರೆ ಕೊಡಿಸುತ್ತೇನೆ.." ಅಂದ ಆ ದಿನ. ಶಾಲೆಯಲ್ಲಿ ಮೇಷ್ಟ್ರು ಹೊಡೆದಾಗ ಅವರ ಸೈಕಲ್ ಪಂಚರ್ ಮಾಡಿ, ಮತ್ತೆ ಸಿಕ್ಕಿ ಬಿದ್ದು ಹುಣಸೆ ಮರದ ಉದ್ದನೆಯ ದಂಟಿನಿಂದ ಹೊಡೆಸಿಕೊಳ್ಳುವಾಗ "ನಾನು ದೊಡ್ಡವನಾದ ಮೇಲೆ ಹೀಗೆ ನಿಮಗೂ ಹೊಡಿತೀನಿ.." ಅಂದು ಕೊಂಡ ಆ ದಿನ. 


       ಬಾಲ್ಯದ ವಯಸ್ಸು ಎಷ್ಟೆ ಇರಲಿ, ಪ್ರೌಢರಾಗುವ ವರೆಗೂ ಕಾಡುವ ಒಂದೇ ಪ್ರಶ್ನೆ "ನಾನು ದೊಡ್ದವನಾಗೊದು ಯಾವಾಗ..?". ನಾನು ಸಂಪಾದಿಸಿ ನನ್ನ ದುಡ್ಡಲ್ಲಿ ಬೇರೆಯವರು ಹೊಟ್ಟೆಯುರಿ ಪಡುವ ಹಾಗೆ ಬದುಕಿ, ಚಿಕ್ಕವನಿದ್ದಾಗ ಹೀಯಾಳಿಸಿದ, ಗೇಲಿ ಮಾಡಿದ ಎಲ್ಲರಿಗು ಬುದ್ದಿ ಕಲಿಸಬೇಕು ಅಂದು ಕೊಳ್ಳುವಾಗೆಲ್ಲ ಗಡಿಯಾರದ ಮುಳ್ಳು ಹೆಬ್ಬಂಡೆ ಹೊತ್ತು ಚಲಿಸುವಂತೆ ಕಾಣುತ್ತಿತ್ತು. ದೊಡ್ಡವರಿಗೆ ಎಲ್ಲ ಸುಖ, ನಮಗೆ ಬರಿ ಪರೀಕ್ಷೆ ಎಂಬ ಸಜೆ. ತಿಂಗಳಿಗೆ ಒಂದೊಂದು ಸಾಲದೆನ್ನುವಂತೆ ಮದ್ಯ ವಾರ್ಷಿಕ , ಮತ್ತೆ ಕೊನೆಗೆ ವಾರ್ಷಿಕ, ಬೆಂದ ಅನ್ನಕ್ಕೆ ವಗ್ಗರಣೆ ಕೊಟ್ಟ ಹಾಗೆ. ಅಯ್ಯೊ ಯಾಕಪ್ಪ ಈ ಪರೀಕ್ಷೆ ಬರುತ್ತೆ???, ಯಾಕಾದ್ರೂ ನಾನು ದೊಡ್ಡವನಾಗಿ ಹುಟ್ಟಲಿಲ್ಲ ಅಂದುಕೊಳ್ಳುವ ಬೇಸತ್ತ ಮನಸ್ಸು.  ಬದುಕಿನ ಪುಟ ತಿರುವಿದಾಗೆಲ್ಲ ಇಂತಹ ಸಣ್ಣ ಸಣ್ಣ ಸಿಹಿ ನಿರಾಶೆಗಳೇ ಹೆಚ್ಚು. ಎಲ್ಲಕ್ಕೂ ಉತ್ತರ  ದೊಡ್ದವನಾಗೋ ಕಾತರ, ಆತುರ. ಪ್ರತಿ ನೆನಪಿನಲಿ ಆತುರವಿದೆ, ಆಡಂಬರ ಇಲ್ಲ. ಪ್ರತಿ ಕನಸಿನಲಿ ಮುನಿಸಿದೆ, ಮತ್ಸರ ಇಲ್ಲ. ಪ್ರತಿ ನಿನ್ನೆಯಲಿ ನಾನಿದ್ದೆ, ನಾಳೆಯ ಗುರಿ ಇತ್ತು, ಆದರೆ ಇಂದು ಏನಿದೆ? ನೆನಪ ಮೂಟೆಯ ಬಿಟ್ಟರೆ ನಗುವ ಕಾರಣ ಹುಡುಕುತ್ತ, ಜವಾಬ್ದಾರಿಯ ನೊಗ ಹೊರಲಾರದೆ, ಹೆಣಗಾಡುವ ಪ್ರಬುದ್ದರು. ಬುದ್ದಿ ಬೆಳೆ ಬೆಳೆಯುತ್ತಿದ್ದಂತೆ  ಮನುಷ್ಯತ್ವದ ಬೆಲೆ ಬದಲಾಗಿ ಯಾಂತ್ರಿಕ ಬದುಕಿನಲ್ಲಿ  ಸ್ವಂತಿಕೆ ಮಾಯವಾಗಿ ಮಾಂತ್ರಿಕನ ಕೈವಶಕ್ಕಾಡುವ ಗೊಂಬೆಗಳಾತ್ತೇವೆ. ತಿನ್ನೋ ಅನ್ನದಿಂದ ಹಿಡಿದು ಮುಖಕ್ಕಂಟಿದ ನಗುವೂ ಕಲುಷಿತ. ಪ್ರೀತಿ, ವ್ಯಾಪಾರದ ವಸ್ತು. ಭಾವನೆ, ಬಣ್ಣ ತೆಗೆದ ತಿಳಿ ನೀಲಿ ನಭ. ಸಂಬಂಧ, ದಿನ ಉದಯಿಸುವ ದಿನಕರನ ಚಾಳಿ. ನೆರೆಮನೆಯವನ ನೆರಳು ಕರಿ ಮೋಡ, ಅಂತರ್ಜಾಲದ ಗೆಳೆಯ ದೇವದೂತ. ವಯಸ್ಸಿಗಂಟಿಕೊಂಡ ಜಾಡ್ಯ, ದೊಡ್ಡವರ ವರ್ತಮಾನದ ವರ್ತನೆ. 



           ಆಸೆಯ ಆಮಂತ್ರಣಕ್ಕೆ ಕಟ್ಟಿಬಿದ್ದು ನಿರಾಶೆಯ ಮಳೆಯಲ್ಲಿ ತೊಯ್ದ ಹತಾಶ ಭಾವ. ಪ್ಯಾಂಟಿನ ಜೇಬಿನೊಳಗೆ ಕೈಬಿಟ್ಟಾಗೆಲ್ಲ ಸಿಗುವ ಗರಿ ಗರಿ ನೋಟುಗಳು ಗೆಳೆತನ ಪ್ರೀತಿ ವಾತ್ಸಲ್ಯಕ್ಕೆ ಕಟ್ಟಿದ ಬೆಲೆ ಎಂಬಂತೆ ಲೇವಡಿ ಮಾಡಿ ಆಡಿಕೊಳ್ಳುತ್ತವೆ, ಹಾಡಿ ಕೊಲ್ಲುತ್ತವೆ. ಬೀದಿ ಬದಿ, ಜಗತ್ತಿನ ಹಂಗಿಲ್ಲದೆ ಮಕ್ಕಳಾಡುವಾಗ ಮತ್ತೆ ಬಾಲ್ಯಕ್ಕಿಳಿದರೆ ಮನಸ್ಸಿನ ತುಮುಲ ವರ್ಣನಾತೀತ. ನಿನ್ನೆಯ ಗುಂಗಿಲ್ಲ, ನಾಳೆಯ ಹಂಗಿಲ್ಲ, ಬೇದ ಭಾವವ ನುಂಗಿಲ್ಲ. ಮನಸ್ಸು ಹೇಳಿದ ಕಡೆಗೆ ಮುಗಿಲು ಮುಟ್ಟುವ ವರೆಗೆ ಚಳಿ,ಮಳೆ ,ಗಾಳಿಯನ್ನು ಲೆಕ್ಕಿಸದೆ ಮುನ್ನುಗ್ಗುವ ಆತ್ಮಸ್ತೈರ್ಯಕ್ಕೆನು ಹೇಳಲಿ?.  ದೊಡ್ದವರಾಗುತ್ತಿದ್ದಂತೆ  ಕಲ್ಮಶವಿಲ್ಲದ ಮನಸ್ಸಿನ ತುಂಬಾ ತುಂಬುವ ಸ್ವಾರ್ಥದ ಪಾಯಿಖಾನೆಯ ನೀರು ಶುದ್ದವಾಗದೆ, ಇಡಿ ಶರೀರವನ್ನೇ ಜರ್ಜರಿತ ಗೊಳಿಸಿ ಅಹಂ ಭಾವವ ಬೆಳೆಸಿ ಕೊನೆಗುಳಿಸುವುದಾದರು ಏನು?? ದಿನಕ್ಕೆ ನಾಲ್ಕು ಬಿ. ಪಿ. ಮಾತ್ರೆ, ಸಕ್ಕರೆ ಕಾಣದ ಕಾಫಿ, ಮಾಡಲೇ ಬೇಕಾದ ವ್ಯಾಯಾಮ ಬಿಟ್ಟರೆ ಕಾಡುವ ಅಪರಾದಿ ಮನೋಭಾವ . ಕಣ್ಣ ಮುಚ್ಚಿ ರೆಪ್ಪೆ ತೆಗೆಯುವುದರೊಳಗೆ ಬಾಲ್ಯ ಬಾಲ ಮುದುರಿಕೊಂಡು  ಬಾಳಲು ಕಲಿತಿರುತ್ತದೆ. ಆಗೆಲ್ಲ ಮನಸ್ಸಿನ್ನ ಪಟಲದಲ್ಲನಿಸುವುದು "ಅಯ್ಯೋ ದೊಡ್ಡವರಾಗ್ಬಿಟ್ವಲ್ರೊ.............????????????????"

-ದಿಲೀಪ್ ಶೆಟ್ಟಿ 
( ಚಿತ್ರ ಕೃಪೆ : ಅಂತರ್ಜಾಲ )

8 ಕಾಮೆಂಟ್‌ಗಳು:

  1. ತುಂಬಾ ಚೆನ್ನಾಗಿದೆ ದಿಲೀಪರೇ. ನಿಮ್ಮ ಬ್ಲಾಗಿನ ವಿನ್ಯಾಸವೂ ಇಷ್ಟವಾಯಿತು.. ಬಾಲ್ಯದ ನೆನಪಿನ ಜೊತೆ ಜೊತೆಗೆ ಇಂದಿನ-ಅಂದಿನ ದಿನಗಳೆಂಬ ತೋಲನ, ಅವಲೋಕನ ಚೆನ್ನಾಗಿ ಮೂಡಿಬಂದಿದೆ.. :-)

    ಪ್ರತ್ಯುತ್ತರಅಳಿಸಿ
  2. ಚೆನ್ನಾಗಿದೆ ಬರಹ. ಒಂದು ಅನುಭವವನ್ನು ಹಾಗೇ ಪದಗಳಲ್ಲಿ ಸೆರೆ ಹಿಡಿದಿದ್ದೀರಿ.ಇನ್ನಷ್ಟು ಬರೆಯಿರಿ. ಶುಭವಾಗಲಿ.

    ಪ್ರತ್ಯುತ್ತರಅಳಿಸಿ
  3. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  4. ನಮ್ಮ ಬಾಲ್ಯದ ದಿನಗಳನ್ನು ಪುನಃ ನೆನಪು ಮಾಡಿದ್ದಕ್ಕೆ ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  5. MAREYALAARADHA BAALYAVANNU PADHAGALA LOKADHALLI MARUKALISUVANTHE MAADIDHA SHETRIGE DHANYAVAADHAGALU :)

    ಪ್ರತ್ಯುತ್ತರಅಳಿಸಿ