ಕೂಡಿ ಬಾಳುವ ,ಹಾಡಿ ನಲಿಯುವ ಕಥೆ,
ಪ್ರಣಯದೌತಣದಿ ನಿತ್ಯ ರಸವ ಹೀರುವ ತೃಷೆ.
ಹೆತ್ತು ಮಕ್ಕಳ , ಮದುವೆ ಮಾಡುವ ವ್ಯಥೆ.
ಬಿಂಕ ಮೈ ತುಂಬಾ, ಕಾಲ್ಗೆಜ್ಜೆಗೆ ಕುಣಿಯುವ ನಿತಂಬ.
ನಾಚಿಕೆಯಲಿ ರೆಪ್ಪೆ ಮುತ್ತಿಕ್ಕಿ, ಜಗವ ಮರೆಸಲು,
ನಯನ ನೆನೆಯಿತು ನಲ್ಲನ ಅರಸಿ.
ಅಧರದ ಅಂಚು ಗಲ್ಲಕೆ ಗುದ್ದಿ,
ಗುಳಿ ಕೆನ್ನೆ ನಗುವ ಹಂಚಿತು, ಕೊಂಚ ಮಿಂಚಿತು.
ಶ್ವೇತ ಕನ್ಯೆಗೆ ರೇಷ್ಮೆ ತೊಗಲುಡಿಸಿ,
ರಾಶಿ ಚಿನ್ನದಿ ಕಂಠ ಕೆತ್ತಿಸಿ,
ನಾಸಿಕಕ್ಕಿಟ್ಟರು ಹರಳಿನ ಬೊಟ್ಟು.
ಹಸ್ತ ತುಂಬಿತು ರಂಗೋಲಿ ರಂಗಲಿ
ಸೊಂಟ ಮಾಡಿತು ನಗ್ನ ನರ್ತನ.
ಮದುವಣಗಿತ್ತಿಯ ಮೆರವಣಿಗೆ
ಸಾಗಿತು ಹತ್ತಿ ಮೆರೆಯಲು ಅಟ್ಟಣಿಗೆ
ಸಿಂಹ ರಾಶಿಯ ಗಂಡು,
ಮೀನಾ ರಾಶಿಯ ಮೇನಕೆಗೆ ಒಲಿದಿರಲು,
ಒಡ್ಡೋಲಗದಿ ನೆರೆದರು ಬಂಧು ಬಾಂದವರು.
ಬಾಂಧವ್ಯದ ಬಂಧದಲಿ ಬಂಧನದ ಬಿಗುಮಾನ.
ಮಂತ್ರಾಕ್ಷತೆಯ ಮಂಪರಲಿ
ಮಂಟಪವೂ ಸುಮುಹೂರ್ತಕೆ ಕಾದಿತು.
ಕುತ್ತಿಗೆಯು ಬಾಗಿತು ಹಾರದೇರಿಕೆಯಲಿ.
ದನುರ್ ಲಗ್ನದಲಿ ಕಂಕಣವು ಕೂಡಿತು.
ಸುಮಂಗಲಿಯಾದಳು ಕನ್ಯೆ,
ಮುಗಿದಿರಲಿಲ್ಲ ಇನ್ನೂ ಸಪ್ತಪದಿ..
ಹೃದಯಾಗಾತಕ್ಕೆ ಸತ್ತ ಪತಿ.
ಕೆನ್ನೆಯಾಗುಳಿ ಇನ್ನೂ ನಾಚುತಿರೆ
ವೈಭವದ ಮದುವೆಯಲಿ
ವೈಧವ್ಯದ ಬಳುವಳಿ.
ಅಗ್ನಿ ಕುಂಡದ ಕಾವು ಹತ್ತಿ ಉರಿಯುತಲಿತ್ತು
ಲಗ್ನದ ಲಾಸ್ಯವ ಭಗ್ನ ಬೂದಿಯ ಮಾಡಿ.
ಅರಸಿನ ಕುಂಕುಮ ಕರಿಮಣಿಯ ಬಾಲೆ,
ವಿಧಿ ತಂದ ವೈಧವ್ಯ ನಿನ್ನ ಕೊರಳ ಮಾಲೆ.
-ದಿಲೀಪ್ ಶೆಟ್ಟಿ.
ಚಿತ್ರ ಕೃಪೆ :ಅಂತರ್ಜಾಲ
ಕವಿತೆಯನ್ನು ಓದಿದ ಮನ ಆಕೆಯ ಪರಿಸ್ಥಿತಿಯನ್ನು ನೋಡಿ ಮುಮ್ಮಲ ಮರುಗಿತು.. ಎಷ್ಟೆಲ್ಲಾ ವೈಭವದೊಂದಿಗೆ ಆಕೆಯನ್ನು ಸುಂದರ ತರುಣನನ್ನು ಹುಡುಕಿ ಧಾರೆ ಎರೆದುಕೊಟ್ಟಿದ್ದರು ಆದರೆ ವಿಧಿ ಅವಳ ಸೌಭಾಗ್ಯ ಕಸಿದು ಅವಳ ಆಸೆ ಮತ್ತು ಕನಸ್ಸುಗಳಿಗೆ ಕಣ್ಣೀರೆರಚಿದ ಬಗ್ಗೆ ಮನಸ್ಸನ್ನು ತೇವವಾಗಿಸಿದೆ.. ಪದಗಳೊಟ್ಟಿಗಿನ ನಿಮ್ಮ ಲಾಸ್ಯ ಕವಿತೆಗೆ ಮೆರುಗು ನೀಡಿದೆ.. ಆ ತರುಣಿಯ ಕನಸ್ಸುಗಳನ್ನು ಚಿತ್ರಿಸಿದ ಬಗೆ ಮತ್ತು ಅವುಗಳು ಕಣ್ಣೆದುರೇ ಚೂರಾಗುವುದನ್ನು ಚಿತ್ರಿಸಿದ ಬಗೆಗಳು ಮನ ಮುಟ್ಟುವಂತವುಗಳು..
ಪ್ರತ್ಯುತ್ತರಅಳಿಸಿ