ಕನ್ನಡ ಕಲಿಯಿರಿ. ನಿಮ್ಮ ಅನಿಸಿಕೆಯನ್ನು ಕನ್ನಡದಲ್ಲಿ ನೀಡಿರಿ.


Type in English. Press Space to get it in ಕನ್ನಡ ಲಿಪಿ Press Ctrl+g to toggle between English and Kannada

ಶುಕ್ರವಾರ, ಸೆಪ್ಟೆಂಬರ್ 23, 2011

ಸಾಮಾನ್ಯ..


ಸಂತೆ ಕಂತೆಯ ಚಿಂತೆ 
ಸಾಮಾನ್ಯನಿಗೆಕೆ?
ರೊಟ್ಟಿ ರೊಕ್ಕದ ರಗಳೆ
ಸಾಹುಕಾರನ ಬೊಗಳೆ
ಇಷ್ಟು ಬಿಟ್ಟರೆ ಕಂಕುಳಡಿಯ
ತಿಗಣೆ ಕಡಿತಕ್ಕೆ, ಕೆರೆಯುವ ಬವಣೆ. 

ಮೊನ್ನೆ ರಾಜ್ಯೋತ್ಸವ 
ಎಣ್ಣೆ,  ಪಾಯಸ 
ನಿನ್ನೆ ನವಮಿ,
ಪಾನಕ , ಪಂಚಾಮೃತ
ಮದುವೆ, ಮುಂಜಿ, ಸಮಾರಾಧನೆಯೆಂದರೋ
ಗಟ್ಟಿ ತೇಗಿನ ಮೃಷ್ಟಾನ್ನ ಬೋಜನ.
ಇಂದದೇ  ತಂಗಳನ್ನ 
ತಿಂಗಳ ಕೊನೆಗೆ 
ನೀರೆ-ಅನ್ನ.

ಸಂಸಾರದ ಹಾದಿ ಹೆದ್ದಾರಿ,
ಸಂಪಾದನೆಯೋ ಕಾಲು ದಾರಿ.
ಸಂಗ ಸಂಸಾರಿ, ಅಂಗಾಂಗ ಸಂಹಾರಿ.
ಬೇಳೆ ಕಾಳಿಗೆ,  ನಾಳೆ ಹಾಲಿಗೆ 
ಮತ್ತೆ ಸ್ಕೂಲಿಗೆ , ಕೊಡದ ಬಾಡಿಗೆ
ಬಿಡದೆ ಓಡುವ ಬೆಲೆಯ ಬೇನೆಗೆ 
ಕೊಟ್ಟರುಳಿವುದು ಬೆವರಿದ ನಾಲಿಗೆ.
ಕುರುಡು ಕಾಂಚಣ ಕೇಳಿರೋ ಅಣ್ಣ
ಬಡತನಕ್ಕೆ ಬಳಲಿ ಮಾಗಿದೆ ಬಣ್ಣ.
              
               -ದಿಲೀಪ್ ಶೆಟ್ಟಿ.

ಮಂಗಳವಾರ, ಸೆಪ್ಟೆಂಬರ್ 20, 2011

ಗುರಿ


ಒಂದು ಮುಂಜಾವಲ್ಲಿ ನಿದ್ದೆ ಮಂಪರಿನಲ್ಲಿ 
ಸದ್ದು ಮಾಡುತ  ಮಗುವು ಕೇಳಿತಮ್ಮನ ಕರೆದು,
ಅಮ್ಮ.. ಅಮ್ಮ.. ಗುರಿ ಎಂದರೇನು?

ಮಗು.., ಗರಿಬಿಚ್ಚಿ ಹಾರುವ ಗುಬ್ಬಚ್ಚಿಗೆ 
ಮರಿ ಹಕ್ಕಿ ರೆಕ್ಕೆಯ ಹರಿಬಿಟ್ಟು 
ಹಾರಿಸುವ ಗುರಿ.
ಕೆರೆ, ತೊರೆಯಲೀಜುವ ನೀರಿಂಗೆ
ಸಾಗರವ ಸಂದಿಸುವ ಗುರಿ
ಮಳೆ ಹನಿಯ ಇನಿಯಂಗೆ
ಕಳೆ ತೆಗೆದು ಇಳೆಗೆ 
ಹಸಿರನುಡಿಸುವ ಗುರಿ.
ಮಗು ನಿನ್ನ ನಗುವನು 
ಮೊಗೆ ಮೊಗೆದು ಹೃದಯದಲಿ
ಮುಡಿ ಕಟ್ಟಿ ಇಡುವ ಗುರಿ.
ಹೇಳು ನಿನ್ನಯ ಗುರಿ
ಹೇಳುವೆನಾವುದು ಸರಿ.

ಹಾಸಿಗೆಯಲಿ ಮಲಗಿಸಲು
ಬಿಡದೆ ಹಟವನು ಮಾಡಿ
ನಿನ್ನ ಮಡಿಲೊಡಲೊಳು  ಬೆಚ್ಚಗೆ 
ಮಲಗುವ ಗುರಿ.
ಮೀಯುವ ವೇಳೆ ಕಣ್ಣಿಗೆ 
ನೊರೆಯ ಬೀಳಿಸಿ ಅಳುವ ನಾಟಕವ ಮಾಡಿ
ನಿನ್ನ ಕರೆದು ನೆನೆದು ನಲಿಸುವ ಗುರಿ.

ಎದೆಗಪ್ಪಿದ ಹೆತ್ತಾಕೆ ಕಣ್ಣಿರ ಕೊಳದೊಳಗೆ 
ಸಂತಸಾನಂದದಿ ತೇಲಿ,
ಮಿಡುಕೊ ಮಗುವಿನ ಗಲ್ಲಕಪ್ಪುಗೆಯ ನಿಟ್ಟು 
ಗುರಿ ಗೆದ್ದ ಗಿಳಿಹಂಗೆ ಹಿರಿಹಿಗ್ಗಿ ಹರುಷದಿ 
ಮತ್ತೆ ಮುತ್ತ ಗೊಂಚಲ ಬೀಳಿಸಿದಳು. 

ಎಲ್ಲರಟ್ಟಿಸುವರು ಗುರಿಯ,
ಮರೆತು ಪ್ರೀತಿಯ , ನಗುವ ಭಾಷೆಯ.
ಗುರಿ ಮುಟ್ಟಿ ತಿರುಗಿದರೆ  
ಕಡೆಗೊಮ್ಮೆ ಕಾಂಬುವುದು 
???????????
ಶೂನ್ಯ  ಸಂಪಾದನೆ.

-ದಿಲೀಪ್ ಶೆಟ್ಟಿ.

ಗುರುವಾರ, ಸೆಪ್ಟೆಂಬರ್ 15, 2011

ಹೆಣ್ಣು..



ಕಣ್ಣ ಮಿಟುಕಿಸಿ ಕೆನ್ನೆ ಏರಿಸಿ
ಸಣ್ಣ ಸಣ್ಣಗೆ ಸನ್ನೆ ಮಾಡುತ
ನನ್ನೇ ನೋಡುವ ನಿನ್ನ ನೋಟಕೆ
ನನ್ನೆ ಮರೆತೆನು. ಕರಗಿ ಕೂತೆನು.
ನಿನ್ನ ಸಂಗದಿ ನನ್ನ ನಗುವಿದೆ
ನಿನ್ನ ಸಂಗದಿ ನನ್ನ ಬದುಕಿದೆ
ನಿನ್ನ ಸಂದಿಸಿ ಬದುಕು ಗೆದ್ದಿದೆ.

ಚುಕ್ಕಿ ತಾರೆಯ ನೀಲಿ ಬಾನಲಿ,
ಮಿಂಚಿ ಹೊಳೆಯುವ ಪೂರ್ಣ ಚಂದ್ರನು 
ಕೊಂಚ ಶಪಿಸಿದ, ನಿನ್ನೆ ನೋಡಿದ
ಮೋಡದಡಿಯಲಿ  ಮತ್ತೆ ಮುಳುಗಿದ.
ಹಚ್ಚ ಹಸುರಿನ ಬಸುರಿ  ಇಳೆಯದು 
ಮತ್ತೆ ಮಳೆಯೊಳು ಮಿಂದು, ಮುಳುಗಿ 
ಅಂದ ಚೆಂದವ ಮಾಡಿ ,
ನಿಂಗೆ ಪಂಥವ ನೀಡಿ
ಸೋತು ನಾಚುತಲಿರಲು 
ಗಳಿಗೆ ಗಂಡಾಂತರಕ್ಕೆ ಸಿಲುಕಿ
ಹಗಲನು ಹೆಗಲಿಗೆ ಹೊದಿಸಿ 
ಗುಮ್ಮಗೆ ಕೂತು ನಿನ್ನನೆ ನೋಡಿದೆ.

ನಿನ್ನ ಬಣ್ಣಿಸದ ನಾಲಿಗೆ 
ನಗೆಯ ನಿಲ್ಲಿಸಲಿ,
ನಿನ್ನ ನೋಡದ ಕಣ್ಣು
ಇಂಗಿ ಹೋಗಲಿ.
ಹೆಣ್ಣೇ..., ನೀ ಹೊನ್ನ ಖಜಾನೆ
ಜಡಿದ ಬೀಗವ ತೆಗೆದು
ಬಡಿಸು ಬಾ... 

- ದಿಲೀಪ್ ಶೆಟ್ಟಿ.

ಗುರುವಾರ, ಸೆಪ್ಟೆಂಬರ್ 8, 2011

ಜಗದ ಜೋಳಿಗೆಯಲಿ


ಜಗದ ಜೋಳಿಗೆಯಲಿ 
ನಾ ಗುಲಾಮ.
ನನ್ನೋಡನಿರುವರು 
ನನ್ನೆದೆ ಬಡಿವರು
ನಿನ್ನೆಯ ಕನವರಿಕೆಯಲಿ
ನಾಳೆಯ ಮಂಪರಿನಲಿ 
ಇಂದಿದೆ ಎನ್ನುವುದ ಮರೆತರು
ಮನುಜರು.

ಪೂಜೆಯ ಕೊಟ್ಟರು ಹರಕೆಯ ಹೊತ್ತರು
ಬಾಯಿಯ ಬಿಲದೊಳು ಬಜನೆಯ ಬಿಗಿದರು
ಮೊನ್ನೆಯ ಪಾಪಕೆ ಇಂದಿದೆ ಸದ್ಗತಿ
ಎನ್ನುತ ಪಾಪವ ಮಾಡುತಲಿರುವರು 
ನಾನೇನ ಮಾಡಲಯ್ಯ?? 
ಜಗದ ಜೋಳಿಗೆಯಲಿ 
ನಾ ಗುಲಾಮ.

ಇದು ನೀ ಕಟ್ಟಿ ಕೊಟ್ಟ ಬುತ್ತಿ
ಹೊಟ್ಟೆ ತುಂಬಲು ಕೊರತೆ ಕಾಂಬುದು
ಕೊಟ್ಟು ತಿನ್ನಲು ಕಡಿಮೆಯಾಗುವುದು.
ಕಿತ್ತು ತಿನ್ನುವ ಜನರೇ ಎಲ್ಲರು
ಬೇಡಿ ಕೊಂಡರೆ ಬೆಲ್ಲ ಸಿಗುವುದೇ
ಕಾಯಕದಿ ಎಲ್ಲ ಇರುವುದು
ನೀನಾಡೊ  ಆಟ , ಎಲ್ಲರ ಪರದಾಟ 
ಜಗದ ಜೋಳಿಗೆಯಲಿ 
ನಾ ಗುಲಾಮ

-ದಿಲೀಪ್ ಶೆಟ್ಟಿ 

ಬುಧವಾರ, ಸೆಪ್ಟೆಂಬರ್ 7, 2011

ಕನಸ ಕನವರಿಕೆ


ಕನಸ ಕನವರಿಕೆ..

ನಿದ್ದೆಯೊಳ್ ಅದ್ದಿ ಕಣ್ಣ,
ಕನಸ ಕಾಡ ಹೊರಟೆ,
ಹಕ್ಕಿ ಪಕ್ಕಿ ಗಿರಿ ಬಾನು,
ಅಕ್ಕ ಪಕ್ಕ ಧಾರಿ ಜೇನು,
ಹೆಜ್ಜೆ ಗೆಜ್ಜೆ ಗುಡಿ ಗಂಟೆ
ಮದ್ಯೆ ಮೌನದ ಸುಳಿ ಸಂತೆ.

ಕಟ್ಟಿ ಕೊಟ್ಟಿತು ಗಿಳಿ
ಸ್ವಚ್ಚಂದದಿ ಹಾರುವ ಪರಿ.
ಮತ್ತೆ ಸಾಗರದ ತುದಿ 
ನೆನಪಿಸಿತು ಕೊನೆ ಮುಟ್ಟದ ಗುರಿ.
ತುಳಿದ ಕಿರು ದಾರಿ ಮತ್ತೆ ತೋರಿಸಿತು
ತಿರುಗಿ ತೊರೆದ ತಿರುವನು.

ಗೆಜ್ಜೆ ದನಿಯದು ನಿನ್ನ ನೆನಪಿತು 
ಮತ್ತೆ ಸೋಜಿಗ ಪ್ರೀತಿ ಅಂದಿತು.
ಹುಚ್ಚು ಬಾಳಿದು ಬಳಲಿ ಬೆಂದಿದೆ
ಹೆಚ್ಚು ಯೋಚಿಸೆ ಲೀನವಾಗಿಸು 
ಸ್ವೇಚ್ಛೆ ಇದೆ ಬಾಳ ತಳದಲಿ 
ಎಂದು ಕಂಪಿತು ಗುಡಿ ಗಂಟೆಯ ಎದೆ.

ಕಣ್ಣ ಮಿಂಚದು ನನ್ನೇ ನೋಡಿತು 
ಕನಸ ಕೆನ್ನೆಗೆ ಮತ್ತೆ ಬೀಸಿತು 
ಬಾಳ ಅಂಕುಶ ಸಡಿಲ ಮಾಡಿ
ನಿನ್ನ ಕನಸನು ಬೆಳೆಸಿ ತೋರಿಸು.
ಮತ್ತೆ ಕನಸಿಗೆ ಕನಸ ಕಾಣಿಸಿ
ನಿನ್ನ ಕನಸನು ನನಸು ಮಾಡಿಸು.

-ದಿಲೀಪ್ ಶೆಟ್ಟಿ.

ಸೋಮವಾರ, ಆಗಸ್ಟ್ 29, 2011

ಮತ್ತದೇ ಬೇಸರ...


     ಮತ್ತದೇ ಬೇಸರ....
      ನೆನಪಿನಂಬುದಿಯಲಿ ಎಷ್ಟೇ ಸಲ  ನೆನೆದೆದ್ದರು ಪ್ರತಿ ಭಾರಿಯೂ ನಿನ್ನದೇ ನೆನಪು, ನಿನ್ನದೇ ಒಲವು, ನಿನ್ನದೆನ್ನುವುದು ನನ್ನದೆನ್ನುವ ಖುಷಿ, ಹಿತ, ಸ್ತಿಮಿತ. ಮನಸ ಮಾನಸದೊಳಗೆ ಮಿಡುಕಿ ಮರೆಯಾಗೋ ನಿನ್ನ ಬಿಂಬವ ಹುಡುಕ ಹೊರಟಾಗಲೆಲ್ಲ ಮಿನುಗೋ ನಿನ್ನ ಕಣ್ಣ ಕೋಲ್ಮಿಂಚು ನನ್ನೆದೆಯ ಕದ ತೆಗೆದು ಕಥೆ ಕಟ್ಟಿ ಕೊನೆಗೊಮ್ಮೆ ಎದೆಯ ಮೆಟ್ಟಿ ಘಾಸಿ ಗೊಳಿಸಿ ಬಿಸಿ ನೀರ ಆವಿಯಂತೆ ಮಾಯಾವಾಗುವುದುಂಟು. ನಿನ್ನೊಡನಿದ್ದ ಪ್ರತಿ ಗಳಿಗೆ ಪಂಚಾಮೃತ. ನಿನ್ನ ದನಿ, ಮುಂಗೋಪ, ತುಂಟತನ, ಗುಳಿ ಬೀಳೊ ಗಲ್ಲ ವರ್ಣಿಸಲಸದವಳ. ಪ್ರತಿ ನೆನಪಿನ ಜೊತೆ ಬರುವ ನಿನ್ನ ಆ ನಗು ಮರುಭೂಮಿಯಲಿ ದುಮ್ಮಿಕ್ಕೋ ನೀರ ದಿಬ್ಬದಂತೆ ಮನ-ಮಾನಸಕ್ಕೆ  ಚೈತನ್ಯ ದೀವಿಗೆ.

      ಸಮುದ್ರದ ದಡದ ಗಾಳಿ ಗೋಪುರದಲಿ ಮರಿ ಬೆಕ್ಕಿಗಾಗಿ ಗೋಳಿಟ್ಟು ಅತ್ತಿದ್ದು  ಇನ್ನು ಹಾಗೆ ಅಕ್ಷಿಪಟಲದ ಮುಂದೆ ಅಚ್ಚಳಿಯದೆ ಕೂತಿದೆ. ಅಂದು ತರಕಾರಿ ಮಾರುವವಳ ಜೊತೆ ಒಂದು ರೂಪಾಯಿಗೆ ಅರ್ದ ಗಂಟೆ ಜಗಳವಾಡಿದ್ದನ್ನು ನೆನಪಿಸಿಕೊಂಡರೆ ಮುಗ್ದ ಮನಸಿನ ತುಂಟಿ ಇವಳೆಯ ಎನ್ನುವಷ್ಟು ಆಶ್ಚರ್ಯವಾಗುತ್ತದೆ. ಬಲ್ಲೆ ನಿನ್ನ  ಮನಸನ್ನ ಎಂದು ಬರಿದೆ ಜಂಬ ಕೊಚ್ಚುತ್ತಿದ್ದೆ. ಹೆಣ್ಣ ಮನಸದು ಸಮುದ್ರ,  ಒಮ್ಮೆ ಸುನಾಮಿ ಮತ್ತೆ ತಂಗಾಳಿ. ಏರಿಳಿತಗಳ ಲೆಕ್ಕ ಅವಳಿಗೂ ಸಿಗದು. ಮಕ್ಕಳೊಂದಿಗೆ ಮಗುವಾಗಿ, ಸಕ್ಕರೆಯ ಮಾತಾಡಿ ಎಲ್ಲರನು ತನ್ನೆಡೆಗೆಳೆವ ಅಯಸ್ಕಾಂತ ಅವಳು. ಅಂದು ಜಾತ್ರೆಯ ದಿನ ಜಗುಲಿಯ ಪಕ್ಕ ನನ್ನ ನೋಡಿ ನಗುವ ಚೆಲ್ಲಿ ಹೋಗದಿರೆ ಇಂದು ನನ್ನೆದೆಯ ತೇರಲಿ ನಿನ್ನ  ಕುಳ್ಳಿರಿಸಿ ನನ್ನ ನೋಡುವ ನಾನು ನಂದಿ ಹೋಗಿರುತ್ತಿದ್ದೇನೆನೋ. ನಿನ್ನ ಕಣ್ಣ ಭಾಷೆ ಸಣ್ಣದೊಂದು ಬರವಸೆಯ ಕೊಂಡಿ ಕೊಟ್ಟು ನೊಂದ ಜೀವದ ಜೊತೆ ಜಂಟಿಯಾಗುವ ಆಣೆ ಮಾಡಿತು.

      ಜಡಿ ಮಳೆಯಲಿ ಎದೆ ಕೊಡವಿ ಮರುಗುವ ವೇಳೆ ನೀನಲ್ಲದಿರೆ ಮಳೆ ನೀರಲೂ ಕಣ್ಣ ಹನಿಯನು, ವದ್ದೆ ಕೆನ್ನೆಯನು ವರೆಸಿ , ನೇವರಿಸಿ ಮುತ್ತ ಮಳೆಯ ಚೆಲ್ಲುವವರಾರು?. ನೀನಿಲ್ಲದಿರೆ  ಅರ್ಧ ರಾತ್ರಿಯಲಿ ನಿದ್ದೆ ಬಾಗಿಲಲಿ ಬಂದು ಗುದ್ದಿ ಜಗಳವ ಮಾಡುವವರಾರು? ನೀನಿಲ್ಲದಿರೆ  ಸಂಜೆ ಕರಗುವ ವೇಳೆ ಮೆತ್ತಗೆ ಮುತ್ತನು ಕೊಟ್ಟು 'ಛೀ ತುಂಟ' ಎನ್ನುತ ಅಡವಿಕೊಳ್ಳುವರಾರು? ನೀನಿಲ್ಲದಿರೆ ಕಷ್ಟದ ಬಿಸಿ ಬಾಣಲೆಯಲಿ ಬೆಂದು ಬಾಡುವಾಗ ಕೈಯ ನೀಡಿ ಮೇಲೆತ್ತುವವರರಾರು? ನನ್ನ ನಿನ್ನೆಯ ತುಂಬಾ ನಿನ್ನ ನಗುವಿನ ಬಿಂಬ. ನಿನಪಿನ ಹೊತ್ತಿಗೆಯ ತುಂಬಾ ಬಣ್ಣ ಬಣ್ಣದ ಕವನ-ಕದನ. ಮೊಗಕ್ಕೊಂದು ಮಂದಹಾಸ, ಕಣ್ಣಿಗೊಂದು ತಿಳಿ ತಂಪು. ನಿನ್ನೆಯ ಒಳಗೆ ಬೀಗ ಜಡಿದು ಕೀಲಿ ಕೈ ಮರೆತು ಇದ್ದು ಬಿಡುವ ಆಸೆ. ನನ್ನ ನಿನ್ನೆಯಲ್ಲಿ ನೆಮ್ಮದಿ ಇದೆ, ಕನಸಿದೆ, ಎಲ್ಲದಕ್ಕಿಂತ ಹೆಚ್ಚಾಗಿ ನೀನಿರುವೆ. ವಾಸ್ತವಕ್ಕೆ  ಇಳಿದಾಗ ಮತ್ತದೇ ಬೇಸರ, ಅದೆ ಸಂಜೆ, ಅದೆ ಏಕಾಂತ....


-ದಿಲೀಪ್ ಶೆಟ್ಟಿ 

ಗೆಳತಿ

ಮೆಲ್ಲುಸಿರು ನಿನ್ನುಸಿರಿಗೆ ತಾಕದಿರೆ,
ಚಂದ್ರ ನಕ್ಷತ್ರದ ಜೊತೆ ನೀ ನಿಲ್ಲದಿರೆ,
ದಣಿದ ಮನಸಿನ ದುಗುಡವ ನಿನ್ನೆಡೆ ಹೇಳದಿರೆ,
ಕೆನ್ನೆಗೆ ಮುತ್ತಿಕ್ಕುವ ಕೂದಲೆಳೆಯ ನೇವರಿಸದಿರೆ,
ಹಿಡಿ ನಗುವಿನೌತಣದಿ ತೃಷೆಯ ನೀಗಿಸದಿರೆ,
ತುಟಿಗೊಂದು, ಗಲ್ಲಕೊಂದು, ಹಣೆಗೊoದು ಮುತ್ತ ಪೋಣಿಸದಿರೆ,
ಗೆಳತಿ, ಸಂಜೆ ಕತ್ತಲಲಿ ಏಕಾಂಗಿ ನಾನು.

ಮನಸು ನನ್ನದು, ಮನವು ನಿನ್ನದು,
ಮದುರ ಭಾವನೆ ಬೆರೆತು ನಮ್ಮೊಳು
ಮರೆತು ಜಗವನು, ಮೆರೆವ ಮರೆಯೊಳು.
ಮರುಗುತಿಹೆನು ಮರೆಯಲಾರದೆ,
ಮರೆವ ಮಾತದು ಮರುಗಿ ಹೋಗಿದೆ.
ಮೂಳೆ ಮಾಂಸಕೆ ಮತ್ತೆ ಮತ್ತನು
ಮೆತ್ತಿ, ಮುತ್ತಿ, ದಿವ್ಯ ಶಕ್ತಿಯ ನೀಡು.
ಗೆಳತಿ, ಸಂಜೆ ಕತ್ತಲಲಿ ಏಕಾಂಗಿ ನಾನು.

ಮನ್ನಿಸಿಬಿಡು ಒಂದು ಸಲ, ಕೊನೆಯ ಸಲ,
ಕೆಟ್ಟ ಗಳಿಗೆ, ಕೆಟ್ಟು ಕೂತಿಹೆ,
ಬಿಟ್ಟು ಬಿಡು, ಬೆಟ್ಟು ಮಾಡಿ ತೋರಿಸಬೇಡ,
ತಪ್ಪು ನನ್ನದೇ, ತೆಪ್ಪಗಿರದೆ ತಪ್ಪಮಾಡಿದೆ.
ಒಪ್ಪಿಕೊಂಡರೂ, ಅಪ್ಪಬರದೇ,
ಕಾಡುತಿಹುದು ಒಂಟಿ ಬಾಳು,
ಗೆಳತಿ, ಸಂಜೆ ಕತ್ತಲಲಿ ಏಕಾಂಗಿ ನಾನು.

-ದಿಲೀಪ್ ಶೆಟ್ಟಿ.



ಶುಕ್ರವಾರ, ಆಗಸ್ಟ್ 26, 2011

ಓ ದೇವ


ಓ ದೇವ....

ಓ ದೇವ .....
ಮನ್ನಿಸು, ನನ್ನನೊಮ್ಮೆ ಮುದ್ದಿಸು.
ಹಿಂಜರಿಯ ಬೇಡ, ಹೀoಕರಿಸ ಬೇಡ.
ಎದೆಗೆ ಅಪ್ಪಿ, ಉದ್ದರಿಸು.
ಹದ ಮರೆತಿದ್ದೆ, ಮಿತಿ ಮೀರಿದ್ದೆ.
ಅದ ಮರೆತು, ಮತ್ತೆ ಮೆರೆಸು.

ಮನದ ಕೊಳೆಯ ಕಲೆಯು
ಕೊಳೆತು ಕಾರುತಲಿತ್ತು,.
ಕಾಮದ ಕಾಗೆಯ ಕೂಗಿನ ಕಂಪದು
ಕಂಪಿಸಿ ಕೆಮ್ಮುತಲಿತ್ತು.
ಜವ್ವನದ ಉನ್ಮಾದದ ಮದ
ಮಸಣದ ಹೂವಿಗೂ ಹಲುಬುತಲಿತ್ತು.
ಕಾಲ್ ತೊಡೆಗಳ ಬಲ 
ಬಳುಕುವ ಸೊಂಟದ ಸದೆ ಹುಡುಕುತಲಿತ್ತು.

ಅಹಂಕಾರದ ಹದ ತಪ್ಪಿ, ಹೆದರಿಕೆಗೆ ಹೆದರಿಸಿ
ಕತ್ತ ಸಡಿಲಿಸಿದ ಕುನ್ನಿಯಂತೆ
ಕಿತ್ತು ತಿನ್ನಲು ಹವಣಿಸುತಲಿತ್ತು
 ಕೆನ್ನೆಗುಳಿ ಮೇಲೆ ರೋಷಾದ್ವೇಷದ ಜ್ವಲೆ
ಜ್ವಾಲಾಮುಖಿಯನೇ ಜ್ವಲಿಸಿ ಪ್ರಜ್ವಲಿಸುವಂತಿತ್ತು..

ಅಬ್ಬರದ ಆರ್ಭಟವು ಸಮುದ್ರದಲೆಗಳನೂ
ನಿಬ್ಬೆರಗಿಸಿ ಬೊಬ್ಬೆ ಇಡಿಸುತಲಿತ್ತು.
ಲಜ್ಜೆಯ ಗೆಜ್ಜೆಯನು ಮಜ್ಜಿಗೆಯ ಮಾಡಿ
ಮುಜುಗರದ ಮಜವ  ಮಿಡು-ಮಿಡುಕಿ ಮೊಗೆದು
ಭುವಿಯ ಬಸಿರ ಬಗೆವ ಬಗೆಯ ಬಗೆಗೆ
ಯೋಚಿಸುವ ಕುತಂತ್ರದ ಬಲೆ ಶಕುನಿಯನೂ 
ಶಂಕಿಸುತಲಿತ್ತು.

ಬೆತ್ತಲ ಬಾಳದು ಬತ್ತದೆ ಇದ್ದಿತೆ?
ಸತ್ತರು ಹೋಗದು ಮೆತ್ತಿದ ಪಾಪ.
ಕತ್ತಲೆ ಕ್ರಮಿಸಿದೆ, ಕೊಬ್ಬನು ಇಳಿಸಿದೆ
ತಪ್ಪದು ಆಗಿದೆ. ತಿಪ್ಪೆಗೆ ಸೇರಿದೆ.
ಕ್ಷಮಿಸು ಮಹಾಶಯ, ನಿನ್ನೆಡೆ ಬರುತಿಹೆ
ಮೆಲ್ಲಗೆ ಮಲಗಿಸು, ಮನ್ನಿಸಿ ಮಣ್ಣಾಗಿಸು.

-ದಿಲೀಪ್ ಶೆಟ್ಟಿ.

ಗುರುವಾರ, ಆಗಸ್ಟ್ 25, 2011

ಹೆಡಿಮಂಡಿ(ಕುಂದಾಪ್ರ ಕನ್ನಡ)


ಹೆಡಿಮಂಡಿ...

ಹೆಡಿಮಂಡಿ ಬ್ಯಾಟ್ ಹಿಡ್ಕಂಡ್,
ಹ್ವಳಿ ಬದೆಗ್ ಆಡ್ವತಿಗ್
ಹ್ವರಿ ಹೊತ್ಕನ್ಡ್ ನಮ್ ಅಮ್ಮ
ಹಡಿ ಮಾಡ್ತಿದ್ದ್ ನಮ್ಮನ್ ಕoಡ್
ಹೆರಿ ಅಜ್ಜಿಗ್ ಜಕ್ಣಿ ಬಂದoಗ್
ಹ್ವರಿ ಹೊತಾಕಿಕಿ, ಹಿಡಿಸೂಡಿ ಹಿಡ್ಕಂಡ್
ಹ್ವಳಿ ಹತ್ರಕ್ ಓಡ್ ಬಂದ್
"ಎ ರಂಡಿ ಗಂಡೆ, ಹುಲ್ಕುತ್ರಿ ಮಡಂದ್ರೆ
ಹೆಕ್ಕತಿಂಬುಕ್ ಹ್ವಾತ್ಯ??
ಗ್ಯಾದ್ದಿಗ್ ಗ್ವಬ್ರ  ಹಾಕಂದ್ರೆ
ಎದಿ ನೀಡ್ಸ್ಕoಡ್ ನ್ಯಡಿತ್ಯ??
ಕಿಚ್ಚ್ ವಟ್ಟುಕ್ ಸೌದಿ ಇಲ್ಲ,
ಹ್ಯಾಡಿಮಂಡಿ ಬ್ಯಾಟ್ ಬೇಕಾ??"

ಇಷ್ಟಪ ಹೇಳ್ವತಿಗ್ ನoಗ್ ಸುಮ್ನಯಿಕಂಬುಕ್ ಆತ್ತ?
ಮುಕದ್ ಮೇಲ್ ಮೀಶಿ ತೊರ್ಲ ಅಂದ್ರೆ
ಅವ್ಳ್ ಕಣ್ಣ್ ಕಿಚ್ಚಿಡ್ಕ ಹೊಯ್ತಾ??.
ಇನ್ನ್ ಸುಮ್ನಿದ್ರ್ ಆಪ್ದಲ್ಲ, ಯಂತಾರೂ ಮಾಡ್ಕ್ ಅಂದಳಿ
ಬ್ಯಾಟ್ ಹಿಡ್ಕಂಡ್, ಚಡ್ಡಿ ಕಟ್ಕಂಡ್
ಹಿಂದೆ ಮುಂದೆ ಸಮ ಕಂಡ್ಕಂಡ್
"ಸುರೆಶಾ ಓಡ್,  ಇವ್ಳ್ ಕೈಗ್ ಸಿಕ್ರೆ
ಬೆನ್ನ್ ವಚ್ಚಿ, ಬರಿ ಹಾಕ್ತಳ್"
ಅಂದಳಿ ಕಾಲ್ ಕಿತ್ತಿ.
ಅದೆoತೊ ಹೆಳ್ತ್ರಲ:
ಬೀಸೊ ದೊಣ್ಣೆಯಿಂದ ತಪ್ಪಸ್ಕೊoಡ್ರೆ
ನೂರ್ ವರ್ಷ ಆಯಸ್ಸು.

-ದಿಲೀಪ್ ಶೆಟ್ಟಿ

ಶನಿವಾರ, ಆಗಸ್ಟ್ 13, 2011

ಗಡಿಯಾರ


ಗಡಿಯಾರ

ಜಗವ ನೆತ್ತಿ, ಜಗವ ನಡೆಸಿ
ಜಗವನುದ್ದರಿಸುವ
ಜಗ-ಜಾದುಗಾರ
ಗೋಡೆ-ಗಡಿಯಾರ.
   -ದಿಲೀಪ್ ಶೆಟ್ಟಿ

ಸ್ವಾತಂತ್ರ್ಯ





       ಸ್ವಾತಂತ್ರ್ಯ..

ನೆತ್ತರು ಹರಿಯಿತು, ಮೌನವೂ ಮುರಿಯಿತು
ಅನೀತಿ ಅಳಿಯಿತು,  ಅನ್ಯಾಯವ ಹೊಡೆಯಿತು
ಬರಿ  ಮಣ್ಣಿಗಲ್ಲ , ಹಿಡಿ ಹೊನ್ನಿಗಲ್ಲ
ಗಡಿ ಗಡಿಗೆ ನಡೆಯುವ ಅವಮಾನದ ಕಿಡಿ
ಗುಡು ಗುಡುಗಿ ಗುಡಿಸಿತು ಬಿಡುಗಡೆಯ ಗಾಡಿ.

ದಣಿವ ಯೋಚನೆ ಇಲ್ಲ, ಸಾವಿಗದು ಸಾಯೊಲ್ಲ,
ಸ್ವಾತಂತ್ರ್ಯದ ಕಿಡಿ  ಸಧಬಿಮಾನದ ನುಡಿ
ಕಿಚ್ಚ ಹಚ್ಚಿತು, ಕೊಚ್ಚಿ ಕೊoದಿತು
ಪರಕೀಯರ ಪತನಕೆ ಪಟ್ಟು ಹಿಡಿಯಿತು.

ಕಟ್ಟಿ ಕೊಟ್ಟರು ಸ್ವೇಚ್ಛೆಯ ನೆಲೆ
ಸ್ವಚ್ಛoದದಿ ಹಾರು ಗುರಿ ಕರೆಯುವ ಕಡೆಗೆ
ದೇಶ ನಿನ್ನದು, ಭಾಷೆ ನಿನ್ನದು
ಧೀರರ ಋಣ, ಕರ್ತವ್ಯದ ಪಣ
ಕಡೆವರೆಗೂ ಇರಲಿ, ಕರುನಾಡ ಬೆಳಗಲಿ


ಭರತ ಮಾತೆ ನಿನ್ನ ಪೂಜಿಪೆ,
ನಿನ್ನ ಬಂಧನ ಬಿಡಿಪ ಯೋಧರ ನಿತ್ಯ ಪೂಜಿಪೆ.

-ದಿಲೀಪ್ ಶೆಟ್ಟಿ

ಶುಕ್ರವಾರ, ಆಗಸ್ಟ್ 12, 2011

ನೆನಪಲಿ


         ನೆನಪಲಿ..
ನೆನೆದ ಮನ ನೆನೆಯಿತು
ನಿನ್ನದೆ ನೆನಪಿನಲಿ
ನವಿಲು ಗರಿಬಿಚ್ಚಿ
ನಲಿಯುವ ತೆರದಲಿ.
ಮಧುರ ಮೊಹವೊಂದು 
ನಾಚುತ ಮೊಳಕೆಗೆ ಬಂದು
ಅಪ್ಪುಗೆಯ ಬೇನೆಯಲಿ ಬಳಲುತಿಹುದು.

      -ದಿಲೀಪ್ ಶೆಟ್ಟಿ


ಗುರುವಾರ, ಆಗಸ್ಟ್ 11, 2011

ಗೊತ್ತಿದೆಯಾ??


ಗೊತ್ತಿದೆಯಾ??

ಸೋಮವಾರ ಸಂತೆಯಲಿ
 ಸೊಮಣ್ಣನ ಮಗಳು
ಸೊಂಟ ಮುರಿದುಕೊಂಡಿದ್ದು
ಗೊತ್ತಿದೆಯಾ??

ಮೊನ್ನೆ ಮಂಗಳವಾರ
ಮಲ್ಲಿಗೆ ಹೂವ ಕೊಯ್ಯುತಿದ್ದ
ನಮ್ಮೂರ ಗೌಡತಿಗೆ
ನಾಗರಹಾವು ಕಚ್ಚಿದ್ದು
ಗೊತ್ತಿದೆಯಾ??

ನಿನ್ನೆ ಆಡುತ್ತಿದ್ದ
ನಿಮ್ಮನೆ ಹುಡುಗಂಗೆ
ನಂದೀಶ ಹೊಡೆದದ್ದು
ಗೊತ್ತಿದೆಯಾ??

ಗೊತ್ತಾಗದು ನಮಗೆ ಗುರಿಯಿರದ ಪಯಣದಿ
ಗೊತ್ತಾಗದೇ ನಿಮಗೆ ಗೆದ್ದಲು ಹಿಡಿದೆ ಜೀವನ??

ಹಿಂದೂ ದೇಶದ ಜನರು
ಬಂಧು-ಬಾಂಧವರಂತೆ 
ಬೆಂದು ಹೊಯಿತು ಭಾವೈಕ್ಯತೆ,
ಬರದಿ ಓಡುವ ಜಗಕೆ.
ಬದುಕಬಲ್ಲೆವು ನಾವು ಪರರ ಹಂಗಿಲ್ಲದೆ,
ಬದುಕಬಲ್ಲೆವೇ ನಾವು ಪರರಿಲ್ಲದೆ???

      -ದಿಲೀಪ್ ಶೆಟ್ಟಿ



ಮಂಗಳವಾರ, ಆಗಸ್ಟ್ 2, 2011

ಗೃಹಸ್ತ....


ಗೃಹಸ್ತ....

ದೀವಿಗೆಯ ಹಿಡಿದು 
ಧಾರಿ ಹುಡುಕುತಲಿದ್ದೆ.
ಧಾವಿಸಿ ಬರುವರೇ 
ದೇವ ಕನ್ಯೆಯರು?
ಧಣಿವಾಗಿದೆ, ಹಸಿವಾಗಿದೆ.
ನಿತ್ರಾಣದ ಜೀವ,ಧಗೆ ಬಿಡುತಲಿದೆ.
ಧರೆ ಕಾಯುವ ದೊರೆಯೇ ,
ದಯೆ ತೋರಿಸೋ ಎನಗೆ.
ಒಂಟಿ ಬಾಳಿದು, ಜಂಟಿ ಮಾಡಬಾರದೇ???

ತುಂಟ ಹುಡುಗಿಯೋ, ತೊನ್ಡೆ ತುಟಿಯೋ,
ತೆಳ್ಳಗಿನ ಸೊಂಟ, ಓರೇ ನೋಟ
ಕೋಮಲ ಪಾದ, ನಿರ್ಮಲ ಮನ
ಮಿನುಗುವ ಹಲ್ಲು, ಮಿಡುಕುವ ಗಲ್ಲ
ಇದಾವುದೂ ಇರದಿರೆ ಅಡ್ಡಿಯು  ಇಲ್ಲ.

ಸನ್ನಡತೆ, ಸಂಭಾವಿತೆ
ಸ್ವಲ್ಪ ಮುನಿಸು, ಚೂರು ಜಂಭ
ಇಷ್ಟು ಕೊಟ್ಟುಬಿಡು.
ಕಷ್ಟ ವಾದರೂ ಕಟ್ಟಿ ಕೊಳ್ಳುವೆ.
ಎಷ್ಟು ದಿನ ಈ ಒಂಟಿ ಬಾಳು??
ಗೃಹಸ್ತ ನಾಗಿಸು, ಗ್ರಹಣ ಓಡಿಸು.
ಸರಿ ಧಾರಿ ತೋರಿಸಿ ಸಂಬಾಳಿಸು.

ದಿಲೀಪ್ ಶೆಟ್ಟಿ

ಗುರುವಾರ, ಜುಲೈ 28, 2011

ಪ್ರೀತಿ-ಪಚಿತಿ


 ಪ್ರೀತಿ-ಪಚಿತಿ

ಮೊನ್ನೆ ಆಗಸಕ್ಕೆ ಹೋಗಿ 
ಚುಕ್ಕಿ ಚಂದಿರನ ರಾಶಿ ತಂದು
ಬೆತ್ತ ಬಳ್ಳಿಯಲಿ ಕಟ್ಟಿ
ನನ್ನವಳ ಕೊರಳಿಗೆ ಹೊರಿಸಿದೆ.

ನಿನ್ನೆ ಸಾಗರಕ್ಕೆ ಮುಳುಗಿ
ಕಪ್ಪೆ ಚಿಪ್ಪಲಿ ಹುದುಗಿಹ 
ಮುತ್ತ ಮೆತ್ತಗೆ ತಗೆದು
ಮತ್ತೆ ಮತ್ತಲಿ ಮೆತ್ತಿದೆ.

ಇಂದು 'ಕಾಲ'ವ ಕಟ್ಟಿ,
ಕಲರವವ ಮಾಡುತ
ಕೆಂಗುಲಾಬಿಯ ಹಿಡಿದು
ನನ್ನವಳ ಕೂಗಿದೆ.

'ನಲ್ಲಾ.., ನೀನೊಬ್ಬ ನಿದ್ದರೆ ಸನಿಹ,
ಚಂದ್ರ ಚುಕ್ಕಿಯೂ,ಮುತ್ತು ರತ್ನವೂ
ಸತ್ವ ಸತ್ತಿರೊ, ಸೊತ್ತವು'. ಅಂದವಳ
ಮೊಗದಲಿ ಮಂಧಹಾಸ ಮಂದವಾಗಿ,
ಕಣ್ಣ ಕಾವು ಕಾಲಿ ಕೈಯ ಹುಡುಕುತ,
ಕೆನ್ನೆ ಗುಳಿ ಸನ್ನೆ ಮಾಡುತ ನನ್ನೇ ಅಣುಕಿತು.
"ಬರಿಗೈ ದಾಸ, ಬೇಕಿತ್ತ ನನಗಿವನ
ಸಹವಾಸ"
ಓ ಸುಂದರಿ, ನಿನ್ನ ಮನವ ಬಲ್ಲವನಿಹನೇ
ಜಗದೊಳು??


          -ದಿಲೀಪ್ ಶೆಟ್ಟಿ





ಸೋಮವಾರ, ಜುಲೈ 25, 2011

ನಿನ್ನ ನೆನಪಲಿ...

ನಿನ್ನ ನೆನಪಲಿ...

ಹಳೆಯ ಪೆಟ್ಟಿಗೆಯ ಸಂದಿಯಲಿ
ಹಳಸಿ ಹುಣ್ಣಾಗಿದ್ದ ಹೊತ್ತಿಗೆಯಲಿ
ನನ್ನವಳು ಬರೆದಿದ್ದ ನಲ್ನುಡಿಯ
ನಾಲ್ಕಕ್ಷರವ ನೋಡಿ ,
ಎದೆಯ ಸಂದಿಯಲಿ ನಲುಗಿ
ನೇತಾಡುತ್ತಿದ್ದ ಮದುರ ಪ್ರೇಮ,
ಮತ್ತೇ ಬುಸುಗುಟ್ಟಿತು..

ಬರುವ ಚೌತಿಯಂದು,
ಮರೆಯದೇ ಬರುವೆನೆಂದು
ಬರೆದ ಭಾರದ ಪುಟವ ಹಿಡಿದು
ಬರುವ ದಾರಿಯ ಬರಿದೆ ಕಾದೆನು.
ಬೆರೆವ ಬದುಕಿಗೆ ಬರೆಯ ಬರೆಸಿದೆ,
ಬದುಕ ಬರೆಸಿದ ಬದಿಗೆ ಒರಗಿದೆ.

ಕಡಲ ಮೀನಿಗೆ ಕೊಡದ ನೀರನು
ಕೊಡದೇ ಕಾಯಿಸಿ,
ಕೊಡಲಿ ಕಾವನು ಮತ್ತೆ ಕಾಯಿಸಿ
ಕೊಡುಗೆ ಕೊಡುವ ಪರಿಯಲಿ,
ನಿನ್ನ ನೆನಪಲಿ ಬೆಂದ ಜೀವಕೆ, 
ನೊಂದ ಪುಟದಲಿ ಬಂದ ಭಾವವೂ,
ಎಂದೂ ಆಗದ ಆಘಾತವ ತಂದು
ತಿಂದು ಬಿಟ್ಟಿತು ಮನವನು.

ಮರೆತು ಹೋಗಿಹ ಮಡಿದ ನೆನಪದು
ಮತ್ತೆ ಮಿಡುಕಿತು,ಮುತ್ತಿ ಮರುಗಿತು.
ಒದ್ದೆ ಮಾಡಿದ ಕಣ್ಣ ರಂದ್ರದಿ
ಎದ್ದು ಬಂದಿತು , ಸದ್ದು ಮಾಡಿತು.

ನನ್ನ ನೆನ್ನೆಯ ತುಂಬ
ನಿoದೇ ಬಿಂಬವು ನೋಡು.
ನಿನ್ನ ನಾಳೆಯ ಒಳಗೆ
ನನ್ನೇ ಕಳೆದಿಹೆ ನೀನು
ಇಂದು ನೆನಪಿಸಿ ನಾನು
ನಿನ್ನ ಪಡೆಯುವೆನೇನು?
ಹೆಣ್ಣೇ, ಹುಣ್ಣ ಮಾಡದಿರು. 
ಮನಸ ಮನಸಿಗೆ ಮುನಿಸು 
ಮಾಡಿರೆ, ಮಸಣ ಸೇರುವುದು
"ಮನಸ್ಸು".
  -ದಿಲೀಪ್ ಶೆಟ್ಟಿ.




ಬುಧವಾರ, ಜುಲೈ 20, 2011

ಮೂಕಕ್ಕನ್ ಮನಿ ಕೋಳಿ ಗೂಡ್( ಕುಂದಾಪ್ರ ಕನ್ನಡ)

ಮೂಕಕ್ಕನ್ ಮನಿ ಕೋಳಿ ಗೂಡ್


ಈ ಕಥೆಯಲ್ಲಿ ಬoದಿರುವ ಎಲ್ಲ ಪಾತ್ರಗಳು ಕೇವಲ ಕಾಲ್ಪನಿಕ. ಮೃತ ಅಥವಾ ಜೀವಂತ ವ್ಯಕ್ತಿ, ಸಂಸ್ಥೆ ಯೊಂದಿಗೆ ಸಂಬಂಧ ಕoಡುಬಂದಲ್ಲಿ ಅದು ಕಾಕತಾಳೀಯವಷ್ಟೇ. ಹಾಗೇನಾದರು ಸಂಬಂಧ ಇದ್ದೇ ಇದ್ದಲ್ಲಿ ಅದು ಈ ಸಮಾಜದ ದುರದೃಷ್ಟಕರ ಬೆಳವಣಿಗೆ ಮಾತ್ರ.

             ಹೆಳುಕ್ ನೆನ್‌ಪ್ ಹೊಯಿತ್, ಮೂಕಕ್ಕನ್ ಮನಿ ಹೆಯ್ಡಿ ಕಾವ್ ಇಡ್ತಿತ್ತ್. ಅದಕ್ಕೆ ಮೂಕಕ್ಕ ಅವ್ರ್ ಮನಿ fighter ಕೋಳಿನ  ಹೊರಗೆ ಹಡಿಮಂಚಕ್ಕೆ ಕಟ್ಟಿಕೆ, ಕೋಳಿ ಗೂಡ್ clean ಮಾಡ್ವತಿಗೆ ಬೈಲ್ಮನಿ ರಘುವಣ್ಣ ಬಂದ್ "ನಾಳಿಗ್ ನಟ್ಟಿಗ್ 2 ಆಳ್ ಬೆಕಿತ್ತ್, ಕ್ವಾಜಿಹ್ವಂಡ ಮರತಿ ಹ್ಯಾಂಗಾರು ಮಾಡಿ ನೀನ್ ಮತ್ತೆ ಗುಲಾಬಿ ಬಪ್ಪಿಲ್ರಿ" ಅಂದ್ರ್. last time ಇದೆ  ರಘುವಣ್ಣನ್ ಮನಿಗ್ ಕಳಿ ಕೀಳುಕ್ ಹ್ವದಾಗಳಿಕ್ ನಾಕ್ ಸೇರ್‍ ಅಕ್ಕಿ ಕೊಡುವಲ್ ಮೂರೇ ಸೇರ್‍ ಕೊಟ್ಟಿದಿರ್. ಆ ದಿನ್ವೆ ಮೂಕಕ್ಕ decide ಮಾಡ್ಕoಡಿರ್ ಇನ್ನ್ ಆ ಹಪ್ಪಿಡದ್ ಗಂಡ್ಸೀನ್ ಮನಿ ಕೋಳಿ ಹೇಲ್ ಮೆಟ್ಟುದಿಲ್ಲ ಅಂದೆಲಿ. ನಮ್ heroin ಮೂಕಕ್ಕನೆನ್ ಸಂಬೊಯ್ತಿ ಅಲ್ಲ, ಆದ್ರೂ ಈ ವಿಷ್ಯದೆಗ್ ಅವ್ರದ್ದೇನು ತಪ್ಪಿಲ್ಲ. ರಘುವಣ್ಣ ಹೀಂಗ್ ಕೆಂಬುಕು "ನಾಳಿಗ್ ನಮ್ದೊಂದ್ ಚೂರ್ ನಡ್ಕ್ ಅಂದಳಿ ಮಾಡಿತ್, ಅದು ಅಲ್ದೇ ಮಾಷ್ಟ್ರ್ಮನಿ ನಿತ್ಯಣ್ಣನೂ ಹೆಳಿಕಿ ಹೊಯಿರ್, ಅವ್ರ್ ಮನೆಗ್ ಮದ್ಮಕ್ಕಳ್ ಕರ್ಸುದ್ ಅಂಬ್ರ್ ವಂಚೂರ್ ಬಂದ್ ಹೋಗ್ ಅನ್ದಿರ್, ಯಂತಾ ಮಾಡುದ್ ಅನ್ದಳಿ ಗುತ್ತಿಲ್ಲ" ಅನ್ದಳ್ ನಮ್ಮ್ ಮೂಕಕ್ಕ.

              "ಅಲ್ಲಾ ಮರತಿ, ಪಕ್ಕದ್ ಮನಿಯರ್ ಐಕನ್ಡ್ ಒಂಚುರ್ help ಮಾಡ್ದಿರ್ ಹ್ಯಾಂಗೆ??? , ಮನ್ನೇ ಚೌನ್ತಿ(ಸೌತೆ) ಕಾಯಿ ಕೊಯ್ಯುವತಿಗೆ ನಿಂಗ್ ನಾನ್ ಅಲ್ದಾ 1 ಚೀಲದ್ ತುಂಬಾ ತುಂಬ್ಸಿ ಕೊಟ್ಟದ್, ಅವ ನಿತ್ಯನ್ ಮನಿಗ್ ನೀವ್ ಕೊಯ್ಯುಕ್ ಹೊಯಿರಿಯಲ ಅವ ಯಂತಾರೂ ಕೊಟ್‌ನಾ??. ನಾನ್ ಯೆಗಳಾರು ನಿಮ್ಮ್ ಹತ್ರ ನಟ್ಟಿಗ್ ಬಪ್ಪುಕ್ ಹೆಳದ್ದ್ ಇತ್ತಾ? ನಾಳಿಗ್ 1 ದಿನ ನಮ್ಮನಿಗ್ ಬನಿ ಮರತಿ, ಬೇಕಾರ್ 1 ಸೆರ್ ಅಕ್ಕಿ ಜಾಸ್ತಿ ಕೊಡ್ತಿ ನಿಮ್ಮ್ ಇಬ್ರಿಗೆ. last time ಕಳಿ ಸಮಮಾಡಿ ಕೀಳ್ದಿರು ನಾನ್ 3 ಸೇರ್‍ ಅಕ್ಕಿ ಕೊಡ್ಲಿಯಾ, ನಮ್ಮ್ ಮೂಕಕ್ಕ ಅಂದಳಿ ನಾನ್ ಸುಮ್ನ್ ಆಯ್ಕಂಡ್ಲ್ಯಾ? , ಮನಿ ಬಾಗ್ಲೀಗ್ ಬಂದ್ ಕೆಂಡ್ರೂ ದೊಡ್ಡಸ್ತಿಗಿ ತೊರ್ಸ್ತ್ಯಾಲ ಮರತಿ" ಅಂದ್ರ್ ಸ್ವಲ್ಪ ಗರಂ ಆಯಿ ರಘುವಣ್ಣ.

         "ಯಂತಾ ಅಂತೆ ಹಪ್ಪ್ ಗನ್ಡ್ಸೆ, ನಾನ್ ಕಳಿ ಹೆಕ್ಕದ್ದ್ ಸಮ ಐಲ್ಯಾ??, ಇಡೀ ಗುಳ್ಳಾಡಿ ಊರೇಗ್ ಯಾರಾದ್ರೂ ಹೀಂಗೆ ಹೆಳ್ಳೀ,  ನಾನ್ ನಾಳಿನ್ ಮೇಲ್ ಯಾರ್ ಮನೆಗೂ ಕಳಿ ಹೆಕ್ಕುಕ್ ಹ್ವಾತಿಲ್ಲ. ಏನೋ ಪಾಪ ಹೊಯ್ಲಿ ಅಂದಳಿ ಕೆಲ್ಸಾ ಮಾಡಿ ಕೊಟ್ರೆ ನೀನ್ ಹೀಂಗ್ ಅಂಬುದಾ?, ಯಂತಾ 1 ಚೀಲ ಚೌನ್ತಿ(ಸೌತೆ) ಕಾಯಿ ನಂಗ್ ಕೋಟ್ಯಾ? ಅದ್ರೆಗ್ 1 ಆರು ತಿಂಬುಕ್ ಐತಾ, ಪೂರಾ ಕ್ವಳದ್ ಹೊಯಿತ್, ದನಕ್ಕೂ ಹಾಕುಕ್ ಐಲಾ, ವೊಲ್ಲ್ ಆ ಚಪ್ಪನ್ ಕ್ಯಾರಿ ಹತ್ರ ಬಿಸಾಕಿದಿ ಕಾಣ್, ಹೊಯೀ ಹೆಕ್ಕೋ, ಇನ್ನ್ ನಮ್ಮನಿ ಕಣ್ಣಕ್ಕ್ ಬಂದ್ರ್ , ಹಿಡಿಸುಡಿ ಹಿಡ್ಕಂಡ್ ಪೂಜ ಮಾಡ್ತೀ, ನೀಯತ್ತ್ ಇಲ್ದಿದ್ದ್ ನಾಯಿ, ಹೊಗತೆ...." ಅಂದಳಿ ಬಾಯೇಗ್ ಎಲಿ ಹಯ್ಕಂಡ್ ಸಮ ಉಗ್ದಳ್.

    "ಹ್ವಾತಿ, ಹ್ವಾತಿ, ಎನ್ ಊರೇಗ್ ನಿನ್ ಬಿಟ್ರ್ ನಂಗ್ ಆಳೆ ಸಿಕ್ಕುದಿಲ್ಯಾ, ಕಾಂತಿ. ಮನಿ ಕೆಲ್ಸು ಮಾಡಿ ಬದ್ಕುವವ್ಕೇ ಇಷ್ಟಪ ಕ್ಯನ್ನಿಮೆಲ್ ಗಾಂಚಲಿ ಇಪ್ಪುಕ್ ಆಗ, ನಿನ್ ಮಧ ಮುರಿದಿರ್ ನಾನ್ ಕುಷ್ಟುವಣ್ಣನ್ಗ್ ಹುಟ್ಟದ್ದೆ ಸುಳ್ಳ್" ಅಂದಳಿ ಓಡುಕ್ ಸುರು ಮಾಡ್ದ. "ಈವ್ನ್ ವಾಲಿ ಕಳಿತ್ತ್, ಕೆಲ್ಸಾ ಇದ್ರ್ ಮಾತ್ರ ನಂ ನೆನ್‌ಪ್, ಇಲ್ದಿರ್ ಜೀವ್ ಇದ್ರಾ ಸತ್ತಿರ ಅಂದಳಿ ನೀಕಿ ಕಾಂಬುಕು ಬತ್ತಿಲ್ಲ.... .ಅಯ್ಯಯ್ಯೋ!!! ಈ ರಂಡಿ ಗಂಡ್ಸಿನ್ ಕಡಿದ್ time ಆದ್ದೇ ಗೊತಯ್ಲಾ" ಅಂದೆಳಿ "ಮನೆಯೊಂದು ಮೂರು ಬಾಗಿಲು" ದಾರವಾಹಿ ಕಾಂಬುಕ್ ಚಣ್ಕುವಕ್ಕನ್ ಮನಿಗ್ ಹ್ವಾದಳ್.

     ನಿಮ್ಗ್ ಮೂಕಕ್ಕನ್  fighter ಕೋಳಿ ಬಗ್ಗೆ ಸ್ವಲ್ಪ ಹೇಳ್ಕೆ. ಅದ್ ಮನ್ನೇ ತೆಕ್ಕಟ್ಟೆ ಕೋಳಿಪಡೆಗ್ 2 ಸಲ ಗೆದ್ದಿತ್, ಅವತ್ತ್ ಮಾಬ್ಲಣ್ಣನ್ ಕಿಶೆಗ್ ವೊಳ್ಳೆ ಪಾವಣಿ ಒಡಾಡಿತ್, ಈ  ಮಾಬ್ಲಣ್ಣ ಬೇರೆ ಯಾರು ಅಲ್ಲ, ನಂ ಮೂಕಕ್ಕನ್ ಕಾಸಾ ಅಣ್ಣ. ಸುತ್ತ ಮುತ್ತ ಎಲ್ಲ್ ಕೋಳಿಪಡಿ ಆರೂ ಅವ ಹಾಜುರ್‍, ಅದ್ ವಂದೇ ಅಲ್ಲಾ, ಗರ್ಗರ್ ಮಂಡಲದ್ ಬೋಣಿ ಮಾಡುದೇ ಇವ್ನೇ. ಆ fighter ಕೋಳಿ actually  ಮೂಕಕ್ಕನ್ ಗಂಡ ಮಾದಣ್ಣoದ್, ಅದನ್ನ ನಮ್ ಮಾಬ್ಲಣ್ಣ ಸುಮಾರ್ ಸಲ ಕೆಂಡ್ರೂ, ಮೂಕಕ್ಕ ಕೊಡುದಿಲ್ಲ ಅನ್ದಳಿ ಹೇಳಿದಳ್.  ನಿನ್ನೆ ಕೊಡಿ ಹಬ್ಬದ್ ಪಾಡ್ಡಿ ಕೋಟೇಶ್ವರದ್ ಕೋಳಿಪಡೆಗ್ ಅದ್ರ್ ಕಾಲೀಗ್ ಸ್ವಲ್ಪ ಪೆಟ್ಟ್ ಆಯ್ತ್. ಅದಕ್ಕೆ ನಂ ಮೂಕಕ್ಕ "ಇನ್ಮೇಲ್ ನನ್ ಕೊಳಿನ್ ನಿಂಗ್ ಕೊಡುದಿಲ್ಲ, ಅದನ್ನ ಲಗಾಡಿ ತೆಗದ್ದ್ ಸಾಕ್, ಇನ್ನ್ ಮೇಲ್ ಅದನ್ನ ಮುಟ್ರೆ ಜಾಗ್ರತಿ ಕನ್ಡ್ಕೋ" ಅಂದಳಿ ರೋಪ್ ಹಾಕಿದಳ್. ಅವತ್ತ್ ಮಾಬ್ಲಣ್ಣ ಸುಮ್ನೇ ಬಾಲ ಅಲ್ಲಾಡ್ಸ್ದೇ ಮನಿಗ್ ಹ್ವಾದ, mostly ಕೊಟ್ಟಿ ಹಕನ್ಡ್ ಬರ್ಲಿಲ್ಲ್ಯೆನೊ???. ನಮ್ ಮಾಬ್ಲಣ್ಣ ಸುಮ್ನೆ ಆಯ್ಕಂಬ್ party ಅಲ್ಲ. ಮೊನ್ನೆ  ಯoಕಕ್ಕನ್ ಮನಿ ನಾಯಿ ಮಾಬ್ಲಣ್ಣನ್ ಹೆಂಡ್ತಿಗ್ ಕಚ್ಚುಕ್ ಬಂದದ್ದ್ಕ್, ಅದೇ ದಿನ ರಾತ್ರಿ ಅದ್ರ್ ಕಾಲೇ ತುoಡ್ ಮಾಡಿಕೆ ಹೊಯ್ದ. 

     "ಅಲ್ಲಾ ಅವ್ಳ್ ಹಾಂಗೆ ಮಾಡುದ ಮರಾತಿ, ಗಂಡ್ಸಿಗ್ ಆ ಪಾಟಿ ಹ್ವಡುದಾ?, ಅವ್ಳ್ ಸೊಸಿ ಮತ್ತೆ ಮನಿಗ್ ಬಂದಳನಾ?, ನಿನ್ನೆ last ವಂಚೂರ್ ಕಾಂಬೂಕೇ ಆಯ್ಲಾ, ನಮ್ಮನಿ ಹೆಣ್ಣಿದ್ ಫೋನ್ ಬಂತ್, ಬೆಂಗ್ಲೂರಿಂದ" ಅಂತ ಹೆಳ್ತಾ ದಾರವಾಹಿ ಕಾಂಬುಕ್ ಸುರು ಮಾಡ್ರ್. ಸ್ವಲ್ಪ ಹೊತ್ತ್ ಐತ್  "ಹ್ವಾ.. ಮೂಕ, ನಿನ್ ಕೋಳಿ ಆ ನಮ್ಮನಿ ಕೂಗತ್ತ್ ಯಂತಕಾ?  ಅಕ್ಕಿ ಕಾಳ್ ಹಾಕ್ಲ್ಯಾನಾ?? " ಅನ್ದಳ್  ಚಣ್ಕು. "ಸಮ ತಿಂದಿತ್ ಮರತಿ, ಅದನ್ನ ಇವತ್ತ್ ಹೆರ್ಗ್ ಕಟ್ಟಿದಿ, ಅದಕ್ಕೇ ಏನೋ.ಇಲ್ಲ್ ಕಾಂಬಿಲೇ!!! ಅವ್ಳ್ police ಕರ್ಕಂಡ್ ಬಂದಳ್, ನಾನ್ ಹೆಳ್ಲ್ಯಾ, ಅವ್ಳ್ ಯಂತಾರೂ ಕಿತಾಪತಿ ಮಾಡ್ತಾಳ್ ಅಂದಳಿ." ಅಂತ ಮತ್ತೆ T.V ಒಳ್ಗೆ ಹ್ವಾರ್ ಇಬ್ರೂ.

   ಹೀಂಗೆ 1 ಗಂಟೆ ಕಳಿತ್, ದಾರವಾಹಿ ಮುಗ್ಸಿ ಮನಿಗ್ ಬಂದ್ ಹಡಿಮಂಚದ್ ಮೇಲ್ ಕೂಕಂಡ್ ಮಗ್ಳ್ ಜೊತಿಗ್ ಫೋನೆಗ್ ಮಾತಾಡ್ವತಿಗ್ fighter ಕೋಳಿ ಚಿಪ್ಡ್ ಕಣ್ಣ್ದ್ ತುಂಬಾ ಬಿದ್ದದ್ ಕoಡ್ ಹಡಿಮಂಚದ್ ಕಾಲೀಗ್ ಕಟ್ಟದ್ ಕೋಳಿ ಹತ್ರ್ ರಪ್ಪ ಕಂಡಳ್. ಕಾಂಬುಕ್ ಅಲ್ಲ್ ಕೋಳಿ ಇರ್ಕಲ!!!. ಯಾರೋ ಕದ್ದ್ಕoಡ್ ಹೊಯಿರ್. "ಅಯ್ಯಯ್ಯೋ!!! ಪದ್ದುವ, ಸಾದು, ಮಲ್ಲಿಕಾ, ನನ್ನ್ ಕೋಳಿನ್ ಯಾರೋ ಕದ್ದಿರ್, ಅಯ್ಯೋ, ನನ್ ಗಂಡ 1 ಸಾವಿರ ಕೋಟ್ಟ್ ತಕ ಬಂದ್ದ್ದ್. ಹೌದ್,  ಇಧ್, ಮಾಬ್ಲನೇ ಮಾಡದ್ದ್, ಕೊಟ್ಟಿಗ್ ದುಡ್ಡ್ ಇಲ್ಲ ಅಂದಳಿ ಕೋಳಿನ್ ಕದ್ಕoಡ್ ಹೊಯಿದ, ಏ ಕುಶಿಯಾ ಇಧ್ ನಿನ್ ಗಂಡನೇ ಮಾಡದ್ದ್. ಅವನ್ನ ಸುಮ್ನೇ ಬಿಡುದಿಲ್ಲ. ಅಯ್ಯೋ !!! ಇಲ್ಲ್ ಕಾಣಿ, ಕೋಳಿ ಗೂಡೇಗ್  ಕಾವಿಗ್ ಇಟ್ಟದ್ ಕೊಳಿನೂ ಕಾಂಬುಕ್ ಇಲ್ಲ. ಅವನ್ ಹಾಳಾಯ್ ಹ್ವಾಪುಕೆ...." ಸಂಸ್ಕೃತ, english, ಹಿಂದಿ ಯಲ್ಲಾ ಬಾಷೆಗೂ ಬೈಗುಳ ಶುರು ಮಾಡ್ವತಿಗೆ ಚಣ್ಕು ಬಂದ್ "ಅಲ್ಲ ಮರತಿ, ಅವ ನಮ್ಮನೆಗ್ ನಮ್ ಜೊತಿಗ್ T.V ಕಾಂತಿದಿದ ಅಲ್ದನಾ, ಹಿಂದೆ ಜಗ್ಲಿ ಮೇಲ್ ಕೂತ್ಕಂಡ್ ಇದಿನಲೆ. ನಿoಗ್ ಯoತ ಮರ್ಲಾ???, ಅಲ್ಲಾ ಅವ ಹ್ಯಾಂಗ್ ಕಳಿತ ಮರತಿ." ಅಂದ್ಳ್. 

   "ಮಾಬ್ಲಾ ಅಲ್ಲಾ, ಹಂಗರ್ ಕೋಳಿ ಕದ್ದದ್ ಯಾರ್??" ಮೂಕಕ್ಕನ್ ತಲಿವೊಳ್ಗ್ ಗುಡ್ಡಿ ಹೆಗ್ಗುಳ ಒಡಾಡುಕ್ ಸುರು ಆಯ್ತ.. "ಓ... ಸಮ್ನೆ, ಆ ಹಡ್ಬಿ ರಘುದೇ ಕೆಲ್ಸಾ ಇದ್, ಅಲ್ಲಾ ಅವ ನಾನ್ ನಟ್ಟಿಗ್ ಬತ್ತಿಲ್ಲ ಅಂದದ್ದಕ್ಕ್ ಹೀಂಗ್ ಮಾಡ್ಲ್ಕಾ. ನಾ ಬಿಡುದಿಲ್ಲ, ಬಬ್ಬರ್ಯನಿಗ್ ಉಇಲ್ ಕೊಡ್ತಿ. ಅಲ್ಲ ಅವ ಮನ್ಸನಾ ಯಾರೋ ಮನಿ ಕೋಳಿ ಕದ್ದಕ ಹ್ವಾಪುಕ್ ಯಡುವಾ? ಅವ್ನ್ ಹೆಂಡ್ತಿ ರಂಡಿ ಆಯಿ ಹ್ವಾಪುಕೆ. ಅವ ಉದ್ದರ ಆತ್ನಾ......" ಮತ್ತೆ ಎತ್ತ್ ಉcಚಿ ಹೊಯ್ಯುವ ರೀತಿ ರಘುವಣ್ಣನ್ಗೆ ಬಯ್ಯುಕ್ ಸುರು ಮಾಡ್ದಳ್.


     ಬಾಬಣಣ್ಣ ಮೇಲ್ತಾರ್ ಹೂಡಿಕೆ ಬಪ್ಪತಿಗ್ ಮೂಕಕ್ಕನ್ ಬೊಬ್ಬಿ ಕೇoಡ್ ಆ ಬದಿಗ್ ಬಂದ್ಕoಡ್  "ಯoತ ಮರತಿ, ಸುಮ್ನೆ ಆ ಪಾಟಿ ರಘುವಣ್ಣ್ನ್ ಮೇಲ್ ಹೆಳ್ತಿದ್ದಿಯಲಾ, ನೀನ್ ಅವ್ರ್ ಕದ್ದ್ಕ ಹ್ವಾತ್ತ್  ಕoಡಿದ್ಯಾ?? ಸ್ವಲ್ಪ ತಡ್ಕೊ, ಅವ್ರು ಬರ್ಲಿ, ಕೂಕoಡ್ ಮಾತಾಡ್ವ. ಆಗ್ದಾ? ಅಲ್ಲಿವರಿಗೆ ನಿನ್ ಬಾಯಿಗ್ ಬೀಗು ಹೈಕೊ ಕಾಂಬು" ಅಂದೆಳಿ ಪುಟ್ಟ್ನ ಗoಡಿನ್ ಗುಡ್ಡಿ ಅಂಗಡಿ ಹತ್ರ ರಘುವಣ್ಣನ್ ಹುಡ್ಕoಡ್ ಬಪ್ಪುಕ್ ಕಳ್ಸಿ ಕೊಟ್ರ್. 

     ಪುಟ್ಟ ಅಂಗಡಿ ಹತ್ರ ಹೊಯಿಕoಡ್ ಜಯ್ರಾಮಣ್ಣನ್ ಹತ್ರ ಕೇoಡ "ಹ್ವಾಯಿ, ರಘುವಣ್ಣ  ಬಂದಿರಾ ??" "ಅವ್ರ್ ಆಗಳೆ  ಮನಿ ಬದಿಗ್ ಹ್ವಾರಲ ಮರೆ ಕೋಳಿ ಹಿಡ್ಕಂಡ್, ಎನ್ ವಿಷ್ಯ?" ಅಂದ್ರ್ ಜಯ್ರಾಮಣ್ಣ. "ನಿಮ್ಗ್ ವಿಷ್ಯ ಗೊತ್ತಿಲ್ಯಾ, ಮೂಕಕ್ಕನ್ ಮನಿ ಕೋಳಿನ್ ಯಾರೋ ಕದ್ಕoಡ್ ಹೊಯ್ರ್ ಅಂಬ್ರ್ ಮರ್ರೆ". "ಯಾವ್ದ್, ಆ fighter ಕೋಳಿಯಾನಾ?? ಕಾಲಿಗ್ ಒoಚುರ್ ಗಾಯ್ ಆಯ್ತಲ್ದ ಅದನಾ??" "ಅದ್ ಒಂದೆ ಅಲ್ಲ, ಕಾವಿಗ್ ಇಟ್ಟ್ದ್ ಕೋಳಿಯು ಇಲ್ಲ ಅಂಬ್ರ್" "ಹೌದನಾ, ರಘುವಣ್ಣ ಒoದ್ ಕೋಳಿ ಹಿಡ್ಕoಡ್ ಇದಿರ್ ನಾನ್ ಅವ್ರತ್ರ ಯಾರದ್ದ್ ಅಂದಳಿ ಕೆಂಬುರೊಳ್ಗೆ, ಕೋಳಿನ್ ಹಿಡ್ಕoಡ್ ಮನಿ ಬದಿಗ್ ಓಡಿ ಹ್ವಾರ್ ಮರೆ. ಅವ್ರತ್ರ ಇದ್ದ್ದ್ ಕೋಳಿ ಮಾತ್ರ ಅದೇ ಫೈಟರ್ ಹೂoಜ ಮರೆ" ಜಯಣ್ಣ ಹೇಳಿ ಬಾಯಿ ಮುcಚುರೊಳ್ಗೆ "ಹೌದಾ ಮಾರ್ರೇ, ನಾನ್ ಅವ್ರ್ ಹೀಂಗ್ ಮಾಡತ್ರ್ ಅಂದಳಿ ಎಣ್ಸ್ಕoಡ್ಲಾ, ನಾನ್ ಬೆಗ್ ಹೋಯಿ ಬಾಬಣ್ಣoಗ್ ಹೆಳ್ತಿ" ಅಂದಳಿ 1 ಬೊಟಿ ಪ್ಯಾಕ್ ತಕoಡ್ "ಜಯಣ್ಣ ಲೆಕ್ಕಕ್ ಬರ್ಕಣಿ " ಅಂದಳಿ ಸೈಕಲ್ ತಿಪ್ಪ್ಕoಡ್ ಮೂಕಕ್ಕ್ನ್ ಮನಿ ಬದಿಗ್ ಹೊರ್ಟ ಪುಟ್ಟ. ಹ್ವಾಯಿ, ನಾನು ರಘುವಣ್ಣ ಬಾಳ ಒಳ್ಳೆರ್ ಅoದಳಿ ಮಾಡದ್ದ್, ಈಗ ಕಾoಬುಕ್ ಹ್ವಾರ್ ಇವ್ರದ್ದೆ ಕೈವಾಡ ಇದ್ದoಗ್ ಇತ್ತಪ, ನಿಮ್ಗ್ ಯಂತ ಅoಬಗ್ ಇತ್ತೆ........??

ಸೋಮವಾರ, ಜುಲೈ 18, 2011

ಬಡ-ಬದುಕು

     ಬಡ-ಬದುಕು
ಅರೆ ಬೆತ್ತಲ ಬದುಕಲಿ,
ಬರಿ ಕತ್ತಲು ಬದುಕಿದೆ.
ಮರುಗುತ್ತಲೇ ಮಡಿಯುವ
ಬಡಪಾಯಿಯ ಬಡಿದಿದೆ.
ಹಿಡಿ ಅಕ್ಕಿಯೂ ಹೊರೆಯಾಗಿದೆ,
ಹೊರಲಾರದ ಹಸಿವು ಹುಸಿಯಾಗಿದೆ.
ಬುಸುಗುಟ್ಟಿದೆ ಎದೆ, ಬಿಸಿತಟ್ಟಿಹುದೇ?
"ಬರ"ದ ಬದುಕದು ಮರಿಯ ಹಾಕಿದೆ
ಬಿರಿಬಿಟ್ಟಿದೆ ನರ, ನಡುಗುತ್ತಿದೆ ಸ್ವರ
ಗಡಿ ಇಲ್ಲವು ನಿನಗೆ,
ಸುಡುಗಾಡದು ಕೊನೆಗೆ.
ಅರೆ ಬೆತ್ತಲ ಬದುಕಲಿ,
ಬರಿ ಕತ್ತಲು ಬದುಕಿದೆ.
             
         -ದಿಲೀಪ್ ಶೆಟ್ಟಿ.